Advertisement
ಅನುಕ್ರಮ

ಅಯೋಧ್ಯೆಯಲ್ಲಿ ಧರ್ಮಧ್ವಜಾರೋಹಣ, ದಾಸ್ಯದ ಮುಕ್ತಿಗೆ ಮೋದಿ ಪಣ

Share
ಅಯೋಧ್ಯೆಯಲ್ಲಿ ಶ್ರೀರಾಮನ ಜನ್ಮಸ್ಥಳದಲ್ಲೇ ದೇವಾಲಯವನ್ನು ಕಟ್ಟಿ ರಾಮಲಲ್ಲಾನ ಮೂರ್ತಿಯನ್ನು ಸ್ಥಾಪಿಸಿ 22-01-2024 ರಂದು ಉದ್ಘಾಟನೆಯಾಯಿತು. ಆದರೆ ಆ ದೇವಾಲಯದ ಮೇಲೆ ನಿನ್ನೆ (25-11-2025) ರಂದು ಧರ್ಮಧ್ವಜವನ್ನು ಹಾರಿಸುವ ಮೂಲಕ ನಮ್ಮ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಮಂದಿರ ಸ್ಥಾಪನೆಗೆ ಪೂರ್ಣತೆಯನ್ನು ಕೊಟ್ಟರು. ಶ್ರೀರಾಮನ ವಿವಾಹದ ದಿನವೆಂದು ನಂಬಲಾದ ಸ್ಕಂದ ಪಂಚಮಿಯ ಈ ಸಂದರ್ಭದಲ್ಲಿ ಮಾತಾಡಿದ ಅವರು “ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ನಮ್ಮ ದೇಶದಲ್ಲಿನ್ನೂ ಗುಲಾಮಿ ಮಾನಸಿಕತೆ ಮುಂದುವರಿದಿದೆ. ನಾವಿನ್ನೂ ನಮ್ಮದೇ ಅಸ್ಮಿತೆಯ ಆತ್ಮನಿರ್ಭರತೆಯನ್ನು ಸಾಧಿಸಿಲ್ಲ. ಅದಕ್ಕೆ 190 ವರ್ಷಗಳ ಹಿಂದೆ  ಅಂದರೆ 1835 ರಲ್ಲಿ ಬ್ರಿಟಿಷ್ ಪಾದ್ರಿ ಮೆಕಾಲೆ ಸ್ಥಾಪಿಸಿದ  ಇಂಗ್ಲಿಷ್ ಶಿಕ್ಷಣವೇ ಕಾರಣ. ಆತನನ್ನು ಲಾರ್ಡ್ ಎಂಬಲ್ಲಿಂದಲೇ ನಮ್ಮ ದಾಸ್ಯಭಾವ ವ್ಯಕ್ತವಾಗುತ್ತದೆ. ಅದನ್ನು ಹೊಸ ಶಿಕ್ಷಣ ನೀತಿಯ ಮೂಲಕ ಇನ್ನು ಹತ್ತು ವರ್ಷಗಳಲ್ಲಿ ನಿವಾರಿಸುತ್ತೇವೆ” ಎಂಬುದಾಗಿ ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿಯವರು ಶಪಥ ಮಾಡಿದ್ದಾರೆ. ಈ ಶಪಥವನ್ನು ಸಾಧಿಸುವ ಸಾಮರ್ಥ್ಯ ಅವರಿಗೆ ಇದೆ ಎಂಬುದನ್ನು ಕಳೆದ ಹನ್ನೆರಡು ವರ್ಷಗಳ ಆಡಳಿತದಲ್ಲಿ ಅವರು ತೋರಿಸಿ ಕೊಟ್ಟಿದ್ದಾರೆ. 