ಎರಡು ದಿನಗಳಿಂದ ಮಳೆಯ ಅಬ್ಬರ ಹೆಚ್ಚಾಗಿದೆ. ಮಂಗಳವಾರ ಒಮ್ಮೆಲೇ ಭಾರೀ ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ. ಸುಳ್ಯ ತಾಲೂಕಿನಲ್ಲಿ ಅತೀ ಹೆಚ್ಚು ಮಳೆ ಬೀಳುವ ಕಲ್ಲಾಜೆ ಪ್ರದೇಶದಲ್ಲಿ 94 ಮಿಮೀ ಗಿಂತಲೂ ಅಧಿಕ ಮಳೆ ಸುರಿದಿದೆ. ಭಾರೀ ಮಳೆಯ ಕಾರಣದಿಂದ ಹೊಳೆ-ನದಿಗಳು ತುಂಬಿ ಹರಿಯುತ್ತಿದ್ದು ಗ್ರಾಮೀಣ ಭಾಗದ ಜನಜೀವನ ಅಸ್ತವ್ಯಸ್ತಗೊಂಡಿತು.
ಮಲೆನಾಡು ಭಾಗಗಳಲ್ಲಿ ವಿಪರೀತ ಮಳೆಯಾಗುತ್ತಿದೆ. ವಾಯುಭಾರ ಕುಸಿತದ ಪ್ರಭಾವ ಹಾಗೂ ಮುಂಗಾರು ಮಳೆಯ ಪ್ರಭಾವ ಸೇರಿ ಮಲೆನಾಡು ಮಳೆ ನಾಡಾಗಿ ಮಂಗಳವಾರ ಕಂಡಿತು. ಕುಕ್ಕೆ ಸುಬ್ರಹ್ಮಣ್ಯದಲ್ಲೂ ಮಳೆ ಪ್ರಭಾವ ಹೆಚ್ಚಾಗಿತ್ತು, ಘಟ್ಟ ಪ್ರದೇಶದಲ್ಲೂ ಮಳೆ ಸುರಿದ ಕಾರಣ ದರ್ಪಣ ತೀರ್ಥ ನದಿಯಲ್ಲಿ ಹೆಚ್ಚಿನ ನೀರು ಕಂಡುಬಂದಿತ್ತು. ಉಳಿದಂತೆ ಕುಮಾರಧಾರಾ ಸೇರಿದಂತೆ ದಕ ಜಿಲ್ಲೆಯ ಬಹುತೇಕ ನದಿಗಳು ತುಂಬಿ ಹರಿಯಿತು. ಮಳೆಯ ಅಬ್ಬರಕ್ಕೆ ಕೃಷಿಕರಿಗೆ ಭಯ ಶುರುವಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ ವಾಯುಭಾರ ಕುಸಿತದ ಕಾರಣದಿಂದ ಸೆ.10 ರವರೆಗೆ ಇದೇ ರೀತಿ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇತ್ತು. ಆದರೆ ಸದ್ಯದ ಮಾಹಿತಿಯಂತೆ ಮೋಡಗಳು ಚದುರಲು ಪ್ರಾರಂಭವಾಗಿದ್ದು ಮಳೆ ಕಡಿಮೆಯಾಗುವ ಸಾಧ್ಯತೆ ಇದೆ.