ಇದುವರೆಗೂ ಕೇಳದ ಶಬ್ದಗಳು ಈಗ ಕೇಳುತ್ತಿವೆ. ಹೀಟ್ ವೇವ್, ಎಲ್‌ನಿನೋ.. ಹೀಟ್ ಬರ್ನ್, ಹೀಟ್ ಸ್ಟ್ರೋಕ್…!. ಹಿಂದೆಲ್ಲಾ ಇಂತಹ ಶಬ್ದಗಳ ಬಳಕೆಗೆ ಅವಕಾಶ ಇರಲಿಲ್ಲ. ಹಸಿರಿ ಹಸಿರಾಗಿದ್ದ ಗ್ರಾಮೀಣ ಭಾಗದಲ್ಲೂ ಇಂದು ಬಿಸಿಬಿಸಿಯಾದ ಮಾತುಗಳು.. ನೀರಿಲ್ಲ, ಯಬೋ ಬಿಸಿಲು…!. ಈಗ ಬಿಸಿಯಾದ ತಾಪಮಾನದಿಂದ ರಕ್ಷಣೆಗೆ ಹೇಗೆ .. ? ಈ ಬಗ್ಗೆ ಇಲಾಖೆಗಳು ಮಾಹಿತಿ ನೀಡುತ್ತವೆ. ದೇಶದೆಲ್ಲೆಡೆ ಆಗಾಗ ಈ ಎಚ್ಚರಿಕೆ ನೀಡಲಾಗುತ್ತಿದೆ.
ತೀವ್ರತರವಾದ ಶಾಖದಿಂದ ನಮ್ಮನ್ನು ನಾವು ರಕ್ಷಿಸುಕೊಳ್ಳುವುದು ಹೇಗೆ..? ಅನುಸರಿಸಬೇಕಾದ ಸಲಹೆಗಳು ಏನು..? : ಈ ಬಾರಿ ದೇಶದಲ್ಲಿ ಬೇಸಿಗೆಯ ಆರಂಭದೊಂದಿಗೆ, ಅನೇಕ ಪ್ರದೇಶಗಳಿಗೆ ಹೀಟ್‌ವೇವ್ ಎಚ್ಚರಿಕೆಗಳನ್ನು ನೀಡಲಾಗಿದೆ. ಭಾರತೀಯ ಹವಾಮಾನ ಇಲಾಖೆ ತಮಿಳುನಾಡು, ಕರ್ನಾಟಕ, ತೆಲಂಗಾಣ, ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಕರಾವಳಿ ಆಂಧ್ರ ಪ್ರದೇಶ, ಮತ್ತು ರಾಯಲಸೀಮೆಯ ಹಲವು ಕಡೆಗಳಲ್ಲಿ ಹೀಟ್‌ವೇವ್ ಎಚ್ಚರಿಕೆಗಳನ್ನು ನೀಡಿದೆ. ಒಂದು ಸ್ಥಳದ ಗರಿಷ್ಠ ತಾಪಮಾನವು 40-ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚು ತಲುಪಿದಾಗ ಹೀಟ್ ವೇವ್ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಹವಾಮಾನವು ಮಾನವನ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ. ಪರಿಸರದ ಮೇಲೂ ಹೆಚ್ಚಿನ ಪರಿಣಾಮ ಉಂಟುಮಾಡುತ್ತದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ತಾಪಮಾನ ಏರಿಕೆಯಾಗಿದೆ. ಮಂಗಳೂರು, ಬೆಂಗಳೂರು, ಧಾರವಾಡ, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಹಲವು ಕಡೆ ತಾಪಮಾನ ಏರಿಕೆಯಾಗಿದೆ.
