ಒಂಟಿತನದ ಸಂಕಟ : ಡಿಜಿಟಲ್ ಯುಗದ ಮಾನವ ಸಂಬಂಧಗಳು

September 26, 2025
8:27 PM
ಒಂಟಿತನವೆಂಬುದು ಮಾನವನಿಗೆ ಅಜ್ಞಾತವಲ್ಲ. ಪ್ರಾಚೀನ ಕಾಲದಿಂದಲೇ ತಪಸ್ಸಿನ ಹೆಸರಿನಲ್ಲಿ, ಧ್ಯಾನದ ಹೆಸರಿನಲ್ಲಿ ಕೆಲವರು ಏಕಾಂಗ ಜೀವನವನ್ನು ಆರಿಸಿಕೊಂಡಿದ್ದರೆ, ಕೆಲವರಿಗೆ ಬಲವಂತದ ಏಕಾಂಗಿತನ ದುಃಖವನ್ನು ತರುತ್ತಿತ್ತು. ಆದರೆ ಆಧ್ಯಾತ್ಮಿಕ ಏಕಾಂತವು ಅಂತರಂಗ ಶಾಂತಿಯತ್ತ ದಾರಿ ತೋರಿಸಿದರೆ, ಬಲವಂತದ ಒಂಟಿತನವು ಖಾಲಿತನ ಮತ್ತು ದುಃಖದ ಬೀಜವನ್ನು ಬಿತ್ತುತ್ತದೆ.

ಅದೊಂದು ಆಧುನಿಕ ಆಸ್ಪತ್ರೆಯ ಕೊಠಡಿ !

ಫಿನಾಯಿಲ್ ನ ವಾಸನೆಯೊಂದಿಗೆ ನಿಶ್ಯಬ್ಧ ಕೊಠಡಿಯಲ್ಲಿ ಜೀವರಕ್ಷಕ  ಯಂತ್ರಗಳ ಸೂಕ್ಷ್ಮ ಶಬ್ಧಗಳು ಮತ್ತು ಬೀಪ್ ಸದ್ದಿನ ಹೊರತಾಗಿ ಬೇರೇನೂ ಶಬ್ದಗಳಿಲ್ಲ.!,  ಮಂದ ಬೆಳಕು ಸಂಪೂರ್ಣ ಹವಾ ನಿಯಂತ್ರಿತ ಕೊಠಡಿಯಲ್ಲಿ ಮಲಗಿದಲ್ಲಿಂದ ಕಾಣುತ್ತಿರುವ ಛಾವಣಿ ದೂರದಲ್ಲಿ ಕುಳಿತ ನರ್ಸ್ , ಪಕ್ಕದಲ್ಲಿರುವ ಹೃದಯದ ನೋವನ್ನು ಮುಖದಲ್ಲಿ ತೋರಕೊಡದೆ ಕುಳಿತಿರುವ ಹೆಂಡತಿ ! ಇಷ್ಟೇ …

ಮನಸ್ಸಿನಲ್ಲಿ ಒಂದು ನಿರಾಶೆಯ ಅಲೆ ಎದ್ದಿತು !, ಹೆಮ್ಮೆಯಿಂದ  ಹೇಳಿಕೊಳ್ಳುತ್ತಿದ್ದ ,ಪ್ರತಿಷ್ಠಿತ ಶಾಲಾ ಕಾಲೇಜುಗಳಲ್ಲಿ ಕಲಿತು ವಿದೇಶದಲ್ಲಿಯೇ ಉನ್ನತ ವಿದ್ಯಾಭ್ಯಾಸ ಮಾಡಿದ  ಮಗ ಮಗಳು ದೂರದ ಅಮೆರಿಕಾದ ಗ್ರೀನ್ ಕಾರ್ಡ್ ಹೋಲ್ಡರುಗಳು !.

