ಬೆಳಗಿನ ನಾಲ್ಕು ಗಂಟೆಗೆ ಮಹಾರುದ್ರನಿಗೆ ಭಸ್ಮಾರತಿ ನಡೆಯುತ್ತದಂತೆ, ಸ್ಮಶಾನದಿಂದ ತಂದ ಭಸ್ಮ ಲೇಪನ ಮಾಡಿ ಕಾಲಾಗ್ನಿ ರುದ್ರಾಯ, ನೀಲಕಂಠಾಯ ಸರ್ವೇಶ್ವರಾಯ ನಮಃ ಎಂದು ಮಹಾ ಆರತಿ ನಡೆಯುವುದಂತೆ,ಅದರಲ್ಲಿ ಪಾಲ್ಗೊಳ್ಳುವುದು ವಿಶೇಷವಂತೆ, ಆದರೆ ನಾವು ಮುಂದಿನ ದಿನ ಮಲಗುವಾಗಲೇ ರಾತ್ರಿ ಹನ್ನೆರಡಾಗಿತ್ತು,ಮತ್ತು ಮರುದಿನ ಪ್ರಯಾಗದೆಡೆಗಿನ ಪಯಣದ ದಾರಿಯೂ ಸುಮಾರು 850 ಕಿಮೀ ಇತ್ತು , ಆದ್ದರಿಂದ ವಿಶ್ರಾಂತಿ ಇರಲೆಂದು ರುದ್ರದೇವನಲ್ಲಿ ಕ್ಷಮೆ ಯಾಚಿಸಿ ಬೆಳಗಿನ ಆರು ಗಂಟೆಗೆ ಎದ್ದು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿ ಕಾರನ್ನೇರಿ ಮಹಾಕಾಲೇಶ್ವರನ ದರ್ಶನಕ್ಕೆ ಹೊರಟ ನಾವು ಮಹಾಕಾಲನ ಸನ್ನಿಧಿಗೆ ತಲುಪಲು ಇನ್ನೇನು ಕೆಲವೇ ನಿಮಿಷಗಳ ದಾರಿ ಇರಬೇಕಾದರೆ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿ ಪಥಿಕರನ್ನು ತನಿಖೆ ಮಾಡುತಿದ್ದ ಮಿಲಿಟರಿ ದಂಡನ್ನು ತನಿಖೆಗೊಳಪಟ್ಟು ದಾಟಿ ಸಾಗಿದೆವು….ದೂರದಲ್ಲಿ ರುದ್ರಪ್ರಶ್ನ ಮೊಳಗುತಿತ್ತು…
ನಮೋ ದುಂಧುಭ್ಯಾಯ ಚಾಹನನ್ಯಾಯಚ….. (ಭೇರಿ ನಗಾರಿಗಳಲ್ಲಿ..ನಗಾರಿಗಳ ಕೋಲುಗಳಲ್ಲಿ, ಸಂಕಷ್ಟಗಳ ಅರಿವಿದ್ದೂ ಯುದ್ದವನ್ನೆದುರಿಸುವವನಲ್ಲಿ, ಸಂದೇಶವಾಹಕನಲ್ಲಿ, ಖಡ್ಗವೇ ಮುಂತಾದ ಚೂಪಾದ ಆಯುಧ ಪಾಣಿಯಲ್ಲಿ, ಹಿರಿಕಿರಿದಾದ ಓಣಿ ಬೀದಿ ಹೆದ್ದಾರಿಗಳಲ್ಲಿ,ತೊರೆ, ತೊಟ್ಟಿ,ಕೆಸರು ಕೊಳ, ನದಿ,ಬಾವಿ,ಹಳ್ಳಗಳಲ್ಲಿ,ಮಳೆ ಇರದಲ್ಲಿ,ಇರುವಲ್ಲಿ, ಸೂರ್ಯನ ಪ್ರಖರ ಶಾಖದಲ್ಲಿ, ಗೋವು ಕುದುರೆಗಳ ಖರಪುಟದ ಹಿಂಡುಗಳಲ್ಲಿ, ತನ್ನದೇ ಮನೆ ಜೋಪಡಿಗಳಲ್ಲಿ…ನೆಲೆಸಿರುವವನೇ ನಮೋ ನಮಃ….
ಅಂದರೆ, ನಾವು ದಾಟಿ ದಾಟಿ ಬಂದ ದಾರಿಗಳೂ ,ದಾರಿಯಲ್ಲಿ ಬರುತ್ತಿದ್ದಾಗ ಕಾಣುತಿದ್ದ ಭೇರಿ ನಗಾರಿಗಳೂ,ದಾಟು ರಸ್ತೆಗಳ ಕಿರಿ ಕಿಕ್ಕಿರುಗಳೂ,ದಾಟಿ ಬಂದ ತೊರೆ ನದಿಗಳೂ,ಮಳೆ ಇಲ್ಲದೇ ಕರಟಿದ ಪ್ರದೇಶಗಳೂ, ಮಳೆ ಸುರಿಸಿ ಸಂಪನ್ನವಾಗಿದ್ದ ಭೂ ವಿಸ್ತಾರಗಳಲ್ಲೂ, ದೂರದೂರಕ್ಕೆ ಕಂಡುಬರುತಿದ್ದ ಮೇಘ ಮಾಲೆಗಳಲ್ಲೂ, ಹಸಿರ ಸಿರಿಬನಗಳಲ್ಲಿ ಅಡ್ಡಾಡುತಿದ್ದ ಗೋವು ಕುದುರೆಗಳಲ್ಲೂ ,ಈಶಾವಾಸ್ಯಮಿದಂ ಸರ್ವಮ್ ಎನ್ನುವಂತೆ ಆ ಮಹಾಕಾಲೇಶ್ವರನೇ ಆವರಿಸಿದಂತೆ ಭಾಸವಾಗುತಿತ್ತು.
ಅಂತೆಯೇ ಆ ರುದ್ರನ ಸಾನ್ನಿಧ್ಯ ತಲುಪಿದ ನಾವು ನಮ್ಮ ಕಾರನ್ನು ಪಾರ್ಕಿಂಗ್ ಮಾಡಿ ಒಳ ಪ್ರವೇಶಿಕೆಗೆ ಬಂದಾಗ ಸರತಿ ಸಾಲು ಕಣ್ಣೆಟಕದಷ್ಟು ದೂರವಿತ್ತು, ಆಗ ಅಲ್ಲಿ ಫಲಕದಲ್ಲಿ ಕಂಡಂತೆ ತಲಾ ಇನ್ನೂರು ರುಪಾಯಿಗಳ ಚೀಟಿ ಮಾಡಿ ನೇರವಾಗಿ ಒಳ ಪ್ರವೇಶ ಮಾಡಿದಾಗ ಮಹಾಕಾಲೇಶ್ವರ ಆಳೆತ್ತರದ ಲಿಂಗ ರೂಪನಾಗಿ ಮೇಲೆದ್ದು ಲೋಕವನ್ನು ನಿಯಮಿಸುತಿದ್ದ…. ಮಹಾದೇವ ಕೀ ಜೈ, ಭಂ ಭಂ ಬೋಲೇ ಮಹಾಕಾಲ್ ಕೀ ಜೈ ಎಂಬ ಘೋಷ ಮುಗಿಲು ಮುಟ್ಟಿತ್ತು…. ಮನದಣಿಯೆ ಮಹಾಕಾಲೇಶ್ವರನನ್ನು ನೋಡುತ್ತಾ… ನಮ್ಮ ಪ್ರೀತಿಯ ಗುರುಗಳ ಅಣತಿಯಂತೆ ಕಲಿತ ರುದ್ರ ಪ್ರಶ್ನ ಪಠಿಸುತ್ತಾ… ನಮಸ್ತೆ ರುದ್ರ ಮನ್ಯವ ಉತೋತ ಇಷವೇ ನಮಃ, ನಮಸ್ತೇ ಅಸ್ತು ಧನ್ವನೆ ಬಾಹುಭ್ಯಾ ಮುತತೇ ನಮಃ…. ಅಂದರೆ ದೇವಾ ನಿನ್ನ ಹೆದೆಯೇರಿದ ಬಿಲ್ಲುಬಾಣಗಳಿಗೆ ಮೊದಲು ನಮಿಸುತಿದ್ದೇನೆ, ಶಾಂತನಾಗು,ಕೃಪಾಕರನಾಗು ಮುಂತಾಗಿ ಬೇಡಿಕೊಳ್ಲುತ್ತಾ, ಅರ್ಚಕರು ಕೊಟ್ಟ ಮಿಠಾಯಿ ಪ್ರಸಾದವನ್ನು ಮತ್ತು ಕೈಗೆ ಎಟಕಿದ ಗುಲಾಬಿ ಹೂವಿನ ಎಸಳುಗಳನ್ನು ಪಡೆಯುತ್ತಾ ಮುಂದೆ ಸಾಗಿದಾಗ ದೇವಾಲಯದ ಹೊರ ಆ ವಾರದಲ್ಲಿದ್ದೆವು. ಹಾಗೆಯೇ ಸಾಗಿ ಸುತ್ತಲೂ ಸ್ಥಾಪಿತವಾಗಿದ್ದ ಗಣಪತಿ, ದುರ್ಗೆಯರ ಸಾನ್ನಿಧ್ಯಕ್ಕೆ ನಮಿಸುತ್ತಾ ಹೊರಬಂದಾಗ ಸನ್ಮಾನ್ಯ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮಹಾಕಾಲೇಶ್ವರನ ಸಾನ್ನಿಧಿಗೆ ಬರಲು ನಿರ್ಮಾಣಗೊಂಡ ಬೃಹತ್ ಕಾರಿಡಾರಿನಲ್ಲಿದ್ದೆವು. ಶಿವನ ವಿವಿಧ ಭಂಗಿಗಳು ಮುಂತಾಗಿ ಬೃಹತ್ ಮೂರ್ತಿಗಳು, ಹೂತೋಟಗಳ ಮೂಲಕ ಹೊರ ಸಾಗಿದ ನಾವು ಅಲ್ಲೇ ಅನತಿ ದೂರದಲ್ಲಿರುವ ಶಕ್ತಿ ಪೀಠದತ್ತ ಸಾಗಿದೆವು.
ಹರಸಿದ್ದಿ ಮಾತೆಯ ಸುತ್ತ ಪರಿಕ್ರಮಣ ಮಾಡಿ ನಮನಗಳನ್ನು ಸಲ್ಲಿಸಿ ಹೊರ ಬಂದಾಗ ನಾಗಾ ಸಾಧುವೊಬ್ಬರ ದರ್ಶನವಾಯಿತು. ದೂರದಿಂದಲೇ ನಮನ ಸಲ್ಲಿಸಿ, ಬೃಹತ್ ದೀಪಗೋಪುರವನ್ನು ನೊಡುತ್ತಾ, ಮನದಲ್ಲೇ ಲೋಕಾಧ್ಯಕ್ಷನಿಗೆ ನಮೋ ನಮೋ ಎನ್ನುತ್ತಾ ರಸ್ತೆಗೆ ಬಂದಾಗ ಹೊಟ್ಟೆ ಹಸಿವಿನ ಸೂಚನೆ ನೀಡುತಿತ್ತು. ಅಂತೆಯೇ ಕಣ್ಣಾಡಿಸುವಾಗ ರಸ್ತೆಯ ಬದಿಯಲ್ಲೇ ಚಾ, ಇಡ್ಲಿ, ದೋಸೆ,ಪರಾಟಗಳ ಹೋಟೆಲ್/ಧಾಭಾ ಕಂಡಾಗ ಅಲ್ಲೇ ಕುಳಿತು ಇಡ್ಲಿ ಸಾಂಬಾರ್ ಮತ್ತು ಮಸಾಲ ದೋಸೆ ತಿನ್ನುತ್ತಾ,ಚಾ ಕುಡಿದಾಗ ಹೊಟ್ಟೆಯಲ್ಲಿ ಶಕ್ತಿ ಸಂಚಯನಗೊಂಡಿತ್ತು. ಅಲ್ಲಿಂದ ಕಾರನ್ನೇರಿ ಗೂಗಲ್ ಮಾಮನ ದಿಗ್ದರ್ಶಿಕೆಯೊಂದಿಗೆ ದಾರಿ ತೋರಿಸಪ್ಪಾ ಎಂದು ವಿನಂತಿಸಿ ನಮ್ಮ ಅಂತಿಮ ಉದ್ದೇಶ ,ಪ್ರಯಾಗದ ಕುಂಭಮೇಳದತ್ತ ಪಯಣಿಸಿದೆವು.ಅತ್ಯುತ್ತಮ ರಸ್ತೆ,ಒಣ ಒಣ ಪ್ರದೇಶಗಳು, ಗಾಳಿಯಂತ್ರಗಳು, ಅಲ್ಲಲ್ಲಿ ಕಾಲುವೆ ನೀರಿನಿಂದ ಹಸಿರಾದ ಕೃಷಿನೆಲಗಳನ್ನು ನೊಡುತ್ತಾ ಗುನಾ, ಶಿವಪುರಿ,ಝಾನ್ಸಿಯಾಗಿ ಸಾಗುತ್ತಾ ಮದ್ಯಾಹ್ನದ ರೋಟಿಯೂಟ ಮುಗಿಸುತ್ತಾ ಸಾಗಿ ಸಂಜೆಯ ಹೊತ್ತಿಗೆ ಪ್ರಯಾಗಕ್ಕೆ ಇನ್ನೂ ಸುಮಾರು ಮುನ್ನೂರು ಕಿಮೀ ಸಾಗಬೇಕಿದೆ ಎನ್ನುವಾಗ ಓರೈ ಎಂಬ ಜಾಗದಲ್ಲಿ ನಾವು ಢೆಲ್ಲಿ ಬುಂಧೇಲ್ ಕಂಡ್ ಎಕ್ಸ್‌ಪ್ರೆಸ್ ವೇ ಯಲ್ಲಿದ್ದೆವು….
