ರಾಜ್ಯದಲ್ಲಿ ಅಡಿಕೆ ಬೆಳೆಗಾರರನ್ನು ಕಾಡುತ್ತಿರುವ ಅಡಿಕೆ ಎಲೆಚುಕ್ಕಿ ರೋಗದ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ನಡೆಯಿತು. ಎಲೆ ಚುಕ್ಕಿ ರೋಗ ನಿಯಂತ್ರಣದ ಪರಿಶೀಲನೆಗಾಗಿ ಕೇಂದ್ರ ಸರ್ಕಾರದ ವಿಜ್ಞಾನಿಗಳ ತಂಡ ಈಗಾಗಲೇ ರಾಜ್ಯಕ್ಕೆ ಭೇಟಿ ನೀಡಿದ್ದು, ತ್ವರಿತವಾಗಿ ಔಷಧಿ ಕಂಡು ಹಿಡಿಯುವ ಪ್ರಯತ್ನ ನಡೆಯುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಎಲೆಚುಕ್ಕಿ ರೋಗದ ಬಗ್ಗೆ ಸರ್ಕಾರದ ಕೈಗೊಂಡ ಕ್ರಮಗಳ ಬಗ್ಗೆ ಪ್ರಶ್ನೆ ಮಾಡಿದ ಪುತ್ತೂರು ಶಾಸಕ ಸಂಜೀವ ಮಠಂದೂರ್ ಹಾಗೂ ಶಾಸಕ ಉಮಾನಾಥ್ ಕೋಟ್ಯಾನ್ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ಆರಗ ಜ್ಞಾನೇಂದ್ರ , ಎಲೆ ಚುಕ್ಕಿ ರೋಗಕ್ಕೆ ಅಡಿಕೆ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ತುತ್ತಾಗುತ್ತಿದ್ದು, ಇತ್ತೀಚಿಗೆ ಈ ರೋಗ ಗಾಳಿ ಮೂಲಕ ಹೆಚ್ಚಾಗಿ ಹರಡುತ್ತಿದೆ ಎನ್ನಲಾಗುತ್ತಿದೆ. ಮುಖ್ಯಮಂತ್ರಿಗಳು ಇತ್ತೀಚೆಗೆ ಕೆಲ ಅಡಿಕೆ ತೋಟಗಳಿಗೆ ಭೇಟಿ ನೀಡಿದ್ದು, ರೋಗ ನಿಯಂತ್ರಣದೊಂದಿಗೆ ಬೆಳೆಗಾರರ ನೆರವಿಗೆ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ. ವಿಜ್ಞಾನಿಗಳು ಈ ನಿಟ್ಟಿನಲ್ಲಿ ಸಾಕಷ್ಟು ಸಂಶೋಧನೆಗಳನ್ನು ಮಾಡುತ್ತಿದ್ದಾರೆ ಎಂದರು.
ಈಗಾಗಲೇ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ರೋಗದ ಔಷಧಿ ಕಂಡು ಹಿಡಿಯುವ ಸಲುವಾಗಿಯೇ ತೋಟಗಾರಿಕೆ ವಿವಿಗಳಿಗೆ ರೂ.4 ಕೋಟಿಯಷ್ಟು ಹಣ ಬಿಡುಗಡೆ ಮಾಡಲಾಗಿದೆ ಹಾಗೂ ಏಲಕ್ಕಿ, ಕಾಳುಮೆಣಸು ಬೆಳೆಗಾರರ ಸಲಕರಣೆಗಳ ಖರೀದಿಗೆ ಕೃಷಿ ಸಿಂಚಾಯಿ ಯೋಜನೆಯಡಿ ಸಹಾಯಧನ ನೀಡಲಾಗುತ್ತಿದೆ. ಸಹಾಯಧನವು ಪರಿಶಿಷ್ಟ ಜಾತಿ, ಪಂಗಡಗಳಿಗೆ ಶೇ.90 ಇದ್ದು ಸಾಮಾನ್ಯ ವರ್ಗಗಳಿಗೆ ಶೇ.70 ಇದೆ ಎಂದರು. ಅಡಿಕೆ ಕೀಳುವ ದೋಟಿಗಳ ಬೆಲೆ ಜಾಸ್ತಿಯಿದ್ದು, ಅವುಗಳ ಖರೀದಿಗಾಗಿ ರೂ.30 ಸಾವಿರದಷ್ಟು ಸಬ್ಸಿಡಿ ನೀಡಲಾಗುತ್ತಿದೆ ಎಂದರು. 1962ರಿಂದ ಈ ರೋಗ ಇದೆ. ವಿಜ್ಞಾನಿಗಳ ಪ್ರಕಾರ ಮಳೆ ಮತ್ತು ಮೋಡದಿಂದ ಬಂದಿದೆ ಎಂದು ಸದನಕ್ಕೆ ಅರಗ ಜ್ಞಾನೇಂದ್ರ ವಿವರಿಸಿದರು.
ಪರ್ಯಾಯ ಬೆಳೆ ಬಗ್ಗೆ ಮಾತನಾಡುವಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಹಾರ ಬೆಳೆ ಬೆಳೆಯಲು ಸಾಧ್ಯವಿಲ್ಲ. ತೆಂಗು, ಅಡಿಕೆ, ಏಲಕ್ಕಿ, ಕಾಳು ಮೆಣಸು ಬೆಳೆಯುತ್ತಿದ್ದಾರೆ. ಸಬ್ಸಿಡಿ ಕೊಡುವ ಕೆಲಸ ಮಾಡಲಾಗಿದೆ ಎಂದರು.
ಕಾಂಗ್ರೆಸ್ ಪಕ್ಷದ ಉಪನಾಯಕ ಯು.ಟಿ ಖಾದರ್ ಪ್ರಶ್ನೆ ಮಾಡಿ, ಅಡಿಕೆ ಕರಾವಳಿ ಮತ್ತು ಮಲೆನಾಡಿನ ಪ್ರಮುಖ ಬೆಳೆ. ತಡ ಮಾಡದಂತೆ ಕೊಳೆ ರೋಗ ಬಂದಾಗ ಅಡಿಕೆ ಬೆಳೆಗಾರರಿಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ತೋಟಗಾರಿಕಾ ಸಚಿವರ ಸಭೆಯಲ್ಲಿ ಎಲೆಚುಕ್ಕಿ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗಿದೆ, ವಿಸ್ತಾರವಾಗುತ್ತಿರುವ ಅಡಿಕೆ ಬೆಳೆ ಪ್ರದೇಶವನ್ನು ಗಮನಿಸಿದರೆ ಮುಂದೊಂದು ದಿನ ಬೆಲೆ ಕುಸಿದು ಬೀಳುವ ಆತಂಕವಿದೆ ಎಂದರು.