2020 ರ ಹೊಸ ಶಿಕ್ಷಣ ನೀತಿ (ಓಇP) ಈಗಾಗಲೇ ಅವರ ಕೈಯಲ್ಲಿದೆ. ಅದು ಸಮರ್ಥವಾಗಿ ಇನ್ನೂ ಜಾರಿಯಾಗಿಲ್ಲ. ನಮ್ಮಲ್ಲಿ ಇಂಗ್ಲಿಷ್ ಭ್ರಾಂತಿಯ ರೋಗ ಇನ್ನೂ ಗುಣವಾಗಿಲ್ಲ. ಅದನ್ನು ಗುಣ ಮಾಡುವುದು ಸುಲಭವೂ ಅಲ್ಲ. ಸಂಪೂರ್ಣ ಅಪ್ರಜಾಸತ್ತಾತ್ಮಕವಾದ ಶಿಕ್ಷಣ ವ್ಯವಸ್ಥೆ ಕೇನ್ಸರ್‍ನಂತೆ ಹಬ್ಬುತ್ತಿದೆ. ಅದನ್ನು ಗುಣಪಡಿಸಲು ಪರಿಣಾಮಕಾರಿ ಶಸ್ತ್ರಚಿಕಿತ್ಸೆ ಆಗಬೇಕು. ಪ್ರಧಾನಿ ಮೋದಿಯವರಷ್ಟೇ ಅದನ್ನು ಮಾಡಲು ಶಕ್ತರು.
ಪಾಕಿಸ್ತಾನದ ಆಕ್ರಮಣಕಾರಿ ಮುಸಲ್ಮಾನರನ್ನು ನುಗ್ಗಿ ಹೊಡೆಯಬಲ್ಲ ಸಾಮರ್ಥ್ಯವನ್ನು ಪ್ರದರ್ಶಿಸಿ ಮೋದಿಯವರು ಇಂದು ವಿಶ್ವಮಾನ್ಯರಾಗಿದ್ದಾರೆ. ಆದರೆ ಆಹಾರದಲ್ಲಿ ನುಸುಳಿ ಬರುವ ರೋಗಾಣುಗಳಂತೆ ದೇಹವನ್ನು ಪ್ರವೇಶಿಸಿ ಕಾಯಿಲೆ ಹರಡುವ ಬ್ಯಾಕ್ಟೀರಿಯಾಗಳಂತಹ ಕ್ರಿಶ್ಚಿಯನ್ನರ ಪ್ರಭಾವವನ್ನು ತಗ್ಗಿಸಲು ನಮ್ಮ ಶಿಕ್ಷಣ ಕ್ಷೇತ್ರದಲ್ಲೇ ಶುದ್ಧೀಕರಣ ಆಗಬೇಕು. ಅದಕ್ಕೆ ನಮ್ಮ ದೇಶದ ಭಾಷೆಗಳಲ್ಲಿ ನಮ್ಮ ದೇಶದ ಸಂಸ್ಕೃತಿಯನ್ನು ಕಲಿಸುವ ಕಾರ್ಯವು ಸಮರ್ಥವಾಗಿ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯ ಮೂಲಕವೇ ಆಗಬೇಕಾಗಿದೆ. ಅಂತಹ ಒಂದು ಉಪಕ್ರಮವನ್ನು 2020 ರ ಶಿಕ್ಷಣ ನೀತಿಯಲ್ಲಿ ಪ್ರತಿಪಾದಿಸಲಾಗಿದೆ. ಈವರೇಗೆ ಈ ಕುರಿತಾಗಿ ಗಂಭೀರವಾಗಿ ಕಾರ್ಯ ಯೋಜನೆಯನ್ನು ರೂಪಿಸದಿರುವ ಮೋದಿಯವರು ಅಯೋಧ್ಯೆಯಲ್ಲಿ ಧರ್ಮಧ್ವಜ ಆರೋಹಣವನ್ನು ನಡೆಸಿ ಮಾಡಿದ ಭಾಷಣದಲ್ಲಿ ಶಿಕ್ಷಣ ಸುಧಾರಣೆಯ ಮೂಲಕ ಭಾರತೀಯರೊಳಗೆ ಇರುವ ದಾಸ್ಯ ಭಾವವನ್ನು ಮುಂದಿನ ಹತ್ತು ವರ್ಷಗಳಲ್ಲಿ ತೊಳೆದು ಬಿಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