ನಮ್ಮ ದಿನದ ಆಯಾಸ ಸಂಪೂರ್ಣ ಮರೆತೇ ಹೋಗಿತ್ತು,ಅಂತಹ ಅದ್ಭುತ ರಸ್ತೆ ಅದಾಗಿತ್ತು…..ಕಾರಿನ ವೇಗವರ್ಧಕದ ಮೇಲೆ ಇಟ್ಟಿಗೆಯಿಟ್ಟು ಕಾಲನ್ನು ಮೇಲಿಟ್ಟು ಸಾಗಬಹುದು…. ಸಾಗುವ ರಸ್ತೆಯಲ್ಲಿ ಅಡ್ಡಲಾಗಿ ಯಾವುದೇ ವಾಹನ,ಪ್ರಾಣಿಗಳು ಬಾರವು….ಅಂತಹಾ ರಸ್ತೆಯಲ್ಲಿ ಸಾಗುತ್ತಾ ಮುನ್ನೂರು ಕಿಮೀ ಕ್ರಮಿಸಿದ್ದೇ ಅರಿವಿಗೆ ಬಾರದಿದ್ದಾಗ ನಾವು ಚಿತ್ರಕೂಟದಲ್ಲಿದ್ದೆವು. ಪ್ರಯಾಗಕ್ಕೆ ಅಲ್ಲಿಂದ ಮತ್ತೂ ನೂರು ಕಿಮೀ ದೂರವಿತ್ತು….ರಸ್ತೆಗಳೆಲ್ಲ ವಾಹನ ದಟ್ಟಣೆಯಿಂದ ತುಂಬಿ ತುಳುಕುತಿತ್ತು…. ಪ್ರಯಾಗದೆಡೆ ಸಾಗಲು ಅಸಾಧ್ಯವೆಂದು ಮನಗಂಡ ನಾವು ಚಿತ್ರಕೂಟ ಪಟ್ಟಣದೊಳ ಸಾಗಿ ವಸತಿಗಾಗಿ ಹೋಟೇಲ್ ಗಳ ಬಳಿ ಸಾಗುದೆವು, ಗೂಗಲ್ ಮಾಮನ ಸಹಾಯವೂ ಕೇಳಿದೆವು….ಎಲ್ಲಾ ಕಡೆ ಫುಲ್ ಫುಲ್ ಪುಲ್ ಎಂಬುದೊಂದೇ ಮಂತ್ರ ಕೇಳಿಬಂದಾಗ ಸಾಗುತ್ತಾ ಮುಂದೆ ಹೋದ ನಮಗೆ ಸ್ವಲ್ಪ ಹೆಚ್ಚೇ ಬಾಡಿಗೆ ಅನಿಸುವ ಹೊಟೇಲ್ ವಸತಿ ಲಭಿಸಿತು…. ಲಗುಬಗೆಯಿಂದ ವಸತಿ ಕೋಣೆಗೆ ನುಗ್ಗಿದಾಗ ಗಂಟೆ ರಾತ್ರಿ ಹನ್ನೊಂದು ಅಗಿತ್ತು… ಹೊಟ್ಟೆ ದೇಹದ ಶಕ್ತಿ ಮೂಲ ಕ್ಷಯಿಸುತ್ತಿದೆ ಎಂದು ಸಂದೇಶ ಕಳುಹಿಸುತಿತ್ತು.
