‘ಅರ್ಧ ಎಕರೆ ಸಾಕು… ಹಳ್ಳಿಯಲ್ಲೇ ಜೀವನ ಮಾಡಬಹುದು’ ಈ ಮಾತಿನ ಹಿಂದೆ ಇರುವ ದೊಡ್ಡ ಪ್ರಶ್ನೆ ಏನು..?

September 8, 2026
9:43 AM
“ಅರ್ಧ ಎಕರೆ ಇದ್ದರೂ ಕುಟುಂಬ ಜೀವನ ಮಾಡಬಹುದು” ಎನ್ನುವ ರೈತನ ಮಾತು, ಭೂಮಿ ಇದ್ದರೂ ನಗರಕ್ಕೆ ವಲಸೆ ಹೋಗುತ್ತಿರುವ ಗ್ರಾಮೀಣ ಕುಟುಂಬಗಳ ಬದುಕಿನ ಬಗ್ಗೆ ಪ್ರಶ್ನೆ ಎತ್ತುತ್ತದೆ. ಸಣ್ಣ ಜಮೀನಿನಲ್ಲಿ ಬೆಳೆ ವೈವಿಧ್ಯ, ಪಶುಪಾಲನೆ ಮತ್ತು ಪೂರಕ ಆದಾಯದ ಮಾರ್ಗಗಳನ್ನು ಸೇರಿಸಿಕೊಂಡರೆ ಹಳ್ಳಿಯಲ್ಲೇ ಬದುಕು ಕಟ್ಟಿಕೊಳ್ಳುವ ಅವಕಾಶವನ್ನು ಹುಡುಕಬಹುದು.

“ಅರ್ಧ ಎಕರೆ ಜಾಗ ಇದ್ದರೂ ಗಂಡ, ಹೆಂಡತಿ, ಒಂದು ಮಗು ಜೀವನ ಮಾಡಬಹುದು.…” ಇದು ಕೇವಲ ಒಬ್ಬ ರೈತನ ಮಾತಲ್ಲ. ಹಳ್ಳಿಯಲ್ಲಿ ಭೂಮಿ ಇದ್ದರೂ ಬದುಕಿಗಾಗಿ ನಗರಕ್ಕೆ ವಲಸೆ ಹೋಗುತ್ತಿರುವ ಸಾವಿರಾರು ಕುಟುಂಬಗಳ ಮುಂದೆ ನಿಲ್ಲುವ ಪ್ರಶ್ನೆ.

ಇಂದು ಹಳ್ಳಿಯಿಂದ ನಗರಕ್ಕೆ ಹೋಗಿ ತಿಂಗಳಿಗೆ ₹8,000, ₹10,000 ಅಥವಾ ₹12,000 ಸಂಬಳಕ್ಕೆ ವಾಚ್‌ಮನ್ ಕೆಲಸ ಮಾಡುವವರು ಇದ್ದಾರೆ. ಮಹಿಳೆಯರೂ ₹6,000ದಂತಹ ಸಂಬಳಕ್ಕೆ ಕೆಲಸಕ್ಕಾಗಿ ನಗರಕ್ಕೆ ಹೋಗುವ ಪರಿಸ್ಥಿತಿ ಇದೆ. ಆದರೆ ಇದೇ ಕುಟುಂಬಕ್ಕೆ ಊರಿನಲ್ಲಿ ಭೂಮಿ ಇದೆ. ಅಲ್ಲಿ ಬದುಕು ಯಾಕಿಲ್ಲ?. ಈ ಪ್ರಶ್ನೆ ಕೇಳಬೇಕಿದೆ.  ನಗರದಲ್ಲಿ ಬಾಡಿಗೆ ಮನೆ, ನೀರು, ಪ್ರಯಾಣ, ಆಹಾರ, ಕೆಲಸದ ಒತ್ತಡ ಎಲ್ಲವೂ ಹಣದ ಲೆಕ್ಕ.

