ಭಾರತೀಯ ಚಿಂತನೆಗಳಲ್ಲಿ ಸತ್ಯ ಮತ್ತು ಧರ್ಮ ಎಂಬ ಪರಿಕಲ್ಪನೆಗಳು ಜೀವಜಗತ್ತಿನ ನಿಲುವಂಗಿಯಂತೆ ಪರಿಗಣಿಸಲ್ಪಟ್ಟಿವೆ. “ಸತ್ಯಂ ವದ, ಧರ್ಮಂ ಚರ” (ತೈತ್ತಿರೀಯ ಉಪನಿಷತ್) ಎಂಬ ಉಪದೇಶವು ವ್ಯಕ್ತಿ ಜೀವನದ ಅಡಿಪಾಯವನ್ನು ಸೂಚಿಸುತ್ತದೆ. ಸತ್ಯಪ್ರಾಮಾಣಿಕತೆಯಿಲ್ಲದ ಬದುಕು ಶೂನ್ಯ, ನೈತಿಕತೆ ಇಲ್ಲದ ಸಮಾಜ ಅಶಾಂತ. ಆದ್ದರಿಂದಲೇ ಇವುಗಳು ಕೇವಲ ವ್ಯಕ್ತಿಗತ ಗುಣಗಳಲ್ಲ; ಬದಲಾಗಿ ಸಮಾಜದ ಸ್ಥಿರತೆಯ ಆಧಾರವಾಗಿಯೂ ಬೆಳಗುತ್ತವೆ.
ಪ್ರಾಮಾಣಿಕತೆ ಎಂಬುದು ಸತ್ಯನಿಷ್ಠತೆ, ನೈತಿಕತೆ ಎಂಬುದು ಧರ್ಮಾಧಾರಿತ ನಡತೆ. ಮನಸ್ಸಿನ ಸ್ವಚ್ಛತೆ ಮತ್ತು ಬಾಹ್ಯ ವರ್ತನೆಯ ಸಾತ್ವಿಕತೆ ಇವುಗಳ ಮೂಲಕ ವ್ಯಕ್ತಿಯ ಜೀವನದಲ್ಲಿ ಶಾಂತಿ ಮತ್ತು ಸಮಾಧಾನ ನೆಲಸುತ್ತವೆ. “ಧರ್ಮೋ ರಕ್ಷತಿ ರಕ್ಷಿತಃ” ಎಂಬ ಮಂತ್ರವು ಧರ್ಮವನ್ನು ಪಾಲಿಸುವವನನ್ನು ಧರ್ಮವೇ ರಕ್ಷಿಸುತ್ತದೆ ಎಂಬ ಶಾಶ್ವತ ಸತ್ಯವನ್ನು ಪ್ರತಿಪಾದಿಸುತ್ತದೆ.
ಸತ್ಯನಿಷ್ಠ ವ್ಯಕ್ತಿಯ ವಾಕ್ಯಗಳು ಸಮಾಜದಲ್ಲಿ ಗೌರವ ಪಡೆಯುತ್ತವೆ.ನೈತಿಕ ವ್ಯಕ್ತಿಯ ನಡೆ – ನುಡಿ ವಿಶ್ವಾಸದ ಬಲವಾಗುತ್ತದೆ.ಈ ಎರಡೂ ಗುಣಗಳು ಒಟ್ಟಾಗಿ ವ್ಯಕ್ತಿಗತ ಜೀವನವನ್ನು ಮಾತ್ರವಲ್ಲ, ಸಾಮಾಜಿಕ ಸಮತೋಲನ ಮತ್ತು ಆರ್ಥಿಕ–ಸಾಂಸ್ಕೃತಿಕ ಸಮೃದ್ಧಿಯನ್ನೂ ರೂಪಿಸುತ್ತವೆ.
ಇಂದಿನ ಯುಗದಲ್ಲಿ ಭೌತಿಕ ಪ್ರಗತಿ ವೇಗವಾಗಿ ಹೆಚ್ಚುತ್ತಿದೆ. ಆದರೆ ಈ ಪ್ರಗತಿಯ ದಾರಿಯಲ್ಲಿ ನೈತಿಕ ಮೌಲ್ಯಗಳು ಕುಸಿದರೆ ಆರ್ಥಿಕ, ರಾಜಕೀಯ, ಕುಟುಂಬ, ಶಿಕ್ಷಣ ಎಲ್ಲ ಕ್ಷೇತ್ರಗಳಲ್ಲಿಯೂ ಅಶಾಂತಿ, ಅನುಚಿತ ಸ್ಪರ್ಧೆ, ಭ್ರಷ್ಟಾಚಾರ, ಅವಿಶ್ವಾಸ ಇವು ಹೆಚ್ಚುತ್ತವೆ. ಸತ್ಯಪ್ರಾಮಾಣಿಕತೆಯಿಂದ ಕೂಡಿದ ನಡತೆಯು ಮಾತ್ರ ಶಾಶ್ವತ ಶಾಂತಿಯ ಭರವಸೆ ನೀಡುತ್ತದೆ.
ಮುಖ್ಯವಾಗಿ ಕುಸಿತಕ್ಕೆ ಕೆಳಗಿನ ಕಾರಣಗಳನ್ನು ಪಟ್ಟಿ ಮಾಡಬಹುದು…
- ಅತಿಭೌತಿಕಾಸಕ್ತಿ ಮತ್ತು ಸ್ಪರ್ಧೆ – ಬೇಗನೆ ಸಿರಿ, ಸ್ಥಾನ, ಕೀರ್ತಿ ಗಳಿಸಬೇಕೆಂಬ ಹಂಬಲ.
- ಮೌಲ್ಯಾಧಾರಿತ ಶಿಕ್ಷಣದ ಕೊರತೆ – ಬುದ್ಧಿವಂತಿಕೆ ಬೆಳೆಯುತ್ತಿದ್ದರೂ ಮನೋವಿಕಾಸದ ಅಭಾವ. ವಿದ್ಯೆ ಇದ್ದರೂ ವಿವೇಕ ಇಲ್ಲದೆ ಇರುವುದು.
- ಮಾಧ್ಯಮ ಮತ್ತು ಆಡಂಬರದ ಪ್ರಭಾವ – ತಾತ್ಕಾಲಿಕ ಪ್ರಸಿದ್ಧಿ ಮತ್ತು ವೈಭವದ ಮೋಹ.
- ಕುಟುಂಬ–ಸಮಾಜದ ಒತ್ತಡಗಳು – ಇತರರೊಂದಿಗೆ ಹೋಲಿಕೆಮಾಡುವ ಹಠ ಮತ್ತು ಅಸಹನಶೀಲತೆ.
ಈ ಕಾಲ ಘಟ್ಟದಲ್ಲಿ ಇದನ್ನು ಸುಧಾರಿಸಲು ಬೇಕಾದ ಅನಿವಾರ್ಯತೆ ಎಲ್ಲರಿಗಿದೆ. ಮೌಲ್ಯಾಧಾರಿತ ಶಿಕ್ಷಣಕ್ಕೆ ಒಟ್ಟು ಕೊಡುವುದರ ಮೂಲಕ ನೈತಿಕ ಪ್ರಜ್ಞೆಯನ್ನು ಜಾಗ್ರತ ಗೊಳಿಸನಹುದು.ಮಕ್ಕಳಿಗೆ ಧರ್ಮಶಾಸ್ತ್ರ, ಮಹಾಕಾವ್ಯ, ಮಹಾತ್ಮರ ಜೀವನಚರಿತ್ರೆಗಳ ಮೂಲಕ ನೈತಿಕ ಪಾಠ ನೀಡುವುದು ಅವರನ್ನು ಒಳ್ಳೆಯ ನಾಗರೀಕರನ್ನರಾಗಿ ರೂಪಿಸುತ್ತದೆ .
ಕುಟುಂಬದಲ್ಲಿ ಹಿರಿಯರು ತಮ್ಮ ನಡವಳಿಕೆಯ ಮೂಲಕ ಪ್ರಾಮಾಣಿಕತೆಯ ಪಾಠ ಕಲಿಸಬೇಕು.ಸಮಾಜದಲ್ಲಿ ಉತ್ತಮ ಮಾದರಿಗಳನ್ನು ಆದರ್ಶವಾಗಿ ತೋರಿಸಬೇಕು . ಪ್ರಾಮಾಣಿಕ ನಾಯಕರು, ಗುರುಗಳು, ಅಧಿಕಾರಿಗಳು ಮಾದರಿಯಾಗಬೇಕು. ಧಾರ್ಮಿಕ–ಸಾಂಸ್ಕೃತಿಕ ಪರಂಪರೆಯ ಪುನರುಜ್ಜೀವನ: ವೇದ, ಉಪನಿಷತ್ತು, ಮಹಾಭಾರತ–ರಾಮಾಯಣಗಳಿಂದ ಜೀವನೋಪಾಯದ ದಾರಿ ತಿಳಿಸಬೇಕು.
ಪ್ರಾಮಾಣಿಕತೆ–ನೈತಿಕತೆ ಇಲ್ಲದ ಸಮಾಜವು ಅವಿಶ್ವಾಸ, ಭಯ, ಅಶಾಂತಿಯ ಅಂಧಕಾರದಲ್ಲಿ ಮುಳುಗುತ್ತದೆ. ಧರ್ಮಾಧಾರಿತ ಬದುಕು ಮಾತ್ರ ಸಮಾಜಕ್ಕೆ ಸಮತೋಲನ, ವ್ಯಕ್ತಿಗೆ ಸಂತೋಷ, ರಾಷ್ಟ್ರಕ್ಕೆ ಸಮೃದ್ಧಿ ತರುತ್ತದೆ. ಪ್ರಾಮಾಣಿಕತೆ ಮತ್ತು ನೈತಿಕತೆ ಶಾಶ್ವತ ಮೌಲ್ಯಗಳು. ಅವು ಹಳೆಯದಾಗಿಲ್ಲ; ಬದಲಾಗಿ ಇಂದಿನ ಸಮಾಜಕ್ಕೆ ಅತ್ಯಂತ ಅಗತ್ಯವಾದ ದಾರಿದೀಪಗಳು.ಮುಂಡಕೋಪನಿಷತ್ (೩.೧.೬) ನ “सत्यमेव जयते नानृतं” (ಸತ್ಯಮೇವ ಜಯತೇ ನಾನೃತಂ) ಎಂಬ ಮಂತ್ರದಂತೆ, ಸತ್ಯವೇ ಜಯಶೀಲ. ಈ ನಂಬಿಕೆಯನ್ನು ಬದುಕಿನ ಕೇಂದ್ರದಲ್ಲಿ ಸ್ಥಾಪಿಸಿದಾಗ ಮಾತ್ರ ನಿಜವಾದ ಪ್ರಗತಿ ಸಾಧ್ಯ.


