ದೇಶದ ಹೆಚ್ಚಿನ ಭಾಗಗಳಲ್ಲಿ ಮುಂಗಾರು ಮಳೆ ವೇಗವಾಗಿ ಹರಡಿದರೂ ರಾಷ್ಟ್ರೀಯ ರಾಜಧಾನಿ ದೆಹಲಿಗೆ ವಿಳಂಬವಾಗಿದೆ. ನಿರೀಕ್ಷಿತ ದಿನಕ್ಕಿಂತ 2-3 ದಿನ ವಿಳಂಬವಾಗುತ್ತಿದೆ. ಈ ನಡುವೆ ವಾಯುವ್ಯ ಮತ್ತು ಈಶಾನ್ಯ ಭಾರತದ ಕೆಲವು ಭಾಗಗಳಲ್ಲಿ ಭಾರೀ ಮಳೆ ಮುಂದುವರೆದಿದೆ.
ರಾಷ್ಟ್ರೀಯ ರಾಜಧಾನಿ ದೆಹಲಿಗೆ ಮುಂಗಾರು ಮಳೆ ವಿಳಂಬವಾಗಿದ್ದು ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಸಾಮಾನ್ಯವಾಗಿ ಜೂನ್ 27 ರ ವೇಳೆಗೆ ದೆಹಲಿಯನ್ನು ತಲುಪುವ ಮುಂಗಾರು ಈ ಬಾರಿ ಪಶ್ಚಿಮ ರಾಜಸ್ಥಾನವನ್ನು ಆವರಿಸಲು ಈಗ ಇನ್ನೂ 2-3 ದಿನಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. ಹೀಗಾಗಿ ದೆಹಲಿಗೂ ವಿಳಂಬವಾಗುತ್ತಿದೆ. ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ವಾಯುವ್ಯ ಭಾರತದ ದೊಡ್ಡ ಪ್ರದೇಶಗಳಲ್ಲಿ ಮುಂಗಾರು ಈಗಾಗಲೇ ಆರಂಭವಾಗಿದ್ದರೂ ವಿಳಂಬವಾಗಿದೆ. ದೇಶದ ಇತರೆಡೆಗಳಲ್ಲಿ, ಕೇರಳ, ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಅಸ್ಸಾಂನಲ್ಲಿ ಭಾರೀ ಮಳೆಯಾಗುತ್ತಿದೆ.ಗುಜರಾತ್, ಉತ್ತರಾಖಂಡ, ಮಹಾರಾಷ್ಟ್ರ ಮತ್ತು ಕೇರಳದ ಕೆಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿದೆ. ಕೇರಳದ ಐದು ಜಿಲ್ಲೆಗಳಾದ ಪತನಂತಿಟ್ಟ, ಕೊಟ್ಟಾಯಂ, ಇಡುಕ್ಕಿ, ಮಲಪ್ಪುರಂ ಮತ್ತು ವಯನಾಡ್‌ನಲ್ಲಿ ಆರೆಂಜ್ ಅಲರ್ಟ್ ಇದೆ. ಕೇರಳದ ಇಡುಕ್ಕಿ ಜಿಲ್ಲೆಯ ತಗ್ಗು ಪ್ರದೇಶಗಳಲ್ಲಿ ವಾಸಿಸುವ 3,220 ಜನರನ್ನು ಸ್ಥಳಾಂತರಿಸಲು ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ.
ಉತ್ತರಾಖಂಡದಲ್ಲಿ, ನಿರಂತರ ಭಾರೀ ಮಳೆಯಿಂದಾಗಿ ನಂದಪ್ರಯಾಗ ಮತ್ತು ಭನೇರೋಪಾನಿ ಬಳಿಯ ಬದರಿನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ. ರುದ್ರಪ್ರಯಾಗದಲ್ಲಿ ನಡೆದ ಬಸ್ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿದ್ದು, ಶುಕ್ರವಾರ ಅಲಕನಂದಾ ನದಿಯಲ್ಲಿ ಮತ್ತೊಂದು ಮೃತದೇಹ ಪತ್ತೆಯಾಗಿದೆ. ಬದರಿನಾಥಕ್ಕೆ 20 ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ರಸ್ತೆಯಿಂದ ಹೊರಟು ಘೋಲ್ತಿರ್ ಬಳಿಯ ಅಲಕನಂದಾ ನದಿಗೆ ಉರುಳಿದೆ.
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ 53 ರಸ್ತೆಗಳು ಬಂದ್ ಆಗಿವೆ. ಈ ಮಾರ್ಗಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.ಕುಲ್ಲುವಿನಲ್ಲಿ 23, ಮಂಡಿಯಲ್ಲಿ 16, ಲಹೌಲ್ ಮತ್ತು ಸ್ಪಿಟಿಯಲ್ಲಿ ಏಳು, ಉನಾದಲ್ಲಿ ನಾಲ್ಕು ಮತ್ತು ಸಿರ್ಮೌರ್ ಜಿಲ್ಲೆಗಳಲ್ಲಿ ಮೂರು ರಸ್ತೆಗಳು ಸಂಚಾರ ನಿರ್ಬಂಧಿಸಲ್ಪಟ್ಟಿವೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.
ಮುಂದಿನ ಏಳು ದಿನಗಳಲ್ಲಿ ಕೊಂಕಣ ಮತ್ತು ಗೋವಾ, ಮಧ್ಯ ಮಹಾರಾಷ್ಟ್ರ ಮತ್ತು ಗುಜರಾತ್‌ನ ಘಾಟ್‌ಗಳು ಸೇರಿದಂತೆ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ .