ಕೃಷಿಯಲ್ಲಿ ಮಣ್ಣು ಪರೀಕ್ಷೆ ಅನಿವಾರ್ಯ ಏಕೆ ? | ಕೃಷಿ ವಿಜ್ಞಾನಿ ಹೇಳುತ್ತಾರೆ……

August 28, 2022
7:18 PM
ಕೃಷಿಯಲ್ಲಿ ಮಣ್ಣು ಪರೀಕ್ಷೆ ಏಕೆ ಬೇಕು, ಇದರಿಂದ ಏನು ಪ್ರಯೋಜನ ಹಾಗೂ ಅಗತ್ಯ ಏಕೆ? ಎಂಬುದರ ಬಗ್ಗೆ ಸಿಪಿಸಿಆರ್‌ಐ ವಿಜ್ಞಾನಿ ಡಾ.ಭವಿಷ್ಯ ಅವರು ಮಾಹಿತಿ ನೀಡಿದ್ದಾರೆ. ಅದರ ಯಥಾವತ್ತಾದ ರೂಪ ಇಲ್ಲಿದೆ….

ಮಣ್ಣು ಪರೀಕ್ಷೆ ಮಾಡಬೇಕೇ? ಮರದಲ್ಲಿ ಪೋಷಕಾಂಶದ ಕೊರತೆಯ ಲಕ್ಷಣ ನೋಡಿ ನಿರ್ಣಯಿಸಿದರೆ ಸಾಲದೇ?” ಅನುಭವಿ ಕೃಷಿಕರೊಬ್ಬರ ಪ್ರಶ್ನೆ. ಆ ಪ್ರಶ್ನೆಯನ್ನು ನಾನು ನಿರೀಕ್ಷಿಸಿರಲಿಲ್ಲ. ತಡವರಿಸಿ ಉತ್ತರಿಸಿದೆ.

Advertisement
Advertisement
Advertisement

ಮಣ್ಣಿನಲ್ಲಿರುವ ಪೋಷಕಾಂಶವು ವಲಯವಾರು, ಪ್ರದೇಶವಾರು ಮತ್ತು ತೋಟದಿಂದ ತೋಟಕ್ಕೆ ಸಾಕಷ್ಟು ವ್ಯತ್ಯಾಸ ಇರುತ್ತದೆ. ಅಷ್ಟೇಕೆ ತೋಟದೊಳಗೆ ಕೂಡ ಸ್ವಲ್ಪ ವ್ಯತ್ಯಾಸವಿರುತ್ತದೆ. ಈ ಅಂಶವನ್ನು ಅರಿತುಕೊಂಡು ಮಣ್ಣು ಮಾದರಿ ಸಂಗ್ರಹಿಸಬೇಕು ಹಾಗೂ ಪೋಷಕಾಂಶ ನೀಡಲು ಪರೀಕ್ಷಾ ವರದಿಯು ಮಾನದಂಡವಾಗಬಹುದು.

