ತೆಂಗು ಕೃಷಿಕರಿಗೆ ಇರುವ ಬಹುದೊಡ್ಡ ಸಮಸ್ಯೆ ತೆಂಗಿನಕಾಯಿ ಕೊಯ್ಲು. ಈ ಸಮಸ್ಯೆ ನಿವಾರಣೆಗೆ ಈಗ ರಂಗಕ್ಕೆ ಇಳಿದಿದೆ “ಹಲೋ ನಾರಿಯಲ್” ತಂಡ. ಉದ್ಯಮ ರೂಪದಲ್ಲಿ ಕೇರಳದಲ್ಲಿ ಕೆಲಸ ಮಾಡುತ್ತಿರುವ ಈ ತಂಡ ಇದೀಗ ಕಾಸರಗೋಡು ಜಿಲ್ಲೆಯ ನೀರ್ಚಾಲಿಗೆ ಆಗಮಿಸಿದೆ. ತೆಂಗು ಕೊಯ್ಲು ಆರಂಭಿಸಿದೆ.
ನೀರ್ಚಾಲಿನಲ್ಲಿ ಕಾಸರಗೋಡು ಎಗ್ರಿಕಲ್ಟರಿಸ್ಟ್ ಕೋ ಆಪರೇಟಿವ್ ಮಾರ್ಕೆಂಟಿಗ್ ಸೊಸೈಟಿ ವತಿಯಿಂದ ನಡೆದ ಸಾಂಕೇತಿಕ ಕಾರ್ಯಕ್ರಮದಲ್ಲಿ ಈ ತಂಡ ಕೆಲಸ ಆರಂಭಿಸಿದೆ. ಕಟ್ಟತ್ತೋಡಿ ಬಳಿಯ ಕೃಷಿಕ ಸತ್ಯಶಂಕರ ದೇವಪೂಜಿತ್ತಾಯ ಅವರ ಮನೆಯಲ್ಲಿ ಈ ತಂಡ ಕಾಸರಗೋಡು ಜಿಲ್ಲೆಯಲ್ಲಿ ಮೊದಲ ಕೆಲಸ ಆರಂಭಿಸಿದೆ. ತಿರುವಂತನಪುರದಿಂದ ಬಂದಿರುವ ಹಲೋ ನಾರಿಯಲ್ ತಂಡ ಉದ್ಯಮ ರೂಪದಲ್ಲಿ ಈ ಕೆಲಸ ಮಾಡುತ್ತಿದೆ. ಆಪ್ ಮೂಲಕ ಕಾರ್ಯಾಚರಣೆ ನಡೆಸುವ ಈ ತಂಡಕ್ಕೆ ಕೇರಳದಲ್ಲಿ ಸುಮಾರು 60 ಸಾವಿರ ಗ್ರಾಹಕರನ್ನು ತೋಟಗಳಲ್ಲಿ ಕೆಲಸ ಮಾಡುತ್ತಿದೆ. ಎಲ್ಲಾ ಗ್ರಾಹಕರಿಗೂ ಸಂತೃಪ್ತ ಸೇವೆಯನ್ನು ನೀಡುತ್ತಿದೆ. ಛತ್ತೀಸ್‌ಗಡ ಸೇರಿದಂತೆ ಉತ್ತರಭಾರತದ ತಂಡದವರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಕರೆ ಮಾಡುವ ಕೃಷಿಕರಿಂದ ಮಾಹಿತಿ ಪಡೆದು ಸೇವೆ ನೀಡಲು ಲಭ್ಯವಾಗುತ್ತದೆಯೇ ಎಂದು ಗಮನಿಸಿ ಬುಕಿಂಗ್ ಪಡೆದುಕೊಳ್ಳುತ್ತದೆ.
ಈ ಬಗ್ಗೆ ಮಾತನಾಡಿದ ಹಲೋ ನಾರಿಯಲ್ ತಂಡದ ಮುಖ್ಯಸ್ಥ ತಿರುವಂತನಪುರದ ಮೋಹನ್ ದಾಸ್, ಆರಂಭದಲ್ಲಿ ನನ್ನ ಮನೆಯ 10 ತೆಂಗಿನ ಮರದಿಂದ ತೆಂಗಿನಕಾಯಿ ತೆಗೆಯಲು ಜನರು ಇರಲಿಲ್ಲ. ಹೀಗಾಗಿ ತರಬೇತಿ ನೀಡಿ ಇದೀಗ ಕೇರಳದ ಕೃಷಿಕರಿಗೆ ಸೇವೆ ನೀಡಲಾಗುತ್ತಿದೆ ಎನ್ನುತ್ತಾರೆ.
