ಪುಟ್ಟ ಮಕ್ಕಳು ಹೊರಗಡೆ ಆಟವಾಡಿ ಮನೆಯೊಳಗೆ ಕಾಲಿಡುತ್ತಿದ್ದಂತೆ “ನೋಡ್ರೋ ಕೈ ಕಾಲುಗಳೆಲ್ಲಾ ಮಣ್ಣಾಗಿದೆ. ಚೆನ್ನಾಗಿ ಕಾಲುಗಳನ್ನು ತೊಳೆದು ಮುಂಬಾಗಿಲ ಹೊಸ್ತಿಲ ಮುಂದಿರುವ ನೆಲಹಾಸುವಿನಲ್ಲಿ ಕಾಲು ಉಜ್ಜಿ ಒಳಗಡೆ ಹೋಗಿರೋ” ಎನ್ನುವ ಮಾತು ಮನೆಯಲ್ಲಿರುವ ಹಿರಿಯರಿಂದ ಬರುವುದು ಸಾಮಾನ್ಯ. ನಮ್ಮ ತಲತಲಾಂತರದಿಂದ ಬಂದಂತಹ ಪದ್ಧತಿ ಇದು. ಈಗಲೂ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಚಾಚೂ ತಪ್ಪದೆ ಪಾಲಿಸುತ್ತೇವೆ. ಅಂಗಳದಲ್ಲಿ ನಡೆದಾಡುವಾಗ ಕಾಲುಗಳಿಗೆ ಅಂಟಿರುವ ಧೂಳು, ಕೊಳೆ ಹೋಗಲಿ ಎಂದು ನೀರು ಹಾಕಿ ಚೆನ್ನಾಗಿ ತೊಳೆದ ನಂತರ, ಆ ನೀರು ಮನೆಯೊಳಗೆ ಬಂದು ಜಾರಿ ಬೀಳದಂತೆ ಜಾಗರೂಕತೆ ವಹಿಸಲು ಈ ಕ್ರಮ. ಇದಲ್ಲದೆ ಕ್ರಿಮಿಕೀಟಗಳು ಮನೆಯೊಳಗೆ ಪ್ರವೇಶಿಸದಂತೆ ಮುನ್ನೆಚ್ಚರಿಕೆ ವಹಿಸಿ ಆರೋಗ್ಯದ ದೃಷ್ಟಿಯಿಂದ ಕೂಡಾ ಇದೊಂದು ಒಳ್ಳೆಯ ಅಭ್ಯಾಸ.
ಇತ್ತೀಚಿನ ದಿನಗಳಲ್ಲಂತೂ “ಕೊರೋನಾ” ಎನ್ನುವ ಕಣ್ಣಿಗೆ ಕಾಣದ ವೈರಸ್‍ನ ಪ್ರಭಾವದಿಂದಾಗಿ ನಮ್ಮ ಪೂರ್ವಿಕರ ಆಚಾರ ವಿಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಉಟ್ಟು ಬಣ್ಣ ಮಾಸಿದ, ಹಳೆಯದಾದ ಕಾಟನ್ ಬಟ್ಟೆಗಳು, ಹರಿದು ಉಪಯೋಗಕ್ಕೆ ಬಾರದ ಗೋಣಿಗಳನ್ನು ಇಂತಹ ಕಾಲೊರೆಸುಗಳಾಗಿ ಬಳಸುತ್ತಿದ್ದ ಕಾಲವೊಂದಿತ್ತು. ಆದರೆ ಪ್ರತಿಯೊಂದರಲ್ಲೂ ಬಗೆಬಗೆಯ ವಿನ್ಯಾಸ, ನವನವೀನತೆ ಹುಡುಕೋ ಈ ಯುಗ, ಕಾಲೊರೆಸುವ ಮ್ಯಾಟ್‍ಗಳನ್ನೂ ಬಿಟ್ಟಿಲ್ಲ. ಈ ಜಾಗಕ್ಕೆ ಬಣ್ಣ ಬಣ್ಣಗಳಿಂದ ಕೂಡಿರುವ, ಕಾಲೊರೆಸಲು ಹಿಂದುಮುಂದು ಆಲೋಚನೆ ಮಾಡುವಂತಹ ಮಟ್ಟಿಗೆ ಸುಂದರವಾದ, ಆಗಮಿಸುವ ಅತಿಥಿಗಳಿಗೆ “ಸುಸ್ವಾಗತ” ಕೋರುವ ಹೀಗೆ ನಾನಾ ನಮೂನೆಯ ಮ್ಯಾಟ್‍ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಟ್ರೆಂಡ್ ಛೇಂಜ್ ಆಗಿ ಎಷ್ಟೇ ದುಬಾರಿ ಬೆಲೆಯ ಆಕರ್ಷಕ ಮ್ಯಾಟ್‍ಗಳು ಮಾರುಕಟ್ಟೆಯಲ್ಲಿ ದೊರೆಯಲಿ, ಹಳೇ ಬಟ್ಟೆಗಳು ಮಾತ್ರ ಇಂದಿಗೂ ನವನವೀನ. ಇವು ಮನೆಯಲ್ಲಿನ ಹೆಂಗಳೆಯರ ಕರಕುಶಲತೆಗೆ ಕೈಗನ್ನಡಿ ಹಿಡಿದಂತೆ. ಹಳೆಯ ಉಪಯೋಗಿಸಲು ಯೋಗ್ಯವಲ್ಲದ ಬಟ್ಟೆಗಳನ್ನು ಯಥಾರೂಪದಲ್ಲೇ ಬಳಸುವ ಬದಲು ಅದಕ್ಕೊಂದು ಒಪ್ಪವಾದ ಆಕಾರ ಕೊಟ್ಟು ಹೊಸ ಲುಕ್‍ನಲ್ಲಿ ಮನೆಯ ಮುಂದೆ ಹಾಸಿದರೆ ಸುಂದರವಾದ ವೆಚ್ಚರಹಿತವಾದ ಕಾಲೊರೆಸು ತಯಾರಾಗುತ್ತದೆ.