ಹುಡುಕಿದಾಗ ಇನ್ನೇನು ಬಾಗಿಲು ಮುಚ್ಚುವ ಹಂತದಲ್ಲಿದ್ದ ಹೋಟೇಲಲ್ಲಿ ರೋಟಿ ಧಾಲ್, ಟಕ್ಕಟಿಕ್ಕ, ಮುಳ್ಳು ಸೌತೆ ನೀರುಳ್ಳಿ ಮೊಸರು ಮುಂತಾಗಿ ಸಿಕ್ಕ ಆಹಾರ ಸೇವಿಸಿದಾಗ ಗಂಟೆ ಹನ್ನೆರಡು ಕಳೆದು ಮುನ್ನೋಡುತಿತ್ತು…. ವಸತಿಕೋಣೆಗೆ ಸಾಗಿ ಸ್ನಾನ, ಕೈಕಾಲು ಮುಖ ತೊಳೆದು ಹಾಸಿಗೆಯಲ್ಲಿ ಮಲಗಿದವರು ಎಲರಾಮ್ ಕೂಗಿಗೆ ಎಚ್ಚರಗೊಂಡಾಗ ಬೆಳಗಿನ ಐದೂ ವರೆಯಾಗಿತ್ತು….. ರಸ್ತೆಗಳಲ್ಲಿ ವಾಹನಗಳ ಓಡಾಟ ಮಸ್ತಾಗಿತ್ತು…. ಗೂಗಲ್ ಮಾಮನ ದಾರಿದರ್ಶಕ ಎಲ್ಲಾ ರಸ್ತೆಗಳನ್ನೂ ಕೆಂಪಾಗಿ ತೋರಿಸುತಿದ್ದ. ಸ್ನಾನಾದಿ ಮುಗಿಸಿ ಲಗುಬಗನೆ ಹೊರಟು ಸುಮಾರು ಹತ್ತು ಗಂಟೆಗೆ ಪ್ರಯಾಗ ತಲುಪಬಹುದೆಂದು ನಿರೀಕ್ಷೆಯಲ್ಲಿ, ಮುಂದಿನ ದಾರಿಯಲ್ಲಿ ಬೆಳಗಿನ ತಿಂಡಿ ಮುಗಿಸಿಕೊಳ್ಳಬಹುದೆಂದು ರಸ್ತೆಯಲ್ಲಿ ಸಾಗಿ ಸಾಗಿದೆವು….ರಸ್ತೆಗಳೆಲ್ಲಾ ವಾಹನಗಳಿಂದ ತುಂಬಿತ್ತು….ಹೊಟ್ಟೆ ಹಸಿಯುತಿತ್ತು….ಮನೆಯಿಂದ ಹೊರಡಬೇಕಾದರೆ ಮನೆಯೊಡತಿಯರು ದಾರಿ ಖರ್ಚಿಗಾಗಿ ಗಂಟುಕಟ್ಟಿದ್ದ ಒಣ ದ್ರಾಕ್ಷಿ, ಖರ್ಜೂರ, ಚಿಪ್ಸ್ ಗಳು ಹೊಟ್ಟೆಗೆ ಇಂಬು ನೀಡುತಿತ್ತು…..
(ಮುಂದುವರಿಯುವುದು…ನಾಳೆ….. ) , ಪ್ರಯಾಗದ ಸಂಗಮ ಸ್ಥಳದಲ್ಲಿ ಕುಂಭಮೇಳ, ಕುಂಭ ಸ್ನಾನದ ಪುಣ್ಯ ಕ್ಷಣಗಳು…
ಅಸ್ಸಾಂನ ಕ್ಯಾಚರ್ ಜಿಲ್ಲೆಯ ಲಖಿಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ವಶಪಡಿಸಿಕೊಂಡ ಸುಮಾರು…
ಗುಜ್ಜೆ ಕಟ್ಲೇಟ್ ಮಾಡುವ ವಿಧಾನದ ಬಗ್ಗೆ ಗೃಹಿಣಿ ದಿವ್ಯಮಹೇಶ್ ಅವರು ಇಲ್ಲಿ ವಿವರ…
ಶಿಕ್ಷಣವೆಂದರೆ ಅದು ಹಣ ಕೊಟ್ಟು ಪಡೆಯುವ ವಸ್ತುವಿನಂತೆ ಬಿಕರಿಯಾಗುತ್ತಿದೆ. ಈ ದೃಷ್ಠಿಯಿಂದ ಶಿಕ್ಷಣ…
ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ…
ಕೃಷಿಕರಿಗೆ ಹವಾಮಾನದ ಬದಲಾವಣೆಯ ಮಾಹಿತಿ ಇರುವುದಿಲ್ಲ. ಇದಕ್ಕಾಗಿ ಡಿಸೀಸ್ ಫಾರ್ಕಾಸ್ಟ್ ಅಂದರೆ ಯಾವ…
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯ ಅನ್ವಯ, ಉತ್ತರ ಕನ್ನಡ…