ವಾಯುಪಡೆಯ ನಿವೃತ್ತ ಸಿಬಂದಿಯಾಗಿರುವ ಮೋಹನ್ ದಾಸ್ ಅವರು ಇಂದು ಹಲೋ ನಾರಿಯಲ್ ತಂಡದ 10 ಕ್ಕೂ ಹೆಚ್ಚು ಬ್ರಾಂಚ್ ಹೊಂದಿದ್ದು, 15 ಕ್ಕೂ ಹೆಚ್ಚು ಕಚೇರಿ ಸಿಬಂದಿಗಳು ಕೃಷಿಕರಿಂದ ಬರುವ ಕರೆಗಳನ್ನು ಸ್ವೀಕರಿಸಿ ಬುಕಿಂಗ್ ಪಡೆಯುತ್ತಾರೆ. ಕೇರಳ ಮಾತ್ರವಲ್ಲ ಕರ್ನಾಟಕಕ್ಕೂ ನಮ್ಮ ಸಿಬಂದಿಗಳು ಆಗಮಿಸಬಹುದು, ಆದರೆ ಕೆಲವು ಮೂಲಭೂತ ಆವಶ್ಯಕತೆಗಳನ್ನು ನಿರೀಕ್ಷೆ ಮಾಡುತ್ತದೆ ಈ ತಂಡ.
ಕಳೆದ ಹಲವಾರು ವರ್ಷಗಳಿಂದ ತೆಂಗು ಬೆಳೆಗಾರರಿಗೆ ಕೊಯ್ಲು ಸಮಸ್ಯೆ ಇದೆ. ಇದಕ್ಕೆ ಪರಿಹಾರದ ನೆಲೆಯಲ್ಲಿ ಇಂತಹ ತಂಡವೊಂದು ಕೆಲಸ ನಿರ್ವಹಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಕಾಸರಗೋಡು ಜಿಲ್ಲೆಯ ನೀರ್ಚಾಲಿಗೂ ಈ ತಂಡ ಬಂದಿದೆ. ಹೊಸದೊಂದು ಚರಿತ್ರೆಯನ್ನು ಇಲ್ಲಿ ಸೃಷ್ಟಿಸಲು ಸಾಧ್ಯವಿದೆ ಎಂದು ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಹೇಳುತ್ತಾರೆ.
ಕಾಸರಗೋಡು ಎಗ್ರಿಕಲ್ಟರಿಸ್ಟ್ ಕೋ ಆಪರೇಟಿವ್ ಮಾರ್ಕೆಂಟಿಗ್ ಸೊಸೈಟಿ ಕಳೆದ ಹಲವಾರು ವರ್ಷಗಳಿಂದ ಕೃಷಿಕರ ಬೇಡಿಕೆಗಳನ್ನು ಈಡೇರಿಸುತ್ತಿದೆ. ಇದೀಗ ತಿರುವಂತನಪುರದಿಂದ ಆಗಮಿಸಿರುವ ಈ ತಂಡಕ್ಕೆ ನೆರವು ನೀಡುವ ಮೂಲಕ ಕೃಷಿಕರಿಗೆ ಸಹಾಯವನ್ನು ಮಾಡುತ್ತಿದೆ. ನೀರ್ಚಾಲು ಆಸುಪಾಸಿನ ಕೃಷಿಕರಿಗೆ ಸದ್ಯಕ್ಕೆ ಸೇವೆ ನೀಡಲು ಸಿದ್ಧತೆ ನಡೆಸಲಾಗಿದೆ ಎಂದು ಹೇಳುತ್ತಾರೆ ಸೊಸೈಟಿ ಅಧ್ಯಕ್ಷ ಪದ್ಮರಾಜ ಪಟ್ಟಾಜೆ.