ಇತ್ತ ಹಳ್ಳಿಯಲ್ಲಿ ಸ್ವಂತ ಜಾಗವಿದ್ದರೆ ತರಕಾರಿ ಬೆಳೆಯಬಹುದು. ಹಣ್ಣು, ಸೊಪ್ಪು, ಅಡಿಕೆ, ತೆಂಗು, ಮೆಣಸು, ಹೈನುಗಾರಿಕೆ ಅಥವಾ ಇತರ ಪೂರಕ ಕೃಷಿ ಚಟುವಟಿಕೆಗಳನ್ನು ಸೇರಿಸಬಹುದು.  ಸಣ್ಣ ಜಮೀನಿನ ಕೃಷಿಯಲ್ಲಿಯೂ ಬೆಳೆ ವೈವಿಧ್ಯ, ಪಶುಪಾಲನೆ ಮತ್ತು ಮಾರುಕಟ್ಟೆ ಸಂಪರ್ಕವನ್ನು ಸರಿಯಾಗಿ ಬಳಸಿಕೊಂಡರೆ ಕುಟುಂಬದ ಆದಾಯವನ್ನು ಹಲವು ಮೂಲಗಳಿಂದ ಕಟ್ಟಿಕೊಳ್ಳುವ ಸಾಧ್ಯತೆ ಇದೆ. ಕರ್ನಾಟಕದ ಸಣ್ಣ ರೈತರ ಕುರಿತ ಅಧ್ಯಯನಗಳಲ್ಲಿಯೂ ಕೃಷಿಯೊಂದಿಗೆ ಪಶುಪಾಲನೆ ಮತ್ತು ಇತರ ಜೀವನೋಪಾಯ ಚಟುವಟಿಕೆಗಳನ್ನು ಜೋಡಿಸುವ ಪದ್ಧತಿ ಕಂಡುಬಂದಿದೆ. ದೊಡ್ಡ ರೈತ ಎನ್ನುವುದು ಬಹಳ ಹೆಮ್ಮೆ. ಆದರೆ ಈ ದೊಡ್ಡ ರೈತರ ಸಂಕಷ್ಟ ಅವರಿಗೇ ತಿಳಿಯಬೇಕು.

ಪ್ರತಿಷ್ಟೆಗಾಗಿ ಬದುಕು ಕಳೆದುಕೊಳ್ಳಬೇಕೇ? ಎನ್ನುವುದು ಪ್ರಶ್ನೆ. ನಗರದ ಜೀವನ ಎಂದರೆ ದೊಡ್ಡ ಮನೆ, ದೊಡ್ಡ ಸಂಬಳ, ದೊಡ್ಡ ಜೀವನ ಎಂಬ ಕಲ್ಪನೆ ಹಲವರನ್ನು ಸೆಳೆಯುತ್ತದೆ. ಆದರೆ ಪ್ರಶ್ನೆ ಇರುವುದು ಇಲ್ಲಿ, ದೊಡ್ಡ ಸಂಬಳ ಬಂದರೂ ಬದುಕಿನ ಖರ್ಚು ದೊಡ್ಡದಾದರೆ ಉಳಿಯುವುದು ಎಷ್ಟು? ರೈತನ ಮಾತಿನಲ್ಲಿ ಕೇಳಿಬರುವ ಮತ್ತೊಂದು ನೋವು ಇದೇ.

ಪ್ರತಿಷ್ಟೆಗಾಗಿ ಜೀವನ ಹಾಳು ಮಾಡಿಕೊಂಡು, ಆರೋಗ್ಯ ಹಾಳು ಮಾಡಿಕೊಂಡು, ಅಲ್ಲೇ ಒದ್ದಾಡಿ ಬದುಕುವುದಕ್ಕಿಂತ ಗ್ರಾಮೀಣ ಭಾಗದಲ್ಲಿ, ಹಳ್ಳಿಯಲ್ಲಿ ಭೂಮಿ ಇದ್ದವರು ಅಲ್ಲೇ ಬದುಕು ಕಟ್ಟಿಕೊಳ್ಳಬಾರದೇ?. ನಗರ ಜೀವನದ ಬಗ್ಗೆ ಒಟ್ಟಾರೆಯಾಗಿ ಆರೋಗ್ಯ ಸಮಸ್ಯೆಗಳಿಗೆ ಕಾರಣವೆಂದು ಹೇಳಲು ಸಾಧ್ಯವಿಲ್ಲ. ಆದರೆ ನಗರ ಉದ್ಯೋಗದ ಒತ್ತಡ, ಜೀವನ ವೆಚ್ಚ ಮತ್ತು ಕುಟುಂಬದಿಂದ ದೂರವಾಗುವ ಪರಿಸ್ಥಿತಿ ಕುರಿತು ಚರ್ಚೆ ಮಾಡುವ ಅಗತ್ಯವಂತೂ ಇದೆ.

