ಈ ಬಾರಿ ಮಳೆಯೋ ಮಳೆ. ಮಲೆನಾಡು ಸೇರಿದಂತೆ ಕರಾವಳಿ ಜಿಲ್ಲೆಯಲ್ಲಿ ಮಾರ್ಚ್ ನಂತರ ಆಗಾಗ ಮಳೆಯಾಗುತ್ತಲೇ ಇತ್ತು. ಅಂದರೆ ಸುಮಾರು 8 ತಿಂಗಳು ಮಳೆಯ ತಿಂಗಳಾಗಿದೆ. ಮಾಹಿತಿ ಪ್ರಕಾರ 51 ವರ್ಷಗಳ ಬಳಿಕ ಈ ವರ್ಷದಲ್ಲಿ ಅಧಿಕ ಮಳೆಯಾಗಿದೆ.
ಈ ಬಾರಿಯ ಭಾರೀ ಮಳೆ ರಾಜ್ಯದ ಹಲವು ಕಡೆ ಅವಾಂತರ ಸೃಷ್ಟಿಸಿದೆ. ಕರಾವಳಿ ಜಿಲ್ಲೆಗಳಲ್ಲಿ, ಮಲೆನಾಡಿನಲ್ಲಿ ಅಪಾರ ಹಾನಿಯಾಗಿದ್ದರೆ ನಗರ ಪ್ರದೇಶದಲ್ಲೂ ಮಳೆಯ ಹಾನಿ ತಪ್ಪಿಸಲು ಆಗಿಲ್ಲ. ಸಿಲಿಕಾನ್ ಸಿಟಿಯಲ್ಲೂ ಮಳೆಯ ಅವಾಂತರದಿಂದ ರಸ್ತೆ, ಅಪಾರ್ಮೆಂಟ್, ವಿಲ್ಲಾಗಳು ಜಲಾವೃತಗೊಂಡಿವೆ. ಕಳೆದ 51 ವರ್ಷಗಳಲ್ಲೇ ಸುರಿದ ದಾಖಲೆಯ ಮಳೆಯಾಗಿದೆ ಈ ವರ್ಷ.
ಮಾರ್ಚ್ ನಂತರ ಮಲೆನಾಡು ಪ್ರದೇಶದ ಅಲ್ಲಲ್ಲಿ ಮಳೆಯಾಗಿದ್ದರೂ ಜೂನ್ ತಿಂಗಳಲ್ಲಿ ಮಳೆಯ ಕೊರತೆ ಕಂಡುಬಂದಿತ್ತು. ವಾಯುಭಾರ ಕುಸಿತದ ಕಾರಣದಿಂದ ಹವಾಮಾನದ ಏರುಪೇರು ಕಂಡುಬಂದಿತ್ತು. ಅದಾದ ನಂತರ ಜುಲೈ ಮತ್ತು ಆಗಸ್ಟ್ ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ಈಗ ಸೆಪ್ಟಂಬರ್ ತಿಂಗಳಿನಲ್ಲಿಯೂ ವಾಡಿಕೆಗಿಂತ ಹೆಚ್ಚು ಮಳೆ ಸುರಿಯುತ್ತಿದೆ. ದಾಖಲೆಗಳ ಪ್ರಕಾರ 1971 ರಿಂದ 2021 ರ ಜುಲೈವರೆಗೆ ಯಾವತ್ತೂ ಇಷ್ಟು ಮಳೆಯಾಗಿರಲಿಲ್ಲ. ಇನ್ನೂ ಕೂಡಾ ಮಳೆ ಸುರಿಯುತ್ತಲೇ ಇದೆ. ಈಗ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳು ಕಾಣಿಸುತ್ತಿವೆ.