ಭಾರತದಲ್ಲಿ 1000 ಕ್ಕೂ ಹೆಚ್ಚಿನ ವಿವಿಧ ತಳಿಯ ಮಾವುಗಳಿವೆ. ಅವುಗಳಲ್ಲಿ 20 ತಳಿಯ ಹಣ್ಣುಗಳನ್ನು ಮಾತ್ರ ವಾಣಿಜ್ಯಿಕವಾಗಿ ಬೆಳೆಯಲಾಗುತ್ತದೆ. ಪ್ರಪಂಚದ ಒಟ್ಟು ಮಾವಿನ ಉತ್ಪಾದನೆಯಲ್ಲಿ ಭಾರತದ ಪಾಲು ಬರೋಬರಿ 36%. ಭಾರತದಲ್ಲಿ ವಾರ್ಷಿಕವಾಗಿ 18 ಮಿಲಿಯನ್ ಟನ್‌ಗಳಷ್ಟು ಮಾವು ಬೆಳೆಯಲಾಗುತ್ತದೆ. ಮಾವಿನ ಬೆಳವಣಿಗೆಯಲ್ಲಿ ಎರಡನೇ ಸ್ಥಾನದಲ್ಲಿರುವ ಚೀನಾ ಬೆಳೆಯುವ ಮಾವಿನ ಪ್ರಮಾಣ ಕೇವಲ 4 ಮಿಲಿಯನ್ ಟನ್ ಮಾತ್ರ. ಈ ಹಿನ್ನಲೆಯಲ್ಲಿ ಮಾವು ಅಕ್ಷರಶಃ ಭಾರತದ ಹಣ್ಣು; ಭಾರತದ ರಾಷ್ಟ್ರೀಯ ಹಣ್ಣಾಗಿರುವುದಕ್ಕೂ ಸಾರ್ಥಕ.
ಭಾರತದಲ್ಲಿ ಬೆಳೆಯುವ ಒಟ್ಟು ಮಾವಿಹಣ್ಣುಗಳಲ್ಲಿ 23% ಉತ್ತರ ಪ್ರದೇಶದಲ್ಲಿ ಬೆಳೆದರೆ, ಆಂದ್ರದಲ್ಲಿ 22% ಮತ್ತು ಕರ್ನಾಟಕದಲ್ಲಿ 11% ಬೆಖೆಯಲಾಗುತ್ತದೆ. ಕೇವಲ ಈ ಮೂರು ರಾಜ್ಯಗಳು ದೇಶದ ಒಟ್ಟಾರೆ ಮಾವಿನ ಹಣ್ಣುಗಳಲ್ಲಿ 50% ಕ್ಕಿಂತ ಹೆಚ್ಚು ಬೆಳೆಯುತ್ತವೆ.ಮಾವಿನ ಕೆಲವು ಪ್ರಮುಖ ತಳಿಗಳ ವಿವರ ತಿಳಿಯುವುದಾದರೆ.
ಅಲ್ಫೊನ್ಸೋ (ಬಾದಾಮಿ): ಈ ತಳಿಯ ಹಣ್ಣಿಗೆ ಕರ್ನಾಟಕದಲ್ಲಿ ಬಾದಾಮಿ ಮತ್ತು ಮಹಾರಾಷ್ಟ್ರದಲ್ಲಿ ಹಪ್ಪುಸ್ ಎಂದು ಕರೆಯಲಾಗುತ್ತದೆ. ಅಲ್ಫೋನ್ಸೋಸ್ ಅನ್ನು “ಮಾವಿನ ರಾಜ” ಎಂದು ಕರೆಯಲಾಗುತ್ತದೆ.
ತೋತಾಪುರಿ: ದೊಡ್ಡಗಾತ್ರದ ಉದ್ದನೆಯ ಈ ತಳಿ ನಮ್ಮ ಕರ್ನಾಟಕ ಮೂಲದ್ದು. ಹಳದಿ ಮಿಶ್ರಿತ ಕೆಂಬಣ್ಣದ ಈ ತಳಿ ಕಾಯಿ ಇದ್ದಾಗಲೂ ಹೆಚ್ಚಾಗಿ ಬಳಸುತ್ತಾರೆ. ಸಂಸ್ಕರಣೆ ಮಾಡಲು ಕೂಡ ವ್ಯಾಪಕವಾಗಿ ಬಳಸಲಾಗುತ್ತದೆ.
ಬಂಗನಪಲ್ಲಿ: ಸಫೇದಾ ಎಂದೂ ಕರೆಯಲ್ಪಡುವ ಇದು ಆಂಧ್ರ ಮತ್ತು ತಮಿಳುನಾಡಿನ ವಾಣಿಜ್ಯ ತಳಿಯಾಗಿದೆ.
ದಶೇರಿ: ಲಕ್ನೋ ಬಳಿಯ ದಶೆಹರಿ ಎಂಬ ಹಳ್ಳಿಯಿಂದ ಈ ತಳಿಯ ಹೆಸರು ಬಂದಿದೆ. ತನ್ನ ಸಿಹಿ ಮತ್ತು ವಿಶಿಷ್ಟ ರುಚಿಯಿಂದ ಖ್ಯಾತಿ ಗಳಿಸಿದೆ.
ಹಿಮ್ಸಾಗರ್: ಇದು ಬಂಗಾಳದ ಸ್ಥಳೀಯ ತಳಿಯಾಗಿದ್ದು, ಆ ಭಾಗದಲ್ಲಿ ವ್ಯಾಪಕ ಜನಪ್ರಿಯತೆಯನ್ನು ಗಳಿಸಿದೆ.
ಕೇಸರ್: ಇದು ಗುಜರಾತ್‌ನ ಮೂಲದ ಕೇಸರ್ ದೇಶದ ದುಬಾರಿ ಬೆಲೆಯ ಮಾವಿನ ತಳಿಗಳಲ್ಲಿ ಪ್ರಮುಖವಾದ್ದದ್ದಾಗಿದೆ. ಮಧ್ಯಮ ಗಾತ್ರದ ಈ ಹಣ್ಣು ಹೆಚ್ಚು ಉದ್ದವಾಗಿದ್ದು ಹೆಚ್ಚು ದಿನ ಸಂಗ್ರಹಿಸಿಡಬಹುದಾಗಿದೆ.
ಲಾಂಗ್ರಾ: ಉತ್ತರ ಪ್ರದೇಶದ ವಾರಣಾಸಿ ಪ್ರದೇಶದ ಸ್ಥಳೀಯ ಮೂಲದ ತಳಿ. ಉತ್ತರ ಪ್ರದೇಶದ ಒಂದು ಹಳ್ಳಿಯಲ್ಲಿ ಈ ತಳಿಯ ಒಂದು ಪ್ರಾಚೀನ ಮಾವಿನ ಮರ ಈಗಲೂ ಇದ್ದು, ಆ ಮರದ ಮಾಲೀಕನ ಹೆಸರು ಈ ತಳಿಗೆ ಬಂದಿದೆ ಎಂದು ಹೇಳಲಾಗುತ್ತದೆ.
ಅಂಬಿಕಾ: ಇದು ಅಮ್ರಪಾಲಿ ಮತ್ತು ಜನಾರ್ದನ್ ಪಸಂದ್ ತಳಿಗಳಿಂದ ಅಭಿವೃದ್ಧಿ ಪಡಿಸಿದ ಮಿಶ್ರತಳಿ. ಈ ತಳಿಯನ್ನು ವಾಣಿಜ್ಯ ಕೃಷಿಗಾಗಿ 2000 ರಲ್ಲಿ ಅಭಿವೃದ್ಧಿ ಪಡಿಸಲಾಯಿತು.
ಮುಲ್ಗೋವಾ: ಇದು ದಕ್ಷಿಣ ಭಾರತದ ಪ್ರಮುಖ ವಾಣಿಜ್ಯ ತಳಿಯಾಗಿದೆ. ಉತ್ತಮ ಗುಣಮಟ್ಟದ ಕಾರಣದಿಂದಾಗಿ ಮಾವಿನ ಪ್ರಿಯರಲ್ಲಿ ಇದು ಸಾಕಷ್ಟು ಜನಪ್ರಿಯವಾಗಿದೆ.
ವನರಾಜ್: ಇದು ಗುಜರಾತ್‌ನ ವಡೋದರ ಜಿಲ್ಲೆಯ ದುಬಾರಿ ಬೆಲೆಯ ತಳಿಯಾಗಿದ್ದು, ಕೃಷಿಕರಿಗೆ ಉತ್ತಮ ಆದಾಯವನ್ನು ನೀಡುತ್ತದೆ. ಹಣ್ಣು ಮಧ್ಯಮ ಗಾತ್ರದಲ್ಲಿರುತ್ತದೆ.
ಸುವರ್ಣರೇಖಾ: ಇದು ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ವಾಣಿಜ್ಯ ತಳಿಯಾಗಿದೆ.
ಚೌಸಾ : ಈ ತಳಿಯು ಉತ್ತರ ಪ್ರದೇಶದ ಸ್ಯಾಂಡಿಲಾ ಜಿಲ್ಲೆಯ ಹರ್ಡೋಯಿಯ ತೋಟವೊಙದರಲ್ಲಿ ಆಕಸ್ಮಿಕವಾಗಿ ಅಭಿವೃದ್ಧಿ ಹೊಂದಿದ ತಳಿ ಎನ್ನಲಾಗಿದೆ.
Source: India.in.fixels