ಕುಟುಂಬದಲ್ಲೇ ಆರೋಗ್ಯದ ಬೀಜ – ಕುಟುಂಬದಲ್ಲಿ ಆರೋಗ್ಯಕರ ಅಭ್ಯಾಸಗಳ ಬೆಳವಣಿಗೆ

April 10, 2026
6:11 PM
ಕುಟುಂಬವೇ ಆರೋಗ್ಯಕರ ಜೀವನಶೈಲಿಯ ಮೊದಲ ಶಾಲೆ. ಸಣ್ಣ ಅಭ್ಯಾಸಗಳು ದೀರ್ಘಕಾಲದ ಆರೋಗ್ಯವನ್ನು ರೂಪಿಸುತ್ತವೆ.

“ಆರೋಗ್ಯವೇ ಮಹಾಸಂಪತ್ತು” ಎಂಬ ಮಾತು ಬಹುಜನ ಕೇಳಿರುವುದು ಸತ್ಯ. ಆದರೆ ಆ ಸಂಪತ್ತಿನ ಬೀಜ ಬಿತ್ತಲ್ಪಡುವ ಮೊದಲ ಸ್ಥಳವೇ ಕುಟುಂಬ. ಶಾಲೆ, ಆಸ್ಪತ್ರೆ, ಸಮಾಜ  ಎಲ್ಲವೂ ನಂತರ ಬರುತ್ತವೆ; ಮನೆಯೇ ಮಗುವಿನ ಮೊದಲ ಪಾಠಶಾಲೆ, ವ್ಯಕ್ತಿಯ ಮೊದಲ ಶಿಸ್ತುಕೇಂದ್ರ ಎಂದರೆ ಮನೆ. ಹೀಗಾಗಿ ಕುಟುಂಬದಲ್ಲಿ ಬೆಳೆಸುವ ದಿನನಿತ್ಯದ ಸಣ್ಣ ಸಣ್ಣ ಆರೋಗ್ಯಕರ ಅಭ್ಯಾಸಗಳು, ದೀರ್ಘಕಾಲದ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಆರೋಗ್ಯವನ್ನು ರೂಪಿಸುತ್ತವೆ.ಆರೋಗ್ಯವಂತ ಕುಟುಂಬವೇ ಆರೋಗ್ಯವಂತ ಸಮಾಜದ ನಾಂದಿ.

1 . ಆಹಾರ ಪದ್ಧತಿ  ಸಂಸ್ಕಾರ ಮತ್ತು ಸಂಸ್ಕೃತಿ : ಆರೋಗ್ಯಕರ ಕುಟುಂಬದ ಮೊದಲ ಅಡಿಪಾಯವೇ ಆಹಾರ ಶಿಸ್ತು.  ತಾಯಿ ,ತಂದೆ ಏನು ತಿನ್ನುತ್ತಾರೆ, ಹೇಗೆ ತಿನ್ನುತ್ತಾರೆ ಎಂಬುದನ್ನು ಮಕ್ಕಳು ಮೌನವಾಗಿ ಅನುಕರಿಸುತ್ತಾರೆ. ಪೋಷಕಾಂಶಯುಕ್ತ ಆಹಾರ, ಸಮಯಪಾಲನೆ, ಅತಿಸ್ವಾದಾಸಕ್ತಿ ತಪ್ಪಿಸುವ ಶಿಸ್ತು ಇವೆಲ್ಲವೂ ಉಪದೇಶಕ್ಕಿಂತ ಆಚರಣೆಯಿಂದಲೇ ಮಕ್ಕಳಲ್ಲಿ ನೆಲೆಗೊಳ್ಳುತ್ತವೆ.

“ಯಥಾ ಅನ್ನಂ ತಥಾ ಮನಃ”ಆಹಾರ ಹೇಗಿದೆಯೋ, ಮನಸ್ಸೂ ಹಾಗೆಯೇ ರೂಪುಗೊಳ್ಳುತ್ತದೆ.