2020ರಲ್ಲಿ ಸ್ವೀಕೃತವಾದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಎಲ್ಲ ರಾಜ್ಯಗಳಲ್ಲಿ ಆಯಾ ಪ್ರಾದೇಶಿಕ ಭಾಷೆಗಳಲ್ಲಿಯೇ ಪ್ರಾಥಮಿಕ ಶಿಕ್ಷಣ ಇರಬೇಕು ಎಂಬ ನೀತಿಯನ್ನು ಹೇಳಲಾಗಿದೆ. ಆದರೆ ಈ ಬಗ್ಗೆ ಕೇಂದ್ರ ಸರಕಾರ ಹೇಗೆ ಬದ್ಧತೆಯನ್ನು ತೋರಿದೆ ಎನ್ನುವುದಕ್ಕೆ ಪುರಾವೆ ಇರಲಿಲ್ಲ. ಇನ್ನು ಪಿ.ಎಂ. ಶ್ರೀ. ಎಂಬ ಹೆಸರಲ್ಲಿ ದೇಶಾದ್ಯಂತ 14,500 ಶಾಲೆಗಳನ್ನು ತೆರೆಯುವ ಯೋಜನೆ ಇದ್ದರೂ ಅದು ರಾಜ್ಯಗಳ ಸ್ಥಳೀಯ ಭಾಷಾ ಶಿಕ್ಷಣವನ್ನು ಬೆಂಬಲಿಸುವ ಬದಲು ಇಂಗ್ಲಿಷ್ ಮಾಧ್ಯಮದಲ್ಲಿ ಶಾಲೆಗಳನ್ನು ತೆರೆಯಿತು. ಮೊದಲೇ ಅಸ್ತಿತ್ವದಲ್ಲಿದ್ದ ಪ್ರಾಥಮಿಕ ಶಾಲೆಗಳಿಗೆ ಇವು ಮತ್ತೊಂದು ಸ್ತರವನ್ನು ಕೂಡಿಸಿದಂತಾಯಿತೇ ಹೊರತು ಸಾಮಾಜಿಕ ಸಮಾನತೆಗೆ ದಾರಿಯಾಗಲಿಲ್ಲ.
ರಾಮನೆಂದರೆ ಧ್ಯಾನ, ವಿವೇಕ, ಧೈರ್ಯ, ಕೋಮಲತೆ ಮುಂತಾದ ಮಾನವೀಯ ಗುಣಗಳ ಖನಿ. ಈ ಗುಣಗಳು ಸ್ವದೇಶಿಯವಾಗಿ ಮೈಗೂಡಲು ಭಾರತೀಯ  ಭಾಷೆಗಳಲ್ಲಿ ಶಿಕ್ಷಣ ಇಲ್ಲಿ ಪ್ರಚಲಿತವಾಗಿರಬೇಕಾಗಿತ್ತು. ಹಾಗಾಗಿದ್ದರೆ ಇನ್ನೀಗ  ಶಿಕ್ಷಣ ಸುಧಾರಣೆಯ ಬೃಹತ್ ಹೊರೆ ಬೀಳುತ್ತಿರಲಿಲ್ಲ. ಈ ಹಿಂಬೀಳಿಕೆಗೆ ಕಾರಣವೆಂದರೆ ನಮ್ಮ ದೇಶದಲ್ಲಿದ್ದ ಒಗ್ಗಟನ್ನು ವಿಘಟಿಸುವ ಉಪಾಯವಾಗಿ ಬ್ರಿಟಿಷರು ಇಲ್ಲಿಯ ಜ್ಞಾನವನ್ನು ಹೀಗಳೆದರು. ಅರ್ಥಾತ್ ಇಲ್ಲಿಯ ಶಿಕ್ಷಣ ಪದ್ಧತಿಯನ್ನು ಹಾನಿಗೊಳಿಸದ ಹೊರತು ಭಾರತವನ್ನು ಆಳಲು ಸಾಧ್ಯವಿಲ್ಲದಿರುವ ಸವಾಲು ಇದಿರಾಗಿತ್ತು.