Advertisement

ಕೃಷಿ ವಿಚಾರ ವಿನಿಮಯ ಕಾರ್ಯಕ್ರಮ ಮಾಡುವಾಗ ನಾವು ಹೇಳೋದಿದೆ. “ಉದ್ಘಾಟನಾ ಸಮಾರಂಭ ಮುಗಿದು ಉಪಹಾರ ಸೇವಿಸಿದ್ದೇವೆ. ಈಗ ಚೈತನ್ಯದಿಂದ ಇದ್ದೀರಿ. ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ನಿಮ್ಮ ಮುಖದಲ್ಲಿ ಈ ಚೈತನ್ಯ ಇರೋದಿಲ್ಲ. ಆದರೆ, ಹೊಟ್ಟೆಯಲ್ಲಿ ಹಸಿವು ಇದ್ದರೂ ಅದರ ಲಕ್ಷಣವನ್ನು ನೀವು ತೋರ್ಪಡಿಸುವುದಿಲ್ಲ. ಇದಕ್ಕೆ hidden hunger (ಗುಪ್ತ ಹಸಿವು) ಎನ್ನುತ್ತಾರೆ. ಇನ್ನೂ ಒಂದು ಗಂಟೆ ಕಳೆದರೆ ನೀವೇ ಎದ್ದು ನಿಂತು, ಸಂವಾದ ಕಾರ್ಯಕ್ರಮ ಮುಕ್ತಾಯ ಮಾಡಲು ಹೇಳುತ್ತೀರಿ. ಕಾರಣ, ಹಸಿವು. ಮರಗಳಲ್ಲಿ ಅದು ಪೋಷಕಾಂಶದ ಹಸಿವು ಅಥವಾ ಕೊರತೆ”. ಹಾಗಾಗಿ, ಮರಗಳಿಗೆ ತೀರಾ ಹಸಿವು ಆದಾಗ ಕೊರತೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದರೆ, ಗುಪ್ತ ಹಸಿವಿನ ಲಕ್ಷಣ ಕಣ್ಣಿಗೆ ಗೋಚರಿಸುವುದಿಲ್ಲ. ಅದನ್ನು ಅರಿತುಕೊಂಡು ಪೋಷಕಾಂಶ ನೀಡಿದರೆ, ಹೆಚ್ಚಿನ ಫಸಲನ್ನು ಪಡೆಯಬಹುದು. ಈ ಗುಪ್ತ ಹಸಿವನ್ನು ಅರಿತುಕೊಳ್ಳಲು ಮಣ್ಣು ಪರೀಕ್ಷೆ ಅವಶ್ಯಕ. ಕೊರತೆಯ ಲಕ್ಷಣ ಇದ್ದರೂ ಹಾಕಬೇಕಾದ ಪ್ರಮಾಣವನ್ನು ಅರಿತುಕೊಳ್ಳಲು ಕೂಡ ಮಣ್ಣು ಪರೀಕ್ಷೆ ಸಹಕಾರಿ. ಅಲ್ಲದೆ, ಪೋಷಕಾಂಶಗಳ ಅನುಪಾತದಲ್ಲಿ ವ್ಯತ್ಯಯವಾದರೆ, ಮಣ್ಣಿನಲ್ಲಿ ಪೋಷಕಾಂಶ ಇದ್ದರೂ ಮರದಲ್ಲಿ ಕೊರತೆಯ ಲಕ್ಷಣಗಳನ್ನು ತೋರಿಸುವ ಸಾಧ್ಯತೆ ಇರುತ್ತದೆ. ಉದಾಹರಣೆಗೆ : ರಂಜಕ ಹೆಚ್ಚಾದರೆ ಸತುವಿನ ಕೊರತೆಯ ಲಕ್ಷಣ, ಬೋರಾನ್ ಹೆಚ್ಚಾದರೆ ಕ್ಯಾಲ್ಸಿಯಂ ಪೋಷಕಾಂಶದ ಕಾರ್ಯಚಟುವಟಿಕೆಯಲ್ಲಿ ವ್ಯತ್ಯಯವಾಗಿ ಕಾಯಿ ಕಟ್ಟದೇ ಇರುವುದು ಇತ್ಯಾದಿ. ಇಂತಹ ಸಂದರ್ಭದಲ್ಲೂ ಮಣ್ಣು ಪರೀಕ್ಷೆ ನಮಗೆ ಪ್ರಯೋಜನಕಾರಿ.

ಸಾಮಾನ್ಯವಾಗಿ ನಮ್ಮಲ್ಲಿ ಬರುವ ಬಹುಪಾಲು ಮಣ್ಣು ಪರೀಕ್ಷಾ ವರದಿಗಳಲ್ಲಿ ಸತು, ಬೋರಾನ್, ಪೊಟ್ಯಾಷಿಯಂ ಅಂಶ ಕಡಿಮೆ ಇರುತ್ತದೆ. ಹಾಗೆಂದು, ಎಲ್ಲರ ತೋಟದಲ್ಲೂ ಆ ಪೋಷಕಾಂಶಗಳ ಕೊರತೆಯ ಲಕ್ಷಣ ಇರುವುದಿಲ್ಲ. ಪೋಷಕಾಂಶಗಳ ಕೊರತೆಯ ತೀವ್ರತೆಯನ್ನು ಆಧಾರಿಸಿ ಅಡಿಕೆ ಮರಗಳಿಗೆ ನೀಡಬೇಕಾದ ಪ್ರಮಾಣವನ್ನು ಕೃಷಿಕರಿಗೆ ನಾವು ತಿಳಿಸುತ್ತೇವೆ.