ವಿಪರೀತ ಶಾಖದಿಂದ ರಕ್ಷಿಸಿಕೊಳ್ಳುವುದು ಹೇಗೆ ? :
- ಬಿಸಿಲಿನ ಸಂದರ್ಭ ಹೆಚ್ಚಾಗಿ ಹತ್ತಿ, ಸಡಿಲವಾದ ಬಟ್ಟೆಗಳನ್ನು ಆಯ್ಕೆಮಾಡಿ. ಚರ್ಮವನ್ನು ತೇವವಾಗಿರಿಸಿಕೊಳ್ಳಬೇಕು ಅಥವಾ ಚರ್ಮವನ್ನು ತೇವಾಂಶದಿಂದ ಇಡಲು ಒದ್ದೆಯಾದ ಬಟ್ಟೆಯನ್ನು ಇಟ್ಟುಕೊಳ್ಳಬೇಕು. ಸಾಧ್ಯವಾದರೆ ಗಾಳಿಯ ಕಡೆ ಹೆಚ್ಚಾಗಿ ಇರುವುದು ಕ್ಷೇಮ. ಫ್ಯಾನ್ ಅಳವಡಿಕೆ ಇರಲಿ.
- ಹೆಚ್ಚು ನೀರನ್ನು ಕುಡಿಯುತ್ತಲೇ ಇರಬೇಕು. ವಿಪರೀತ ಶಾಖದಲ್ಲಿ ಅಥವಾ ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಯ ಸಮಯದಲ್ಲಿ ಹೊರಗೆ ಕೆಲಸ ಮಾಡುವಾಗ, ನಮಗೆ ಬಾಯಾರಿಕೆಯಾಗುವ ಮೊದಲೇ ನಾವು ನೀರನ್ನು ಕುಡಿಯಬೇಕು.
- ದಿನದ ಅತ್ಯಂತ ಬಿಸಿಯಾದ ಸಮಯದಲ್ಲಿ ಮನೆಯೊಳಗೆ ಇರಲು ಯೋಜಿಸಿಕೊಳ್ಳಿ.
- ಮನೆಯಲ್ಲಿ ತಯಾರಿಸಿದ ಪಾನೀಯಗಳಾದ ತೆಂಗಿನ ನೀರು, ಎಳನೀರು, ನಿಂಬೆ ನೀರು, ಬೆಣ್ಣೆ ಹಾಲು ಮತ್ತು ಇತರವುಗಳನ್ನು ಬಳಸಿ.
- ಸಾಧ್ಯವಾದರೆ ಇಂದಿನ ವಾತಾವರಣ ಉಷ್ಣತೆಯನ್ನು ತಿಳಿದುಕೊಳ್ಳಿ. ಡೀಹೈಡ್ರೇಶನ್ ಆಗದಂತೆ ಎಚ್ಚರವಹಿಸಿ ಹಾಗೂ ಅಂತಹ ಸಂದರ್ಭದಲ್ಲಿ ಅಗತ್ಯ ಔಷಧಗಳನ್ನು ಇರಿಸಿಕೊಳ್ಳಿ.
- ನಿಮ್ಮ ಚರ್ಮ ಮತ್ತು ಕಣ್ಣುಗಳನ್ನುರಕ್ಷಿಸಲು ಛತ್ರಿ, ಟೋಪಿ, ಸನ್‌ಗ್ಲಾಸ್ ಮತ್ತು ಬಟ್ಟೆಯನ್ನು ಬಳಸಿ.
- ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಬಿಸಿಲಿನಲ್ಲಿ ತಿರುಗಾಡುವುದನ್ನು ತಪ್ಪಿಸಿ.
- ಶ್ರಮದಾಯಕ ಚಟುವಟಿಕೆಗಳನ್ನು ಸಾಧ್ಯವಾದರೆ ಬಿಸಿಲಿನ ವೇಳೆ ಮಾಡದಿರಿ.
- ಉಪ್ಪು, ಮಸಾಲೆಯುಕ್ತ, ಎಣ್ಣೆಯುಕ್ತ ಮತ್ತು ಹೆಚ್ಚಿನ ಪ್ರೋಟೀನ್ ಆಹಾರಗಳಿಂದ ತಾತ್ಕಾಲಿಕವಾಗಿ ದೂರ ಇರಿ.
- ನಿಮ್ಮ ಸಾಕುಪ್ರಾಣಿಗಳು ಮತ್ತು ಮಕ್ಕಳನ್ನು ನಿಲ್ಲಿಸಿದ ವಾಹನಗಳಲ್ಲಿ ಒಂಟಿಯಾಗಿ ಬಿಡಬೇಡಿ. ಕಾರಿನ ಗ್ಲಾಸ್ ಕ್ಲೋಸ್ ಮಾಡಬೇಡಿ.