ಮಾಧ್ಯಮಗಳ ಬುರುಡೆ, ಸುಳ್ಳು, ಅತಿರೇಕದ, ಬಾಲಿಶ ಸುದ್ದಿಗಳಿಗೆ ಮತ್ತೊಂದು ಕಪಾಳಮೋಕ್ಷ…..!

March 12, 2024
11:36 AM
ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ ಇರುವ ಬಗ್ಗೆ ವಿವೇಕಾನಂದ ಎಚ್‌ ಕೆ ಅವರು ಬರೆದಿರುವ ಬರಹ..

ಬೆಂಗಳೂರಿಗೆ(Bengaluru) ಕುಡಿಯುವ ನೀರಿನ(Drinking water) ಅಭಾವ(Crisis) ಉಂಟಾಗಿ ಎಲ್ಲೆಲ್ಲೂ ಹಾಹಾಕಾರ ಉಂಟಾಗಿದೆ. ಮುಂದೆ ಕೆಲವು ತಿಂಗಳು ಮಳೆ(Rain) ಬಾರದಿದ್ದರೆ ಬೆಂಗಳೂರಿನ ನೀರಿನ ಸ್ಥಿತಿ ಚಿಂತಾಜನಕ ಎಂದು ಕೆಲವು ಜನರನ್ನು, ಕೆಲವು ಏರಿಯಾಗಳಲ್ಲಿ ಮಾತನಾಡಿಸಿ ನೀರಿನ ಟ್ಯಾಂಕರ್(Water tank) ನ ಬೆಲೆ ಏರಿಕೆ(Price hike) ಮತ್ತು ಮಾಫಿಯಾ(Mafia) ಬಗ್ಗೆ ಪುಂಖಾನುಪುಂಖವಾಗಿ ಕಾರ್ಯಕ್ರಮಗಳನ್ನು ಟಿವಿ ಚಾನೆಲ್‌ಗಳು ಪ್ರಸಾರ ಮಾಡುತ್ತಿವೆ……

Advertisement

ಆದರೆ ಬೆಂಗಳೂರು ಜಲಮಂಡಳಿಯ(Water Board) ಅಧ್ಯಕ್ಷರು ಪತ್ರಿಕಾಗೋಷ್ಠಿ ಕರೆದು ನೀರಿನ ಲಭ್ಯತೆಯ ಸಂಪೂರ್ಣ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಬೆಂಗಳೂರಿಗೆ ತಿಂಗಳಿಗೆ 1.54 ಟಿಎಂಸಿ ನೀರಿನ ಅವಶ್ಯಕತೆ ಇದೆ. ಆ ಲೆಕ್ಕದಲ್ಲಿ ಜುಲೈಂತ್ಯದ ವರೆಗೆ ಸುಮಾರು 8 ರಿಂದ 9 ಟಿಎಂಸಿ ನೀರು ಬೇಕಾಗುತ್ತದೆ. ಈಗ ಕೆ ಆರ್ ಎಸ್ ಡ್ಯಾಮ್ ನಲ್ಲಿ ಇರುವ ನೀರಿನ ಲಭ್ಯತೆ ಸುಮಾರು 33 ಟಿಎಂಸಿ. ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರದ ಕೆಲವು ಭಾಗಗಳಿಗೆ ಸದ್ಯಕ್ಕೆ ನೀರಿನ ಯಾವುದೇ ಸಮಸ್ಯೆ ಇಲ್ಲ……

ಇಷ್ಟು ಸ್ಪಷ್ಟವಾಗಿ ಜಲ ಮಂಡಳಿಯ ಅಧ್ಯಕ್ಷರೇ ಹೇಳುತ್ತಿರುವಾಗ ಅನಾವಶ್ಯಕವಾಗಿ ಜನರಲ್ಲಿ ನೀರಿನ ಕ್ಷಾಮದ ಬಗ್ಗೆ ಭೀತಿ ಮೂಡಿಸಿ ಮಜಾ ನೋಡುತ್ತಿರುವ ಈ ಮಾಧ್ಯಮಗಳಿಗೆ ಏನೆನ್ನಬೇಕು… ಹೌದು, ಒಂದಷ್ಟು ಸಮಸ್ಯೆಗಳು ಇರುತ್ತವೆ. ಆದರೆ ಅದನ್ನು ಜನರಿಗೆ ತಲುಪಿಸುವಾಗ ಅತ್ಯಂತ ವಿವೇಚನೆಯಿಂದ, ಪ್ರಬುದ್ಧತೆಯಿಂದ, ಜವಾಬ್ದಾರಿಯಿಂದ ಅವರ ಮನಸ್ಸುಗಳಿಗೆ ಹೆಚ್ಚು ಘಾಸಿಯಾಗದಂತೆ ಅರ್ಥಪೂರ್ಣವಾಗಿ ಸುದ್ದಿ ತಲುಪಿಸಿದರೆ ಎಷ್ಟೊಂದು ಒಳ್ಳೆಯ ಕೆಲಸ ಮಾಡಿದಂತಾಗುವುದಿಲ್ಲವೇ…..

ಕೇವಲ ಈ ವಿಷಯ ಮಾತ್ರವಲ್ಲ ಇನ್ನು ಅನೇಕ ವಿಷಯಗಳಲ್ಲಿ ಮಾಧ್ಯಮಗಳು ಅತಿರಂಜಿತ ಸುದ್ದಿಗಳನ್ನು ಪ್ರಸಾರ ಮಾಡಿ ಜನರಲ್ಲಿ ಆತಂಕ ಸೃಷ್ಟಿಸುತ್ತಿವೆ. ಡಿಸೆಂಬರ್ ಜನವರಿಯ ಪ್ರಾರಂಭದಲ್ಲಿ ಮತ್ತೆ ಕೊರೋನ ಹಾವಳಿ ಎಂದು ಅತಿರೇಕದ ಸುದ್ದಿಗಳನ್ನು ಪ್ರಸಾರ ಮಾಡಿ ಜನರಲ್ಲಿ ಭೀತಿ ಉಂಟುಮಾಡಿದ್ದವು. ಕೊನೆಗೆ ಅದು ಅಂತಹ ಪರಿಣಾಮ ಬೀರಲಿಲ್ಲ. ಹಾಗೆಯೇ ಎಲ್ಲೋ ಯಾವುದೋ ಒಂದು ವೈರಸ್ ಮಾರಣಾಂತಿಕವಾಗಿದ್ದರೆ ಅದನ್ನೇ ಸಾಂಕ್ರಾಮಿಕವಾಗಿ ಇಡೀ ದೇಶ ಇಡೀ ನಗರ ನಾಶವಾಗುತ್ತದೆ ಎಂದು ಜನರ ಜೀವನೋತ್ಸಾಹವನ್ನೇ ಕುಗ್ಗಿಸುತ್ತವೆ…..

ಮಾಧ್ಯಮಗಳ ಈಗಿನ ಮನಸ್ಥಿತಿ ಹೇಗಾಗಿದೆ ಎಂದರೆ ಏನಾದರೂ ಭಯಂಕರ ಘಟನೆಗಳು ನಿರಂತರವಾಗಿ ನಡೆಯುತ್ತಿರಲೇಬೇಕು. ಅದು ಬಾಂಬ್ ಸ್ಫೋಟವೇ ಆಗಿರಲಿ, ರಾಜಕೀಯ ದೊಂಬರಾಟವೇ ಆಗಿರಲಿ, ಅಪಘಾತ ಆತ್ಮಹತ್ಯೆಗಳೇ ಆಗಿರಲಿ, ಭ್ರಷ್ಟಾಚಾರವೇ ಆಗಿರಲಿ, ಚಳುವಳಿಗಳೇ ಆಗಿರಲಿ, ಒಟ್ಟಿನಲ್ಲಿ ಜನರಿಗೆ ಕುತೂಹಲ ಮೂಡಿಸುವ, ಉದ್ರೇಕಿಸುವ ಕಂಟೆಂಟ್ಗಳತ್ತ ಇವರ ಆಸಕ್ತಿ……

ಇದು ಜನಸಾಮಾನ್ಯರಲ್ಲಿ ಸಹ ಒಂದು ರೀತಿ ಅತೃಪ್ತ, ಅಸಮಾಧಾನಿತ, ಅಸಹನೀಯ ಮನೋಭಾವ ಬೆಳೆಯಲು ಕಾರಣವಾಗಿದೆ. ಜನರಲ್ಲಿಯು ಕೂಡ ಬ್ರೇಕಿಂಗ್ ನ್ಯೂಸ್ ಗಳ ಮಧ್ಯೆ ಸಮಗ್ರ ಚಿಂತನೆ ಇಲ್ಲವಾಗಿದೆ. ಒಂದು ವಿಷಯವನ್ನು ನಿಧಾನವಾಗಿ, ತಾಳ್ಮೆಯಿಂದ ಎಲ್ಲಾ ಮುನ್ನೂರು ಅರವತ್ತು ಡಿಗ್ರಿ ಕೋನಗಳಿಂದ ಸತ್ಯ ಮತ್ತು ವಾಸ್ತವದ ಪ್ರಜ್ಞೆಯಲ್ಲಿ ಯೋಚಿಸುವ ಶಕ್ತಿ ಮತ್ತು ವಿಧಾನವನ್ನೇ ಕಳೆದುಕೊಳ್ಳಲಾಗಿದೆ…..

ಕೆಲವೊಮ್ಮೆ ಅನಿಸುತ್ತದೆ ಇವರು ಪತ್ರಕರ್ತರೇ, ನಿರೂಪಕರೇ, ಸುದ್ದಿ ಮಾಧ್ಯಮಗಳ ನೌಕರರೇ, ಮಾಧ್ಯಮ ಕಾರ್ಯಕರ್ತರೇ, ದುರ್ಘಟನೆಗಳ ವಕ್ತಾರರೇ, ರಾಯಭಾರಿಗಳೇ, ಸುದ್ದಿಗಳ ಸೃಷ್ಟಿಕರ್ತರೇ, 24*7 ಕಾರಣದಿಂದ ಮಾಧ್ಯಮ ಲೋಕವನ್ನು ಹಳ್ಳ ಹಿಡಿಸುತ್ತಿರುವವರೇ ಒಂದೂ ಅರ್ಥವಾಗುತ್ತಿಲ್ಲ…..

ಮಾಧ್ಯಮಗಳು ಒಂದು ವಿಷಯದ ಬಗ್ಗೆ ಹೆಚ್ಚು ಗಮನಸೆಳೆದರೆ ಅದು ಸರ್ಕಾರಕ್ಕೆ ತಲುಪಿ ಆ ವಿಷಯದಲ್ಲಿ ಒಂದಷ್ಟು ಕಾರ್ಯ ಚಟುವಟಿಕೆಗಳು ನಡೆಯುತ್ತವೆ ಎಂಬುದು ನಿಜ. ಆದರೆ ಅವರು ನಿಜಕ್ಕೂ ಗಮನ ಸೆಳೆಯಬೇಕಾದ ಬಹು ಮುಖ್ಯ ವಿಷಯಗಳನ್ನು ಮರೆಮಾಚುತ್ತಾರೆ. ಎಲ್ಲೋ, ಯಾವುದೋ ಕ್ಷೇತ್ರದ ಚುನಾವಣಾ ಅಭ್ಯರ್ಥಿಯಾಗಿ ಅನೇಕ ಆಕಾಂಕ್ಷಿಗಳು ಪ್ರಯತ್ನ ಪಡುತ್ತಿರುತ್ತಾರೆ. ಅದನ್ನೇ ದೊಡ್ಡ ವಿಷಯವೆಂಬಂತೆ ಸಾರ್ವಜನಿಕರಿಗೆ ಒಂದು ಬ್ರೇಕಿಂಗ್ ನ್ಯೂಸ್ ಆಗಿ ಪ್ರಸಾರ ಮಾಡುತ್ತಾರೆ. ಇದು ಎಷ್ಟೊಂದು ಅನಾವಶ್ಯಕವಲ್ಲವೇ……

ಈ ಸಮಾಜದ ಎಷ್ಟೋ ಮಾನವೀಯ ಮೌಲ್ಯಗಳು ಅಧ:ತನವಾಗಿ ವಿನಾಶದ ಅಂಚಿನಲ್ಲಿವೆ. ಕನಿಷ್ಠ ಆಗಾಗ ಇವುಗಳ ಪುನರುತ್ಥಾನದ ಬಗ್ಗೆ ಕೆಲವು ಕಾರ್ಯಕ್ರಮಗಳನ್ನು ಮಾಡುವುದಾದರೆ ಅದು ಅವರ ನಿಜವಾದ ಸಂವೇದನಾಶೀಲ ಪತ್ರಕರ್ತರ ಜವಾಬ್ದಾರಿಯಾಗಿರುತ್ತದೆ. ಕೇವಲ ಕೆಟ್ಟ ಭ್ರಷ್ಟ ದುಷ್ಟ ಸುಳ್ಳು ಸುದ್ದಿಗಳೇ ಪ್ರಾಮುಖ್ಯತೆ ಪಡೆದಾಗ ಸಮಾಜ ಸಹ ಬಹುತೇಕ ಅದರ ಪ್ರಭಾವಕ್ಕೆ ಒಳಗಾಗಿ ಆ ನಿಟ್ಟಿನಲ್ಲಿಯೇ ಯೋಚಿಸುವಂತಾಗುತ್ತದೆ…….

ಒಂದು ಸುದ್ದಿ ಅಧಿಕೃತವಾಗಿ ಪ್ರಸಾರವಾಗಬೇಕಾದರೆ ಅದನ್ನು ಸಮಗ್ರವಾಗಿ ಚಿಂತಿಸಿ ಹೊರಗೆಡಹಬೇಕಾಗುತ್ತದೆ. ಕೇವಲ ತಮ್ಮ ಟಿ ಆರ್ ಪಿ ಅಥವಾ ಜನರ ಆಕರ್ಷಣೆ ಮುಖ್ಯವಾಗುವುದಾದರೆ ಅದು ಮಾಧ್ಯಮ ಲೋಕದ, ಈ ಸಮಾಜದ ಸಾಂವಿಧಾನಿಕ ಮೌಲ್ಯಗಳ ದುರಂತ ಎಂದು ಕರೆಯಬೇಕಾಗುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಇದೇ ನಿಜ. ಕನಿಷ್ಠ ಇನ್ನಾದರೂ ಸ್ವಲ್ಪ ಜವಾಬ್ದಾರಿಯಿಂದ ವರ್ತಿಸಿದರೆ ನಾವೆಲ್ಲರೂ ನಿಮಗೆ ಕೃತಜ್ಞರಾಗಿರುತ್ತೇವೆ..

Service title
 ವಿವೇಕಾನಂದ. ಎಚ್. ಕೆ.
9844013068……..

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

ಇದನ್ನೂ ಓದಿ

ಪಪ್ಪಾಯಿ ಬೆಳೆ ಕಲಿಸಿದ ಕೃಷಿ ಪಾಠ | ಕೃಷಿ ಬದುಕಿಗೊಂದು ಸ್ಫೂರ್ತಿಯ ಮಾತು |
March 28, 2025
8:12 AM
by: ಮಹೇಶ್ ಪುಚ್ಚಪ್ಪಾಡಿ
7.5 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಚಾರ್ ಧಾಮ್ ಹೇಮಕುಂಡ್ ಯಾತ್ರೆಗೆ ನೋಂದಾವಣೆ
March 28, 2025
8:00 AM
by: The Rural Mirror ಸುದ್ದಿಜಾಲ
ಹೇಮಾವತಿ ನದಿ ನೀರಿಗೆ ವಿಷ ಸೇರ್ಪಡೆ : ಮೀನುಗಳ ಸಾವು
March 28, 2025
7:35 AM
by: The Rural Mirror ಸುದ್ದಿಜಾಲ
ಬೇಸಿಗೆ ರಜೆ ಹಿನ್ನೆಲೆ | ಮುಂಬೈನಿಂದ ಬೆಂಗಳೂರಿಗೆ ವಿಶೇಷ ರೈಲು ಸೇವೆ
March 28, 2025
7:00 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group