ಮಲ್ಲಪ್ಪ ವಾಯ್ ಕಟ್ಟಿ ಅವರು ಮಣ್ಣಿನ ರಚನೆ ಬಗ್ಗೆ ಬಹಳ ಸೊಗಸಾಗಿ ವಿವರಣೆ ನೀಡಿದ್ದಾರೆ. ಓದಿ ನೋಡಿ…..
ಯಾವುದೇ ಬೆಳೆ ಬೆಳೆಯ ಬೇಕಾದರೆ ಆಯಾ ಬೆಳೆಯ ಬೆಳವಣಿಗೆಗೆ ತಕ್ಕಂತೆ ಮಣ್ಣಿನ ರಚನೆ ಹೊಂದಿರಬೇಕು. ಸ್ವಲ್ಪ ಮಟ್ಟಿನ ಕ್ಷಾರವನ್ನೂ ಬಳಸಿ ಸಹಜವಾಗಿ ಬೆಳೆಯಬಲ್ಲ ಸಸ್ಯ ಪ್ರಬೇಧಗಳು ನಮ್ಮಲ್ಲಿ ಸಾಕಷ್ಟಿವೆ.
ನಮ್ಮ ಉತ್ತರ ಕರ್ನಾಟಕದ ಲಕ್ಷಾಂತರ ಎಕರೆ ಕಬ್ಬು ಬೇಸಾಯ ಪ್ರದೇಶಗಳಲ್ಲಿ ಎರಡು ಮೂರು ವರ್ಷ ಭೂಮಿಗೆ ವಿಶ್ರಾಂತಿ ಇಲ್ಲದೇ ಅತಿಯಾದ ನೀರಾವರಿಯಿಂದ, ಆಳ ಕೊಳವೆ ಭಾವಿಗಳ ನೀರಿನ ಬಳಕೆಯಿಂದ, ರಾಸಾಯನಿಕ ತ್ಯಾಜ್ಯ ಮಿಶ್ರಿತ ಮತ್ತು ಬೇಸಿಗೆಯಲ್ಲಿ ಹರಿಯದೇ ನಿಂತ ನದಿ ನೀರು, ಸಾವಯವ ಗೊಬ್ಬರ ಎಂದು ರಾಸಾಯನಿಕ ಮಿಶ್ರಿತ ಗೊಬ್ಬರ ಬಳಕೆಯಿಂದ ಮಣ್ಣಿನ ರಸಸಾರ ಕ್ಷಾರಿಯವಾಗಿದೆ. ಗೋಧಿ, ಜವೆಗೋದಿ (ಸದಕ) ಗಜ್ಜರಿ ಮುಂತಾದ ಬೆಳೆಗಳು ಈ ಕ್ಷಾರವನ್ನು ಬಳಸಿಕೊಂಡು ಹುಲುಸಾಗಿ ಬೆಳೆಯುತ್ತವೆ. ಅಲ್ಲದೆ ಸ್ವಲ್ಪ ಮಟ್ಟಿಗೆ ಭೂಮಿಯ ಕ್ಷಾರವನ್ನೂ ಕಡಿಮೆ ಮಾಡುತ್ತವೆ.
ಉತ್ತರ ಕರ್ನಾಟಕದ ಕಬ್ಬು ಬೇಸಾಯ ಪ್ರದೇಶಗಳಲ್ಲಿ ಪ್ರತಿ ವರ್ಷ ಅಂದಾಜು ನಾಲ್ಕು ಲಕ್ಷಕ್ಕೂ ಅಧಿಕ ಕೂಳೆ ಕಬ್ಬು ಕಟಾವು ಮುಂದಿನ ಬೇಸಾಯಕ್ಕೆ ಭೂಮಿಯನ್ನು ಸಿದ್ಧಗೊಳಿಸುತ್ತೇವೆ. ಡಿಸೆಂಬರ್ ವೇಳೆಗೆ ಖಾಲಿಯಾದ ಇಂತಹ ಭೂಮಿಯಲ್ಲಿ ಪ್ರಯೋಗಾತ್ಮಕವಾಗಿ DWB 303 (ಡೈರೆಕ್ಟರೇಟ ಆಫ್ ವ್ಹೀಟ& ಬಾರ್ಲಿ ಪಂಜಾಬ) ಅವರ ಗೋದಿ ತಳಿಯನ್ನು ಒಂದು ಎಕರೆಯಲ್ಲಿ ಜನವರಿ 10 ರಂದು ಬಿತ್ತನೆ ಮಾಡಿದ್ದೇನೆ.
ಎಕರೆಗೆ 38 ರಿಂದ 40 ಕ್ವಿಂಟಲ್ ಇಳುವರಿ ನೀಡಬಲ್ಲ, ಗಿಡ್ಡ ತಳಿ ಇದಾಗಿದ್ದು ಕ್ಷಾರ ಸಹಿಷ್ಣುತೆ ಹೊಂದಿದೆ. CoC 671 ಎರಡನೇ ಕೂಳೆ ಬೆಳೆ ಬೆಳೆದ ಭೂಮಿಯಲ್ಲಿ ಎಕರೆಗೆ 40 ಕೆಜಿ ಬೀಜ ಬಳಸಲಾಗಿದೆ. 95 ರಿಂದ 100 ದಿನದೊಳಗೆ ಕಟಾವಾಗಬಲ್ಲ ಅಲ್ಪಾವಧಿ ತಳಿ ಇದಾಗಿದ್ದು ಈ ತಿಂಗಳು 20 ನೇ ತಾರೀಖಿನ ಒಳಗೇ ಕಟಾವಿಗೆ ಬರುತ್ತದೆ. ಉತ್ತಮ ಇಳುವರಿಯ ನಿರೀಕ್ಷೆಯೂ ಇದೆ. ಅದಕ್ಕಿಂತಲೂ ಹೆಚ್ಚಾಗಿ ಬಿತ್ತನೆ ಮಾಡಿದ ಈ ಜೌಗು ಪ್ರದೇಶದ pH ಹತೋಟಿಗೆ ಬರುವ ಎಲ್ಲ ಲಕ್ಷಣಗಳೂ ಇವೆ.
ಸ್ವಲ್ಪ ಮುತುವರ್ಜಿವಹಿಸಿ ಇಂತಹ ತಳಿಗಳನ್ನು ಬೇಸಾಯ ಮಾಡುವುದು ಸಹಜ ಬೇಸಾಯಕ್ಕೆ ಪೂರಕವಲ್ಲವೇ ?
ಮಲ್ಲಪ್ಪ ವಾಯ್ ಕಟ್ಟಿ
ರೋಹಿಣಿ ಬಯೋಟೆಕ್
ಮಹಾಲಿಂಗಪೂರ
9845553416