ಅಡಿಕೆ ಬೆಳೆಯುವ ಕ್ಷೇತ್ರದಲ್ಲಿ ಇಂದು ಕೇವಲ ಇಪ್ಪತ್ತು ಪ್ರತಿಶತ ಮಾತ್ರ ಸಾಂಪ್ರದಾಯಿಕ ಅಡಿಕೆ ಬೆಳೆಗಾರರ ಕ್ಷೇತ್ರದ ಅಡಿಕೆ ಬೆಳೆ ಇರುವುದು. ಸಾಂಪ್ರದಾಯಿಕ ಅಡಿಕೆ ಬೆಳೆಗಾರರು ಅತಿ ಹೆಚ್ಚು ನಿಸರ್ಗದ ಜೊತೆಗೆ ಹೋರಾಡಿ ಬೆಳೆ ಪಡಿಯಬೇಕಾಗಿರುತ್ತದೆ. ಚಾನಲ್ ಹಾಗೂ ಬೋರ್ ವೆಲ್ ಅಡಿಕೆ ಬೆಳೆಗಾರರಿಗೆ ಹೋಲಿಸಿದರೆ ಸಾಂಪ್ರದಾಯಿಕ ಕ್ಷೇತ್ರದ ಅಡಿಕೆ ಬೆಳೆಗಾರರಿಗೆ ಇಳುವರಿ ತೀರಾ ಕಡಿಮೆ ಮತ್ತು ಅಡಿಕೆ ಉತ್ಪನ್ನ ಕ್ಕೆ ಖರ್ಚು ಅತಿ ಹೆಚ್ಚು…!! ಎಲೆಚುಕ್ಕಿ ಹಳದಿಎಲೆ , ಅಡಿಕೆ ಕೊಳೆ ರೋಗ ಇತರೆ ಗಂಭೀರ ಸಮಸ್ಯೆ ಗಳೊಂದಿಗೆ ಸಾಂಪ್ರದಾಯಿಕ ಕ್ಷೇತ್ರದ ಅಡಿಕೆ ಬೆಳೆಗಾರ ಹೋರಾಡುತ್ತಿದ್ದಾನೆ…!!!
ಇದೆಲ್ಲಾ ಹೋರಾಟದ ಜೊತೆಗೆ ಅಡಿಕೆ ಕ್ಯಾನ್ಸರ್ ಕಾರಕ, ವಿದೇಶಿ ಅಕ್ರಮ ಆಮದು ಮತ್ತು ಅಡಿಕೆ ನಿಷೇಧ ಮಾಡಿ ಎಂಬ ಸವಾಲಿಗೂ ಇದೇ ಸಾಂಪ್ರದಾಯಿಕ ಕ್ಷೇತ್ರದ ಮಲೆನಾಡು ಕರಾವಳಿಯ ಅಡಿಕೆ ಬೆಳೆಗಾರರು ಮತ್ತು ಬೆಳೆಗಾರ ಸಹಕಾರಿ ಸಂಸ್ಥೆಗಳು ಮೇಲಿಂದ ಮೇಲೆ ಸಂಭಂದಿಸಿದ ಇಲಾಖೆಗಳು, ಸಚಿವರುಗಳ ಬೇಟಿ ಮತ್ತು ನ್ಯಾಯಾಲಯದಲ್ಲಿ ಅಡಿಕೆ ಪರ ವಾದ ಇತರೆ ವಿಚಾರದಲ್ಲಿ ಹೋರಾಟ ಮಾಡುತ್ತಿದೆ. ನಿಜಕ್ಕೂ ಮಲೆನಾಡು ಕರಾವಳಿಯ ಅಡಿಕೆ ಬೆಳೆಗಾರರ ಕ್ಷೇತ್ರದಲ್ಲಿ ದಿನ ದಿನಕ್ಕೂ ಅಡಿಕೆ ಯ ಮೇಲಿನ ಆಸಕ್ತಿ ಕಡಿಮೆಯಾಗುತ್ತಿದೆಯಾ…?
