ಎಲ್ಲೆಡೆಯೂ ಧಾರ್ಮಿಕತೆಯ ಬಗ್ಗೆ ಚರ್ಚೆಯಾಗುತ್ತಿದೆ. ಧಾರ್ಮಿಕ ಆಚರಣೆ, ಪದ್ಧತಿ, ಪೂಜೆ ಇತ್ಯಾದಿಗಳು ಖಾಸಗಿ ವಿಷಯವಾದರೂ ಇಂದು ಬಹಿರಂಗವಾಗಿ ಚರ್ಚೆಯಾಗುತ್ತಿರುವ ವಿಷಯ. ಈ ನಡುವೆಯೇ ಮಾಂಸಾಹಾರ ಸೇವಿಸಿದ ಕಾರಣದಿಂದ ದೇವಸ್ಥಾನವನ್ನು ಪ್ರವೇಶಿಸದೇ ಈಗ ಗಮನ ಸೆಳೆದಿರುವವರು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್.
ಪುಣೆಯ ಪ್ರಸಿದ್ಧ ದಗ್ದುಶೇತ್ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಮಾಂಸಾಹಾರ ಸೇವಿಸಿದ್ದರಿಂದ ದೇವಸ್ಥಾನ ಆವರಣದ ಹೊರಗಿನಿಂದ ದರ್ಶನ ಪಡೆದರು ಎಂಬುದನ್ನು ಪಕ್ಷದ ಪುಣೆ ಘಟಕದ ಅಧ್ಯಕ್ಷ ಪ್ರಶಾಂತ್ ಜಗ್ತಾಪ್ ಸ್ಪಷ್ಟ ಪಡಿಸಿದ್ದಾರೆ. ದಗ್ದುಶೇತ್ ಗಣಪತಿ ದೇವಸ್ಥಾನದ ಪಕ್ಕದಲ್ಲಿರುವ ಜಮೀನನ್ನು ದೇವಸ್ಥಾನದ ಟ್ರಸ್ಟ್‌ಗೆ ಹಸ್ತಾಂತರಿಸಬೇಕೆಂಬ ಬಹುದಿನಗಳ ಬೇಡಿಕೆ ಹಿನ್ನೆಲೆಯಲ್ಲಿ ಪವಾರ್ ಪುಣೆಗೆ ಆಗಮಿಸಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಪವಾರ್ ಅವರು ದೇವಸ್ಥಾನದ ಆವರಣ ಪ್ರವೇಶಿಸದೇ ಹೊರಗಿನಿಂದ ದರ್ಶನ ಪಡೆದಿದ್ದರಿಂದ ಹಲವಾರು ಪ್ರಶ್ನೆಗಳು ಎದ್ದಿದ್ದವು. ಈ ಬಗ್ಗೆ ಸ್ಪಷ್ಟಪಡಿಸಿದ ಪಕ್ಷದ ಪುಣೆ ಘಟಕದ ಅಧ್ಯಕ್ಷ ಪ್ರಶಾಂತ್ ಜಗ್ತಾಪ್, ಶರದ್ ಪವಾರ್ ಅವರು ಹಿಂದಿನ ದಿನ ಮಾಂಸಾಹಾರವನ್ನು ಸೇವಿಸಿದ್ದರಿಂದ ದೇವಸ್ಥಾನದ ಒಳಗೆ ಹೋಗುವುದು ಸೂಕ್ತವಲ್ಲ ಎಂದು ಭಾವಿಸಿ ಹೊರಗಿನಿಂದ ದರ್ಶನ ಪಡೆದರು ಎಂದರು.