ಜಮ್ಮು ಕಾಶ್ಮೀರದ ಕಥುವಾದಲ್ಲಿ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಏಳು ಜನ ಮೃತಪಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳು, ರೈಲ್ವೆ ಮಾರ್ಗಗಳಲ್ಲಿ ನೀರು ನಿಂತಿದ್ದು ಭಾರೀ ಹಾನಿಯಾಗಿದೆ. ಕೆಲವೆಡೆ ಭೂ ಕುಸಿತದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ತ್ವರಿತವಾಗಿ ರಕ್ಷಣಾ ಪಡೆಗಳು ಸ್ಥಳಕ್ಕಾಗಮಿಸಿದ್ದು ಕಾರ್ಯಾಚರಣೆಯಲ್ಲಿ ತೊಡಗಿವೆ. ಆದರೆ ಭಾರೀ ಮಳೆಗೆ ರಸ್ತೆಗಳು ಕುಸಿದು, ಕೊಚ್ಚಿಹೋಗಿದ್ದು ರಕ್ಷಣಾ ಪಡೆಗಳ ಕಾರ್ಯಾಚರಣೆಗೂ ಅಡ್ಡಿಯಾಗಿದೆ. ಕಿಶ್ತವಾರ್ ನಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು, ಮೃತ ಪಟ್ಟವರ ಸಂಖ್ಯೆ 58ಕ್ಕೇರಿದೆ.
ಅತ್ಯಾಧುನಿಕ ಯಂತ್ರೋಪಕರಣಗಳನ್ನು ಉಪಯೋಗಿಸಿ ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯ ಸಾಗುತ್ತಿದೆ. ಚಸೋತಿ ಗ್ರಾಮದಲ್ಲಿ ಉಕ್ಕಿ ಹರಿಯುತ್ತಿರುವ ನದಿಯ ಮೇಲೆ ತಾತ್ಕಾಲಿಕ ಸೇತುವೆ ನಿರ್ಮಿಸಿ ರಕ್ಷಣಾ ಪಡೆಗಳು ಮತ್ತು ಸ್ವಯಂಸೇವಕರು ಜನರನ್ನು ರಕ್ಷಿಸುತ್ತಿದ್ದಾರೆ. 75ಕ್ಕೂ ಅಧಿಕ ಮಂದಿ ನಾಪತ್ತೆಯಾಗಿರುವ ವರದಿಯಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಹಿಮಾಚಲ ಪ್ರದೇಶ ಕುಲು ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿದೆ. ಭಾರೀ ಮಳೆ ಮತ್ತು ಭೂಕುಸಿತದಿಂದ ಮಂಡೀ- ಮನಾಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು ರಸ್ತೆಗಳೆಲ್ಲಾ ಕೆಸರುಮಯವಾಗಿವೆ. ಮಹಾರಾಷ್ಟ್ರದಲ್ಲೂ ಮಳೆ ಮುಂದುವರೆಯುತ್ತಿದ್ದು, ಮುಂದಿನ 7 ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು ಸಂಬಂಧಿತ ಇಲಾಖೆಗಳಿಗೆ ಅಲರ್ಟ್ ಆಗಿರುವಂತೆ ಸೂಚಿಸಲಾಗಿದೆ.

