ಕೇಂದ್ರ ಪುರಸ್ಕೃತ ಪ್ರಮುಖ ಯೋಜನೆಗಳಲ್ಲಿ ಒಂದಾದ, ರಾಷ್ಟ್ರೀಯ ತೋಟಗಾರಿಕಾ ಮಿಷನ್, ಬರ ಪೀಡಿತ ಜಿಲ್ಲೆ ಕೋಲಾರದ ರೈತರಿಗೆ ವರದಾನವಾಗಿ ಪರಿಣಮಿಸಿದೆ. ಯೋಜನೆಯಿಂದ ಜಿಲ್ಲೆಯಲ್ಲಿ , ಉತ್ತಮ ಗುಣಮಟ್ಟದ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಸಹಕಾರಿಯಾಗಿದ್ದು, ಹಣ್ಣುಗಳ ಇಳುವರಿಯೂ ಹೆಚ್ಚಾಗಿದೆ.ಸುಮಾರು 37 ಹೆಕ್ಟೇರ್ ಪ್ರದೇಶದಲ್ಲಿ ಪಾಲಿ ಹೌಸ್ ಮೂಲಕ ರೈತರು ಬೆಳೆ ಬೆಳೆಯಲು ಅನುಕೂಲವಾಗಿದೆ.
ಸರ್ಕಾರ ವಿವಿಧ ಯೋಜನೆಗಳನ್ನು ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಅಭಿವೃದ್ಧಿಗಾಗಿ ಹಮ್ಮಿಕೊಳ್ಳುತ್ತದೆ. ಆದರೆ ಯೋಜನೆಗಳು ಅಗತ್ಯ ಇರುವ ಕಡೆ ಹಲವು ಸಂದರ್ಭ ತಲಪುವುದಿಲ್ಲ. ಉದ್ದೇಶವೂ ಈಡೇರಿಕೆಯಾಗುವುದಿಲ್ಲ. ಇದಕ್ಕೆ ಅಧಿಕಾರಿಗಳು, ಇಲಾಖೆಗಳು ಮಾತ್ರಾ ಕಾರಣವಲ್ಲ ರೈತರು , ಗ್ರಾಮೀಣ ಭಾಗದ ಜನರೂ ಕಾರಣವಾಗುತ್ತಾರೆ. ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಅನುಷ್ಟಾನ ಮಾಡಬೇಕಾಗಿದೆ. ಅಂತಹ ಯೋಜನೆಗಳಲ್ಲಿ ಕೋಲಾರದಲ್ಲಿ ಈ ಬಾರಿ ಪಾಲಿ ಹೌಸ್ ಉತ್ತಮವಾದ ಪರಿಣಾಮ ಬೀರಿದೆ. ಹಲವು ಕಡೆ ಅನುಷ್ಟಾನವಾಗಿದೆ, ಉತ್ತಮ ಬೆಳೆಯೂ ಸಾಧ್ಯವಾಗಿದೆ.
ಕೋಲಾರ ತೋಟಗಾರಿಕಾ ಉಪ ನಿರ್ದೇಶಕ ಕುಮಾರಸ್ವಾಮಿ ಅವರ ಮಾಹಿತಿ ಪ್ರಕಾರ, ಬರಪೀಡಿತ ಜಿಲ್ಲೆ ಕೋಲಾರದ, ಸುಮಾರು 37 ಹೆಕ್ಟೇರ್ ಪ್ರದೇಶದಲ್ಲಿ ಪಾಲಿ ಹೌಸ್ ಗಳಿದ್ದು, ಕಾರ್ನೇಶಿಯಾ, ಕ್ಯಾಪ್ಸಿಕಂ, ಸೇವಂತಿಗೆ ಸೇರಿ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿದೆ, ಗುಣಮಟ್ಟ ಮತ್ತು ಇಳುವರಿಯಲ್ಲಿ ಹೆಚ್ಚಳವಾಗಿ ರೈತರ ಲಾಭಗಳಿಕೆ ಪ್ರಮಾಣ ವೃದ್ಧಿಯಾಗಿದೆ ಎನ್ನುತ್ತಾರೆ.
ತೋಟಗಾರಿಕೆ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ನಾಗರಾಜ್ ಅವರ ಪ್ರಕಾರ, ತೋಟಗಾರಿಕಾ ಮಿಷನ್ ಅಡಿಯಲ್ಲಿ ನೆರವು ಪಡೆದು, ಕೆಲವು ರೈತರು ನರ್ಸರಿಗಳನ್ನು ಆರಂಭಿಸಿ, ಉತ್ತಮ ಫಸಲು ನೀಡುವ ಸಸಿಗಳನ್ನು ಬೆಳೆಯುತ್ತಿದ್ದಾರೆ ಎನ್ನುತ್ತಾರೆ.
ಕೇಂದ್ರ ಸರ್ಕಾರದ ನೆರವಿನಿಂದ, ಪಾಲಿ ಹೌಸ್, ಪ್ಯಾಕ್ ಹೌಸ್ ಗಳ ಸೌಲಭ್ಯದಿಂದಾಗಿ ಹೆಚ್ಚಿನ ಲಾಭ ಗಳಿಕೆಗೆ ಸಹಕಾರಿಯಾಗುತ್ತಿದೆ . ಆದರೆ ಕೋಲಾರ ಜಿಲ್ಲೆಗೆ ಕೇಂದ್ರ ಪುರಸ್ಕೃತ ಯೋಜನೆಗಳಿಂದ ಸಿಗುತ್ತಿರುವ ಅನುದಾನ ಕಡಿಮೆಯಾಗಿದ್ದು, ಅದರ ಪ್ರಮಾಣ ಹೆಚ್ಚಳ ಮಾಡಬೇಕು ಎಂದು ರೈತರು ಹೇಳುತ್ತಾರೆ.


