ತಾಪಮಾನ ಏರಿಕೆಯ ಪರಿಣಾಮ ಏನು ? | ಈ ಬಾರಿಯ ತಾಪಮಾನಕ್ಕೆ ಕೃಷಿಗೆ ಹಾನಿ ಏನು ? | ಕೃಷಿಗೆ ವಿಮೆ ಪರಿಣಾಮವಾದೀತೇ…?

April 16, 2024
10:18 PM
ತಾಪಮಾನ ವಿಪರೀತ ಏರಿಕೆಯ ಕಾರಣದಿಂದ ಹಲವು ಸಮಸ್ಯೆಗಳಾಗುತ್ತಿವೆ. ಕೃಷಿ ಹಾನಿಯಿಂದ ತೊಡಗಿ ಕುಡಿಯುವ ನೀರು, ನಗರದ ವ್ಯವಹಾರದ ಮೇಲೂ ಪರಿಣಾಮ ಬೀರುತ್ತಿದೆ. ಹೀಗಾಗಿ ತಾಪಮಾನ ಇಳಿಕೆಯ ಕಡೆಗೆ ಗಮನಹರಿಸಬೇಕಿದೆ.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದೆ. ಮಳೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ವಿಪರೀತ ತಾಪಮಾನಕ್ಕೆ ಕುಡಿಯುವ ನೀರಿನ ಸಮಸ್ಯೆಯ ಜೊತೆಗೆ ಕೃಷಿ ಉಳಿಸುವುದೇ ಈಗ ಬಹುದೊಡ್ಡ ಸವಾಲಾಗುತ್ತಿದೆ. ಕೃಷಿಕರ ಸಂಕಷ್ಟ ಹೆಚ್ಚಾಗುತ್ತಿದೆ.  ಈ ಬಾರಿ ಹವಾಮಾನ ಆಧಾರಿತ ಬೆಳೆವಿಮೆಯೂ ಕೈಕೊಡುವುದೇ ..? ಅಥವಾ ರೈತರಿಗೆ ವರದಾನವಾಗುವುದೇ..?

Advertisement
Advertisement

ರಾಜ್ಯದ ಎಲ್ಲಾ ಕಡೆಗಳಲ್ಲೂ ಹವಾಮಾನ ವೈಪರೀತ್ಯ ಬಾಧಿಸುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹುದೊಡ್ಡದಾಗಿ ಕಾಡುತ್ತಿದ್ದರೆ, ಈಗ ರಾಜ್ಯದ ಬಹುತೇಕ ಕಡೆಗಳಲ್ಲೂ ನೀರಿನ ಸಮಸ್ಯೆ ಉಂಟಾಗಿದೆ. ಸಾವಿರ ಅಡಿಯಿಂದ ಕೊಳವೆಬಾವಿ ನೀರನ್ನು ಮೇಲೆತ್ತಲಾಗುತ್ತಿದೆ. ಬರದ ನಾಡು ಎಲ್ಲಾ ಕಡೆಯೂ ಕಾಣುತ್ತಿದೆ. ಸಾವಿರ ಅಡಿಯ ಕೊಳವೆಬಾವಿಯಲ್ಲೂ ನೀರು ಬರಿದಾಗುತ್ತಿದೆ. ಬಹುತೇಕ ಎಲ್ಲಾ ಕೃಷಿಗಳೂ ಒಣಗುತ್ತಿವೆ.ಸಾಕಷ್ಟು ನೀರು ಬೇಡುವ ಅಡಿಕೆ ಕೃಷಿ ಒಣಗಿ ಕಂಗಾಲಾಗಿದೆ. ಇದೀಗ ಕರಾವಳಿ ಹಾಗೂ ಮಲೆನಾಡಿನಲ್ಲೂ ಈ ಬಾರಿ ಮಳೆಯ ಕೊರತೆ, ನೀರಿನ ಕೊರತೆ ಕಾಡುತ್ತಿದೆ. ಅಡಿಕೆ ತೋಟಗಳೂ ಒಣಗಲು ಆರಂಭವಾಗಿದೆ. ಸಾಮಾನ್ಯವಾಗಿ ಶಿವರಾತ್ರಿಯವರೆಗೆ ಚಳಿ ಎನ್ನುವ ಮಾತು ಹಿಂದಿನ ಕಾಲದಿಂದಲೂ ಈ ಭಾಗದಲ್ಲಿ ಕೇಳಿಕೊಂಡು ಬಂದಿರುವ ವಾಸ್ತವ ಸತ್ಯ. ಆದರೆ ಈ ವರ್ಷದ ಡಿಸೆಂಬರ್ ಜನವರಿ ತಿಂಗಳಿನಲ್ಲಿ ಬೆರಳೆಣಿಕೆಯಷ್ಟು ದಿನವಷ್ಟೇ ಚಳಿಯನ್ನು ಹೊರತುಪಡಿಸಿದರೆ ಉಳಿದದ್ದೆಲ್ಲ ಸೆಖೆಯ ಅನುಭವ.

ಕರಾವಳಿ-ಮಲೆನಾಡಲ್ಲೂ  ಬತ್ತುತ್ತಿದೆ ಅಂತರ್ಜಲ: ಸುಮಾರು ನಾಲ್ಕು ದಶಕಗಳ ಹಿಂದೆ ಕರಾವಳಿ ಮಲೆನಾಡು ಕೃಷಿಕರು ಗದ್ದೆಯಲ್ಲಿ ವ್ಯಾಪಕವಾಗಿ ಭತ್ತ ಬೆಳೆಯುತ್ತಿದ್ದರು. ಈಗ  ವಾಣಿಜ್ಯ ಬೆಳೆಗೆ ಕೃಷಿಕ ಮುಖ ಮಾಡಿದ್ದೇ ನೀರಿನ ಕೊರತೆಗೆ ಪ್ರಮುಖ ಕಾರಣ ಎನ್ನುವ ಕೂಗು ಈಗ ಕೇಳಿಬರುತ್ತಿದೆ. ಹಿಂದೆ ಗದ್ದೆ ನಾಟಿ ಮಾಡುವಾಗ ವರ್ಷದ ಒಂಬತ್ತರಿಂದ ಹತ್ತು ತಿಂಗಳು ನೀರನ್ನು ಗದ್ದೆಗೆ ಹರಿಸಿ ಗದ್ದೆಯಲ್ಲಿ ನೀರನ್ನು ಶೇಖರಿಸುವ ಪದ್ಧತಿ ಇತ್ತು. ಅದು ಅಂತರ್ಜಲ ಮಟ್ಟ ಹೆಚ್ಚಿಸುತ್ತಿತ್ತು ಎನ್ನುವುದೆಲ್ಲಾ ಈಗಿನ ವಿಶ್ಲೇಷಣೆ.

ಬದಲಾದ ಗ್ರಾಮೀಣ ಭಾಗದ ಕೃಷಿಕನ ಜೀವನ ಶೈಲಿ :  ಹಿಂದಿನ ಕಾಲದಲ್ಲಿ ಹಳ್ಳ-ಹೊಳೆಗಳಲ್ಲಿ ಕಲ್ಲಿನಿಂದ ಕಟ್ಟಿದ ಒಡ್ಡುಗಳ ನಿರ್ಮಾಣದಿಂದ ನೀರು ಶೇಖರಣೆಯಾಗುತ್ತಿತ್ತು. ಒಡ್ಡುಗಳ ಕೆಳಗೆ ಹೂಳು ತೆಗೆಯದೆ ಇರುವುದರಿಂದ ನೀರು ಶೇಖರಣೆಗೆ ಆಧಾರವಾಗಿ ಇರುತ್ತಿತ್ತು. ಇದರಿಂದ ನೀರಿನ ಮಟ್ಟ ಏರುತ್ತಿತ್ತು. ಈ ನೀರಿನ ಒಡ್ಡುಗಳ ಬದಲಿಗೆ ಚೆಕ್‌ಡ್ಯಾಂ ನಿರ್ಮಾಣವಾಗಿ ನೀರು ಶೇಖರಣಾ ಸಾಮರ್ಥ್ಯ ಕಡಿಮೆಯಾಗಿದೆ. ಚೆಕ್‌ ಡ್ಯಾಂಗಳಲ್ಲಿ ಎರಡು ಹಲಗೆ ಜೋಡಿಸಿ ಮಧ್ಯೆ ಮಣ್ಣು ತುಂಬಿಸದೆ, ಒಂದೇ ಹಲಗೆ ಜೋಡಿಸುವುದರಿಂದ ನೀರಾವರಿಗಾಗಿ ನೀರು ಶೇಖರಣೆ ಮಾಡಲು ಸಾಧ್ಯವಾಗುತ್ತಿಲ್ಲ.ಚೆಕ್‌ಡ್ಯಾಂಗಳ ಕೆಳಗೆ ಹೂಳನ್ನು ಎತ್ತಿ ಟ್ರೆಂಚ್ ರಚಿಸುವುದರಿಂದ ನೀರಿನ ಶೇಖರಣಾ ಸಾಮರ್ಥ್ಯ ಕಡಿಮೆಯಾಗುತ್ತಿದೆ.  ಚೆಕ್‌ ಡ್ಯಾಂಗಳ ಮೇಲ್ಗಡೆ ಹೂಳು ತುಂಬಿದ್ದು ಅದನ್ನು ತೆಗೆಯದೆ ಇರುವುದಿಂದಲೂ ನೀರು ಸಂಗ್ರಹ ವ್ಯಾಪ್ತಿ ಕಡಿಮೆಯಾಗುತ್ತದೆ.

ಬರಡಾದೀತು ಭವಿಷ್ಯ ಎನ್ನುವುದು ಈಗಿನ ಕೂಗು : ಈ ರೀತಿ ತಾಪಮಾನ ಏರಿಕೆಯಾಗುತ್ತಲೇ ಸಾಗಿದರೆ ಬದುಕು ಕಷ್ಟವಾದೀತು ಎನ್ನುವುದು ಈಗಿನ ಮಾತುಗಳು. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾಗಶಃ ಜಲಕ್ಷಾಮ ಉಂಟಾಗಿದೆ. ಅಭಿವೃದ್ಧಿ ಹೆಸರಲ್ಲಿ ಕಾಡು ನಾಶವಾಗುತ್ತಾ ಹೋಗುತ್ತಿದೆ. ಹಾಗೆಂದು ಅಭಿವೃದ್ಧಿ ಆಗಬಾರದು ಎಂದೇನಿಲ್ಲ, ರಸ್ತೆ, ವಿದ್ಯುತ್ ಸಂಪರ್ಕ, ವಸತಿ ಯೋಗ್ಯ ಜಾಗದ ನಿರ್ಮಾಣ ಮಾಡುವಾಗ ಮರಗಳನ್ನು ತೆರವುಗೊಳಿಸಿದರೆ, ನಿರ್ಮಾಣದ ನಂತರ ಆ ಜಾಗದ ಅಕ್ಕ ಪಕ್ಕಗಳಲ್ಲಿ ಮತ್ತೆ ಗಿಡ ನೆಡುವ ಕಾರ್ಯ ರೂಪಿಸಿಕೊಳ್ಳಬೇಕು. ಈ ವ್ಯವಸ್ಥೆಯನ್ನು ಅಭಿವೃದ್ಧಿಯ ಅನುದಾನದ ಯೋಜನೆಯೊಳಗೆ ಭರಿಸಿಕೊಳ್ಳಬೇಕು. ಅಂತರ್ಜಲಮಟ್ಟ ಏರಿಕೆಗೆ ಸೂಕ್ತ ಕ್ರಮ ಕೈಗೊಳ್ಳಲೇಬೇಕು.ಇಲ್ಲವಾದರೆ ಭವಿಷ್ಯ ಇನ್ನೂ ಬರಡಾದೀತು.

Advertisement

ಗ್ರಾಮೀಣ ಭಾಗದಲ್ಲಿ- ಕೃಷಿಯಲ್ಲಿ ಏನಾಗುತ್ತಿದೆ ? : ತಾಪಮಾನ ಏರಿಕೆಯ ಕಾರಣದಿಂದ ಬಹುತೇಕ ಕೃಷಿ ಒಣಗುತ್ತಿದೆ. ಕರಾವಳಿ ಹಾಗೂ ಮಲೆನಾಡು ಭಾಗದ ಅಡಿಕೆ ಕೃಷಿ ಸಂಕಷ್ಟದಲ್ಲಿದೆ. ತಾಪಮಾನ 38 ಡಿಗ್ರಿ ದಾಟುತ್ತಿದ್ದಂತೆಯೇ ಅಡಿಕೆಯ ನಳ್ಳಿ(ಎಳೆ ಅಡಿಕೆ)ಯ ಮೇಲೆ ಪರಿಣಾಮ ಬೀರಲು ಆರಂಭವಾಗುತ್ತದೆ. ಈ ಬಾರಿ ತಾಪಮಾನ 41 ಡಿಗ್ರಿಗಿಂತ ಹೆಚ್ಚಾಗುತ್ತಿದೆ, ಹೀಗಾಗಿ ಅಡಿಕೆ ಹಿಂಗಾರ ಮತ್ತು ನಳ್ಳಿಯ ಮೇಲೆ ಪರಿಣಾಮ ಬೀರಿದೆ . ಹಿಂಗಾರ ಒಣಗಿದೆ. ಎಳೆ ಅಡಿಕೆ ಬಾಡಿ ಬೀಳಲು ಆರಂಭವಾಗುತ್ತಿದೆ. ಇದೇ ವೇಳೆ ತೆಂಗಿನ ಎಳೆಯ ಕಾಯಿಗಳು( ಚೆಂಡು) ಬೀಳಲು ಆರಂಭವಾಗಿದೆ. ವಿಪರೀತ ತಾಪಮಾನದಿಂದ ಮರಗಳೇ ಒಣಗಲು ಆರಂಭವಾಗಿದೆ. ಹಲವು ಕಡೆ ನೀರು ಹಾಕಿದರೂ ತೋಟದ ಮೇಲೆ ಯಾವ ಪರಿಣಾಮವೂ ಕಾಣುತ್ತಿಲ್ಲ. ತಾಪಮಾನ ಏರಿಕೆಯ ಕಾರಣದಿಂದ ಕೃಷಿ ಕೆಲಸಗಳು ಬಹುತೇಕ ಸ್ಥಗಿತಗೊಂಡಿದೆ. ತೋಟದಲ್ಲೂ ಕೆಲಸ ಮಾಡಲು ಆಗದ ಪರಿಸ್ಥಿತಿ ಇದೆ. ಹೀಗಾಗಿ ಕೃಷಿಯ ಯಾವ ಕೆಲಸಗಳೂ ಈಗ ನಡೆಸಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಕೂಡಾ ಮರ-ಕಾಡು ಇದ್ದರೂ ತಾಪಮಾನದಿಂದ ನಡೆದಾಡಲೂ ಸಂಕಷ್ಟವಾಗಿದೆ.

ನಗರದಲ್ಲಿ ಏನಾಗುತ್ತಿದೆ ?: ನಗರ ಪ್ರದೇಶದಲ್ಲಿ ಗ್ರಾಮೀಣ ಭಾಗಕ್ಕಿಂತ ಹೆಚ್ಚಿನ ತಾಪಮಾನದ ಅನುಭವವಾಗುತ್ತಿದೆ. ಗ್ರಾಮೀಣ ಭಾಗ ಮಾತ್ರವಲ್ಲ ನಗರದಲ್ಲೂ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಜನರ ಓಡಾಟ ಕಡಿಮೆಯಾಗಿದೆ. ತರಕಾರಿ ವ್ಯಾಪಾರಸ್ಥರು ಸಂಕಟ ಪಡುವಂತಾಗಿದೆ. ತಾಪಮಾನ ಏರಿಕೆಯ ಕಾರಣದಿಂದ ತರಕಾರಿ ಬಾಡುತ್ತಿದೆ. ಸೊಪ್ಪು ತರಕಾರಿಗಳಂತೂ ಒಂದೆರಡು ಗಂಟೆಯಲ್ಲಿ ಒಣಗುತ್ತದೆ. ಇತರ ಅಂಗಡಿಗಳಲ್ಲಿ, ಬ್ಯಾಂಕ್‌ಗಳಲ್ಲಿ  ತಾಪಮಾನ ಕೆಲಸದ ಮೇಲೆ ಕಷ್ಟ ಕೊಡುತ್ತಿದೆ.

ಆರೋಗ್ಯದ ಮೇಲೆ ಪರಿಣಾಮಗಳು : ತಾಪಮಾನ ಏರಿಕೆ ಆರೋಗ್ಯದ ಮೇಲೂ ಪರಿಣಾಮ ಬೀರಲು ಆರಂಭವಾಗಿದೆ. ಹಲವು ಮಂದಿ ಚರ್ಮ ರೋಗಕ್ಕೆ ಸಂಬಂಧಿಸಿ ಚಿಕಿತ್ಸೆ ಪಡೆಯಲು ಆರಂಭಿಸಿದ್ದಾರೆ. ಬಿಸಿಲಿನ ಕಾರಣಕ್ಕೆ ಸನ್‌ ಬರ್ನ್‌, ಗುಳ್ಳೆಗಳ ಜೊತೆಗೆ ರಿಂಗ್‌ ವರ್ಮ್‌ ಕೂಡಾ ಕಾಣಿಸಿಕೊಂಡಿದೆ. ದೇಹದಲ್ಲಿ ನೀರಿನ ಕೊರತೆ ಕಡಿಮೆಯಾಗಿ ಬಳಲಿಕೆಯೂ ಅನೇಕರನ್ನು ಕಾಡುತ್ತಿದೆ. ಈಗ ಚುನಾವಣೆಯ ಕಾರಣದಿಂದ ಅನೇಕರಿಗೆ ತಪಾಸಣೆ ಸೇರಿದಂತೆ ಹಲವು ಕೆಲಸಗಳು ಇವೆ. ಇವರೆಲ್ಲಾ ಬಿಸಿಲಿನ ನಡುವೆಯೇ ಕೆಲಸ ಮಾಡಬೇಕಾಗಿದೆ. ಈ ಕಾರಣದಿಂದ ಕೆಲವು ಸಿಬಂದಿಗಳು ದೇಹದ ನಿರ್ಜಲೀಕರಣದಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದಾರೆ. ಹೀಗೇ ಬೇರೆ ಬೇರೆ ಕಾರಣಗಳು ಕಾಣಿಸಿವೆ.

ಪ್ರಾಣಿ-ಪಕ್ಷಿಗಳ ಮೇಲೆ ತಾಪಮಾನ : ತಾಪಮಾನ ಏರಿಕೆಯಾಗುತ್ತಿದ್ದಂತೆಯೇ, ಪ್ರಾಣಿ-ಪಕ್ಷಿಗಳು ವಿಲವಿಲ ಒಡ್ಡಾಡುತ್ತಿವೆ. ಸಾಕು ಪ್ರಾಣಿಗಳು ನೀರಿಗಾಗಿ ಹಾತೊರೆಯುತ್ತವೆ. ಕಾಡು ಪ್ರಾಣಿಗಳು ನೀರನ್ನು ಅರಸಿಕೊಂಡು ಬರುತ್ತವೆ. ಈ ನಡುವೆ ಕೃಷಿಕರು ತೋಟಕ್ಕೆ ನೀರುಣಿಸುವ ತುರ್ತಿನಲ್ಲೂ ಇರುವುದರಿಂದ ಕಾಡು ಪ್ರಾಣಿಗಳೂ ದಾಳಿ ಮಾಡಿದ ಘಟನೆಗಳೂ ನಡೆದಿವೆ. ತಾಪಮಾನ ಏರಿಕೆಯಾಗುತ್ತಿದ್ದಂತೆಯೇ ಕೆಲವು ಪಕ್ಷಿಗಳು ಹಠಾತ್‌ ಬಿದ್ದು ಬಿಸಿಲಿನ ತಾಪದಿಂದ ಪ್ರಾಣಕಳೆದುಕೊಳ್ಳುತ್ತಿವೆ. ಇದಕ್ಕಾಗಿ ಸಾಧ್ಯವಾದಷ್ಟು ಮನೆಯ ಪಕ್ಕದಲ್ಲಿ ಕೆಲವು ಸಹೃದಯರು ನೀರು ಇರಿಸುವ ಮೂಲಕ ಪ್ರಾಣಿ-ಪಕ್ಷಿಗಳ ರಕ್ಷಣೆಗೆ ಮುಂದಾಗಿದ್ದಾರೆ.

ಪರಿಹಾರ ಕ್ರಮಗಳು ಏನೇನು…? :ಮುಖ್ಯವಾಗಿ ತಾಪಮಾನ ಏರಿಕೆಯಾಗುತ್ತಿದ್ದಂತೆಯೇ ಅಂತರ್ಜಲ ಮಟ್ಟ ಕುಸಿತ ಹೆಚ್ಚಾಗುತ್ತಿದೆ. ಇದಕ್ಕೆ ಪ್ರಮುಖವಾದ ಕಾರಣಅತಿ ಆಳದವರೆಗೆ ಕೊರೆಯುವ ಕೊಳವೆ ಬಾವಿಗಳು ಇದರ ಜೊತೆಗೆ ಸೋಗೆ, ಮುಳಿ ಹುಲ್ಲಿನ ಮಾಡುಗಳು ಮರೆಯಾದುದು,  ಇಂಟರ್ಲಾಕ್ ಕಾಂಕ್ರೀಟ್ ಬಳಕೆ ಹೆಚ್ಚಾದುದು,  ಪರಿಸರ ಪೂರಕ ಚಟುವಟಿಕೆಗೆ ಮನಸ್ಸು ಮಾಡದೇ ಇದ್ದದ್ದು, ಗುಡ್ಡ ಏರಿಳಿತಗಳನ್ನು ಸಮತಟ್ಟು ಮಾಡಿರುವುದು,  ಅರಣ್ಯದಲ್ಲಿನ ಗುಂಡಿಗಳಲ್ಲಿ ಶೇಖರಣೆಯಾದ ನೀರು ಇಂಗದೇ ಇರುವುದು,  ಆಳದ ಪರಿಮಿತಿ ಇಲ್ಲದೆ ಆಳ ದವರೆಗೆ ಕೊಳವೆ ಬಾವಿಗಳನ್ನು ಕೊರೆಸುವುದು. ಈಗ ತಕ್ಷಣಕ್ಕೆ ಮಾಡಬೇಕಾದದು,  ಹಳೆ ಬಾವಿ, ಬತ್ತಿದ ಹಳ್ಳ ಕೊಳ್ಳಕ್ಕೆ ಮಳೆಗಾಲದಲ್ಲಿ ನೀರಿನ ಜಲ ಮರುಪೂರಣ ಮಾಡಬೇಕು.ಹೆಚ್ಚು ನೆರಳು ಕೊಡುವ ಮತ್ತು ಸೊಂಪಾಗಿ ಬೆಳೆಯುವ ಮರಗಳನ್ನು ನೆಡಬೇಕು, ಉಳಿಸಬೇಕು ಇದಿಷ್ಟೇ ಭವಿಷ್ಯದ ಮುಂದಿರುವ ಶಾಶ್ವತ ಪರಿಹಾರ ಕ್ರಮಗಳು.

Advertisement

ಈ ಬಾರಿ ಹವಾಮಾನ ಆಧಾರಿತ ಬೆಳೆವಿಮೆ ಕೃಷಿಕರಿಗೆ ನೆರವಾದೀತೇ…? : ಈ ಬಾರಿ ತಾಪಮಾನ ಏರಿಕೆ ವಿಪರೀತವಾಗಿದೆ.ಹಲವು ಕಡೆ 40 ಡಿಗ್ರಿ ದಾಟಿದೆ. ಆದರೆ ಹವಾಮಾನ ಆಧಾರಿತ ಬೆಳೆವಿಮೆ ಕೃಷಿಕರ ನೆರವಿಗೆ ಬಂದೀತೇ…? ಕಳೆದ ವರ್ಷದವರೆಗೆ ಕಡಿಮೆ ಇದ್ದ ತಾಪಮಾನ ಏರಿಕೆಯಾಗಿದೆ. ಇದೇ ಮಾದರಿ ವಿಮೆಯ ನಿಯಮಗಳೂ ಬದಲಾಗಿ ತಾಪಮಾನದ ಮಿತಿಯೂ ಏರಿಕೆಯಾಗಿದೆ. 40-42 ಡಿಗ್ರಿಯಷ್ಟು ತಾಪಮಾನ ಏರಿಕೆಯಾದರೆ ಮಾತ್ರವೇ ಬಹುಶ: ಈ ಬಾರಿ ಬೆಳೆವಿಮೆಗೆ ದಾಖಲಾಗುತ್ತದೆ. ಅದೇ ರೀತಿ ಈ ಬಾರಿ ಮಳೆಯೂ ಉತ್ತಮವಿರುವ ಅಂದಾಜಿದೆ. ಹಾಗಾಗಿಯೇ ಮಳೆ ಬೀಳುವ ಲೆಕ್ಕಾಚಾರಗಳೂ ಬದಲಾಗಿದೆ…!

ತಾಪಮಾನ ರಾಜಕೀಯ ಇಶ್ಯೂ ಏಕಿಲ್ಲ..? : ಇಡೀ ಜಗತ್ತಿನ ತಾಪಮಾನ ಏರಿಕೆಯಾಗುತ್ತಿದೆ. ಅದರಲ್ಲೂ ಈಗ ಚುನಾವಣೆಯ ಸಮಯ. ಸಹಜವಾಗಿಯೇ ತಾಪಮಾನದ ನಡುವೆ ಎಲ್ಲಾ ಪಕ್ಷಗಳ ಕಾರ್ಯಕರ್ತರು, ನಾಯಕರು ಕೆಲಸ ಮಾಡುತ್ತಿದ್ದಾರೆ. ಈ ತಾಪಮಾನ ಏರಿಕೆಗೆ ಕಾರಣವಾದ ಅಂಶಗಳು ರಾಜಕೀಯ ಇಶ್ಯೂ ಏಕೆ ಆಗುತ್ತಿಲ್ಲ…!?. ಈ ತಾಪಮಾನ ಏರಿಕೆಯ ಬಿಸಿ ನಿಜವಾಗೂ ಆಗುತ್ತಿರುವುದು ಸದ್ಯ ಕೃಷಿಕರ ಮೇಲೆ ಮಾತ್ರಾ…!. ಬೆಳೆ ನಷ್ಟವಾಗುವುದು, ಕೃಷಿ ಉಳಿಸಲು ಸಂಕಷ್ಟ ಪಡುವುದು ರೈತ ಮಾತ್ರಾ…!. ಅದಕ್ಕಾಗಿಯೇ ಇದೊಂದು ರಾಜಕೀಯ ಇಶ್ಯೂ ಆಗುತ್ತಿಲ್ಲ…!

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಸಮರ್ಥ ಸಮನ್ಯು

ಸಮರ್ಥ ಸಮನ್ಯು , - ಬರಹಗಾರರು, ವಿಮರ್ಶಕರು.

ಇದನ್ನೂ ಓದಿ

ಉದ್ಯೋಗ | ಐಟಿಐ-ಡಿಪ್ಲೊಮಾ ಅಭ್ಯರ್ಥಿಗಳಿಗೆ ಇಲ್ಲಿದೆ ಅವಕಾಶ |
July 22, 2025
10:37 PM
by: The Rural Mirror ಸುದ್ದಿಜಾಲ
ಬಿಹಾರ ಸೇರಿ ಹಲವು ರಾಜ್ಯಗಳಲ್ಲಿ 2 ದಿನ ಭಾರಿ ಮಳೆ
July 22, 2025
10:01 PM
by: The Rural Mirror ಸುದ್ದಿಜಾಲ
ಒಂದೇ ಕುಟುಂಬದ ಮೂವರ ಮೃತ್ಯು | ತರಕಾರಿಗೆ ಸಿಂಪಡಿಸಿದ್ದ ಕ್ರಿಮಿನಾಶಕ ಜೀವಕ್ಕೇ ಕುತ್ತಾಯಿತೇ ?
July 22, 2025
9:52 PM
by: The Rural Mirror ಸುದ್ದಿಜಾಲ
 ಇಂದು ವಿಶ್ವ ಮಾವು ದಿನಾಚರಣೆ | ರಾಜ್ಯದ ಮಾವಿಗೆ ಜಗತ್ತಿನಾದ್ಯಂತ ಬೇಡಿಕೆ |
July 22, 2025
9:34 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group