ಒಟ್ಟಿಗೆ ಕುಳಿತು ಊಟ ಮಾಡುವ ಸಂಪ್ರದಾಯ ಕೇವಲ ಪೋಷಣೆಯಲ್ಲ, ಅದು ಸಂವಾದ, ಬಂಧ ಮತ್ತು ಭಾವನಾತ್ಮಕ ಆರೋಗ್ಯವನ್ನೂ ಪೋಷಿಸುತ್ತದೆ. ಮನೆಯ ,ಕುಟುಂಬದ ಸಮಷ್ಟಿ ಮನಸ್ಸನ್ನು ದೃಢಗೊಳಿಸುತ್ತದೆ.

2 . ದೈಹಿಕ ಚಟುವಟಿಕೆ  ಕುಟುಂಬದ ಸಂಯುಕ್ತ ವ್ಯಾಯಾಮ : ಆರೋಗ್ಯ ಎಂದರೆ ಕೇವಲ ರೋಗರಹಿತ ಸ್ಥಿತಿ ಅಲ್ಲ; ಅದು ಚೈತನ್ಯಪೂರ್ಣ ಜೀವನಶೈಲಿ. ಬೆಳಿಗ್ಗೆನ  ನಡಿಗೆ, ಯೋಗಾಭ್ಯಾಸ, ಮಕ್ಕಳೊಂದಿಗೆ ಆಟ ಇವೆಲ್ಲವೂ ಕುಟುಂಬವನ್ನು ದೈಹಿಕವಾಗಿ ಮಾತ್ರವಲ್ಲ,ಭಾವನಾತ್ಮಕವಾಗಿಯೂ ಹತ್ತಿರ ತರುತ್ತವೆ.

ಇಂದು “ಸ್ಕ್ರೀನ್ ಸಮಯ” ಹೆಚ್ಚುತ್ತಿರುವ ಯುಗದಲ್ಲಿ, ಕುಟುಂಬವೇ ಮಕ್ಕಳಿಗೆ ಚಲನೆಯ ಮಹತ್ವವನ್ನು ತೋರಿಸಬೇಕಾದ ಹೊಣೆ ಹೊತ್ತಿದೆ. “ಮೊಬೈಲ್ ಬಿಡು” ಎನ್ನುವುದಕ್ಕಿಂತ, “ನಮ್ಮ ಜೊತೆ ನಡೆಯೋಣ” ಎನ್ನುವುದು ಹೆಚ್ಚು ಪರಿಣಾಮಕಾರಿ. ಇದರಿಂದ ನಾವು ಜೊತೆಯಾಗಿರೋಣ ಎಂಬ ಭಾವ ವೃದ್ಧಿಯಾಗುತ್ತದೆ.

3 . ಮಾನಸಿಕ ಆರೋಗ್ಯ ಮತ್ತು ಮಾತುಕತೆಯ ಸಂಸ್ಕೃತಿ :  ಆರೋಗ್ಯಕರ ಕುಟುಂಬವೆಂದರೆ ಅಲ್ಲಿ ಮಾತಾಡಲು ಭಯವಿಲ್ಲದ ವಾತಾವರಣ ಇರಬೇಕು.ಮಕ್ಕಳ ಭಾವನೆಗಳಿಗೆ ಕಿವಿಗೊಡುವುದು, ಹಿರಿಯರ ಅನುಭವಗಳನ್ನು ಗೌರವಿಸುವುದು, ಒತ್ತಡ, ವಿಫಲತೆ, ದುಃಖಗಳ ಬಗ್ಗೆ ಮುಕ್ತವಾಗಿ ಮಾತನಾಡುವ ಅವಕಾಶ  ಇವೆಲ್ಲವೂ ಮಾನಸಿಕ ಆರೋಗ್ಯದ ಬಲವಾದ ಕವಚ. “ಮೌನದಿಂದ ಕಾಯಿಲೆ ಬರುತ್ತದೆ; ಸಂವಾದದಿಂದ ಪರಿಹಾರ ಹುಟ್ಟುತ್ತದೆ.” ಕುಟುಂಬದೊಳಗಿನ ಸಹಾನುಭೂತಿ, ಸಹನೆ ಮತ್ತು ಪರಸ್ಪರ ಬೆಂಬಲವೇ ಸಮಾಜಕ್ಕೆ ಬೇಕಾದ ಮಾನಸಿಕ ಸ್ಥೈರ್ಯವನ್ನು ನಿರ್ಮಿಸುತ್ತದೆ.

4 . ಶಿಸ್ತು ಮತ್ತು ದಿನಚರಿ , ಆರೋಗ್ಯದ ಮೌನ ವೈದ್ಯ : ನಿದ್ರೆ ಸಮಯ, ಊಟದ ಸಮಯ, ಕೆಲಸ ಮತ್ತು ವಿಶ್ರಾಂತಿಯ ಸಮತೋಲನ  ಇವುಗಳೆಲ್ಲವೂ ಕಾಣದ ಔಷಧಿಗಳು. ಅಸ್ತವ್ಯಸ್ತ ಜೀವನಶೈಲಿಯೇ ಅನೇಕ ಕಾಯಿಲೆಗಳ ಮೂಲವಾಗಿರುವ ಇಂದಿನ ದಿನಗಳಲ್ಲಿ, ಕುಟುಂಬದ ನಿಯಮಿತ ದಿನಚರಿಯೇ ಆರೋಗ್ಯದ ರಕ್ಷಕ.  ಇಲ್ಲಿ ಶಿಸ್ತು ಎಂದರೆ ಕಠಿಣತೆ ಅಲ್ಲ; ಅದು ಸೌಮ್ಯ ನಿಯಮಿತತೆ.

5 . ಸ್ವಚ್ಛತೆ ಮತ್ತು ಪರಿಸರ ಜಾಗೃತಿ : ವೈಯಕ್ತಿಕ ಸ್ವಚ್ಛತೆ, ಮನೆ ಸುತ್ತಲಿನ ಪರಿಸರದ ಜವಾಬ್ದಾರಿ, ನೀರು,ಆಹಾರದ ಮಿತವ್ಯಯ ಇವೆಲ್ಲವೂ ಕುಟುಂಬದಿಂದಲೇ ಕಲಿಯುವ ಪಾಠಗಳು. ಸ್ವಚ್ಛ ಮನೆ ಎಂದರೆ ಕೇವಲ ರೋಗ ತಪ್ಪಿಸುವುದು ಅಲ್ಲ; ಅದು ಸ್ವಾಭಿಮಾನ ಮತ್ತು ಶಿಸ್ತು ಬೆಳೆಸುವ ಪಾಠಶಾಲೆ.

6 . ಮೌಲ್ಯಾಧಾರಿತ ಆರೋಗ್ಯದೃಷ್ಟಿ : ಆರೋಗ್ಯಕರ ಅಭ್ಯಾಸಗಳು ಕೇವಲ ದೇಹಕ್ಕೆ ಸೀಮಿತವಲ್ಲ; ಅವು ಮೌಲ್ಯಗಳೊಂದಿಗೆ ಜೋಡಿತವಾಗಿರಬೇಕು. ಸಹನೆ, ಸಂಯಮ, ಸಮತೋಲನ, ಪ್ರಕೃತಿಯೊಂದಿಗೆ ಹೊಂದಾಣಿಕೆ  ಇವೆಲ್ಲವೂ ದೀರ್ಘಕಾಲಿಕ ಆರೋಗ್ಯದ ಮೂಲ ತತ್ವಗಳು. ಮನೆಯವರೆಲ್ಲಾ ಒಟ್ಟಾಗಿ ಹಬ್ಬ ಆಚರಿಸುವುದು , ಸಾಂಸ್ಕೃತಿಕ ಸಂವಾದ ಏರ್ಪಡಿಸುವುದು ,ಜೊತೆಯಾಗಿ ಪ್ರವಾಸ ಹೋಗುವುದು , ಪುಣ್ಯ  ಕ್ಷೇತ್ರ ಸಂದರ್ಶಿಸುವುದು.ಇದೆಲ್ಲವೂ ಕುಟುಂಬ ಜೀವನವನ್ನು ಆನಂದಮಯವಾಗಿಸುತ್ತದೆ.“ಸ್ವಸ್ಥ ದೇಹದಲ್ಲಿ ಸ್ವಸ್ಥ ಮನಸ್ಸು; ಸ್ವಸ್ಥ ಮನಸ್ಸಿನಲ್ಲಿ ಸುಸಂಸ್ಕೃತ ಸಮಾಜ.”