Advertisement

ಹಾಗಾದರೆ, ಮಣ್ಣು ಪರೀಕ್ಷೆಗೆ ಮಣ್ಣು ಮಾದರಿ ಸಂಗ್ರಹಿಸುವುದು ಹೇಗೆ? : ಅಡಿಕೆ ತೋಟದಿಂದ ಮಣ್ಣಿನ ಮಾದರಿ ಸಂಗ್ರಹ ಮಾಡುವಾಗ ಮರದ ಬುಡದಿಂದ ಅಥವಾ ನಾಲ್ಕು ಮರದ ಮಧ್ಯದಿಂದ ಸಂಗ್ರಹಿಸಬೇಕೆ ಎನ್ನುವುದು ನಮಗಿರುವ ಗೊಂದಲ. ಬಹುಪಾಲು ಜನರು ನಾಲ್ಕು ಮರಗಳ ಮಧ್ಯ ಭಾಗದಿಂದ ಮಣ್ಣನ್ನು ತೆಗೆಯಬೇಕು ಎಂದು ಉತ್ತರಿಸುತ್ತಾರೆ. ಆದರೆ, ಅದು ಹಾಗಲ್ಲ.

ಒಂದು ಉದಾಹರಣೆ (ಹಾಗೆಯೇ ಓದಿ, ಪಿನ್ ಟು ಪಿನ್ ತುಲನೆ ಬೇಡ). ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಭೋಜನ ಸವಿಯಲು ಹೋದಿರಿ ಅಂದುಕೊಳ್ಳಿ. ಮೊದಲಿಗೆ ಶುಚಿಯಾದ ತಟ್ಟೆ / ಬಟ್ಟಲನ್ನು ತೆಗೆದುಕೊಂಡು ಖಾದ್ಯಗಳನ್ನು ಬಡಿಸಿಕೊಳ್ಳುತ್ತೀರಿ. ಇನ್ನೊಮ್ಮೆ ಊಟ ಬಡಸಿಕೊಳ್ಳುವಾಗ ಹೊಸ ತಟ್ಟೆ ಬಳಸುವುದಿಲ್ಲ. ಬದಲಾಗಿ, ಊಟ ಮಾಡಿದ ತಟ್ಟೆಯನ್ನೇ ಬಳಸುತ್ತೀರಿ. ಪಲ್ಯ ಖಾಲಿಯಾದರೆ ಪುನಃ ಅದನ್ನು ಬಡಿಸಿಕೊಳ್ಳುತ್ತಿರಿ. ಉಪ್ಪಿನಕಾಯಿ ಉಳಿದಿದ್ದರೆ ಅದನ್ನು ಬಡಿಸಿಕೊಳ್ಳುವುದಿಲ್ಲ.

Advertisement
ಹಾಗೆಯೇ, “ನಾವು ಹಾಕಿದ ಗೊಬ್ಬರವನ್ನು ಮರ ಹೀರಿಕೊಂಡು, ಉಳಿದ ಪೋಷಕಾಂಶ ಎಷ್ಟು ಎಂದು ಅರಿತುಕೊಳ್ಳುವುದು ಮಣ್ಣು ಪರೀಕ್ಷೆಯ ಉದ್ದೇಶ. ನಾಲ್ಕು ಮರಗಳ ಮಧ್ಯದಿಂದ ಮಣ್ಣಿನ ಮಾದರಿ ಸಂಗ್ರಹ ಮಾಡಿದರೆ ಇದನ್ನು ಅರಿಯಲು ಸಾಧ್ಯವಿಲ್ಲ” ಎನ್ನುವುದು ಯುವ ಕೃಷಿಕ ಮಹೇಶ್ ಪ್ರಸಾದ್ ನೀರ್ಕಜೆಯವರ ಉತ್ತರ. ಅದು ನಿಜ. ಹತ್ತಾರು ವರ್ಷಗಳ ಕಾಲ ಬುಡಕ್ಕೆ ಗೊಬ್ಬರ ಹಾಕುತ್ತಿರುವಾಗ ಮಧ್ಯ ಭಾಗದಿಂದ ಮಣ್ಣಿನ ಮಾದರಿ ಸಂಗ್ರಹಿಸುವುದು ಎಸ್ಟು ಸರಿ? ಆದರೆ, ಹೊಸ ತೋಟದಲ್ಲಾದರೆ, ನಾಲ್ಕು ಸಸಿಗಳ ಮಧ್ಯದಿಂದ ಮಣ್ಣಿನ ಮಾದರಿ ಸಂಗ್ರಹ ಮಾಡಬಹುದು.

ಮಣ್ಣು ಮಾದರಿ ಸಂಗ್ರಹಿಸಬೇಕಾದ ಸಮಯ : ಸಾಮಾನ್ಯವಾಗಿ ಮಳೆಗಾಲದಲ್ಲಿ ಮಣ್ಣು ಮಾದರಿ ಸಂಗ್ರಹಿಸಬಾರದು. ಗೊಬ್ಬರ ನೀಡುವ ಮುಂಚಿತವಾಗಿ ಅಥವಾ ನೀಡಿದ ಮೂರು ತಿಂಗಳ ನಂತರ ಮಣ್ಣು ಮಾದರಿ ಸಂಗ್ರಹ ಮಾಡಬಹುದು.

Advertisement

ಮಣ್ಣು ಮಾದರಿ ಸಂಗ್ರಹ ಮಾಡುವ ವಿಧಾನ :ಅಡಿಕೆ ಮರದ ಸಣ್ಣ ಗಾತ್ರದ ಬೇರುಗಳು ಪೋಷಕಾಂಶ ಮತ್ತು ನೀರನ್ನು ಹೀರಿಕೊಳ್ಳುವಂತವು. ಅವುಗಳು ಎರಡರಿಂದ ಎರಡೂವರೆ ಅಡಿ ದೂರದಲ್ಲಿ ಹೆಚ್ಚು ಕೇಂದ್ರೀಕೃತವಾಗಿರುತ್ತವೆ. ಹಾಗಾಗಿ, ಎರಡು ಅಡಿ ದೂರದಲ್ಲಿ ಗೊಬ್ಬರ ನೀಡಬೇಕು ಮತ್ತು ಅದೇ ಜಾಗದಿಂದ ಗೊಬ್ಬರ ನೀಡುವ ಮೊದಲು ಅಥವಾ ನೀಡಿದ ಮೂರು ತಿಂಗಳ ನಂತರ ಮಣ್ಣು ಮಾದರಿ ಸಂಗ್ರಹಿಸಬೇಕು.

ಗುದ್ದಲಿ ಬಳಸಿ ಸಾವಯವ ವಸ್ತುಗಳನ್ನು ಸರಿಸಿ, ಒಂದು ಅಡಿ ಆಳದ ‘V’ ಆಕಾರದ ಗುಣಿ / ಗುಂಡಿ ಮಾಡಬೇಕು. ನಂತರ, ಅದರ ಪಾಶ್ವದಿಂದ ಒಂದು ಇಂಚು ಮಣ್ಣನ್ನು ಸಮನಾಗಿ ಕತ್ತರಿಸಿ ತೆಗೆಯಬೇಕು. “ಮಣ್ಣಿನ ಬೇರೆ ಬೇರೆ ಪದರದಲ್ಲಿ ಪೋಷಕಾಂಶ ವ್ಯತ್ಯಾಸ ಇರುವ ಕಾರಣ, ಗುಣಿ/ ಗುಂಡಿಯ ಮೇಲ್ಭಾಗದಿಂದ ಕೆಳಗಿನವರೆಗೆ ಸಮನಾಗಿ ಒಂದು ಇಂಚು ಮಣ್ಣನ್ನು ಕತ್ತರಿಸಿ ತೆಗೆಯಬೇಕು” ಎನ್ನುವುದು ಕೊಡಪದವಿನ ಕೃಷಿಕ  ವಿಷ್ಣು ಭಟ್ಟರ ಉತ್ತರ. ಎರಡು ಇಂಚು ವ್ಯಾಸದ, ತುದಿ ಚೂಪಾಗಿರುವ ಟೊಳ್ಳಾದ ಕಬ್ಬಿಣದ ಬಾರ್ ಕೂಡ ಬಳಸಬಹುದು.

Advertisement

ಭೌಗೋಳಿಕವಾಗಿ ಹೆಚ್ಚು ವ್ಯತ್ಯಾಸವಿರದ ಮತ್ತು ಮಣ್ಣಿನ ರಚನೆ/ಬಣ್ಣದಲ್ಲಿ ಸಾಮ್ಯತೆ ಇರುವ ತೋಟದಲ್ಲಿ ನಾಲ್ಕರಿಂದ ಆರು ಮರಗಳ ಬುಡದಿಂದ ಮಣ್ಣನ್ನು ಸಂಗ್ರಹ ಮಾಡಿದರೆ, “ಇಳಿಜಾರು ಪ್ರದೇಶದಲ್ಲಿರುವ ತೋಟದಲ್ಲಿ, ಮೇಲ್ಭಾಗ, ಮಧ್ಯಭಾಗ ಮತ್ತು ಕೆಳಭಾಗದಿಂದ ಪ್ರತ್ಯೇಕವಾಗಿ ಮಣ್ಣಿನ ಮಾದರಿ ಸಂಗ್ರಹಿಸಬೇಕು ಮತ್ತು ಬೇರೆ ಬೇರೆಯಾಗಿ ಮಣ್ಣು ಪರೀಕ್ಷಾ ಕೇಂದ್ರಗಳಿಗೆ ನೀಡಬೇಕು” ಎನ್ನುವುದು ಕಾಸರಗೋಡಿನ ಸಿ.ಪಿ.ಸಿ.ಆರ್.ಐ. ಪ್ರಧಾನ ವಿಜ್ಞಾನಿ ಡಾ. ರವಿ ಭಟ್ ಅವರ ಸೂಚನೆ.