ಈ ಸವಾಲನ್ನು ಇದಿರಿಸಲು ತಯಾರಾದದ್ದೇ ಮೆಕಾಲೆ ಪ್ರಾಯೋಜಿತ ಶಿಕ್ಷಣ ನೀತಿ. ದೇಶೀಯ ಭಾಷೆ ಮತ್ತು ಪಠ್ಯಗಳ ಪರವಾಗಿದ್ದ 1813ರ ಚಾರ್ಟರ್ ಕಾಯ್ದೆಯನ್ನು ಬದಿಗಿಟ್ಟು 1835ರಲ್ಲಿ ಮೆಕಾಲೆ ಪ್ರಾಯೋಜಿತ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಯಿತು. ಅದರ ಪ್ರಕಾರ ಶಿಕ್ಷಣದ ಉದ್ದೇಶವು ಕಚೇರಿಗಳಲ್ಲಿ ಸಾರ್ವಜನಿಕ ಕರ್ತವ್ಯಗಳನ್ನು ನಿರ್ವಹಿಸಲು ವ್ಯಕ್ತಿಗಳನ್ನು ಸಿದ್ಧಪಡಿಸುವುದಾಗಿತ್ತು. ಅಂದರೆ ಗುಮಾಸ್ತರನ್ನು ತಯಾರಿಸಿ ಆಡಳಿತ ನಿರ್ವಹಣೆಗೆ ನೇಮಿಸುವುದು ಅಗತ್ಯವಾಗಿತ್ತು. ಇದರಿಂದ ಒಂದೇ ಕಲ್ಲೆಸೆದು ಎರಡು ಹಣ್ಣುಗಳನ್ನು ಉದುರಿಸಿದ ಲಾಭ ಅವರಿಗಾಯಿತು. ಒಂದನೇಯದಾಗಿ ಇಂಗ್ಲೆಂಡಿನಿಂದ ಕಚೇರಿ ಕೆಲಸಕ್ಕಾಗಿ ಜನ ತಂದು ದುಬಾರಿ ವೇತನ ನೀಡುವ ಬದಲು ಕಡಿಮೆ ವೇತನಕ್ಕೆ ಸ್ಥಳೀಯರೇ ಸಿಕ್ಕಿದ್ದು ಒಂದು ಲಾಭ. ಇನ್ನೊಂದೆಂದರೆ, ಆಡಳಿತಾತ್ಮಕ ಸಮಸ್ಯೆಗಳು ಉಂಟಾದಾಗ ಬ್ರಿಟಿಷರ ಪರವಾಗಿ ಭಾರತೀಯ ಹೋರಾಟಗಾರರನ್ನು ಎದುರಿಸುವ ಮೊದಲ ಪಡೆ ಭಾರತೀಯರದ್ದೇ ಆಗಿರುತ್ತದೆ. ಮುಖ್ಯವಾಗಿ ಪೆÇೀಲೀಸ್ ಇಲಾಖೆಯಲ್ಲಿದ್ದ ಭಾರತೀಯರು ಸ್ವತಃ ದೇಶೀಯರ ಮೇಲೆಯೇ ಗುಂಡು ಹಾರಿಸಿದ ಅದೆಷ್ಟೋ ಘಟನೆಗಳು ನಡೆದುವು. ಇದರ ಹಿಂದೆ ಮೆಕಾಲೆ ಶಿಕ್ಷಣದ ನೀತಿ ಕೆಲಸ ಮಾಡಿದೆ.
ಭಾರತೀಯರಲ್ಲಿ ಭಾರತೀಯತೆಯನ್ನು ಸಂಪೂರ್ಣವಾಗಿ ಕತ್ತರಿಸಿ ತೆಗೆಯುವ ಈ ಕೆಳಗಿನ ಸೂಚನೆಗಳು ಮೆಕಾಲೆ ನೀತಿಯಲ್ಲಿದ್ದುವು.
  1. ಸಂಸ್ಕೃತ ಮತ್ತು ಅರೆಬಿಕ್ ಭಾಷೆಗಳಲ್ಲಿ ಪುಸ್ತಕಗಳ ಪ್ರಕಟಣೆಗೆ ಸರಕಾರ ನೀಡುತ್ತಿದ್ದ ಬೆಂಬಲವನ್ನು ನಿಲ್ಲಿಸಬೇಕು.
  2. ಬನಾರಸ್‍ನ ಹಿಂದೂ ಕಾಲೇಜ್ ಹಾಗೂ ದೆಹಲಿಯ ಮದರಸಾದ ಹೊರತಾಗಿ ಸಾಂಪ್ರದಾಯಿಕ ಶಿಕ್ಷಣಕ್ಕೆ ನೀಡುವ ಸಹಾಯಧನ  ನಿಲ್ಲಿಸಬೇಕು.