ಯಾರಿಗಾಗಿ ಅಡಿಕೆ ಬೆಳೆ ಉಳಿಯಬೇಕು…? : ಮೂರು ಮತ್ತು ನಾಲ್ಕನೇ ತಲೆಮಾರಿನ ಪೀಳಿಗೆಗೆ ಊರಲ್ಲಿ ನಾಮಕಾವಸ್ಥೆ ಅಡಿಕೆ ತೋಟ ಇದ್ದರಾಯಿತು. ಮೂಟೆಗಟ್ಟಲೇ ಇಳುವರಿ ಅವರಿಗೆ ಬೇಕಿಲ್ಲ. ಕನಿಷ್ಠ ವೃದ್ದ ಅಪ್ಪ ಅಮ್ಮ ಊರಲ್ಲೇ ಉಳಿಯಲಿ ಎಂದು ಅಡಿಕೆ ಬೆಳೆ ಉಳಿಯಲಿ ಎನ್ನಬಹುದೇನೋ…? ಪಟ್ಟಣದ ದೊಡ್ಡ ದೊಡ್ಡ ಐಟಿ ಬಿಟಿ ಇತರೆ ದೊಡ್ಡ ಸಂಬಳದ ನೌಕರಸ್ಥ ರಾಗಿರುವ ಅಡಿಕೆ ಬೆಳೆಗಾರರ ಮಕ್ಕಳಿಗೆ ಅದೆಷ್ಟೇ ಅಡಿಕೆ ಉತ್ಪತ್ತಿ ಬಂದರೂ, ಬೆಲೆ ಹೆಚ್ಚಾದರೂ ಅಡಿಕೆ ಕೃಷಿ ಮಾಡಲು ಹಳ್ಳಿಗೆ ಬಂದು ಅಪ್ಪ ಅಮ್ಮ ರ ಅಡಿಕೆ ಕೃಷಿ ಮುಂದುವರಿಸೋಲ್ಲ…!! ಮಲೆನಾಡು ಕರಾವಳಿಯ ಮದ್ಯಮ ವರ್ಗ ಮತ್ತು ದೊಡ್ಡ ಬೆಳೆಗಾರರ ಬಹುತೇಕ ಮನೆಯಲ್ಲಿ ಐವತ್ತು ದಾಟಿದವರೇ ಇರುವುದು. ಇವರು ತೋಟಕ್ಕೆ ಹೋದರೆ ಎಲೆಚುಕ್ಕಿ ಬಂದು ಹಣ್ಣಾದ ಅಡಿಕೆ ಸೋಗೆ ಗಳು.. ಮನೆಗೆ ಬಂದು ಇವರು ಕನ್ನಡಿ ನೋಡಿಕೊಂಡರೆ ಈ ಬವಣೆಗಳ ವಿರುದ್ಧ ಹೋರಾಡಿ ಹಣ್ಣಾದ ಇವರ ತಲೆಗೂದಲು.
ಹಾಗಾಗಿ, ಸಾಂಪ್ರದಾಯಿಕ ಅಡಿಕೆ ಬೆಳೆಗಾರ ಅಡಿಕೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ ಅಥವಾ ಎಷ್ಟು ತಲೆಕೆಡಿಸಿಕೊಳ್ಳಬೇಕು..? ಎಲೆಚುಕ್ಕಿ ಯಂತಹ ಸಮಸ್ಯೆ ಯನ್ನು ಅದೆಂಥದೇ ಔಷಧ ಸಿಂಪಡಣೆ ಮಾಡಿದರೂ ಮೇಲಿಂದ ಮೇಲೆ ಬರುವ ಸೈಕ್ಲೋನ್ ಮಳೆ ಆ ಪ್ರಯತ್ನ ವನ್ನು ಧೂಳಿಪಟ ಮಾಡುತ್ತದೆ. ಇನ್ನ ಅಡಿಕೆ ಆಮದು ಕಳ್ಳಸಾಗಣೆ ಬಗ್ಗೆ ರೈತ ಏನನ್ನೂ ಮಾಡಲಾರ.ಸಾಮಾನ್ಯರ ದನಿಗೆಲ್ಲಿದೆ ಮೈಕು…!?? ಹಾಗಾಗಿ ರೈತ ಅಸಾಹಾಯಕ..!!
ಕೇವಲ ಕಾಲು ಭಾಗಕ್ಕಿಂತ ಕಡಿಮೆ ಇರುವ ಸಾಂಪ್ರದಾಯಿಕ ಕ್ಷೇತ್ರದ ಅಡಿಕೆ ಬೆಳೆಗಾರರು ಈ ಅಡಿಕೆ ಕ್ಯಾನ್ಸರ್ ಕಾರಕ, ಅಡಿಕೆ ನಿಷೇಧ ದ ವಿರುದ್ಧವಾಗಿ ಯಾಕೆ ಹೋರಾಟ ಮಾಡಬೇಕು…? ಅಡಿಕೆ ಕಲಬೆರಕೆ ಮತ್ತು ಅಡಿಕೆ ಗೆ ಅಪಾಯಕಾರಿ ರಾಸಾಯನಿಕ ಬಣ್ಣದ ಮೂಲದ ತಾಯಿಬೇರು ಇರುವುದೇ ಬಯಲು ಸೀಮೆಯ ” ಫಲಗುತ್ತಿಗೆ “” ವ್ಯವಸ್ಥೆ ಯಲ್ಲಿ…. !. ಈ ಯಾವುದೇ ಅಡಿಕೆ ಸಂಬಂಧಿಸಿದ ಹೋರಾಟದಲ್ಲಿ ಮಲೆನಾಡು ಮತ್ತು ಕರಾವಳಿಯ ಅಡಿಕೆ ಬೆಳೆಗಾರರ ಕ್ಷೇತ್ರದ ಅಡಿಕೆ ಮಾರಾಟ ಸಹಕಾರಿ ಸಂಘಗಳು ಮತ್ತು ಮಲೆನಾಡು ಕರಾವಳಿಯ ಶಾಸಕರು ಮತ್ತು ಸಂಸದರ ಹೋರಾಟ ಮಾತ್ರ ಎದ್ದು ಕಾಣುತ್ತದೆ. ಈ ಅಡಿಕೆ ಸಮಸ್ಯೆ ಸಂಬಂಧಿಸಿದಂತೆ ಎಂಬತ್ತು ಭಾಗ ಅಡಿಕೆ ಇರುವ ಬಯಲು ಪ್ರದೇಶದ ಅಡಿಕೆ ಬೆಳೆಗಾರರ ಹೋರಾಟ ಎಲ್ಲಿ…? ಏನು ಮಾಡುತ್ತಿದ್ದಾರೆ… ? ಪ್ರಶ್ನೆ ನಮ್ಮಲ್ಲೇ ಉಳಿದಿದೆ…