ನಾಲ್ಕರಿಂದ ಆರು ಮರಗಳ ಬುಡದಿಂದ ಮಣ್ಣನ್ನು ತೆಗೆದು, ಒಟ್ಟು ಸೇರಿಸಬೇಕು. ನಂತರ, ಕಲ್ಲು, ಬೇರು, ಸಾವಯವ ಪದಾರ್ಥವನ್ನು ಬೇರ್ಪಡಿಸಿ, ನೆರಳಿನಲ್ಲಿ ನಾಲ್ಕೈದು ದಿನ ಒಣಗಿಸಬೇಕು. ತೇವಾಂಶರಹಿತ ಮಣ್ಣನ್ನು ಚೆನ್ನಾಗಿ ಮಿಶ್ರಣ ಮಾಡಿ ಕಾಲು ಅಥವಾ ಅರ್ಧ ಕೆಜಿ ಪ್ರಮಾಣದಷ್ಟು ಮಣ್ಣನ್ನು ಲೇಬಲ್ ಲಗತ್ತಿಸಿ ಮಣ್ಣು ಪರೀಕ್ಷಾ ಕೇಂದ್ರಗಳಿಗೆ ನೀಡಬೇಕು.

Advertisement

ಮಣ್ಣು ಪರೀಕ್ಷಾ ಕೇಂದ್ರಗಳು ಎಲ್ಲಿವೆ?: ಮಂಗಳೂರಿನಲ್ಲಿರುವ ಮೀನುಗಾರಿಕಾ ಕಾಲೇಜಿನ ಕ್ಯಾಂಪಸ್ ನಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಣ್ಣು ಪರೀಕ್ಷೆಯ ಸೌಲಭ್ಯ ಇದೆ. ಅಲ್ಲದೇ, ಪುತ್ತೂರಿನಲ್ಲಿರುವ ಗೇರು ಸಂಶೋಧನಾ ಕೇಂದ್ರ ಮತ್ತು ಕಾಸರಗೋಡಿನಲ್ಲಿರುವ ಸಿ. ಪಿ.ಸಿ.ಆರ್.ಐ ಸಂಸ್ಥೆಯಲ್ಲೂ ಸೀಮಿತ ಅವಕಾಶ ಇದೆ. ಬೆಂಗಳೂರಿನಲ್ಲಿರುವ ಕೃಷಿ ವಿಶ್ವವಿದ್ಯಾಲಯ ಮತ್ತು ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲೂ ಮಣ್ಣು ಪರೀಕ್ಷೆಯ ಸೌಲಭ್ಯ ಇದೆ. ಬೆಂಗಳೂರಿನ ಹುಳಿಮಾವಿನಲ್ಲಿರುವ ತೋಟಗಾರಿಕೆ ಇಲಾಖೆಯ ಬಯೋ ಸೆಂಟರ್ ಅನ್ನು ಕೂಡ ಸಂಪರ್ಕಿಸಬಹುದು. ರಸಗೊಬ್ಬರ ಕಂಪೆನಿಗಳು ಸೇರಿದಂತೆ ಕೆಲವೊಂದು ಖಾಸಗಿ ಸಂಸ್ಥೆಗಳು ಮತ್ತು ಸೊಸೈಟಿಗಳೂ ಸಹ ಮಣ್ಣು ಪರೀಕ್ಷೆಯನ್ನು ಮಾಡುತ್ತವೆ. ಹೆಚ್ಚಿನ ಮಾಹಿತಿಗಾಗಿ ನೋಡಿ https://farmer.gov.in/STLDetails.aspx?State=29