ಒಮ್ಮೆ ಪ್ರತಿಷ್ಠಿತ ಕಂಪನಿಯ ಉನ್ನತ ಹುದ್ದೆ, ಓಡಾಡಲು ಕಾರು, ಬಾಗಿಲಿಗೆ ಬರುವ ಡ್ರೈವರ್, ಬೆರಳ ತುದಿಯಲ್ಲಿರುವ ಬೆಲ್‌ಗೆ ತಕ್ಷಣ ಬಂದು ನಿಲ್ಲುವ ಸಹಾಯಕರು! ಕೈ ಕಟ್ಟಿ ತಲೆ ತಗ್ಗಿಸಿ ನಿಲ್ಲುತ್ತಿದ್ದ ಸಹೋದ್ಯೋಗಿಗಳು!

ಅತಿ ಹೆಚ್ಚು ಮೌಲ್ಯದ ಮೊಬೈಲ್‌ನಲ್ಲಿ ನೂರಾರು, ಸಾವಿರಾರು ಸಂಪರ್ಕ ಸಂಖ್ಯೆಗಳು!, ಆದರೆ … ಆದರೆ …ಇಂದು ಆಸ್ಪತ್ರೆಯ ಬೆಡ್  ನ ಪಕ್ಕದಲ್ಲಿ ಹೆಂಡತಿಯ ಹೊರತಾಗಿ  ಯಾರೂ ಇಲ್ಲ !, ಹೊರಗೆಯೂ …ಯಾರೂ ಬಂದವರಿಲ್ಲ !

Advertisement

ಬೆರಳ ತುದಿಯಲ್ಲಿ ಪ್ರಪಂಚವನ್ನೇ ಆಡಿಸುತ್ತಿದ್ದವನಿಗೆ ಇಂದು ತನ್ನ ಕೈ ಹಿಡಿದು ಸಾಂತ್ವನ ನೀಡಲು, ಧೈರ್ಯ ಹೇಳಲು, ಪ್ರೀತಿಯ ನೆನಪು ನೀಡಲು ಯಾರೂ  ಇಲ್ಲದೆ ಹೋದದ್ದು  ಬದುಕಿನ , ವಾಸ್ತವದ ದುರಂತ !, ಇದು  ಡಿಜಿಟಲ್ ಯುಗದ ಮಾನವ ಸಂಬಂಧಗಳ ಚಿತ್ರಣ .

********

ಇಂದಿನ ತಂತ್ರಜ್ಞಾನಾಧಾರಿತ ಯುಗದಲ್ಲಿ, ಜಗತ್ತು “ಒಂದೇ ಕ್ಲಿಕ್ಕಿನ ಅಂತರದಲ್ಲಿ” ನಮ್ಮ ಕೈಬೆರಳ ತುದಿಗೇ ತಲುಪಿದೆ ಎನ್ನುವುದು ನಿಜ. ಮನುಷ್ಯನು ತನ್ನ ಜೀವನದ ಬಹುಭಾಗವನ್ನು ಸಾಮಾಜಿಕ ಜಾಲತಾಣಗಳು, ಆನ್‌ಲೈನ್‌ ಸಂವಹನ, ಸ್ಮಾರ್ಟ್‌ಫೋನ್‌ಗಳು ಹಾಗೂ ಡಿಜಿಟಲ್‌ ಮಾಧ್ಯಮಗಳಲ್ಲಿ ಕಳೆದರೂ, ಅವನೊಳಗಿನ ಮನಸ್ಸು ಅನೇಕ ಬಾರಿ ಖಾಲಿಯಾಗಿರುವಂತೆ, ನಿರ್ಜನವಾಗಿರುವಂತೆ ಭಾಸವಾಗುತ್ತದೆ. ಇದನ್ನು ನಾವು “ಡಿಜಿಟಲ್ ಒಂಟಿತನ” (Digital Loneliness) ಎಂದೇ ಕರೆಯಬಹುದು.