  3. ಇನ್ನು ಮುಂದೆ ಇಂಗ್ಲಿಷನ್ನು ಬೋಧನಾ ಭಾಷೆಯಾಗಿ ಹೊಂದಿರುವ ಪಾಶ್ಚಿಮಾತ್ಯ ಶಿಕ್ಷಣಕ್ಕೆ ಮಾತ್ರ ಅನುದಾನ ನೀಡಬೇಕು.
  4. ಭಾರತೀಯರು ಇಂಗ್ಲಿಷನ್ನು ಕಲಿಯುವುದು ಅಗತ್ಯವಾಗಿದೆ. ಅಲ್ಲದೆ ಸ್ಥಳೀಯರು ತಮ್ಮ ಭಾಷೆಗಳ ಬದಲಾಗಿ ಇಂಗ್ಲಿಷ್ ಕಲಿಯಲು ಬಯಸುತ್ತಾರೆ. ಹಾಗಾಗಿ ಈ ದೇಶದವರನ್ನು ಸಂಪೂರ್ಣವಾಗಿ ಇಂಗ್ಲಿಷ್ ವಿದ್ವಾಂಸರನ್ನಾಗಿ ಮಾಡಲು ಸಾಧ್ಯವಿದೆ.
ಮೆಕಾಲೆ ತನ್ನ ನೀತಿಗಳನ್ನು ಜಾರಿಗೊಳಿಸುವಂತೆ ಬ್ರಿಟಿಷ್ ಸರಕಾರವನ್ನು ಒತ್ತಾಯಿಸುತ್ತ ಇಂಗ್ಲಿಷ್ ಸಾಹಿತ್ಯವೇ ಸಂಸ್ಕೃತ ಮತ್ತು ಅರೆಬಿಕ್‍ಗಿಂತ ಶ್ರೇಷ್ಟವೆಂದು ಹೇಳಿದರು. ಯುರೋಪಿಯನ್ನರ ಶ್ರೇಷ್ಠತೆ ಅಳತೆ ಮೀರಿದ್ದು ಎಂದು ಪ್ರತಿಪಾದಿಸಿದರು. ಸಂಸ್ಕೃತ ಸಾಹಿತ್ಯದ ಒಟ್ಟು ಸಂಗ್ರಹವು ಇಂಗ್ಲೆಂಡಿನ ಪ್ರಾಥಮಿಕ ಹಂತದಲ್ಲಿ ಕಲಿಸುವುದಕ್ಕಿಂತ ಕಡಿಮೆ ಇದೆ ಎಂದರು. ಇಡೀ ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಮಾಡುವುದು ಬ್ರಿಟಿಷರ ಅಗತ್ಯವಲ್ಲ, ಬದಲಿಗೆ, “ನಾವು ಮತ್ತು ನಾವು ಆಳುತ್ತಿರುವ ಲಕ್ಷಾಂತರ ಜನರ ನಡುವೆ ವ್ಯಾಖ್ಯಾನಕಾರರಾಗಬಹುದಾದ ಸೇವಕರಿಗಷ್ಟೇ ಶಿಕ್ಷಣ ನೀಡಿದರೆ ಸಾಕು. ಏಕೆಂದರೆ ನಮಗೀಗ ಬೇಕಾಗಿರುವುದು ರಕ್ತ ಮತ್ತು ಬಣ್ಣದಲ್ಲಿ ಭಾರತೀಯರಾಗಿದ್ದು ಅಭಿರುಚಿ, ಅಭಿಪ್ರಾಯ, ನೈತಿಕತೆ ಹಾಗೂ ಬುದ್ಧಿಶಕ್ತಿಯಲ್ಲಿ ಇಂಗ್ಲಿಷ್‍ರಂತೆ ಆಗಿರುವ ವ್ಯಕ್ತಿಗಳ ವರ್ಗ”.
