ಹಿಂದೂ ಕ್ಷೇತ್ರದಲ್ಲಿ ಮುಸ್ಲಿಂ ಹಾಗೂ ಕ್ರೈಸ್ತ ಧರ್ಮದವರಿಗೆ ವ್ಯಾಪಾರ-ವ್ಯವಹಾರಕ್ಕೆ ಅವಕಾಶ ಕೊಡಬಾರದು ಎಂದು ಹಿಂದೂ ಸಂಘಟನೆಗಳು ಒತ್ತಾಯಿಸುತ್ತಿವೆ. ಈಚೆಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ, ಕೊಡಗಿನ ದೇವಸ್ಥಾನಗಳಲ್ಲಿ ನಿಷೇಧ ಬ್ಯಾನರ್ ಕಂಡುಬಂದಿರುವ ಜೊತೆಗೇ ಅಂಜನಾದ್ರಿ ಬೆಟ್ಟದಲ್ಲೂ ಬ್ಯಾನರ್ ಅಳವಡಿಕೆಯಾಗಿದೆ. ಜಿಲ್ಲಾಡಳಿತವು ಈ ಬ್ಯಾನರ್ ತೆರವು ಮಾಡಿದೆ. ಈ ನಡುವೆಯೇ ನಕಲಿ ಐಡಿ ಮೂಲಕ ವ್ಯಾಪಾರ ವಹಿವಾಟು ನಡೆಸುವುದು ಬೆಳಕಿಗೆ ಬಂದಿದೆ.
ಅಂಜನಾದ್ರಿ ಬೆಟ್ಟದಲ್ಲಿ ಹಿಂದೂಗಳಿಂದ, ಹಿಂದೂಗಳಿಗಾಗಿ, ಹಿಂದೂಗಳಿಗೋಸ್ಕರ ಅನ್ನುವ ಪೋಸ್ಟರ್ ಅಳವಡಿಸಲಾಗಿತ್ತು. ಈ ಪೋಸ್ಟರ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವಂತೆ ಜಿಲ್ಲಾಧಿಕಾರಿ, ತಹಶೀಲ್ದಾರ್‌ಗೂ ಹಿಂದೂ ಜಾಗರಣ ವೇದಿಕೆ ಮನವಿ ಮಾಡಿತ್ತು. ಮುಸ್ಲಿಂ ಹಾಗೂ ಕ್ರೈಸ್ತ ಧರ್ಮದವರ ವ್ಯಾಪಾರಕ್ಕೆ ಅವಕಾಶ ಕೊಡಬಾರದು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿವೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಎಚ್ವೆತ್ತುಕೊಂಡ ಕೊಪ್ಪಳ ಜಿಲ್ಲಾಡಳಿತ, ಅನ್ಯಧರ್ಮೀಯರಿಗೆ ವ್ಯಾಪಾರ ವಹಿವಾಟು ಅವಕಾಶವಿಲ್ಲ ಎಂದು ಹಾಕಿದ್ದ ಬ್ಯಾನರ್ ತೆರವುಗೊಳಿಸಿದೆ.
ಚಂಪಾಷಷ್ಠಿ ಹಾಗೂ ದೇವಾಲಯ ವಾರ್ಷಿಕೋತ್ಸವದಲ್ಲಿ ಅನ್ಯಕೋಮಿನವರ ವ್ಯಾಪಾರ ವಹಿವಾಟು ನಿಷೇಧಿಸಿದ್ದರೂ, ಯುವಕನೊಬ್ಬ ಹಿಂದೂ ಹೆಸರಿನ ಐಡಿ ಬಳಸಿ ವ್ಯಾಪಾರ ನಡೆಸಲು ಬಂದು ಹಿಂದೂ ಸಂಘಟನೆಗಳ ಕಾರ್ಯಕರ್ತರಿಗೆ ಸಿಕ್ಕಿಬಿದ್ದ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಹರಿಹರ ಗ್ರಾಮದ ದೇವಾಲಯದಲ್ಲಿ ನಡೆದಿದೆ. ಇಲ್ಲಿ ಹಿಂದೂಯೇತರರು ವ್ಯಾಪಾರ ನಡೆಸುವುದಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಒಂದು ವಾರದ ಹಿಂದೆಯೇ ಘೋಷಿಸಲಾಗಿತ್ತು.

ಮಿರರ್ ಡೆಸ್ಕ್ – ಮಿರರ್ ನ್ಯೂಸ್ ನೆಟ್ವರ್ಕ್
Be the first to comment on "ಅನ್ಯಧರ್ಮೀಯರಿಗೆ ವ್ಯಾಪಾರ ವಹಿವಾಟು ನಿಷೇಧ | ಅಂಜನಾದ್ರಿ ಬೆಟ್ಟದಲ್ಲೂ ಬ್ಯಾನರ್ | ಈಗ ನಕಲಿ ಐಡಿ ಮೂಲಕ ವ್ಯಾಪಾರಕ್ಕೆ ಯತ್ನ |"