ಅರ್ಧ ಎಕರೆ ಎಲ್ಲರಿಗೂ ಒಂದೇ ರೀತಿಯ ಆದಾಯ ನೀಡುತ್ತದೆ ಎನ್ನುವುದೇ ಅಲ್ಲ. ಆಗ ಗಮನಿಸಬೇಕಾದ್ದು ನೀರು ಇದೆಯೇ?  ಯಾವ ಬೆಳೆ ಸೂಕ್ತ?ಮಾರುಕಟ್ಟೆ ಎಲ್ಲಿದೆ? ಕುಟುಂಬದ ಕೆಲಸದ ಸಾಮರ್ಥ್ಯ ಎಷ್ಟು? ಪೂರಕ ಆದಾಯದ ಮೂಲಗಳಿವೆಯೇ? ಇವೆಲ್ಲದರ ಮೇಲೆ ಸಣ್ಣ ಜಮೀನಿನ ಆದಾಯ ಅವಲಂಬಿತವಾಗಿರುತ್ತದೆ.

ಜಮೀನು ಚಿಕ್ಕದಿದೆ ಎಂದು ಅದನ್ನು ಬಿಟ್ಟುಬಿಡಬೇಡಿ, ನಗರಕ್ಕೆ ಹೋಗಬೇಕಾಗಿಯೂ ಇಲ್ಲ. ಸಣ್ಣ ಜಮೀನಿನಲ್ಲಿ ಹೆಚ್ಚಿನ ಮೌಲ್ಯದ ಬೆಳೆ, ತರಕಾರಿ, ಹಣ್ಣು, ಪಶುಪಾಲನೆ, ಕೋಳಿ ಸಾಕಣೆ, ಜೇನು ಸಾಕಣೆ ಅಥವಾ ಇತರ ಪೂರಕ ಚಟುವಟಿಕೆಗಳನ್ನು ಜೋಡಿಸುವ ಮೂಲಕ ಕುಟುಂಬದ ಜೀವನೋಪಾಯವನ್ನು ರೂಪಿಸಬಹುದು. ಹಳ್ಳಿಯಲ್ಲಿ ಇನ್ನೂ ಒಂದು ಸಂಪತ್ತು ಇದೆ.  ಹಳ್ಳಿಯ ಬದುಕಿನ ದೊಡ್ಡ ಶಕ್ತಿ ಕೇವಲ ಭೂಮಿಯಲ್ಲ. ಸಂಬಂಧಗಳು.

“ಏನಾದರೂ ಆಗಲಿ, ಪಕ್ಕದ ಮನೆಯವರು ಒಂದು ಸ್ವಲ್ಪ ಸಾರು ಕೊಡ್ತಾರೆ… ಏನಾದರೂ ಸಹಾಯ ಮಾಡ್ತಾರೆ…” ಈ ಮಾತಿನಲ್ಲಿ ಹಳ್ಳಿಯ ಬದುಕಿನ ಒಂದು ಸಂಬಂಧ ಅಡಗಿದೆ. ನಗರದಲ್ಲಿ ಹಣ ಕೊಟ್ಟು ಪಡೆಯಬೇಕಾದ ಕೆಲವು ಸಂಗತಿಗಳು ಹಳ್ಳಿಯಲ್ಲಿ ಸಂಬಂಧಗಳ ಮೂಲಕ ಸಿಗುತ್ತವೆ. ಅದು ಆರ್ಥಿಕ ಲೆಕ್ಕದಲ್ಲಿ ಕಾಣಿಸದಿದ್ದರೂ, ಬದುಕಿನ ಗುಣಮಟ್ಟದಲ್ಲಿ ಅದರ ಮೌಲ್ಯ ದೊಡ್ಡದು.