ಕುಟುಂಬದಲ್ಲಿ ಆರೋಗ್ಯಕರ ಅಭ್ಯಾಸಗಳ ಬೆಳವಣಿಗೆ ಎಂದರೆ ದೊಡ್ಡ ಬದಲಾವಣೆಗಳ ಅಗತ್ಯವಿಲ್ಲ; ಸಣ್ಣ, ನಿರಂತರ, ಪ್ರಾಮಾಣಿಕ ಪ್ರಯತ್ನಗಳೇ ಸಾಕು. ಪೀಳಿಗೆಗಳಿಂದ ಪೀಳಿಗೆಗಳಿಗೆ ಹರಿದುಹೋಗುವ ಅತ್ಯಮೂಲ್ಯ ನಡವಳಿಕೆಗಳೇ  ಈ ಆರೋಗ್ಯ ಸಂಸ್ಕೃತಿ. ಆರೋಗ್ಯವಂತ ಕುಟುಂಬಗಳು ನಿರ್ಮಾಣವಾದಾಗಲೇ, ಆರೋಗ್ಯವಂತ ಸಮಾಜ ಮತ್ತು ಆರೋಗ್ಯವಂತ ರಾಷ್ಟ್ರ ಸಾಧ್ಯ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Healthy habits begin at home, where small daily practices shape long-term physical, mental, and social well-being. A disciplined lifestyle, good food habits, open communication, and shared family activities together build a strong foundation for a healthy society.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಕುಮಾರಸುಬ್ರಹ್ಮಣ್ಯ ಮುಳಿಯಾಲ

ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅವರು, ಬೆಂಗಳೂರಿನ ಬಯೋ ಕ್ರಾಸ್ ಕೆಮ್, ಎಲ್ಎಲ್ ಪಿ  ಎಂಬ ಔಷಧಿ ಕಂಪೆನಿಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ. ದ.ಕ. ಜಿಲ್ಲೆಯ ಪುತ್ತೂರಿನ ಸಮೀಪ ಹಿಂದಾರು ಎಂಬಲ್ಲಿ ಅಡಿಕೆ , ತೆಂಗು, ಕರಿಮೆಣಸು ಕೃಷಿ ಭೂಮಿ ಹೊಂದಿದ್ದಾರೆ. ಮೂಲತಃ ಅಡ್ಯನಡ್ಕ ಸಮೀಪದ ಮುಳಿಯಾಲದವರಾಗಿದ್ದು ಕೃಷಿ ಭೂಮಿ ಹೊಂದಿದ್ದು, ಕೃಷಿ ಚಿಂತನೆಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ

ಅಡಿಕೆ ಮಾರುಕಟ್ಟೆಯ ಸ್ಥಿತಿಗತಿ ಮತ್ತು ಬೆಳೆಗಾರರ ಅಭಿಪ್ರಾಯ : ಸಮೀಕ್ಷಾ ವರದಿ
April 13, 2026
7:45 AM
by: ದ ರೂರಲ್ ಮಿರರ್.ಕಾಂ
ಭಾರತದಲ್ಲಿ ವಿದ್ಯುತ್ ಉತ್ಪಾದನೆಗೆ ಐತಿಹಾಸಿಕ ಏರಿಕೆ : 55 ಗಿಗಾವ್ಯಾಟ್ ಹೆಚ್ಚಳ – ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
April 13, 2026
7:09 AM
by: ಮಿರರ್‌ ಡೆಸ್ಕ್
ದೇಶದಲ್ಲಿ LPG ವಿತರಣೆ ಸಾಮಾನ್ಯ ಹಂತಕ್ಕೆ : ಒಂದೇ ದಿನ 51.5 ಲಕ್ಷ ಸಿಲಿಂಡರ್ ವಿತರಣೆ
April 13, 2026
7:07 AM
by: ಮಿರರ್‌ ಡೆಸ್ಕ್
ರೈತರ ಪಂಪ್‌ಸೆಟ್‌ಗಳಿಗೆ ದಿನಕ್ಕೆ 7 ಗಂಟೆ ವಿದ್ಯುತ್ ಭರವಸೆ
April 13, 2026
7:03 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror