ಭೂಮಿ ಹದ ಭೂಮಿಯಾದರೆ ಅಡಿಕೆಗೆ ನೀರಾವರಿಯನ್ನು ಯೋಚಿಸಿ ಯೋಜಿಸಿ ಮಾಡಬೇಕು. ಅಡಿಕೆಗೆ ಅತಿ ನೀರಾವರಿ ಅಡಿಕೆ ಕೊಳೆ ರೋಗಕ್ಕೆ ಅತಿ ಮುಖ್ಯ ಕಾರಣವಾಗುತ್ತದೆ.ಈಗ ಗುಡ್ಡ ಬೆಟ್ಟ ಬಯಲು ಮುಂತಾದ ಅಡಿಕೆಗೆ ಯೋಗ್ಯವಲ್ಲದ ಭೂಮಿಯಲ್ಲಿ ಅಡಿಕೆ ತೋಟ ಮಾಡಿ ಇಂತಹ ಬರದ ಸಂದ ರ್ಭದಲ್ಲಿ ರೈತರು ಕಷ್ಟ ಕ್ಕೆ ಸಿಕ್ಕಿ ಹಾಕಿಕೊಂಡಿದ್ದಾರೆ.
ಬಹುಶಃ ಅಡಿಕೆ ತೋಟ ಬೆಟ್ಟಾಗುವಷ್ಟು ಇನ್ಯಾವ ಕೃಷಿ ಯೂ ಬೆಟ್ಟಾಗದು. ಅದಕ್ಕೆ ಕಾರಣ ಬಸಿಗಾಲುವೆ. ಬಸಿಗಾಲುವೆ ಅಥವಾ ಕಪ್ಪು ಮಳೆಗಾಲದಲ್ಲಿ ಅಡಿಕೆ ತೋಟದೊಳಗಿನ ಜವಳು ನಿಯಂತ್ರಣ ಮಾಡಿದರೂ ಬೇಸಿಗೆಯಲ್ಲಿ ಅಡಿಕೆ ಮರಕ್ಕೆ ನೀರಿನ ಕೊರತೆಯುಂಟು ಮಾಡುವುದು ವಿಪರ್ಯಾಸ. ಅಡಿಕೆ ಮರದ ಬೇರುಗಳು ಸೀಮಿತ ಆಳದವರೆಗೆ ಮಾತ್ರ ಹೋಗುವುದರಿಂದ ಅಡಿಕೆ ತೋಟದ ಮೇಲ್ಮೈ ನ ಮೂರು ಅಡಿ ಡ್ರೈ ಅಥವಾ ಒಣಗಿ ತೇವಾಂಶ ಆರಿದರೆ ಕೂಡಲೇ ಅಡಿಕೆ ಮರ ಹಣ್ಣಾಗಿ ಸಾಯಲು ಶುರು ಮಾಡುತ್ತದೆ. ಈ ಬರ ಖಾಯಂ ಆದರೆ ಈ ಬೇಸಿಗೆಯಲ್ಲಿ ಬಯಲು ನಾಡಿನ ಲಕ್ಷಾಂತರ ಎಕರೆ ಅಡಿಕೆ ತೋಟಗಳು ಸತ್ತು ಹೋಗಲಿದೆ.
ಇದು ಹತ್ತು ವರ್ಷಗಳ ಹಿಂದಿನ ಬರಗಾಲದಲ್ಲಿ ನೆಡೆದು ಹೋಗಿದೆ.ದಾವಣಗೆರೆ ಚಿತ್ರದುರ್ಗ ತುಮಕೂರು ಜಿಲ್ಲೆಯ ಅನೇಕ ತೋಟಗಳು ಸತ್ತು ಹೋಗಿದೆ.ಅಣೆಕಟ್ಟು ನೀರಾವರಿ ಮತ್ತು ಬೋರ್ ನೀರಾವರಿಯ ಅನೇಕ ಅಡಿಕೆ ತೋಟಗಳು ಈ ಸಲ ಸುಟ್ಟು ಸತ್ತು ನಾಶವಾಗುವುದು ನಿಸ್ಸಂಶಯ. ಇದು ವಿಷಾದನೀಯವಾದರೂ ಅಡಿಕೆ ಬೆಳೆ ವಿಸ್ತರಣೆಗೆ ತಡೆಯಾಗುವುದು ಖಂಡಿತ.
ಅಡಿಕೆಯನ್ನು ಕಂದಕ ಕಣಿವೆಯಲ್ಲಿ ಹಿಂದಿನವರು ಮಾಡುತ್ತಿದ್ದರು. ಇದು ಮಳೆಗಾಲದ ಗಾಳಿ ಇತ್ಯಾದಿ ಪ್ರತಿಕೂಲ ಪರಿಣಾಮಗಳನ್ನು ಎದುರಿಸಲು, ಪಶ್ಚಿಮದ ಇಳಿಬಿಸುಲು ಎದುರಿಸುವಂತಹ ಭೌಗೋಳಿಕವಾಗಿ ಅನುಕೂಲ ಇರುವ ಜಾಗದಲ್ಲಿ ಮಾತ್ರ ಅಡಿಕೆ ತೋಟ ಮಾಡುತ್ತಿದ್ದರು. ಈ ಜೆಸಿಬಿ,ಬೋರ್ , ಉಚಿತ ವಿದ್ಯುತ್, ಆಹಾರ ಧಾನ್ಯ ಬೆಳೆಯಲು ಸರ್ಕಾರ ಮಲೆನಾಡಿನ ಅಮೂಲ್ಯ ಅರಣ್ಯ ಮುಳುಗಿಸಿ ಆಣೆಕಟ್ಟು ನಿರ್ಮಿಸಿ ಒದಗಿಸಿದ ನೀರಾವರಿ ಯಲ್ಲಿ ಬೆಳೆದ ಅಡಿಕೆ ತೋಟಗಳು ಒಂದಿಲ್ಲೊಂದು ಒಂದು ಸಮಯದಲ್ಲಿ ಚಿಕ್ಕ ಪುಟ್ಟ ಪ್ರಕೃತಿ ವಿಕೋಪ ಬರಗಾಲ ಉಂಟಾದರೂ ಅದನ್ನು ಅಡಿಕೆಯಂತಹ ಸೂಕ್ಷ್ಮ ಬೆಳೆ ತಾಳಿಕೊಳ್ಳದೇ ಬೆಳಗಾರನ ಹತ್ತಾರು ವರ್ಷಗಳ ಶ್ರಮವನ್ನು ಕೇವಲ ತಿಂಗಳೊಪ್ಪ ತ್ತಿನಲ್ಲಿ ನಾಶ ಮಾಡುತ್ತದೆ.
ಅದಕ್ಕೆ ಹೇಳುವುದು..ಹಿಂದಿನ ಕಾಲದವರು ಬುದ್ದಿವಂತರು.. ಅವರು ಯಾವುದೇ ಕೆಲಸ ಕಾರ್ಯ ಗಳನ್ನು ಭವಿಷ್ಯದ ದೃಷ್ಟಿಯಿಂದ ಯೋಜಿಸಿ ಯೋಚಿಸಿಯೇ ಮಾಡುತ್ತಿದ್ದರು.
ಮಾನ್ಯ ಅಡಿಕೆ ಬೆಳೆಗಾರರೇ., ನಿಮ್ಮ ತೋಟಕ್ಕೆ ಗ್ಯಾರಂಟಿ ನೀರಾವರಿ ಮೂಲವಿದ್ದರೆ ಎಂದಿನಂತೆ ಅಡಿಕೆಗೆ ನೀರುಣಿಸಿ…
ಆದರೆ ಒಂದು ಜ್ಞಾಪಕ ದಲ್ಲಿಟ್ಟುಕೊಳ್ಳಿ… ಈ ಬಾರಿ ಬರಗಾಲವಿದೆ… ಇನ್ನು ಏನೇ ಮಳೆ ಬಂದರೂ ಇದುವರೆಗೂ ಬರದ ಮಳೆಯ ಕೊರತೆ ನೀಗಿಸದು. ನೀರನ್ನು ಮಿತವಾಗಿ ಉಣಿಸಿ. ಇದು ಮುಂದಿನ ಮಳೆಗಾಲ ಎಂದರೆ ಇನ್ನೂ ಎಂಟು ತಿಂಗಳ ಕಾಲ ಕಾಪಾಡಿಕೊಂಡು ಹೋಗಬೇಕು.
ಇದರ ಜೊತೆಯಲ್ಲಿ ಈ ಬಾರಿ ಬರದ ಕಾರಣ ರಾಜ್ಯದ ನಲವತ್ತು ಪರ್ಸೆಂಟ್ ವಿದ್ಯುತ್ ಪೂರೈಕೆ ಗೆ ವಿದ್ಯುತ್ ಒದಗಿಸುತ್ತಿದ್ದ ಲಿಂಗನಮಕ್ಕಿ ಈ ಬಾರಿ ಇನ್ನು ಕೆಲವೇ ದಿನಗಳಲ್ಲಿ ವಿದ್ಯುತ್ ಉತ್ಪಾದನೆ ನಿಲ್ಲಿಸುವ ಸಾದ್ಯತೆ ಇದೆ. ಖಂಡಿತವಾಗಿಯೂ ಈ ಬಾರಿ ಈ ಉಚಿತ ವಿದ್ಯುತ್ ಮತ್ತು ಮಳೆ ಕೊರತೆಯ ಕಾರಣಕ್ಕೆ ವಿದ್ಯುತ್ ಕೊರತೆಯುಂಟಾಗಲಿದೆ. ರೈತರ ನೀರಾವರಿ ಮೋಟರ್ ಗಳಿಗೆ ಆಟೋ ಸ್ಟಾರ್ಟರ್ ಹಾಕಿಕೊಂಡರೆ ಸರ್ಕಾರ ಅಪರೂಪ ಕ್ಕೆ ಕೊಟ್ಟ ವಿದ್ಯುತ್ ನಲ್ಲಿ ಸ್ವಲ್ಪ ಮಟ್ಟಿಗೆ ನೀರೊದಗಿಸಬಹುದು..
ಈ ಬಾರಿ ಮಳೆ ಬರ ಮತ್ತು ವಿದ್ಯುತ್ ಬರ ಒಟ್ಟೊಟ್ಟಿಗೆ ಬರಲಿದೆ. ಈಗಾಗಲೇ ತಜ್ಞರು ಇದು 121 ವರ್ಷದ ದಾಖಲೆ ಮಳೆ ಕೊರತೆ ಎಂದು ಎಚ್ಚರಿಕೆ ನೀಡಿದ್ದಾರೆ.
ರೈತ ಬಾಂಧವರೇ ಯಾರೋ ಸ್ವಾಮಿಗಳು ,ಜ್ಯೋತಿಷ್ಯರಂತೆ ಹವಾಮಾನ ಇಲಾಖೆಯೂ ಸೆಪ್ಟೆಂಬರ್ ನಲ್ಲಿ ಘೋರ ಮಳೆ ಬರುತ್ತದೆ , ನಾಳೆ ಮಳೆ ಬರುತ್ತದೆ, ಹತ್ತನೇ ತಾರೀಖಿನ ನಂತರ ಭಾರೀ ಮಳೆ , ಈ ತಿಂಗಳ ಕೊನೆ ವಾರ ಭೀಕರ ಮಳೆ ಅಂತೆಲ್ಲ ಹೇಳುತ್ತಿದ್ದಾರೆ.ಇದೇ ತರ ಕಳೆದ ತಿಂಗಳೂ ಇದೇ ಹವಾಮಾನ ಇಲಾಖೆ ಜ್ಯೋತಿಷ್ಯರು ಹೇಳಿದ್ದರು. ಅದು ನಿಜವಾಗಲಿಲ್ಲ.
ಮಳೆ ಯಾವತ್ತೋ ಬಂದು ಒಂದಷ್ಟು ಅನಾಹುತ ಖಂಡಿತವಾಗಿಯೂ ಮಾಡಬಹುದು ಅಥವಾ ಮಾಡುತ್ತದೆ. ಆದರೆ ಆ ಮಳೆ ಖಂಡಿತವಾಗಿಯೂ ಭೂಮಿ ಹದ ಮಾಡದು.ಆದ್ದರಿಂದ ರೈತ ಬಾಂಧವರು ಈ ಬಾರಿ ನೀರಾವರಿ ಯ ಬಗ್ಗೆ ಜಾಗೃತೆ ಯಾಗುವುದು ಅತ್ಯಂತ ಒಳ್ಳೆಯದು.
ಮನುಷ್ಯ ಪ್ರಕೃತಿಯ ಮೇಲೆ ದೌರ್ಜನ್ಯ ಮಾಡಿ ನಿಸರ್ಗ ದ ವಿರುದ್ಧವಾಗಿ ಎಂದೂ ವಿಜಯ ಸಾಧಿಸಲು ಅಸಾಧ್ಯ.ಇದು ಮನುಷ್ಯ ನಿಗೆ ಪ್ರಕೃತಿ ಯು ತನ್ನ ಪ್ರಭಾವ ಅಥವಾ ಶಕ್ತಿ ತೋರಿಸುತ್ತಿರುವುದು.ನಾವು ನಿಸರ್ಗದೊಂದಿಗೆ ಕೂಡಿ ಬಾಳುವುದನ್ನ ಅಭ್ಯಾಸ ಮಾಡುವುದನ್ನು ಇಂತಹ ಪ್ರಕೃತಿ ವಿಕೋಪ ಗಳು ಕಲಿಸುತ್ತದೆ.ನಾವು ಕಲಿಯಬೇಕು ಅಲ್ವಾ…?