ಕಳೆದ ಆರು ತಿಂಗಳಿನಿಂದ ತೆಂಗಿನ ಕೊಯ್ಲು ಮಾಡಲು ಸಾಧ್ಯವಾಗಿಲ್ಲ. ಕಾರ್ಮಿಕರ ಕೊರತೆ ಇತ್ತು, ಹೀಗಾಗಿ 30000 ತೆಂಗಿನ ಕಾಯಿ ಪ್ರತೀ ವರ್ಷ ಕೊಯ್ಲು ಮಾಡುತ್ತಿದ್ದರೂ ಈಚೆಗೆ ಅಡುಗೆ, ಪೂಜೆ ಮಾಡಲೂ ತೆಂಗಿನ ಕಾಯಿ ಇರಲಿಲ್ಲ ಎಂದು ಭಾವುಕರಾಗುವ ಕೃಷಿಕ ಕೃಷಿಕ ಸತ್ಯಶಂಕರ ದೇವಪೂಜಿತ್ತಾಯ , ಇಂತಹ ಪರಿಸ್ಥಿತಿಯಲ್ಲಿ ಕೃಷಿಯೇ ಕಷ್ಟ ಎಂದು ಭಾವಿಸಿದ್ದೆವು ಎನ್ನುತ್ತಾರೆ. ಆದರೆ ಅಡಿಕೆ ಪತ್ರಿಕೆಯಲ್ಲಿ ಬಂದಿರುವ ಲೇಖನದ ಹಿಂದೆ ಬಿದ್ದು ಮೋಹನದಾಸ್ ಅವರನ್ನು ಸಂಪರ್ಕ ಮಾಡಿ, ಕ್ಲಬ್ ಹೌಸ್ ಮೂಲಕ ಸಭೆ ನಡೆಸಿ, ಊರಿನಲ್ಲಿ ಇರುವ ತೆಂಗು ಬೆಳೆಗಾರರ ಸಮಸ್ಯೆಯನ್ನು ಸರ್ವೆ ಮಾಡಿ ಈ ತಂಡವನ್ನು ಮುರಳೀಕೃಷ್ಣ ಎಡನಾಡು ಅವರ ನೆರವನ್ನು ಪಡೆದು ಈ ತಂಡ ನೀರ್ಚಾಲಿಗೆ ಕರೆತರಲು ಸಾಧ್ಯವಾಗಿದೆ ಎಂದು ಹೇಳುತ್ತಾರೆ ಸತ್ಯಶಂಕರ. ಇದೀಗ ನೆಮ್ಮದಿಯಾಗಿದೆ ಎಂದು ಹೇಳುತ್ತಾ ಹಲೋ ನಾರಿಯಲ್ ತಂಡವನ್ನು ಸ್ವಾಗತಿಸುತ್ತಾರೆ.
ಶನಿವಾರ ಕೆಲಸ ಆರಂಭಿಸಿದ ತಂಡವು ಒಂದೇ ದಿನದಲ್ಲಿ ನೀರ್ಚಾಲು ಆಸುಪಾಸಿನಲ್ಲಿ 8 ಕ್ಕೂ ಹೆಚ್ಚು ತೋಟಗಳಿಂದ ಆಹ್ವಾನವನ್ನು ಪಡೆದಿದೆ. ಮುಂದಿನ ದಿನಗಳಲ್ಲಿ ಈ ತಂಡವು ವಿಸ್ತಾರಗೊಳ್ಳುವ ನಿರೀಕ್ಷೆ ಇದೆ. ಹಲೋ ನಾರಿಯಲ್ ತಂಡ ಕೆಲಸ ಆರಂಭದ ವೇಳೆ ಕಾಸರಗೋಡು ಎಗ್ರಿಕಲ್ಟರಿಸ್ಟ್ ಕೋ ಆಪರೇಟಿವ್ ಮಾರ್ಕೆಂಟಿಗ್ ಸೊಸೈಟಿ ಸಿಇಒ ಅಪ್ಪಣ್ಣ ಬಿ ಎಫ್, ಸಿಪಿಸಿಆರ್‌ಐ ತಾಂತ್ರಿಕ ಅಧಿಕಾರಿ ಮುರಳಿಕೃಷ್ಣ ಎಡನಾಡು, ಹಲೋ ನಾರಿಯಲ್ ಮುಖ್ಯಸ್ಥ ಮೋಹನ್ ದಾಸ್ ಮೊದಲಾದವರು ಇದ್ದರು.