ಕರಾವಳಿಯಾದ್ಯಂತ ವರುಣನ #Rain ಆರ್ಭಟ ಜೋರಾಗುತ್ತಿದೆ. ಕಳೆದ ಮೂರು ದಿನಗಳಿಂದ ಎಡೆಬಿಡದೆ ನಿರಂತರ ಮಳೆ ಸುರಿಯುತ್ತಿದೆ. ಜೊತೆಗೆ ಅಲ್ಲಿಲ್ಲಿ ಅಪಾರ ಹಾನಿ ಉಂಟಾಗಿದ್ದು ಅಲ್ಲದೆ, ಐವರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ದಕ್ಷಿಣ ಕನ್ನಡ #DakshinaKannada ಜಿಲ್ಲೆಯಲ್ಲಿ ಈ ಬಾರಿಯ ಭೀಕರ ಮಳೆಗೆ 5ನೇ ಸಾವಾಗಿದೆ. ಗುಡ್ಡ ಕುಸಿದು ಮನೆಯೊಳಗೆ ಸಿಲುಕಿದ್ದ ಇಬ್ಬರು ಮಹಿಳೆಯರಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದ ನಂದಾವರದಲ್ಲಿ ನಡೆದಿದೆ. ಮನೆಯ ಮೇಲೆ ಗುಡ್ಡ ಕುಸಿದ ಪರಿಣಾಮ ಇಬ್ಬರು ಮಹಿಳೆಯರು ಮನೆಯೊಳಗೆ ಸಿಲುಕಿಕೊಂಡಿದ್ದರು.
ಘಟನೆ ಬಳಿಕ ಸ್ಥಳಕ್ಕಾಗಮಿಸಿದ ಬಂಟ್ವಾಳ ಅಗ್ನಿಶಾಮಕ ಅಧಿಕಾರಿಗಳು, ಪೊಲೀಸರು ಹಾಗೂ ಸ್ಥಳೀಯರು ಕಾರ್ಯಾಚರಣೆ ನಡೆಸಿ ಓರ್ವ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಆದರೆ ಮನೆಯೊಳಗೆ ಸಿಲುಕಿದ್ದ ಝರೀನಾ (46) ಸಾವನ್ನಪ್ಪಿದ್ದು, ಅವರ ಮೃತದೇಹವನ್ನು ಹೊರತೆಗೆಯಲಾಗಿದೆ. ಝರೀನಾ ಪುತ್ರಿ ಶಫಾ (20) ಅವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಈ ಬಾರಿಯ ಮಳೆಗೆ ದ.ಕ ಜಿಲ್ಲೆಗೆ ಇದು 5ನೇ ಬಲಿಯಾಗಿದೆ. ಸ್ಥಳಕ್ಕೆ ಬಂಟ್ವಾಳ ತಹಶೀಲ್ದಾರ್ ಎಸ್‌ಬಿ ಕೂಡಲಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.