ಭಾರತದಲ್ಲಿ ಇಂಗ್ಲಿಷ್ ಶಿಕ್ಷಣದ ಅಡಿಪಾಯವನ್ನು ಗಟ್ಟಿಗೊಳಿಸಿದ ಮೆಕಾಲೆಯ ಬಯಕೆ ಏನಿತ್ತೆಂದರೆ ಪಾಶ್ಚಿಮಾತ್ಯೀಕರಣದೊಂದಿಗೆ ಭಾರತೀಯರು ಸಂಸ್ಕೃತಿ ಮತ್ತು ಧರ್ಮವನ್ನು ತೊರೆಯಬೇಕೆಂಬುದಾಗಿತ್ತು. ತನ್ನ ತಂದೆಗೆ ಬರೆದ ಪತ್ರದಲ್ಲಿ ಆತ ತನ್ನ ಯಶಸ್ಸನ್ನು ವಿವರಿಸುವಾಗ “ಹಿಂದುಗಳ ಮೇಲೆ ಈ ಶಿಕ್ಷಣದ ಪರಿಣಾಮ ಅದ್ಭುತವಾಗಿದೆ. ಇಂಗ್ಲಿಷ್ ಶಿಕ್ಷಣ ಪಡೆದ ಯಾರೇ ಹಿಂದೂ ಎಂದಿಗೂ ತನ್ನ ಧರ್ಮಕ್ಕೆ ಮರಳುವುದಿಲ್ಲ. ಬದಲಿಗೆ ಆತ ತನ್ನ ಹಿಂದೂ ಧರ್ಮ ಮತ್ತು ಪುರಾಣಗಳನ್ನು ಲೇವಡಿಮಾಡುತ್ತಾನೆ ” ಎಂದಿದ್ದಾನೆ. ಮೆಕಾಲೆಯ ಈ ನಿರೀಕ್ಷೆ ಸತ್ಯ ಎಂಬುದನ್ನು ಆಧುನಿಕ ಭಾರತದ ಶೈಕ್ಷಣಿಕ ವಲಯ ತೋರಿಸುತ್ತಿದೆ. ಇಂದಿನ ಎಡಪಂಥೀಯರು ಮೆಕಾಲೆ ಚಿಂತನೆಯ ಶಿಶುಗಳಾಗಿದ್ದಾರೆ. ಆರಂಭದಲ್ಲಿ ಗಣ್ಯರು ಮಾತ್ರ ಉನ್ನತ ಇಂಗ್ಲಿಷ್ ಶಿಕ್ಷಣವನ್ನು ಪಡೆದು ಅಧಿಕಾರಶಾಹಿಯಲ್ಲಿ ಸೇರಿಕೊಂಡು ಲಾಭಗಳನ್ನು ಗಳಿಸಿದರು. ಪರಿಣಾಮವಾಗಿ ಭಾರತದಾದ್ಯಂತ ಧಾರ್ಮಿಕ ಹಾಗೂ ಸಾಂಸ್ಕೃತಿಕ ವಿಭಜನೆ ಸಂಭವಿಸಿತು. ಈ ನವ ಬ್ರಿಟಿಷರು ತಮ್ಮ ಪೀಳಿಗೆಗೆ ಮಾತ್ರ ಪೂರ್ತಿಯಾಗಿ ಇಂಗ್ಲಿಷನ್ನು ಕಲಿಸಿದರು. ದೇಶೀಯ ಭಾಷಾ ಶಿಕ್ಷಣವು ಸರಕಾರದಿಂದ ಕಡಿಮೆ ಹಣವನ್ನು ಪಡೆಯತೊಡಗಿತು. ಅದರೆ ಇಂಗ್ಲಿಷ್ ಶಾಲೆಗಳಿಗೆ ಅನುದಾನ ದೊರಕತೊಡಗಿತು. ಇಂಗ್ಲಿಷನ್ನು ಆಡಳಿತ ಭಾಷೆಯಾಗಿ ಮಾಡಿದ್ದಲ್ಲದೆ ಮೊಘಲ್ ಸಾಮ್ರಾಜ್ಯದ ನ್ಯಾಯಾಲಯಗಳಲ್ಲಿದ್ದ ಪರ್ಶಿಯನ್ ಬದಲಿಗೆ ಇಂಗ್ಲಿಷನ್ನು ಉತ್ತೇಜಿಸಲಾಯಿತು. ಇಂದು ಭಾರತ ಸ್ವತಂತ್ರಗೊಂಡು 75 ವರ್ಷ ಕಳೆದರೂ ನ್ಯಾಯಾಲಯಗಳಲ್ಲಿ ಇಂಗ್ಲಿಷ್ ಭಾಷೆ ಮತ್ತು “ “ಒಥಿ ಐoಡಿಜ” ಸಂಸ್ಕೃತಿ ಮುಂದುವರಿದಿದೆ.
ಬ್ರಿಟಿಷರು ಭಾರತವನ್ನು ಬಿಟ್ಟು ಹೋದಾಗ ದೇಶಾದ್ಯಂತ ಸಂವಹನ ಭಾಷೆಯಾಗಿ ಇಂಗ್ಲಿಷ್ ವ್ಯಾಪಿಸಿತ್ತು. ಅಲ್ಲದೆ ಅಂತಾರಾಷ್ಟ್ರೀಯವಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಸಾರವು ಇಂಗ್ಲಿಷನಲ್ಲೇ ಆಗುತ್ತಿದೆ. ಆದರೆ ಅದನ್ನು ಒಂದು ಭಾಷೆಯಾಗಿ ಕಲಿತು ಆರ್ಥಿಕ ಪ್ರಯೋಜನಗಳನ್ನು ಸಾಧಿಸಬಹುದು. ಹಾಗೆಂದು ಎಲ್ಲ ಪಠ್ಯಗಳನ್ನು ಇಂಗ್ಲಿಷನಲ್ಲೇ ಕಲಿತರೆ ಸಾಂಸ್ಕೃತಿಕ ಖಾಲಿತನವು ಬಾಧಿಸುತ್ತದೆ. ನಾವು ನಮ್ಮ ನೆಲದ ಸಂಸ್ಕೃತಿಯನ್ನು ಮರೆಯುತ್ತೇವೆ. ಇದನ್ನು ತಪ್ಪಿಸಲು ಕನಿಷ್ಟ ಪ್ರಾಥಮಿಕ ಹಂತದಲ್ಲಿ ಪ್ರಾದೇಶಿಕ ಭಾಷಾ ಶಿಕ್ಷಣ ಮಾಧ್ಯಮದ ಅಗತ್ಯವಿದೆ. ಇದನ್ನು 2020ರ ಹೊಸ ಶಿಕ್ಷಣ ನೀತಿಯಲ್ಲಿ ಪ್ರತಿಪಾದಿಸಲಾಗಿದೆ. ಸನ್ಮಾನ್ಯ ಮೋದಿಯವರು ಇದನ್ನು ಮುಂದಿನ ಹತ್ತು ವರ್ಷಗಳಲ್ಲಿ ಸಾಧಿಸಿ 2035 ಕ್ಕಾಗುವಾಗ ಮೆಕಾಲೆ ಪ್ರಾಯೋಜಿತ ಶಿಕ್ಷಣ ವ್ಯವಸ್ಥೆಗೆ ಪ್ರತಿಯಾಗಿ ದೇಸೀಯ ವ್ಯವಸ್ಥೆಯನ್ನು ತರುವುದಾಗಿ ಪ್ರತಿಜ್ಞೆ ಮಾಡಿರುವುದು ಒಂದು ಐತಿಹಾಸಿಕ ಪರಿವರ್ತನೆಗೆ ಮುನ್ನುಡಿಯಾಗಲಿದೆ. ಎಲ್ಲಾ ಶಾಲೆಗಳೂ ಪ್ರಾಥಮಿಕ ಹಂತದಲ್ಲಿ ಪ್ರಾದೇಶಿಕ ಭಾಷಾ ಮಾಧ್ಯಮದಲ್ಲೇ ಕಲಿಸಬೇಕೆಂದು ಅವರು ಮುಲಾಜಿಲ್ಲದೆ ಶಾಸನ ಮಾಡಿದರೆ ಅದು ಖಂಡಿತಕ್ಕೂ ಜಾರಿಗೆ ಬರುತ್ತದೆ. ಮತದಾರರ ಪಟ್ಟಿಗಳ ತೀವ್ರ ಪರಿಷ್ಕರಣೆ (Special Intensive Revision [SIR]) ಜಾರಿಗೆ ಬಂದಾಗ ಅಕ್ರಮ ವಲಸಿಗರು ಪಲಾಯನ ಮಾಡಿದಂತೆ ಇಂಗ್ಲಿಷ್ ಮಾಧ್ಯಮದ ಭ್ರಮಾತ್ಮಕ ಗೀಳು ಮರೆಯಾಗಬಹುದು. ಇದು ಮೋದಿಯವರಿಂದ ಮಾತ್ರ ಸಾಧ್ಯ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

Published by
ಡಾ.ಚಂದ್ರಶೇಖರ ದಾಮ್ಲೆ

Recent Posts

2025-26 ರಲ್ಲಿ ಅಡಿಕೆ ಕೊಳೆರೋಗ ಮತ್ತು ಎಲೆಚುಕ್ಕಿ ರೋಗ ಪ್ರಕರಣ ವರದಿಯಾಗಿಲ್ಲ…!

ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…

13 hours ago

ಮನೆಯ ಮೇಲ್ಛಾವಣಿಯನ್ನು ಕೃಷಿ ಭೂಮಿಯನ್ನಾಗಿಸಿದ ಆಸಿಯಾ ಇತರ ಮಹಿಳೆಯರಿಗೂ ಇಂದು ಮಾದರಿ..

ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…

14 hours ago

ನಮ್ಮ ಹೊಲ ನಮ್ಮ ದಾರಿ : ರಸ್ತೆಗೆ 12.5 ಲಕ್ಷ ಸಹಾಯಧನ

ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…

14 hours ago

2025-26 ನೇ ಸಾಲಿನ ಕೃಷಿ ಇಲಾಖೆ ಸಹಾಯಧನ ಯೋಜನೆಗಳು

ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…

14 hours ago

ಕುಕ್ಕುಟ ಸಂಜೀವಿನಿ ಯೋಜನೆ : ಉಚಿತ ಕೋಳಿ ಮರಿ ಶೇಡ್ ನಿರ್ಮಾಣಕ್ಕೆ ಆರ್ಥಿಕ ನೆರವು

ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…

14 hours ago

ಹವಾಮಾನ ವರದಿ | 16-12-2025 | ಮೋಡ ಮಾತ್ರವೇ ಮಳೆ ಇದೆಯೇ…? | ಮುಂದೆ ಚಳಿಯ ಪ್ರಭಾವ ಹೇಗಿರಬಹುದು..?

17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…

1 day ago