ಭಾರತದಿಂದ ಅಡಿಕೆಯ ರಫ್ತು ಎಷ್ಟಾಗುತ್ತದೆ…? ಹೇಗಾಗುತ್ತದೆ…?

July 8, 2025
7:27 AM

ಜಾಗತಿಕ ಮಟ್ಟದಲ್ಲಿ ಅಡಿಕೆ ಬೆಳೆಯ ವಿಸ್ತೀರ್ಣ ಮತ್ತು ಉತ್ಪಾದನೆಯಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ.ಇನ್ನು ಬಳಕೆಯಲ್ಲಿ ಕೂಡಾ ಅಗ್ರ ಸ್ಥಾನದಲ್ಲಿದೆ. ದೇಶವು ಅನಾದಿಕಾಲದಿಂದಲೂ ಇದರ ರಫ್ತು ಮಾಡುತ್ತಿದ್ದು,ಇದರಲ್ಲಿ ಗಣನೀಯ ಪ್ರಮಾಣದ ಬೆಳವಣಿಗೆಯನ್ನೇನೂ  ಸಾಧಿಸಿಲ್ಲ.ಇದಕ್ಕೆ ಮುಖ್ಯ ಕಾರಣ ಭಾರತದಲ್ಲಿ ಈ ತನಕ ವಾರ್ಷಿಕವಾಗಿ ಉತ್ಪಾದನೆ ಆಗುವ ಅಡಿಕೆ ಪ್ರಮಾಣವು ಆಂತರಿಕ ಬಳಕೆಗೆ ಸಾಲದೇ ಹೋಗಿ,ಅದು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆಮದಿಗೆ ದಾರಿ ಮಾಡಿ ಕೊಟ್ಟಿದ್ದು,ಇದರಿಂದಾಗಿ ರಫ್ತಿನ ಬಗ್ಗೆ ಚಿಂತನೆ ಮತ್ತು ಆಸಕ್ತಿ ಕಂಡು ಬಂದಿಲ್ಲ ಎನ್ನಬಹುದು.ಇನ್ನೊಂದು ಬದಿಯಲ್ಲಿ ವಿದೇಶದಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳುವುದು ನಿಷೇಧ ಆದ್ದರಿಂದ ಅಡಿಕೆಗೆ ಅಲ್ಲಿರುವ ಬೇಡಿಕೆ ಕಡಿಮೆ.

Advertisement

ಸ್ವಾತಂತ್ರ್ಯಪೂರ್ವದಲ್ಲಿ ರಫ್ತು ಹೆಚ್ಚು ಕಡಿಮೆ ಬೇರೆ ದೇಶಗಳಲ್ಲಿ ನೆಲೆಸಿದ್ದ ಭಾರತೀಯರ ಬಳಕೆಗೆ ಮಾತ್ರ ಸೀಮಿತ ಆಗಿತ್ತು.ಆದರೆ ಇತ್ತೀಚಿನ ವರ್ಷಗಳಲ್ಲಿ ಅಡಿಕೆಯ ಮೌಲ್ಯ ವರ್ಧಿತ ಉತ್ಪನ್ನಗಳು ಮಾರುಕಟ್ಟೆಗೆ ಪ್ರವೇಶ ಆದ್ದರಿಂದ,ವಿದೇಶೀ ಮಾರುಕಟ್ಟೆಯಲ್ಲಿ ಇವಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ.
ಭಾರತದಿಂದ ಅಂತರಾಷ್ಟ್ರೀಯ ಮಾರುಕಟ್ಟೆಗೆ ಇಂದು ಇಡಿ ಅಡಿಕೆ,ಹೋಳು ಅಡಿಕೆ, ಹುಡಿ ಅಡಿಕೆ,ಪಾನ್ ಮಸಾಲ, ಗುಟ್ಕಾ,ಸಿಹಿ ಸುಪಾರಿ,ಸುಗಂಧ ಸುಪಾರಿ ಇತ್ಯಾದಿಗಳು ರಫ್ತು ಆಗುತ್ತಿದೆ.ಈ ರಫ್ತಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಅಲ್ಪ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ.ಈ ರಫ್ತು ಹೆಚ್ಚಾಗಿ ಖಾಸಗಿ ವಾಲಯದಿಂದಲೇ ಆಗುತ್ತಿದ್ದು,ಇಲ್ಲಿ ಸಹಕಾರಿ ಸಂಸ್ಥೆಗಳ ಪಾಲು ಕಡಿಮೆ.