ಮತ್ತೆ ಹಳ್ಳಿಯತ್ತ ನೋಡುವ ಸಮಯವೇ? :  ಇಂದು ಕರ್ನಾಟಕದಲ್ಲಿ ಸಣ್ಣ ಮತ್ತು ಅತಿಸಣ್ಣ ಜಮೀನು ಹೊಂದಿರುವ ಕುಟುಂಬಗಳ ಸಂಖ್ಯೆ ದೊಡ್ಡದಿದೆ. ಸಣ್ಣ ರೈತರಿಗೆ ಕೃಷಿ ಮಾತ್ರವಲ್ಲದೆ ಪೂರಕ ಆದಾಯದ ಮಾರ್ಗಗಳನ್ನು ಜೋಡಿಸುವುದು ಮುಖ್ಯವಾಗುತ್ತಿದೆ. ನಗರಕ್ಕೆ ಹೋಗುವುದೇ ಅಭಿವೃದ್ಧಿ ಎಂಬ ಕಲ್ಪನೆಯ ನಡುವೆ, ಹಳ್ಳಿಯಲ್ಲೇ ಇದ್ದು ಬದುಕು ಕಟ್ಟಿಕೊಳ್ಳುವ ಸಾಧ್ಯತೆಯನ್ನು ಮತ್ತೊಮ್ಮೆ ಹುಡುಕುವ ಸಮಯ ಬಂದಿದೆ.

ಭೂಮಿ ಇದ್ದರೆ ಕೃಷಿ ಮಾಡೋಣ. ಕೃಷಿ ಸಾಧ್ಯವಿಲ್ಲದಿದ್ದರೆ ಪೂರಕ ಉದ್ಯಮ ಸೇರಿಸೋಣ. ಆದರೆ ನಮ್ಮ ಕೈಯಲ್ಲಿರುವ ಭೂಮಿಯನ್ನು ಬಿಟ್ಟು ಬದುಕಿಗಾಗಿ ದೂರ ಹೋಗುವ ಮೊದಲು, ಒಮ್ಮೆ ನಮ್ಮ ಹಳ್ಳಿಯನ್ನೇ ನೋಡಿ. ಅರ್ಧ ಎಕರೆ ಇರಬಹುದು… ಆದರೆ ಸರಿಯಾಗಿ ಬಳಸಿದರೆ ಅದು ಕೇವಲ ಜಮೀನಲ್ಲ  ಒಂದು ಕುಟುಂಬದ ಬದುಕಿನ ಆಧಾರವಾಗಬಹುದು.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

A small piece of farmland may not guarantee a livelihood by itself, but with suitable crops, water, family labour and supplementary farm activities, even small holdings can become part of a viable rural livelihood. The bigger question is whether rural families are overlooking the economic and social value of the land they already own while migrating to cities for low-wage jobs.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭಾರತದ ಆಹಾರ ನಾಳೆ ಬೆಳೆಯೋರು ಯಾರು? ರೈತರ ವಯಸ್ಸು ಹೆಚ್ಚುತ್ತಿದೆ, ಯುವಕರು ಕೃಷಿಯಿಂದ ದೂರವಾಗುತ್ತಿದ್ದಾರೆ..!
September 7, 2026
9:38 PM
by: ದ ರೂರಲ್ ಮಿರರ್.ಕಾಂ
ಹಸು ಕರು ಹಾಕಿದ ಬಳಿಕದ “ಪ್ಲಾಸೆಂಟಾ” ದಿಂದ ತಯಾರಿಸಬಹುದೇ ನೈಸರ್ಗಿಕ ದ್ರಾವಣ?
September 7, 2026
8:58 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 07-09-2026 | ಕರ್ನಾಟಕದಲ್ಲಿ ಮುಂದಿನ ಮಳೆಯ ಚಿತ್ರಣ ಹೇಗಿದೆ..?
September 7, 2026
1:29 PM
by: ಸಾಯಿಶೇಖರ್ ಕರಿಕಳ
ಹೆಬ್ರಿಯ ಗೋಡಂಬಿ ತ್ಯಾಜ್ಯದಿಂದ ಹಡಗುಗಳಿಗೆ ಇಂಧನ..!
September 7, 2026
7:59 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror