ಕಾವೇರಿ ಜಲಾನಯನ(Cauvery belt) ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ (Rain) ಹಿನ್ನೆಲೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆಎರ್‌ಎಸ್ (KRS) ಡ್ಯಾಂ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಒಂದೇ ವಾರದಲ್ಲಿ 11 ಅಡಿಯಷ್ಟು ಡ್ಯಾಂ ಭರ್ತಿಯಾಗಿದ್ದು, ಕೆಆರ್‌ಎಸ್ ನೀರಿನ ಮಟ್ಟ (Water Level) 98 ಅಡಿಗೆ ತಲುಪಿದೆ.
ವಾರದ ಹಿಂದಷ್ಟೇ ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ 87 ಅಡಿಗೆ ಕುಸಿದಿತ್ತು. ಪ್ರಸ್ತುತ ನಿರಂತರ ಮಳೆಯಿಂದಾಗಿ ಕೆಆರ್‌ಎಸ್‌ಗೆ ನೀರು ಹರಿದು ಬರುತ್ತಿದೆ. ಮಳೆ ಮತ್ತಷ್ಟು ಜೋರಾದರೆ ಕೆಲವೇ ದಿನದಲ್ಲಿ ಡ್ಯಾಂ ಸಂಪೂರ್ಣ ಭರ್ತಿಯಾಗುವ ಸಾಧ್ಯತೆಯಿದೆ. ಸದ್ಯ ಡ್ಯಾಂನಲ್ಲಿ ಸುಮಾರು 21.987 ಟಿಎಂಸಿ ನೀರು ಸಂಗ್ರಹವಾಗಿದೆ. ಒಂದು ವಾರದಲ್ಲಿ 6 ಟಿಎಂಸಿಯಷ್ಟು ನೀರು ಸಂಗ್ರಹವಾಗಿದ್ದು, ದಿನೇ ದಿನೇ ನೀರಿನ ಮಟ್ಟ ಹೆಚ್ಚಳದಿಂದ ರೈತರಲ್ಲಿ ಸಂತಸ ಮನೆ ಮಾಡಿದೆ. ಅಲ್ಲದೇ ಅನ್ನದಾತ ಶೀಘ್ರವೇ ನಾಲೆಗಳಿಗೆ ನೀರು ಬಿಡುವ ನಿರೀಕ್ಷೆಯಲ್ಲಿದ್ದಾರೆ.
ಮುಂದಿನ ಒಂದು ವಾರ ಕರಾವಳಿಯ (Coastal Karnataka) ಎಲ್ಲ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಳಿಗೆ ಇಂದು ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದ್ದು, ಹವಾಮಾನ ಇಲಾಖೆ ಗುಡುಗು ಸಹಿತ ಭಾರೀ ಮಳೆಯ ಎಚ್ಚರಿಕೆ ನೀಡಿದೆ.
- ಅಂತರ್ಜಾಲ ಮಾಹಿತಿ