ಹಳೇ ಬಟ್ಟೆಗಳಿಂದ ತಮಗೆ ಬೇಕಾದ ಹಾಗೇ ವೃತ್ತಾಕಾರ, ಡೈಮಂಡ್ ,ಚೌಕಾಕಾರ, ಆಯತಾಕಾರ, ಹಾರ್ಟ್‍ಶೇಪ್ ಹೀಗೆ ವಿಭಿನ್ನಆಕಾರ, ವಿನ್ಯಾಸಗಳಿಂದ ಮ್ಯಾಟ್‍ಗಳನ್ನು ತಯಾರಿಸಬಹುದು. ಅಂದ ಹಾಗೆ ಇದು ನಾಜೂಕಿನ ಕೆಲಸ. ಈ ಮ್ಯಾಟ್ ತಯಾರಿಸಲು ಸಮಯ, ತಾಳ್ಮೆ ಎರಡೂ ಅವಶ್ಯಕ.
ಸೀರೆಯನ್ನು ಉದ್ದವಾಗಿ ತುಂಡರಿಸಿ ತಲೆಗೂದಲನ್ನು ಹೆಣೆಯುವಂತೆ ಸಿಂಪಲ್ ಮ್ಯಾಟ್, ಕ್ರೋಷರ್ ಸಹಾಯದಿಂದ ಹೆಣೆದು ಬೇಕಾದ ವಿನ್ಯಾಸಗಳನ್ನೂ ಮಾಡಬಹುದು. ಒಂದೇ ಬಟ್ಟೆಯ ಬದಲು ಬೇರೆ ಬೇರೆ ಬಣ್ಣದ ಬಟ್ಟೆಗಳನ್ನು ಸೇರಿಸಿ ಕಲರ್‍ಫುಲ್ ಕಾಲೊರೆಸುಗಳನ್ನು ತಯಾರಿಸಬಹುದು.ಇದು ಹೆಂಗಳೆಯರಿಗೆ ಬಿಡುವಿನ ಸಮಯ ಕಳೆಯಲು ಒಳ್ಳೆಯ ಹವ್ಯಾಸವೂ ಹೌದು. ಉಪಯೋಗವಿಲ್ಲದ ಕಾಟನ್, ನೈಲಾನ್ ಸೀರೆ,ನೈಟಿ, ಲುಂಗಿ, ಟೀ ಶರ್ಟ್‍ಗಳಿಂದ ನಾನಾ ವಿನ್ಯಾಸದಲ್ಲಿ ತಯಾರಿಸಬಹುದಾದ ಈ ಮ್ಯಾಟ್‍ಗಳನ್ನು ತಯಾರಿಸುವ ಸುಲಭ ವಿಧಾನಗಳನ್ನು ಅಂತರ್ಜಾಲದ ಮೂಲಕವೂ ಹುಡುಕಿ ಕಲಿಯಬಹುದಾಗಿದೆ. ಕೇವಲ ಮುಂಬಾಗಿಲಿಗೆ ಸೀಮಿತವಾಗಿದ್ದ ಕಾಲೊರೆಸು ಈಗ ಮನೆಯ ಪ್ರತಿ ರೂಮ್‍ಗಳ ಮುಂದೆ, ಅಲ್ಲದೆ ಮಲಗುವ ಮಂಚದ ಕೆಳಗೆ ಜಾಗ ಪಡೆದುಕೊಂಡು ಮನೆ ಸುಂದರವಾಗಿ ಕಾಣಲು ನಾವೂ ಕೂಡಾ ಪ್ರಾಮುಖ್ಯವೇ ಎಂಬುದನ್ನು ಸಾರುತ್ತಿವೆ.
–ವಂದನಾರವಿ ಕೆ.ವೈ.ವೇಣೂರು.