ಹಿಮಾಚಲ ಪ್ರದೇಶದಲ್ಲಿ ಮಾನ್ಸೂನ್ ಆಗಮನದ ನಂತರ, ಭಾರೀ ಮಳೆಯಾಗುತ್ತಿದ್ದು, ಪ್ರವಾಹ ಮತ್ತು ಭೂಕುಸಿತದ ಘಟನೆಗಳಿಂದಾಗಿ ರಾಜ್ಯದ ಹಲವಾರು ಭಾಗಗಳಲ್ಲಿ ಜನ ಜೀವನದ ಮೇಲೆ ತೀವ್ರ ಪರಿಣಾಮ ಬೀರಿವೆ. ಇದೇ 9 ರವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಸಿರ್ಮೌರ್ ಜಿಲ್ಲೆಯ ಪಚ್ಚಾದ್‌ನಲ್ಲಿ ಅತಿ ಹೆಚ್ಚು 133 ಮಿಲಿಮೀಟರ್ ಮಳೆಯಾಗಿದೆ. ಇದಲ್ಲದೆ, ಹಮೀರ್‌ಪುರ ಜಿಲ್ಲೆಯ ಬರ್ಸರ್‌ನಲ್ಲಿ 92 ಮಿಲಿಮೀಟರ್, ರಾಜಧಾನಿ ಶಿಮ್ಲಾ ಬಳಿಯ ಜುಬ್ಬರ್‌ಹಟ್ಟಿಯಲ್ಲಿ 59 ಮತ್ತು ಉನಾ ಜಿಲ್ಲೆಯಲ್ಲಿ 55 ಮಿಲಿಮೀಟರ್ ಮಳೆಯಾಗಿದೆ. ಈ ನಡವೆ, ರಾಜ್ಯಾದ್ಯಂತ 246 ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. 404 ವಿದ್ಯುತ್ ಪರಿವರ್ತಕಗಳು ಮತ್ತು 784 ಕುಡಿಯುವ ನೀರು ಸರಬರಾಜು ಯೋಜನೆಗಳು ಬಾಧಿತವಾಗಿದ್ದು, ಸಾರ್ವಜನಿಕರಿಗೆ ನೀರು ಮತ್ತು ವಿದ್ಯುತ್ ಕೊರತೆ ಉಂಟಾಗಿದೆ. ಇಲ್ಲಿಯವರೆಗೆ, ಮಳೆ ಸಂಬಂಧಿತ ಘಟನೆಗಳಲ್ಲಿ 69 ಜನರು ಪ್ರಾಣ ಕಳೆದುಕೊಂಡಿದ್ದಾರೆ, 110 ಜನರು ಗಾಯಗೊಂಡಿದ್ದಾರೆ ಮತ್ತು 37 ಜನರು ಇನ್ನೂ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಜುಲೈ 9 ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಜನರು ನದಿಗಳು ಮತ್ತು ತೊರೆಗಳಿಂದ ದೂರವಿರಲು, ಅನಗತ್ಯ ಪ್ರಯಾಣವನ್ನು ತಪ್ಪಿಸಲು ಮತ್ತು ಆಡಳಿತವು ನೀಡಿದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಹವಮಾನ ಇಲಾಖೆ ತಿಳಿಸಿದೆ.