ಲಭ್ಯ ಅಂಕಿ ಅಂಶಗಳ ಪ್ರಕಾರ ಕಳೆದ ಸಾಲಿನಲ್ಲಿ ಸುಮಾರು ಹನ್ನೊಂದು ಸಾವಿರದ ಎಂಟುನೂರು ಟನ್ ಅಡಿಕೆ ದೇಶದಿಂದ ರಫ್ತು ಆಗಿ ಸುಮಾರು ನಾನೂರು ಕೋಟಿ ವಿದೇಶಿ ವಿನಿಮಯ ದೊರಕಿದೆ.ಈ ಪ್ರಮಾಣ ಅದಕ್ಕಿಂತ ಮೊದಲಿನ ವರ್ಷದಲ್ಲಿ ಆರು ಸಾವಿರ ಟನ್ ಆಗಿತ್ತು.ಇದರೊಂದಿಗೆ ಮೌಲ್ಯ ವರ್ಧಿತ ಉತ್ಪನ್ನಗಳ ರಫ್ತು ಸುಮಾರು ಎರಡು ಸಾವಿರ ಟನ್ ಆಗಿದ್ದು,ಇಲ್ಲಿ ಇವು ಸರಕಾರದ ಅಂಕಿ ಅಂಶಗಳು ಆಗಿದ್ದು,ಇನ್ನು ಲೆಕ್ಕಕ್ಕೆ ಸಿಗದೇ ಇರುವ ಪ್ರಮಾಣದಲ್ಲಿ ಇವುಗಳ ರಫ್ತು ಮಾಡಲಾಗುತ್ತಿದೆ.

ಜಾಗತಿಕ ಮಟ್ಟದಲ್ಲಿ ಅಡಿಕೆಯ ರಫ್ತನ್ನು ಶ್ರೀಲಂಕಾ,ಭಾರತ,ಇಂಡೋನೇಷಿಯಾ,ಥೈಲ್ಯಾಂಡ್, ಮ್ಯಾನ್ಮಾರ್ ,ಚೀನಾ,ಸಿಂಗಾಪೂರ್,ಮಲೇಶಿಯ,ಇತ್ಯಾದಿ ರಾಷ್ಟ್ರಗಳು ಕೈಗೊಳ್ಳುತ್ತಿವೆ.

Advertisement

ರಫ್ತಿನ ದಿಕ್ಕು :  ಭಾರತದಿಂದ ಬೇರೆ ಬೇರೆ ರಾಷ್ಟ್ರಗಳಿಗೆ ಅಡಿಕೆಯನ್ನು ವಿವಿಧ ರೂಪಗಳಲ್ಲಿ ರಫ್ತು ಮಾಡುತ್ತಿದ್ದು,ಇದರ ಪ್ರಮಾಣ ರಾಷ್ಟ್ರದಿಂದ ರಾಷ್ಟ್ರಕ್ಕೆ ವರ್ಷದಿಂದ ವರ್ಷಕ್ಕೆ ಬದಲಾಗುತ್ತಿದೆ.ನಮ್ಮಲ್ಲಿನ ವಿವಿಧ ರೂಪದ ಅಡಿಕೆಗೆ ಇಂಗ್ಲೆಂಡ್,ನೇಪಾಳ,ಸೌದಿ ಅರೇಬಿಯಾ,ಸಿಂಗಾಪುರ,ಮಾಲ್ಡೀವ್ಸ್,ದಕ್ಷಿಣ ಆಫ್ರಿಕಾ ಮುಖ್ಯ ಗ್ರಾಹಕರಾಗಿದ್ದು,ಇವುಗಳೊಂದಿಗೆ ರಷ್ಯಾ,ಆಸ್ಟ್ರೇಲಿಯಾ,ಟಾಂಜಾನಿಯಾ, ಫಿಲಿಫೈನ್ಸ್,ಸಂಯುಕ್ತ ಅರಬ್ ರಾಷ್ಟ್ರಗಳು, ಅಮೇರಿಕಾ,ಮಾಲ್ವಿ,ಕೆನಡಾ,ಬಾಂಗ್ಲಾ,ಶ್ರೀಲಂಕಾ ಮುಂತಾದ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ.

Advertisement

ಇಡಿ ಅಡಿಕೆ ರಫ್ತು :ದೇಶದಿಂದ ಇಡಿ ಅಡಿಕೆ ಮುಖ್ಯವಾಗಿ ದಕ್ಷಿಣ ಆಫ್ರಿಕಾ,ಸಂಯುಕ್ತ ಅರಬ್ ಸಂಸ್ಥಾನ,ಇಂಗ್ಲಂಡ್, ನೇಪಾಳ,ಕೆನಡಾ, ಅಮೇರಿಕಾ,ಜಪಾನ್, ಮಲ್ವಿ,ಫ್ರಾನ್ಸ್,ಸ್ಪೇನ್ ಇತ್ಯಾದಿ ರಾಷ್ಟ್ರಗಳಿಗೆ ಮಾಡಲಾಗುತ್ತದೆ.ಒಟ್ಟಾರೆಯಾಗಿ ಭಾರತದಿಂದ ಸುಮಾರು ಮೂವತ್ತೈದು ರಾಷ್ಟ್ರಗಳಿಗೆ ಈ ರಫ್ತು ಆಗುತ್ತಿದೆ. ಇಲ್ಲಿ ಕೆಲವು ಸಾಂಪ್ರದಾಯಿಕ ರಾಷ್ಟ್ರಗಳನ್ನು ಬಿಟ್ಟು ಉಳಿದ ರಾಷ್ಟ್ರಗಳು ಆಗೊಮ್ಮೆ ಈಗೊಮ್ಮೆ ಆಮದು ಮಾಡಿಕೊಳ್ಳುತ್ತವೆ.ಇದರೊಂದಿಗೆ ಅಡಿಕೆಯ ಮೌಲ್ಯ ವರ್ಧಿತ ಉತ್ಪನ್ನಗಳ ಲಭ್ಯತೆಯಿಂದಾಗಿ ಇಡಿ ಅಡಿಕೆಯ ಬೇಡಿಕೆ ಹಂತ ಹಂತವಾಗಿ ಕುಸಿಯುತ್ತಿದೆ.

ಹೋಳು ಮತ್ತು ಹುಡಿ ಅಡಿಕೆಯ ರಫ್ತು: ಈ ರೀತಿಯ ಅಡಿಕೆಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಏರುತ್ತಿದೆ.ಇವು ಒಂದು ರೀತಿಯ ಮೌಲ್ಯ ವರ್ಧಿತ ಉತ್ಪನ್ನಗಳಾದ ಕಾರಣ ಬೇಡಿಕೆ ಹೆಚ್ಚುತ್ತಿದೆ.ಇವಕ್ಕಿರುವ ಮಾರುಕಟ್ಟೆಗಳೆಂದರೆ ಅರಬ್ ರಾಷ್ಟ್ರಗಳು,ಫಿಲಿಫೈನ್ಸ್,ಕೆನಡಾ,ಇಂಗ್ಲೆಂಡ್,ದಕ್ಷಿಣ ಆಫ್ರಿಕಾ,ಮಲೇಶಿಯ ಮತ್ತು ಆಸ್ಟ್ರೇಲಿಯಾ.ಒಟ್ಟಾರೆಯಾಗಿ ಇವಕ್ಕಿಂದು ಸುಮಾರು ಮೂವತ್ತೈದು ರಾಷ್ಟ್ರಗಳಲ್ಲಿ ಬೇಡಿಕೆ ಇದೆ.

ಸುಲಿಯದ ಅಡಿಕೆಯ ರಫ್ತು : ಹಣ್ಣು ಅಡಿಕೆ ಇಲ್ಲವೇ ಸುಲಿಯದ ಅಡಿಕೆಗೆ ಮಾಲ್ಡೀವ್ಸ್, ಮಾರಿಷಸ್,ಮಲೇಶಿಯ ಮುಂತಾದ ರಾಷ್ಟ್ರಗಳಲ್ಲಿ ಬೇಡಿಕೆ ಇದೆ.ಆದರೆ ಇವಕ್ಕೆಯಿರುವ ಬೇಡಿಕೆ ಪ್ರತ್ಯಕ್ಷ ಆಗಿ ಕಂಡು ಬರುವುದು ಕಡಿಮೆ.

 ಅಡಿಕೆಯ ಮೌಲ್ಯ ವರ್ಧಿತ ಉತ್ಪನ್ನಗಳ ರಫ್ತು : ಅಡಿಕೆಯನ್ನು ಮೂಲ ವಸ್ತುವನ್ನಾಗಿ ಬಳಸಿ ತಯಾರಾಗುವ ವಿವಿಧ ರೀತಿಯ ಮೌಲ್ಯ ವರ್ಧಿತ ಉತ್ಪನ್ನಗಳಾದ ಪಾನ್ ಮಸಾಲ,ಗುಟ್ಕಾ,ಸುಗಂಧ ಸುಪಾರಿ,ಸಿಹಿ ಸುಪಾರಿ ಇತ್ಯಾದಿಗಳಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ.ಈ ಬೇಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.ಇವಕ್ಕೆ ಇಂದು ಇರುವ ಮುಖ್ಯ ಗ್ರಾಹಕ ರಾಷ್ಟ್ರಗಳೆಂದರೆ ಸಂಯುಕ್ತ ಅರಬ್ ರಾಷ್ಟ್ರಗಳು,ಇಂಗ್ಲೆಂಡ್,ಕೆನಡಾ, ಅಮೇರಿಕಾ,ದಕ್ಷಿಣ ಆಫ್ರಿಕಾ,ಸೌದಿ ಅರೇಬಿಯಾ,ನೇಪಾಳ,ಮೆಕ್ಸಿಕೋ,ಬಲ್ಗೇರಿಯಾ,ಕುವೈಟ್,ಕೀನ್ಯಾ ಮತ್ತು ಶ್ರೀಲಂಕಾ.ಇವುಗಳ ಪೈಕಿ ಅರಬ್ ರಾಷ್ಟ್ರಗಳು ಮತ್ತು ಇಂಗ್ಲೆಂಡ್ ಅಧಿಕ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತವೆ.ಇಲ್ಲಿ ಸಿಹಿಮತ್ತು ಸುಗಂಧ ಸುಪಾರಿಗಳಿಗೆ ಸುಮಾರು 58 ರಾಷ್ಟ್ರಗಳಲ್ಲಿ ಬೇಡಿಕೆ ಇದೆ.ಇನ್ನು ಪಾನ್ ಮಸಾಲ ಮತ್ತು ಗುಟ್ಕಾಕೆ ಸುಮಾರು 75 ರಾಷ್ಟ್ರಗಳಲ್ಲಿ ಬೇಡಿಕೆ ಇದೆ.

ಈ ರೀತಿಯ ಉತ್ಪನ್ನಗಳಿಗೆ ಥಾಯ್ಲೆಂಡ್,ಸಿಂಗಾಪೂರ್,ಮಲೇಶಿಯ ಹಾಗೂ ಸಂಯುಕ್ತ ಅರಬ್ ಸಂಸ್ಥಾನ ರಾಷ್ಟ್ರಗಳಲ್ಲಿ ಅಧಿಕ ಬೇಡಿಕೆ ಇದೆ.ಒಟ್ಟಾಗಿ 2015-16 ರ ಸಮಯದಲ್ಲಿ ಸಿಹಿ ಮತ್ತು ಸುಗಂಧ ಸುಪಾರಿ ರಫ್ತಿನ ಪ್ರಮಾಣ ಸುಮಾರು ಮುನ್ನೂರ ಅರುವತ್ತಮೂರು ಟನ್ ಇದ್ದುದು ಈಗ ಇದು ಸುಮಾರು ಮೂರು ಸಾವಿರ ಟನ್ ಆಗಿದೆ.ಇನ್ನು ಪಾನ್ ಮಸಾಲ ಮತ್ತು ಗುಟ್ಟಾದ ರಫ್ತಿನ ಪ್ರಮಾಣ ಇದೇ ಅವಧಿಯಲ್ಲಿ ಸುಮಾರು ಒಂದು ಸಾವಿರದ ನಲ್ವತ್ತು ಟನ್ ಇಂದ ಸುಮಾರು ಎರಡೂವರೆ ಸಾವಿರ ಟನ್ಗೆ ಏರಿದೆ.

Advertisement

ಗಮನಿಸಬೇಕಾದ ಅಂಶಗಳು : 

  1. ದೇಶದಲ್ಲಿ ಅಡಿಕೆಯ ಉತ್ಪಾದನೆ ಹೆಚ್ಚಾದ ಪ್ರಮಾಣಕ್ಕೆ ಅನುಗುಣವಾಗಿ ರಫ್ತು ಹೆಚ್ಚಾಗಿಲ್ಲ.ಇದಕ್ಕೆ ಮುಖ್ಯ ಕಾರಣ ಆಂತರಿಕ ಬಳಕೆ ಹೆಚ್ಚಾಗುತ್ತಾ ಹೋಗಿರುವುದು.
  2. ವಿದೇಶದಲ್ಲಿ ಮೂಲ ರೂಪದ ಅಡಿಕೆಗೆ ಇರುವ ಬೇಡಿಕೆ ನಿಧಾನ ಗತಿಯಲ್ಲಿ ಏರಿದರೆ,ಮೌಲ್ಯ ವರ್ಧಿತ ಉತ್ಪನ್ನಗಳಿಗೆ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ.
  3. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಡಿಕೆಗೆ ಇರುವ ಬೇಡಿಕೆ ಹೆಚ್ಚಾಗಿ ಇಲ್ಲಿಂದ ಅಲ್ಲಿಗೆ ಹೋಗಿ ನೆಲೆಸಿರುವವರದ್ದು.
  4. ಮೂಲ ರೂಪದ ಅಡಿಕೆಗೆ ಯಾಕಾಗಿ ಬೇಡಿಕೆ ಕಡಿಮೆ ಮತ್ತು ವರ್ಷದಿಂದ ವರ್ಷಕ್ಕೆ ಬೇರೆ ಬೇರೆ ರಾಷ್ಟ್ರಗಳಲ್ಲಿ ಬೇಡಿಕೆ ಯಾಕಾಗಿ ಏರು ಪೇರು ಆಗುತ್ತಿದೆ ಎಂಬ ಬಗ್ಗೆ ಅಧ್ಯಯನಗಳು ಆಗಬೇಕು.
  5. ಅಡಿಕೆ ಉತ್ಪಾದನಾ ಪ್ರದೇಶಗಳಲ್ಲಿ ಪ್ರತ್ಯೇಕವಾಗಿ ಒಂದು ರಫ್ತು ವಿಸ್ತರಣಾ ಘಟಕದ ಸ್ಥಾಪನೆ ಆಗಬೇಕು.
  6. ವಿದೇಶಿ ಮಾರುಕಟ್ಟೆಯಲ್ಲಿ ಭಾರತದ ಸಂಬಾರ ಪದಾರ್ಥಗಳಿಗೆ ಹೆಚ್ಚಿನ ಬೇಡಿಕೆ ಇದ್ದು,ಈ ನಿಟ್ಟಿನಲ್ಲಿ ಇವುಗಳ ಮಿಶ್ರಣದಿಂದ ಒಳಗೂಡಿದ ಅಡಿಕೆ ಉತ್ಪನ್ನದ ತಯಾರಿ ಆಗಿ ರಫ್ತು ಮಾಡುವ ಪ್ರಯತ್ನ ಆಗಬೇಕು.
  7. ಅಡಿಕೆಯಲ್ಲಿರುವ ಔಷಧೀಯ ಗುಣಗಳು ಮತ್ತು ಅವುಗಳ ಬಗ್ಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಚಾರ ಕಾರ್ಯ ಆಗಬೇಕು.

 

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

ಡಾ|ವಿಘ್ನಶ್ವರ ಭಟ್ ವರ್ಮುಡಿ ಅವರು ಕೃಷಿಕರು. ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದವರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನ ಸಂಸ್ಥೆಯದ ಪೆರ್ಲದ ನಲಂದಾ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಅರ್ಥಶಾಸ್ತ್ರಜ್ಞರಾಗಿ ಗುರುತಿಸಿಕೊಂಡಿದ್ದಾರೆ. ಹಲವು ಸಂಶೋಧನಾ ಬರಹಗಳು ಪ್ರಕಟವಾಗಿದೆ. ಅಡಿಕೆ ಮಾರುಕಟ್ಟೆ ಬಗ್ಗೆ ಅಧಿಕೃತವಾಗಿ ಮಾತನಾಡುವ ವ್ಯಕ್ತಿಯಾಗಿದ್ದಾರೆ. ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಅಡಿಕೆಯ ಬಗ್ಗೆ ವಿವಿಧ ಬರಹಗಳನ್ನು ಪ್ರಕಟಿಸಿದ್ದಾರೆ.

ಇದನ್ನೂ ಓದಿ

ರಾಜ್ಯದ ಹಲವೆಡೆ ಮುಂದಿನ 7 ದಿನಗಳ ಕಾಲ ವ್ಯಾಪಕ ಮಳೆ | ಬೆಂಗಳೂರಿಗೆ ಎಲ್ಲೋ ಅಲರ್ಟ್
August 11, 2025
7:27 AM
by: ದ ರೂರಲ್ ಮಿರರ್.ಕಾಂ
ಬದುಕು ಪುರಾಣ | ಜ್ಞಾನದ ಪ್ರತಿನಿಧಿ ಗಂಗಾಪುತ್ರ
August 10, 2025
7:00 AM
by: ನಾ.ಕಾರಂತ ಪೆರಾಜೆ
ಹೊಸರುಚಿ | ಹಲಸಿನ ಹಣ್ಣಿನ ಹಲ್ವ
August 9, 2025
7:37 AM
by: ದಿವ್ಯ ಮಹೇಶ್
ನೆಗೆಟಿವ್ ವಾತಾವರಣದಿಂದ ಮಕ್ಕಳನ್ನು ರಕ್ಷಿಸುವುದೇ ಪಾಲಕರಿಗಿರುವ ಅತಿ ದೊಡ್ಡ ಸವಾಲು
August 9, 2025
7:21 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group