ನವೆಂಬರ್ ತಿಂಗಳು ಅಂತ್ಯವಾಗುವ ಹೊತ್ತು ಬಂದಿದೆ. ಹಾಗಿದ್ದರೂ ಮಳೆ ಕಡಿಮೆಯಾಗಲಿಲ್ಲ..! . ಈ ಚಿಂತೆ ಈಗ ರಾಜ್ಯದ ಎಲ್ಲಾ ಕೃಷಿಕರನ್ನೂ ಕಾಡುತ್ತಿದೆ. ಈ ಚಿಂತೆಯ ಕಡೆಗೆ ಸರ್ಕಾರ ಚಿಂತನೆ ನಡೆಸಬೇಕಾದ ದಿನ ಹತ್ತಿರ ಇದೆ.
ಮಳೆ ಕಳೆದು ಚಳಿ ಆರಂಭವಾಗಬೇಕಾದ ಹೊತ್ತು, ಹಸಿರಾದ ಗಿಡದಲ್ಲಿ ಪೈರು ಬೆಳೆದು ಕಟಾವಿನ ಹೊತ್ತು, ಹೊಸ ಫಸಲು ಕೈಸೇರುವ ಹೊತ್ತಲ್ಲಿ ವರುಣನ ಆರ್ಭಟ ಹೆಚ್ಚಾಗಿದೆ. ಇಡೀ ಕೃಷಿ ಸಮೂಹ ಸಂಕಷ್ಟ ಅನುಭವಿಸುತ್ತಿದೆ. ಭತ್ತ, ರಾಗಿ, ಜೋಳ, ಅಡಿಕೆ, ರಬ್ಬರ್ ಸೇರಿದಂತೆ ಎಲ್ಲಾ ಬೆಳೆಯ ಮೇಲೂ ಈಗ ಮಳೆಯ ಪರಿಣಾಮ ಹೆಚ್ಚಾಗುತ್ತಿದೆ. ಈಗ ನೋಡಿದರೆ ಇನ್ನೂ ಮಳೆ ಹೆಚ್ಚಾಗುವ ಅಥವಾ ಇನ್ನೂ ಕೆಲವು ದಿನ ಮಳೆಯಾಗುವ ಸೂಚನೆ ಇದೆ. ಏಕೆಂದರೆ ಅರಬೀ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಲಕ್ಷಣಗಳು ಕಾಣುತ್ತಿವೆ. ಇದರ ಪರಿಣಾಮ ಮುಂಗಾರು ಮಳೆಯ ಮಾದರಿಯಲ್ಲಿ ಗಾಳಿಯ ಹಾಗೂ ಮೋಡಗಳ ಚಲನೆ ಕಾಣುತ್ತಿದೆ. ಒಂದು ವೇಳೆ ಹವಾಮಾನದ ಈ ಬದಲಾವಣೆ ಸರಿಯಾಗದೇ ಇದ್ದರೆ ಈ ವರ್ಷ ಎಲ್ಲಾ ಕೃಷಿಕರೂ ಸಂಕಷ್ಟ ಪಡಬೇಕಾಗಬಹುದು. ಅದರಲ್ಲೂ ಆಹಾರ ಬೆಳೆ ಸಂಕಷ್ಟಕ್ಕೆ ಸಿಲುಕಿದರೆ ಆಹಾರ ದಾಸ್ತಾನು ಮೇಲೂ ಪರಿಣಾಮ ಬೀರಬಹುದು ಎಂಬ ವಿಶ್ಲೇಷಣೆ ಇದೆ.
ಅಕಾಲಿಕ ಮಳೆ ಕಾರಣದಿಂದ ಭತ್ತದ ಬೆಳೆ ಕೊಯ್ಲು ಮಾಡಿ, ಕಟಾವು ಆದ ಬೆಳೆಗಳನ್ನು ಒಣಗಿಸಲೂ ಆಗದೆ, ಸಂಸ್ಕರಿಸಲು ಆಗದೆ, ಇತ್ತ ಹೊಲದಲ್ಲಿ ಬೆಳೆಯನ್ನು ಬಿಡಲೂ ಆಗದೆ ಹಾಳಾಗುವ ಪರಿಸ್ಥಿತಿ ರೈತನದ್ದಾಗಿದೆ. ಚೆನ್ನಾಗಿ ಬಂದ ಬೆಳೆಯನ್ನು ನೋಡಿದರೆ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ಈ ಸಾಲಿನಲ್ಲಿ ಭತ್ತ,ಜೋಳ, ಬಾಳೆ, ಅಡಿಕೆ, ರಾಗಿ, ಬೇಳೆ-ಕಾಳುಗಳು, ಈರುಳ್ಳಿ, ತರಕಾರಿ, ಸೊಪ್ಪು ಇನ್ನಿತರ ಬೆಳೆಗಳು ಈ ಮಳೆಯ ಕಾರಣದಿಂದ ಸಂಕಷ್ಟಕ್ಕೆ ಒಳಗಾಗಿದೆ.
ಅಡಿಕೆ ಬೆಳೆಗಾರರದೂ ಇದೇ ಸಮಸ್ಯೆ. ನವೆಂಬರ್ ಅಂತ್ಯದ ವೇಳೆಗೆ ಅಡಿಕೆ ಕಟಾವು ಮಾಡಿ ಒಣಗಿಸುವ ಕಾಲ. ಆದರೆ ಈ ಬಾರಿ ಮಳೆಯೇ ಕಡಿಮೆಯಾಗಲಿಲ್ಲ. ಹೀಗಾಗಿ ವಾತಾವರಣದ ಕಾರಣದಿಂದ ಅಡಿಕೆ ಬೇಗನೆ ಹಣ್ಣಾಗಿ ಬೀಳುತ್ತಿದೆ, ಮಳೆಯ ಕಾರಣದಿಂದ ಅಡಿಕೆ ಒಣಗಿಸಲಾಗದ ಸ್ಥಿತಿಯಾಗಿದೆ. ಹೀಗಾಗಿ ಸಂಕಷ್ಟದಿಂದ ಅಡಿಕೆ ಬೆಳೆಗಾರರು ಒದ್ದಾಟ ಮಾಡುತ್ತಿದ್ದಾರೆ.
ರಬ್ಬರ್ ಬೆಳೆಗಾರರದೂ ಅದೇ ಸ್ಥಿತಿ. ಪ್ಲಾಸ್ಟಿಕ್ ಅಳವಡಿಕೆ ಮಾಡಿ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದರೂ ರಬ್ಬರ್ ಒಣಗಿಸಲು ಸಂಕಷ್ಟ ಹಾಗೂ ಭಾರೀ ಮಳೆಯಾದರೆ ಟ್ಯಾಪಿಂಗ್ ಸಮಸ್ಯೆಯೂ ಕಾಡುತ್ತಿದೆ. ಚಳಿ ಆರಂಭವಾಗಬೇಕಾದ ಕಾರಣ ಇಳುವರಿಯಲ್ಲೂ ಕೊರತೆ ಇದೆ. ಕೇರಳದಲ್ಲಿ ಭಾರೀ ಮಳೆಯ ಕಾರಣದಿಂದ ಟ್ಯಾಪಿಂಗ್ ಬಹುತೇಕ ಕಡೆ ನಿಲ್ಲಿಸಲಾಗಿದೆ.
ಈ ಎಲ್ಲಾ ಕಾರಣದಿಂದ ಸರಕಾರ ಬಹುಬೇಗನೆ ಕೃಷಿಕರ ಕಡೆಗೆ ಗಮನಿಸಬೇಕಾಗಿದೆ. ಕೂಡಲೇ ಬೆಳೆ ಹಾನಿ ಸಮೀಕ್ಷೆ ನಡೆಸಬೇಕಾಗಿದೆ. ಪ್ರತೀ ತಾಲೂಕಿನಲ್ಲಿ ಗ್ರಾಮಮಟ್ಟದಲ್ಲಿ ಪರಿಶೀಲನೆ, ಸಮೀಕ್ಷೆ ನಡೆಸಿ ರೈತರಿಗೆ ಆದ ನಷ್ಟದ ಬಗ್ಗೆ ಗಮನಿಸಬೇಕಾಗಿದೆ, ಅಗತ್ಯ ಇದ್ದರೆ ಸಂಕಷ್ಟದಲ್ಲಿರುವ ರೈತರ ಪರವಾಗಿ ಉಳಿದ ಬೆಳೆಗೆ ಸರಿಯಾದ ಬೆಲೆ ಸಿಗುವ ವ್ಯವಸ್ಥೆ ಮಾಡಬೇಕಿದೆ.
ಪಾಕಿಸ್ತಾನ ಮತ್ತು ದಕ್ಷಿಣ ಕೊರಿಯಾದಿಂದ ಸ್ಪೇನ್, ಫ್ರಾನ್ಸ್ ಮತ್ತು ಸೈಬೀರಿಯಾದವರೆಗೆ ಭೀಕರ ಮಳೆ,…
ದೇಶದ ಕೃಷಿ ಹಾಗೂ ಪೂರಕ ವಲಯಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸಚಿವ ಸಂಪುಟ…
ರಾಜ್ಯದಲ್ಲಿ ನೆನೆಗುದ್ದಿಗೆ ಬಿದ್ದಿದ್ದ ಸುಮಾರು 43 ಸಾವಿರ ಕೋಟಿ ರೂಪಾಯಿ ವೆಚ್ಚದ ರೈಲ್ವೆ…
ರಾಜ್ಯದ ವಿವಿಧೆಡೆ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಭಾರೀ ಮಳೆಯ…
ಗದಗ ಜಿಲ್ಲೆಯಲ್ಲಿ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ತೋಟಗಾರಿಕೆ ಬೆಳೆಗಳಾದ…
ಉತ್ತರಕನ್ನಡ ಜಿಲ್ಲೆಯಲ್ಲಿ ನಿಯಮಬಾಹಿರವಾಗಿ ವಾಸ್ತವ್ಯ ಹೂಡಿರುವ ವಿದೇಶಿಗರ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು…