ರಾಜ್ಯಾದ್ಯಂತ ಮಳೆ ಮುಂದುವರೆದಿದೆ. ಕೊಡಗು ಜಿಲ್ಲೆಯಲ್ಲಿ ಸತತ 7 ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಸಾಮಾನ್ಯ ಜನಜೀವನ ಸಂಪೂರ್ಣ ವ್ಯತ್ಯಯಗೊಂಡಿದೆ. ಇಂದೂ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಶಾಲೆಗಳ ಪುನರಾರಂಭವನ್ನು ಶನಿವಾರದವರೆಗೆ ಮುಂದೂಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಕೆಲವು ಹಳ್ಳಿಗಳಿಗೆ ಕಳೆದ 1 ವಾರದಿಂದಲೂ ವಿದ್ಯುತ್ ಇಲ್ಲದೆ ಕಗ್ಗತ್ತಲಲ್ಲಿರುವಂತಾಗಿದೆ. ತೀವ್ರ ಗಾಳಿಯಿಂದಾಗಿ ಅನೇಕ ಕಡೆಗಳಲ್ಲಿ ವಿದ್ಯುತ್ ಕಂಬಗಳು ಧರೆಗುರುಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂದೂ ಕೂಡಾ ಕರಾವಳಿ ಮತ್ತು ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡ ಮಲೆನಾಡು ಜಿಲ್ಲೆಗಳಿಗೆ ವ್ಯಾಪಕವಾಗಿ ಮಳೆ ಹಾಗೂ ಅಲ್ಲಲ್ಲಿ ಅತಿ ಭಾರಿ ಮಳೆ ಯಾಗಲಿದ್ದು, ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ದುಬಾರೆ ಸಾಕಾನೆ ಶಿಬಿರಕ್ಕೆ ಪ್ರವಾಸಿಗರ ಭೇಟಿಯನ್ನು ನಿರ್ಭಂಧಿಸಲಾಗಿದೆ. ಕಾವೇರಿ ನದಿಯಲ್ಲಿ ನೀರಿನ ಹರಿವು ತೀವ್ರ ಹೆಚ್ಚಳವಾಗಿರುವ ಹಿನ್ನಲೆಯಲ್ಲಿ ಸಾಕಾನೆ ಶಿಬಿರಕ್ಕೆ ಕಾವೇರಿ ನದಿ ದಾಟಿ ತೆರಳಬೇಕಾಗಿರುವ ಹಿನ್ನಲೆಯಲ್ಲಿ ಈ ಪ್ರದೇಶಕ್ಕೆ ಸಾರ್ವಜನಿಕರ ಭೇಟಿಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಉತ್ತರಕನ್ನಡ ಜಿಲ್ಲೆಯ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ನಿನ್ನೆ ಸಂಜೆಯಿಂದ ವ್ಯಾಪಕ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಇಂದು ಅಂಗನವಾಡಿ ಹಾಗೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ ಕರಾವಳಿ ತಾಲೂಕಾದ ಭಟ್ಕಳದಲ್ಲಿ ಅತೀ ಹೆಚ್ಚು 114 ಮಿಲಿ ಮೀಟರ್ ಮಳೆ ವರದಿಯಾಗಿದೆ. ಹವಾಮಾನ ಇಲಾಖೆಯಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿಯಲ್ಲಿ ಮಳೆ ಮುಂದುವರಿದಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಭಾರೀ ಗಾಳಿ ಮಳೆಯ ಪರಿಣಾಮ ಅಲ್ಲಲ್ಲಿ ಹಾನಿಯೂ ಉಂಟಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರೀ ಗಾಳಿ ಮಳೆಯ ಪರಿಣಾಮವಾಗಿ ಜಿಲ್ಲೆಯಲ್ಲಿ ಅಪಾರ ಹಾನಿ ಉಂಟಾಗಿದೆ. ಎಪ್ರಿಲ್ 1 ರಿಂದ ನಿನ್ನೆಯವರೆಗೆ ಮೇ 28 ಒಟ್ಟು 252 ಮನೆಗಳಿಗೆ ಹಾನಿಯಾಗಿದೆ. ಈ ಪೈಕಿ 12 ಮನೆಗಳು ಸಂಪೂರ್ಣ ಹಾನಿಗೀಡಾಗಿವೆ. ಉಡುಪಿ ಜಿಲ್ಲೆಯಲ್ಲಿ ಭಾರೀ ಗಾಳಿ-ಮಳೆ ಮುಂದುವರೆದಿದ್ದು, ಇಂದು ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿತ್ತು.
ಮುಂದಿನ ಒಂದು ವಾರಗಳಲ್ಲಿ ರಾಜ್ಯದಾದ್ಯಂತ ಅಲ್ಲಲ್ಲಿ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.