ಒಂಟಿತನವೆಂಬುದು ಮಾನವನಿಗೆ ಅಜ್ಞಾತವಲ್ಲ. ಪ್ರಾಚೀನ ಕಾಲದಿಂದಲೇ ತಪಸ್ಸಿನ ಹೆಸರಿನಲ್ಲಿ, ಧ್ಯಾನದ ಹೆಸರಿನಲ್ಲಿ ಕೆಲವರು ಏಕಾಂಗ ಜೀವನವನ್ನು ಆರಿಸಿಕೊಂಡಿದ್ದರೆ, ಕೆಲವರಿಗೆ ಬಲವಂತದ ಏಕಾಂಗಿತನ ದುಃಖವನ್ನು ತರುತ್ತಿತ್ತು. ಆದರೆ ಆಧ್ಯಾತ್ಮಿಕ ಏಕಾಂತವು ಅಂತರಂಗ ಶಾಂತಿಯತ್ತ ದಾರಿ ತೋರಿಸಿದರೆ, ಬಲವಂತದ ಒಂಟಿತನವು ಖಾಲಿತನ ಮತ್ತು ದುಃಖದ ಬೀಜವನ್ನು ಬಿತ್ತುತ್ತದೆ.

ಆದರೆ ಡಿಜಿಟಲ್‌ ಮಾಧ್ಯಮಗಳು ನೂರಾರು ಜನರೊಂದಿಗೆ ನಮ್ಮನ್ನು ತಕ್ಷಣ ಸಂಪರ್ಕಕ್ಕೆ ತರುತ್ತವೆ. ನೂರಾರು ಸ್ನೇಹಿತರ ಪಟ್ಟಿ, ಸಾವಿರಾರು “ಫಾಲೋವರ್ಸ್‌”, ನೂರಾರು “ಲೈಕ್ಸ್‌”ಗಳು ಇದ್ದರೂ,ಮನಸ್ಸಿನ ಆಳದ ಮಾತು ಹಂಚಿಕೊಳ್ಳುವುದಕ್ಕೆ ಯಾರೂ ಇರುವುದಿಲ್ಲ ಎಂಬುದು ದುರಂತ. ನಿಜವಾದ ಸಂಕಷ್ಟದ ಹೊತ್ತಿನಲ್ಲಿ ಬಾಗಿಲು ತಟ್ಟಿ ಬರುವವರು ಸಿಗುವುದಿಲ್ಲ ಎಂಬುದು ವಾಸ್ತವ.

Advertisement

ಇಲ್ಲಿ ಒಂದು ವಿಚಿತ್ರ ವಿರೋಧಾಭಾಸ ಕಾಣುತ್ತದೆ – ಸಂಪರ್ಕಗಳ ಪ್ರಮಾಣ ಹೆಚ್ಚಿದಂತೆ ನಿಜವಾದ ಸಂಬಂಧಗಳ ಗುಣ ಕುಸಿಯುತ್ತಿರುವುದು.ಡಿಜಿಟಲ್‌ ಸಂವಹನವು ಯಾಂತ್ರಿಕ. ಎಮೋಜಿಗಳ ಮೂಲಕ ಭಾವವನ್ನು ತೋರಿಸುವುದಾದರೂ, ಅವು ನಿಜವಾದ ಕಣ್ಣು-ಕಣ್ಣಿನ ನೋಟ, ಹೃದಯ-ಹೃದಯದ ಸ್ಪರ್ಶ, ಮಾತಿನ ಹಿತಗಳನ್ನು ಬದಲಾಯಿಸಲಾರವು. ಹೀಗಾಗಿ, ಮನುಷ್ಯನು ಜನರ ಮಧ್ಯೆ ಇದ್ದರೂ, ಮನಸ್ಸಿನಲ್ಲಿ ವಿಚ್ಛಿನ್ನತೆಯ ಅನುಭವ ಪಡೆಯುತ್ತಾನೆ. ಇದು ಒಂಟಿತನಕ್ಕೆ ಕಾರಣವಾಗುತ್ತದೆ.

ಒಂಟಿತನದ ಪರಿಣಾಮಗಳು ಹಲವು .ಇದರಿಂದ ಮಾನಸಿಕ ಖಿನ್ನತೆ, ಅಶಾಂತಿ, ಆತಂಕ, ಬದುಕಿನಲ್ಲಿ  ನಿರಸತೆಯ ಭಾವ ಬಂದು ಬಿಡುತ್ತದೆ.ಕುಟುಂಬ-ಸ್ನೇಹದ ಬಾಂಧವ್ಯ ಸಡಿಲಗೊಳ್ಳುವುದು, ತಲೆಮಾರುಗಳ ಮಧ್ಯೆ ಅಂತರ ಹೆಚ್ಚುವುದು ಪ್ರಾರಂಭವಾಗುತ್ತದೆ. ನಿದ್ರಾ ಹೀನತೆ  ಒತ್ತಡ, ಅಸಹನೆ ಹೆಚ್ಚುವುದಕ್ಕೆ ಪ್ರಾರಂಭವಾಗುತ್ತದೆ.

“ಮನುಷ್ಯನಿಗೆ ದೈಹಿಕ ಆಹಾರವಷ್ಟೇ ಮುಖ್ಯವಲ್ಲ, ಸಾಮಾಜಿಕ ಆಹಾರ (social nourishment) ಸಹ equally ಅಗತ್ಯ.” ಎಂಬುದಾಗಿ ಆಧುನಿಕ ಮನೋವಿಜ್ಞಾನವು ಹೇಳುತ್ತದೆ.

ಪರಿಹಾರದ ದಾರಿಗಳು:  ನೈಜ ಸಂಬಂಧಗಳ ಮೌಲ್ಯ ಅರಿತು  ಕುಟುಂಬದವರೊಂದಿಗೆ ಸಮಯ ಕಳೆಯುವುದು, ನೆರೆಹೊರೆಯವರೊಂದಿಗೆ ಮಾತುಕತೆ, ಸ್ನೇಹಿತರೊಂದಿಗೆ ನೇರ ಸಂವಾದಗಳಲ್ಲಿ ತೊಡಗಿಸಿಕೊಳ್ಳಬೇಕಿದೆ. ಡಿಜಿಟಲ್‌ ಉಪಯೋಗವನ್ನು  ಮಿತಗೊಳಿಸಿ  ತಂತ್ರಜ್ಞಾನವನ್ನು ಸಂಬಂಧ ಗಟ್ಟಿಗೊಳಿಸಲು ಬಳಸಬೇಕು, ಬದಲಿಗೆ ಸಂಬಂಧಕ್ಕೆ ಬದಲಾವಣೆ ಮಾಡುವಂತೆ ಬಳಸಬಾರದು.  ಓದು, ಕಲೆ, ಕ್ರೀಡೆ, ಸೇವಾಕಾರ್ಯ – ಇವು ಒಂಟಿತನವನ್ನು ಜೀವನಾನಂದದ ದಾರಿಯನ್ನಾಗಿ ಮಾರ್ಪಡಿಸಬಲ್ಲವು.

ಆಧ್ಯಾತ್ಮ ಮತ್ತು ಧ್ಯಾನದಲ್ಲಿ ತೊಡಗಿಸಿಕೊಳ್ಳುವುದು . ಅಂತರಂಗವನ್ನು ಅರಿತುಕೊಳ್ಳುವುದು, “ಸ್ವತಃ ತಾನು” ಜೊತೆಗಿನ ಸಂಬಂಧವನ್ನು ಪುನಃ ಕಟ್ಟಿಕೊಳ್ಳುವುದು ಒಂಟಿತನವನ್ನು ಸೃಜನಾತ್ಮಕವಾಗಿ ಬಳಸುವ ದಾರಿಯಾಗುತ್ತದೆ.

Advertisement

ಉಪನಿಷತ್ತಿನಲ್ಲಿ ಒಂದು ಮಾತಿದೆ “एकोऽहं बहुस्याम्”    “ಏಕೋಹಂ ಬಹುಸ್ಯಾಮ್”  ಎಂದರೆ ನಾನು ಒಬ್ಬನೇ ಇದ್ದು, ಅನೇಕರಾಗಬೇಕು ಎಂಬುದಾಗಿ.

ಮನುಷ್ಯನು ಸಂಬಂಧಗಳಲ್ಲೇ ತನ್ನ ಅಸ್ತಿತ್ವವನ್ನು ಕಂಡುಕೊಳ್ಳುವ ಜೀವಿ.ಆದ್ದರಿಂದ ಡಿಜಿಟಲ್ ಯುಗದ ಕೃತಕ  ಸಂಬಂಧಗಳ ಮೃಗಜಾಲದಲ್ಲಿ ಸಿಲುಕದೇ, ನಿಜವಾದ ಹೃದಯಸಂಬಂಧಗಳೊಂದಿಗೆ ಬದುಕನ್ನು ಅರ್ಥಪೂರ್ಣಗೊಳಿಸುವುದು ಮಾನವನಿಗೆ ಸಂತೋಷ ಮತ್ತು ಸಂತೃಪ್ತಿಯ  ಮಾರ್ಗ.

ಹೀಗಾಗಿ, ಡಿಜಿಟಲ್‌ ಕ್ರಾಂತಿ ಒಂಟಿತನವನ್ನು ಸಂಪೂರ್ಣವಾಗಿ ದೂರ ಮಾಡಿಲ್ಲ; ಬದಲಿಗೆ ಹೊಸ ರೂಪದಲ್ಲಿ ಅದರ ನೋವನ್ನು ತೀವ್ರಗೊಳಿಸಿದೆ. ನಿಜವಾದ ಪರಿಹಾರ ತಂತ್ರಜ್ಞಾನದಲ್ಲಲ್ಲ, ಮನಸ್ಸಿನ ಆಳದ ಮಾನವೀಯ ಸಂಬಂಧಗಳ ಪುನರುಜ್ಜೀವನದಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಕುಮಾರಸುಬ್ರಹ್ಮಣ್ಯ ಮುಳಿಯಾಲ

ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅವರು, ಬೆಂಗಳೂರಿನ ಬಯೋ ಕ್ರಾಸ್ ಕೆಮ್, ಎಲ್ಎಲ್ ಪಿ  ಎಂಬ ಔಷಧಿ ಕಂಪೆನಿಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ. ದ.ಕ. ಜಿಲ್ಲೆಯ ಪುತ್ತೂರಿನ ಸಮೀಪ ಹಿಂದಾರು ಎಂಬಲ್ಲಿ ಅಡಿಕೆ , ತೆಂಗು, ಕರಿಮೆಣಸು ಕೃಷಿ ಭೂಮಿ ಹೊಂದಿದ್ದಾರೆ. ಮೂಲತಃ ಅಡ್ಯನಡ್ಕ ಸಮೀಪದ ಮುಳಿಯಾಲದವರಾಗಿದ್ದು ಕೃಷಿ ಭೂಮಿ ಹೊಂದಿದ್ದು, ಕೃಷಿ ಚಿಂತನೆಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ

ತೆಂಗಿನಕಾಯಿಯಿಂದ Gen-Z ಫೇವರಿಟ್ ಫುಡ್‌…! ವೆಗನ್ ಕುಲ್ಫಿ ಮತ್ತು ಚಾಕೊಲೇಟ್ ಬಿಡುಗಡೆ
January 9, 2026
10:26 PM
by: ದ ರೂರಲ್ ಮಿರರ್.ಕಾಂ
ತೆಂಗು ರೈತರಿಗೆ ಹೊಸ ದಾರಿ | ಮೌಲ್ಯವರ್ಧನೆ ಮತ್ತು ಬಹುಬೆಳೆ ಪದ್ಧತಿಗೆ ಉತ್ತೇಜನ
January 9, 2026
10:16 PM
by: ದ ರೂರಲ್ ಮಿರರ್.ಕಾಂ
ತೆಂಗಿನಕಾಯಿ ಬೆಲೆ ಏಕೆ ಇಳಿಯುತ್ತಿದೆ? ರೈತರಿಗೆ ಮುಂದೇನು?
January 9, 2026
10:08 PM
by: ದ ರೂರಲ್ ಮಿರರ್.ಕಾಂ
ಡಿಜಿಟಲ್ ಕೃಷಿ, ಹವಾಮಾನ ಸಹಿಷ್ಣು ಬೆಳೆಗಳಿಗೆ ಬೆಂಬಲ -ಕೃಷಿ ಸಚಿವರಿಂದ ಸಭೆ
January 9, 2026
9:34 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror