ಮತ್ತೊಮ್ಮೆ ಜಲಸ್ಫೋಟಗೊಂಡು ಸುಳ್ಯ ತಾಲೂಕಿನ ಕಲ್ಮಕಾರು, ಕೊಲ್ಲಮೊಗ್ರ ಹಾಗೂ ಕೊಡಗು ಜಿಲ್ಲೆಯ ಸಂಪಾಜೆ, ದೇವರಕೊಲ್ಲಿ, ಕೊಯನಾಡು ಪ್ರದೇಶ ತತ್ತರವಾಗಿದೆ. ರಾತ್ರಿ ಸುರಿದ ಭಾರೀ ಮಳೆಯಿಂದ ಪ್ರವಾಹವೇ ಉಂಟಾಗಿತ್ತು. ಮಳೆ ಹಾಗೂ ಪ್ರವಾಹದ ನಡುವೆ ದೇವರಕೊಲ್ಲಿ ಬಳಿ ಭೂಕುಸಿತ ಉಂಟಾಗಿ ಸುಳ್ಯ-ಮಡಿಕೇರಿ ನಡುವಿನ ವಾಹನ ಸಂಚಾರಕ್ಕೆ ತೊಂದರೆಯಾಯಿತು. ಪ್ರಯಾಣಿಕರು ಮಣ್ಣು ತೆರವು ಮಾಡಿ ತಾತ್ಕಾಲಿಕ ಸಂಚಾರಕ್ಕೆ ಮುಕ್ತವಾಗಿದೆ.
ಕಲ್ಮಕಾರು, ಕೊಲ್ಲಮೊಗ್ರು ಗ್ರಾಮಗಳಲ್ಲಿ ರಾತ್ರಿ ಪ್ರವಾಹವೇ ಕಂಡುಬಂದಿತ್ತು. ನಿನ್ನೆ ಸಂಜೆಯಿಂದ ಒಮ್ಮಲೇ ಸುರಿದ ಮಳೆ 140 ಮಿಮೀಗಿಂತಲೂ ಅಧಿಕವಾಗಿತ್ತು. ಕಲ್ಮಕಾರು ಪರಿಸರದ ಗುಳಿಕ್ಕಾನ, ಹಾಗೂ ಕಡಮಕಲ್ ಎಸ್ಟೇಟ್ ಭಾಗದಲ್ಲಿ ಜಲಸ್ಪೋಟ ಸಂಭವಿಸಿದೆ. ಇದರಿಂದಾಗಿ ಭಾರೀ ಪ್ರಮಾಣದ ಮರಗಳು ನೀರ ಅಬ್ಬರಕ್ಕೆ ಕೊಚ್ಚಿ ಬಂದಿವೆ. ಸ್ಥಳೀಯ ತೋಟಗಳು ಜಲಾವೃತವಾಗಿದೆ.2018 ರಲ್ಲಿ ಜಲಸ್ಫೋಟದಿಂದ ಪ್ರವಾಹದ ಪ್ರದೇಶದಲ್ಲಿ ಮತ್ತೆ ಮರಗಳ ರಾಶಿಯೇ ಬಂದು ನಿಂತಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಕಡಮಕಲ್ ಎಸ್ಟೇಟ್ ಬಳಿ ಭಾರೀ ಭೂಕುಸಿತವಾಗಿದೆ, ಮಣ್ಣು ಮಿಶ್ರಿತ ನೀರು ಹರಿಯುತ್ತಿದೆ. ಭಾರೀ ಮಳೆ ಹಾಗೂ ಪ್ರವಾಹದ ಕಾರಣದಿಂದ ಮೂರನೇ ಬಾರಿಗೆ ಉಪ್ಪುಕಳ ಸೇತುವೆ ಕೊಚ್ಚಿಹೋಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮಧ್ಯರಾತ್ರಿ ಸುಮಾರು 1.30 ರ ಹೊತ್ತಿಗೆ ಭಾರೀ ಸದ್ದು ಕೇಳಿತ್ತು. 2018 ರಲ್ಲಿ ಭೂಕುಸಿತವಾದ ಪ್ರದೇಶದಲ್ಲಿಯೇ ಈ ಬಾರಿ ಮತ್ತೆ ಕುಸಿತವಾಗಿದೆ. ಮಧ್ಯರಾತ್ರಿ 1.30 ರ ಹೊತ್ತಿಗೆ ಸದ್ದು ಕೇಳಿ ಹೊರಬಂದಾಗ ಮರಗಳು ರಾಶಿ ರಾಶಿ ಬರುತ್ತಿದ್ದವು ಎಂದು ಸ್ಥಳೀಯರು ಹೇಳಿದ್ದಾರೆ.
ಇದೇ ವೇಳೆ ಮಡಿಕೇರಿ ತಾಲೂಕಿನ ಸಂಪಾಜೆ, ಕೊಯನಾಡು ಭಾಗದಲ್ಲೂ ಭಾರೀ ಪ್ರವಾಹ ತಲೆದೋರಿದ್ದು, ರಾತ್ರೋರಾತ್ರಿ ಗ್ರಾಮಸ್ಥರು ಜಾಗ ತೊರೆದಿದ್ದಾರೆ. ಕೊಯನಾಡು ಭಾಗದಲ್ಲಿ ಪಯಸ್ವಿನಿ ನದಿ ಉಕ್ಕಿ ಹರಿದ ಪರಿಣಾಮ ಕಿಂಡಿ ರಾತ್ರಿ ವೇಳೆ ಐದಾರು ಮನೆಗಳಿಗೆ ನೀರು ನುಗ್ಗಿದೆ. ಚೆಂಬು ಪ್ರದೇಶದಲ್ಲೂ ಭಾರೀ ಮಳೆಗೆ ಭೂಕುಸಿತವಾಗಿದೆ , ದಬ್ಬಡ್ಕ ಹೊಳೆ ತುಂಬಿ ಹರಿದಿದೆ, ಇದೇ ಪ್ರದೇಶದಲ್ಲಿ ಜಲಪ್ರವಾಹವೇ ಬಂದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಪ್ರವಾಹ ಹಾಗೂ ಮಳೆಯ ಕಾರಣದಿಂದ ಸುಳ್ಯ-ಮಡಿಕೇರಿ ರಸ್ತೆಯಲ್ಲಿ ಭೂಕುಸಿತ ಹಿನ್ನೆಲೆ ಸಂಪರ್ಕ ಕಡಿತವಾಗಿ ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತವಾಗಿತ್ತು. ರಸ್ತೆ ಮೇಲೆ ಮರಗಳು ಬಂದು ಬಿದ್ದಿದ್ದು, ರಸ್ತೆಯಲ್ಲಿ ಬಿದ್ದಿರುವ ಮರವನ್ನು ಪ್ರಯಾಣಿಕರು ತೆರವುಗೊಳಿಸಿ ತಾತ್ಕಾಲಿಕ ಸಂಚಾರಕ್ಕೆ ಕಾರಣವಾಯಿತು.
Again #cloudburst near #Kalmakar of #sullia taluk and Devarakolli of kodadu#ಮಳೆ #HeavyRains #sulliarains pic.twitter.com/zotkHRUrNG
Advertisement— theruralmirror (@ruralmirror) August 29, 2022