ದೂರದಲ್ಲಿರುವ ಮಣ್ಣು ಪರೀಕ್ಷಾ ಕೇಂದ್ರಗಳಿಗೆ ಸ್ಯಾಂಪಲ್ ನೀಡುವುದು ವೈಯಕ್ತಿಕವಾಗಿ ಕೃಷಿಕರಿಗೆ ಕಷ್ಟವಾಗಬಹುದು. ಹಾಗಿದ್ದರೆ, ತೋಟಗಾರಿಕೆ ಇಲಾಖೆ, ಸ್ಥಳೀಯಾಡಳಿತ ಸಂಸ್ಥೆಗಳು, FPO ಗಳು, ಸೊಸೈಟಿಗಳು ಅಥವಾ ಇತರ ಕೃಷಿಕ ಸಂಸ್ಥೆಗಳು ನಿಖರವಾಗಿ ಮಣ್ಣು ಪರೀಕ್ಷೆ ಮಾಡುವ ಕೇಂದ್ರಗಳನ್ನು ಗುರುತಿಸಿ ಸಾಮೂಹಿಕವಾಗಿ ಮಣ್ಣು ಪರೀಕ್ಷೆ ಮಾಡಿಸಿದರೆ ಎಲ್ಲರಿಗೂ ಅನುಕೂಲ” ಎನ್ನುತ್ತಾರೆ ಕಾಸರಗೋಡಿನ ಸಿ.ಪಿ.ಸಿ.ಆರ್.ಐ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ. ಸಿ ತಂಬಾನ್.

Advertisement

ಕೆಲವೊಂದು ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು:  ಮಣ್ಣು ಮಾದರಿ ಸಂಗ್ರಹ ಮಾಡಲು ಬಳಸುವ ವಸ್ತುಗಳು ಶುಚಿಯಾಗಿರಬೇಕು. ಯಾವುದೇ ಕಾರಣಕ್ಕೂ ಗೊಬ್ಬರದ ಚೀಲ / ಗೊಬ್ಬರ ಹಾಕಿದ ಬಕೆಟ್ ಮುಂತಾದುವುಗಳನ್ನು ಬಳಸಬಾರದು. ಮಣ್ಣು ಮಾದರಿ ಸಂಗ್ರಹಿಸಲು ಮರಗಳನ್ನು ಗುರುತು ಮಾಡುವಾಗ ಅವು ಇಡೀ ತೋಟವನ್ನು ಪ್ರತಿನಿಧಿಸುವಂತಿರಬೇಕು.ಗೊಬ್ಬರದ ಗುಂಡಿ / ಶೇಖರಣಾ ಕೊಠಡಿಗಳ / ನೀರು ಬಸಿದು ಹೋಗುವ ಸ್ಥಳದಲ್ಲಿರುವ ಮರಗಳನ್ನು ಆಯ್ಕೆ ಮಾಡಬಾರದು.ಲೇಬಲ್ ಲಗತ್ತಿಸುವುದು ಮುಖ್ಯ. ಅದರಲ್ಲಿ ಮಣ್ಣು ಮಾದರಿಯ ಸಂಖ್ಯೆ, ಸರ್ವೆ ನಂಬರ್, ವಿಳಾಸ, ದೂರವಾಣಿ ಸಂಖ್ಯೆ ಸೇರಿದಂತೆ ಇತರ ಮಾಹಿತಿ ಇರಬೇಕು.

“ಮಣ್ಣು ಪರೀಕ್ಷೆ ಮಾಡುವ ಕೇಂದ್ರಗಳು ಕೃಷಿಕರ ನಂಬಿಕೆ ಉಳಿಸುವುದು ಮುಖ್ಯ” ಎಂದು ಪರ್ಪುಂಜದ ಯುವ ಕೃಷಿಕ  ಚರಣ್ ಕುಮಾರ್ ಹೇಳುತ್ತಾರೆ.

Advertisement
ಮಾಹಿತಿ :
 ಡಾ.ಭವಿಷ್ಯ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ
January 16, 2025
3:11 PM
by: The Rural Mirror ಸುದ್ದಿಜಾಲ
ಮುಂಜಾನೆ ಏಳಬೇಕು, ಬೇಗನೇ ಏಳಬೇಕು
January 16, 2025
7:29 AM
by: ಡಾ.ಚಂದ್ರಶೇಖರ ದಾಮ್ಲೆ
ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |
January 15, 2025
1:00 PM
by: ಸಾಯಿಶೇಖರ್ ಕರಿಕಳ
ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ
January 15, 2025
6:47 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror