ಸೆಕ್ಯಲರಿಸಂನ ಹೆಸರಿನಲ್ಲಿ ಹಿಂದೂ ಧರ್ಮದ ಮೇಲಾಗುವ ಆಕ್ರಮಣಗಳು, ಹಿಂದೂಗಳ ಹತ್ಯೆಯನ್ನು ತಟೆಗಟ್ಟಲು ಇರುವ ಏಕೈಕ ಮಾರ್ಗವೆಂದರೆ ಹಿಂದೂಸ್ತಾನವನ್ನು ಸಾಂವಿಧಾನಿಕವಾಗಿ ಹಿಂದೂ ರಾಷ್ಟ್ರವೆಂದು ಘೋಷಿಸುವುದಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕರ್ನಾಟಕ ಸಮನ್ವಯಕರಾದ ಚಂದ್ರ ಮೊಗೇರ ಹೇಳಿದರು.
ಅವರು ಪುತ್ತೂರಿನ ಸ್ವಾಮಿ ಕಲಾ ಮಂದಿರದಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ಆಯೋಜಿಸಲಾಗಿದ್ದ ಹಿಂದೂ ರಾಷ್ಟ್ರ ಜಾಗೃತಿ ಅಧಿವೇಶನದಲ್ಲಿ ಮಾತನಾಡುತ್ತಿದ್ದರು. ಈ ಅಧಿವೇಶದವು ಹಿಂದುತ್ವವಾದಿಗಳು, ಹಿಂದುತ್ವನಿಷ್ಠ ವಕೀಲರು, ಸಾಮಾಜಿಕ ಹೋರಾಟಗಾರರು, ಇತ್ಯಾದಿ ಹಿಂದುತ್ವಕ್ಕಾಗಿ ಕಾರ್ಯ ಮಾಡುವ ಸಂಘಟನೆಗಳು ಒಂದಾಗಿ ಹಿಂದೂ ರಾಷ್ಟ್ರದ ದಿಶೆಯನ್ನು ನಿರ್ಧರಿಸುವ ಉದ್ದೇಶವನ್ನು ಹೊಂದಿದೆ ಎಂದರು.
ಅಂಬಿಕಾ ಸಮೂಹ ವಿದ್ಯಾ ಸಂಸ್ಥೆ ಪುತ್ತೂರಿನ ಸಂಚಾಲಕರಾದ ಸುಬ್ರಹ್ಮಣ್ಯ ನಟ್ಟೋಜ, ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಧರ್ಮಪ್ರಸಾರಕರಾದ ಶ್ರೀಕೃಷ್ಣ ಉಪಾಧ್ಯಾಯ, ಸಾಮಾಜಿಕ ಹೋರಾಟಗಾರರಾದ ದಿನೇಶ್ ಜೈನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಂಬಿಕಾ ಸಮೂಹ ವಿದ್ಯಾ ಸಂಸ್ಥೆ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ, ಇಂದು ಜಾತ್ಯಾತೀತ ರಾಷ್ಟ್ರದ ಕಲ್ಪನೆಯಲ್ಲಿ ಹಿಂದೂ ಧರ್ಮದ ಮೇಲೆ ಆಘಾತಗಳಾಗುತ್ತಿವೆ. ಈ ನಿಟ್ಟಿನಲ್ಲಿ ಧರ್ಮದ ರಕ್ಷಣೆಗಾಗಿ ಹಿಂದೂಗಳು ಸಮಿಧೆಯಂತೆ ಸಮರ್ಪಣೆಯಾಗಬೇಕಾಗಿದೆ ಎಂದರು.
ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಧರ್ಮಪ್ರಸಾರಕರಾದ ಶ್ರೀಕೃಷ್ಣ ಉಪಾಧ್ಯಾಯ ಮಾತನಾಡಿ, ಧರ್ಮರಕ್ಷಣೆಗಾಗಿ ಪ್ರತಿಯೊಬ್ಬ ಹಿಂದೂಗಳು ಕನಿಷ್ಠ 1 ಗಂಟೆಯನ್ನಾದರು ನೀಡಿದರೆ ಶೀಘ್ರವೇ ಭಾರತವು ಹಿಂದೂ ರಾಷ್ಟ್ರವಾಗಬಹುದು ಎಂದರು.
ಭಾರತೀಯ ಗೋ ಪರಿವಾರ ಪ್ರಧಾನ ಕಾರ್ಯದರ್ಶಿ ಜಯಾನಂದ ಮಾತನಾಡಿ,33 ಕೋಟಿ ದೇವತೆಗಳು ವಾಸಿಸುವ ಗೋವಿನ ಪೋಷಣೆಯ ಜೊತೆಗೆ ಗೋ ಉತ್ಪನ್ನಗಳ ಬಳಕೆಗೆ ಉತ್ತೇಜಿಸಬೇಕಾಗಿದೆ. ಈ ಮೂಲಕ ದೇಶಿ ಗೋವಿನ ಸಂರಕ್ಷಣೆ ಮಾಡಬೇಕಾಗಿದೆ ಎಂದರು.
ಸಾಮಾಜಿಕ ಹೋರಾಟಗಾರರಾದ ದಿನೇಶ್ ಜೈನ್ ಮಾತನಾಡಿ ಹಿಂದೂ ಧರ್ಮವನ್ನು ಉಳಿಸುವ ಜೊತೆಗೆ ಅದನ್ನು ಬೆಳೆಸುವುದು ಮತ್ತು ಕೃತಿಯಲ್ಲಿ ತರುವುದು ಅಗತ್ಯವಾಗಿದೆ. ಮಕ್ಕಳಲ್ಲಿ ಬಾಲ್ಯದಿಂದಲೇ ಧರ್ಮದ ಬೀಜವನ್ನು ಬಿತ್ತಬೇಕು ಎಂದು ತಿಳಿಸಿದರು.