ಕಳೆದ ಎರಡು ದಿನಗಳಿಂದ ಪಶ್ಚಿಮ ಘಟ್ಟದಲ್ಲಿ ಜಲಸ್ಫೋಟದ ಜೊತೆಗೆ ಮೇಘಸ್ಫೋಟವೂ ಉಂಟಾಗಿದೆ. ಭಾನುವಾರ ತಡರಾತ್ರಿ ಕಲ್ಮಕಾರು ಪ್ರದೇಶದಲ್ಲಿ ಭಾರೀ ಸದ್ದಿನೊಂದಿಗೆ ಜಲಸ್ಫೋಟಗೊಂಡರೆ ಸೋಮವಾರ ರಾತ್ರಿ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ಮೇಘಸ್ಫೋಟ ಉಂಟಾಗಿತ್ತು. ಸುಮಾರು 400 ಮಿಮೀಗಿಂತಲೂ ಅಧಿಕ ಮಳೆಯಾಗಿದೆ. ಹಲವು ಕಡೆ ಅತಂತ್ರ ಸ್ಥಿತಿ ಕಂಡುಬಂದಿದೆ.
ಕಲ್ಮಕಾರು ಪ್ರದೇಶದಲ್ಲಿ ಭಾನುವಾರ ತಡರಾತ್ರಿ ಮಳೆ ಕಡಿಮೆ ಇತ್ತು. ಆದರೆ ಕಲ್ಮಕಾರು 5ನೇ ಕಾಡು ಎಂಬ ಪ್ರದೇಶದಲ್ಲಿ ಸುಮಾರು 2 ಗಂಟೆ ರಾತ್ರಿಗೆ ಭಾರೀ ಸದ್ದಿನೊಂದಿಗೆ ಪ್ರವಾಹ ಉಂಟಾಗಿತ್ತು. ರಬ್ಬರ್ ಎಸ್ಟೇಟ್‌ನ ಕೆಲವು ಭಾಗದಲ್ಲಿ ಮರ ಹಾಗೂ ಕೆಸರು ಮಿಶ್ರಿತ ನೀರಿನೊಂದಿಗೆ ಪ್ರವಾಹವೇ ಬಂದಿತ್ತು, ಆದರೆ ಭೀಕರತೆ ಅರಿವಿಗೆ ಬಂದದ್ದು ಮರುದಿನ ಬೆಳಗ್ಗೆ. ಸುಮಾರು 25 ತೋಟಗಳಿಗೆ ಕೆಸರು ನೀರು ನುಗ್ಗಿ ಹಾನಿಯಾಗಿದೆ. ಕಲ್ಮಕಾರು-ಕೊಲ್ಲಮೊಗ್ರ ಪ್ರದೇಶದಲ್ಲಿ ಅಷ್ಟೊಂದು ಮಳೆ ಇದ್ದರಿಲಿಲ್ಲ. ಪ್ರವಾಹದ ಕಾರಣದಿಂದ ಕಲ್ಮಕಾರು ಪ್ರದೇಶದಲ್ಲಿ ಹಾಗೂ ಇಡ್ಯಡ್ಕ ಪ್ರದೇಶದಲ್ಲಿ 5 ಮನೆಗಳಿಗೆ ಸಂಪರ್ಕ ಸೇತುವೆ ಕಡಿತಗೊಂಡಿದೆ. ಹೀಗಾಗಿ ಸಮಸ್ಯೆಯಾಗಿದೆ.
ಸೋಮವಾರ ಸಂಜೆಯವರೆಗೂ ಹನಿ ಮಳೆ ಇತ್ತು. ಸಂಜೆ 4 ಗಂಟೆ ನಂತರ ಭೀಕರ ಮಳೆ ಆರಂಭವಾಗಿತ್ತು. ಮೇಘಸ್ಫೋಟದ ಮಾದರಿಯಲ್ಲಿ ಮಳೆ ಸುರಿಯಿತು. ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಾದ ಕಲ್ಮಕಾರು, ಕೊಲ್ಲಮೊಗ್ರ, ಕಟ್ಟ, ಹರಿಹರ, ಬಾಳುಗೋಡು, ಕಲ್ಲಾಜೆ, ಸುಬ್ರಹ್ಮಣ್ಯ,ಏನೆಕಲ್ಲು ಪ್ರದೇಶದಲ್ಲಿ ಭಾರೀ ಮಳೆ ಸುರಿಯಿತು. ಕುಕ್ಕೆ ಸುಬ್ರಹ್ಮಣ್ಯ ಪ್ರದೇಶದಲ್ಲಿ 250 ಮಿಮೀ ಆಸುಪಾಸಿನಲ್ಲಿ ಮಳೆಯಾದರೆ ಕಲ್ಲಾಜೆ ಪ್ರದೇಶದಲ್ಲಿ 400 ಮಿಮೀಗಿಂತಲೂ ಅಧಿಕ ಮಳೆಯಾಗಿದೆ. ಕೊಲ್ಲಮೊಗ್ರ ಪ್ರದೇಶದಲ್ಲೂ 200 ಮಿಮೀಗಿಂತಲೂ ಅಧಿಕ ಮಳೆಯಾಗಿದೆ. ಮಳೆಯ ಕಾರಣದಿಂದ ಗ್ರಾಮೀಣ ಭಾಗಗಳು ಅಕ್ಷರಶ: ದ್ವೀಪವಾದವು. ಕೃಷಿ ಭೂಮಿಗಳು ಜಲಾವೃತವಾದವು.
ಭಾರೀ ಮಳೆ ದಕ್ಷಿಣ ಕನ್ನಡ ಮಾತ್ರವಲ್ಲ ಕೊಡಗು, ಸಂಪಾಜೆ, ಕರಿಕೆ, ಭಾಗಮಂಡಲ ಪ್ರದೇಶದಲ್ಲೂ ಭಾರೀ ಮಳೆಯಾಗಿದೆ. ಕರಿಕೆ ಭಾಗಮಂಡಲ ರಸ್ತೆಯ ಹಲವು ಕಡೆಗಳಲ್ಲಿ ಭೂಕುಸಿತ ಉಂಟಾಗಿದೆ. ಸಂಪಾಜೆಯಲ್ಲಿ ಭಾರೀ ಮಳೆಗೆ ಮನೆಗಳಿಗೆ ಹಾನಿಯಾಗಿದೆ. ಮಧ್ಯರಾತ್ರಿ ಉಂಟಾದ ಪ್ರವಾಹದಿಂದ ಕೆಲವು ಮನೆಗಳಿಗೂ ನೀರು ನುಗ್ಗಿತ್ತು. ಕೇರಳದ ಹಲವು ಜಿಲ್ಲೆಗಳಲ್ಲೂ ಮಳೆಯಬ್ಬರ ಕಂಡುಬಂದಿದೆ.ಇದೀಗ 7 ಜಿಲ್ಲೆಗಳಲ್ಲಿ ರೆಡ್ ಎಲರ್ಟ್ ಘೋಷಣೆ ಮಾಡಲಾಗಿದೆ.
ರಾಜ್ಯದಲ್ಲೂ ಉತ್ತಮ ಮಳೆ ನಿರೀಕ್ಷೆ ಮಾಡಲಾಗಿದೆ. ರಾಜ್ಯದಲ್ಲಿ ಮುಂದಿನ ಕೆಲವು ದಿನಗಳ ಕಾಲ ಮತ್ತೆ ಮುಂಗಾರು ಮಳೆ ಅಬ್ಬರಿಸಲಿದೆ. ಆಗಸ್ಟ್ 6 ವರೆಗೆ ರಾಜ್ಯಾದ್ಯಂತ ಭಾರಿ ಮಳೆ ಆಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ಐದು ದಿನ ಉಡುಪಿ, ಉತ್ತರ ಕನ್ನಡ, ದಕ್ಷಿಣಕನ್ನಡ ಸೇರಿದಂತೆ ಕೊಡಗು, ಮಡಿಕೇರಿ, ಶಿವಮೊಗ್ಗ, ಚಿಕ್ಕಮಗಳೂರು, ಒಂದು ದಿನ ತುಮಕೂರು ಮತ್ತು ರಾಮನಗರ ಜಿಲ್ಲೆ ‘ಆರೆಂಜ್ ಅಲರ್ಟ್‘ ನೀಡಲಾಗಿದೆ. ಉಳಿದ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ಕೊಡಲಾಗಿದೆ. ಮುಂದಿನ 48 ಗಂಟೆಯಲ್ಲಿ ಕರಾವಳಿ, ದಕ್ಷಿಣ ಮತ್ತು ಉತ್ತರ ಒಳನಾಡು ಸೇರಿದಂತೆ ರಾಜ್ಯಾದ್ಯಂತ ಭಾರಿಮಳೆ ನಿರೀಕ್ಷೆ ಇದೆ.