ಜಗಜ್ಯೋತಿ ಬಸವಣ್ಣನವರ ಪವಿತ್ರ ಭೂಮಿಗೆ ಬಂದಿದ್ದು ನನ್ನ ಸೌಭಾಗ್ಯ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿದರು. ಜಿಲ್ಲೆಯ ಬಸವನಬಾಗೇವಾಡಿಯಲ್ಲಿ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಭಾರತ ಪ್ರಜಾಪ್ರಭುತ್ವದ ತಾಯಿ. ಶ್ರೀರಾಮನ ಪರಮಭಕ್ತ ಆಂಜನೇಯನ ಜನ್ಮಸ್ಥಳ ಕರ್ನಾಟಕ. ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕದಲ್ಲಿ ಅಭಿವೃದ್ಧಿ ಆಗುತ್ತಿದೆ. 1000 ವರ್ಷಗಳ ಹಿಂದಿನಿಂದ ಕರ್ನಾಟಕ-ಯುಪಿ ನಡುವೆ ಬಾಂಧವ್ಯ ಇದೆ ಎಂದು ಹೇಳಿದರು. ದೇಶದ ಸಂತರು, ಸಾಧುಗಳ ಆಶೀರ್ವಾದದಿಂದ ಇಲ್ಲಿ ಬಂದಿದ್ದೇನೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಇಂದು ಭಾರತ ಅಭಿವೃದ್ಧಿ ಆಗುತ್ತಿದೆ. ಭಾರತ ವಿಶ್ವದ ಶಕ್ತಿಯುತವಾದ ರಾಷ್ಟ್ರವಾಗಿದೆ. ವಿಶ್ವದ ಪ್ರಬಲ ಜಿ-20 ರಾಷ್ಟ್ರಗಳ ನೇತೃತ್ವವನ್ನು ಭಾರತ ವಹಿಸುತ್ತಿದೆ. ಕರ್ನಾಟಕ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿದೆ ಎಂದರು.
ಕಾಂಗ್ರೆಸ್, ಜೆಡಿಎಸ್ ವಿರುದ್ಧ ಯೋಗಿ ಆದಿತ್ಯನಾಥ್ ವಾಗ್ದಾಳಿ
ಕಾಂಗ್ರೆಸ್, ಜೆಡಿಎಸ್ ಎರಡೂ ಕೂಡ ಯಾವುದೇ ಅಭಿವೃದ್ಧಿ ಮಾಡಲ್ಲ. ಸಮಾಜವನ್ನು ವಿಭಜಿಸುವುದರಲ್ಲಿ ಕಾಂಗ್ರೆಸ್, ಜೆಡಿಎಸ್ನವರು ನಿಸ್ಸೀಮರು. ಕಾಂಗ್ರೆಸ್, ಜೆಡಿಎಸ್ ಎರಡೂ ಪಕ್ಷಗಳಲ್ಲಿ ಯಾವುದೇ ದೂರದೃಷ್ಟಿ ಹೊಂದಿಲ್ಲ. ದೇಶದಲ್ಲಿ 60 ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್ ಏನೂ ಮಾಡಲಿಲ್ಲ. ಸಮಾಜವನ್ನು ಜಾತಿ ಹೆಸರಿನಲ್ಲಿ ಒಡೆಯಲು ಪ್ರಯತ್ನಿಸುತ್ತಿದ್ದಾರೆ. ದೇಶದ ಪ್ರತಿ ನಾಗರಿಕನ ಸಶಕ್ತೀಕರಣಗೊಳಿಸುವುದು ನಮ್ಮ ಉದ್ದೇಶ ಎಂದು ಕಾಂಗ್ರೆಸ್ ಪಕ್ಷದ ತುಷ್ಟೀಕರಣ ರಾಜಕಾರಣದ ವಿರುದ್ಧ ವಾಗ್ದಾಳಿ ಮಾಡಿದರು. ಸಬ್ಕಾ ಸಾಥ್, ಸಬ್ಕಾ ವಿಕಾಸ್ ಎಂಬುವುದು ಮೋದಿಯವರ ಮಂತ್ರ. ಕೊರೊನಾ ವೇಳೆ ಮೋದಿ ಸರ್ಕಾರ ಫ್ರೀ ವ್ಯಾಕ್ಸಿನ್, ರೇಷನ್ ನೀಡಿದೆ ಎಂದು ಹೇಳಿದರು.
ಬಿಎಸ್ವೈ, ಸಿಎಂ ಬೊಮ್ಮಾಯಿಗೆ ಅಭಿನಂದನೆ
ವೈದ್ಯಕೀಯ ಪರೀಕ್ಷೆ ಕನ್ನಡದಲ್ಲಿ ಬರೆಯಲು ಸರ್ಕಾರ ಅವಕಾಶ ನೀಡಿದೆ. ಕರ್ನಾಟಕದಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಹಾಗಾಗಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ವೈಗೆ ಅಭಿನಂದನೆ ಸಲ್ಲಿಸುತ್ತೇನೆ. ಉತ್ತರ ಪ್ರದೇಶದಲ್ಲಿ ಗೂಂಡಾಗಳನ್ನು ಮಟ್ಟಹಾಕಿದ್ದೇವೆ. ರಾಮ, ಕೃಷ್ಣನ ಜನಸ್ಥಳದಲ್ಲಿ ಪಾಪದ ಕೆಲಸಗಳನ್ನ ಮಾಡಲು ಬಿಡಲ್ಲ ಎಂದು ಕಿಡಿಕಾರಿದರು.
ಯೋಗಿ ಆದಿತ್ಯನಾಥ್ ಬಹಿರಂಗ ಆಹ್ವಾನ
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಹಿನ್ನೆಲೆ ಯೋಗಿ ಆದಿತ್ಯನಾಥ್ ಬಹಿರಂಗವಾಗಿ ಆಹ್ವಾನ ನೀಡಿದ್ದಾರೆ. ನಾನು ಇವತ್ತು ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇನೆ. ಜನವರಿ ಭಗಾವನ್ ಶ್ರೀರಾಮ ಮಂದಿರ ಉದ್ಘಾಟನೆಯಾಗುತ್ತೆ. ಆ ಕಾರ್ಯಕ್ರಮಕ್ಕೆ ನೀವೆಲ್ಲರೂ ಬರಬೇಕು. ಉತ್ತರ ಪ್ರದೇಶದ ಸೇವಕನಾಗಿ ನಿಮಗೆ ಇವತ್ತೆ ನಾನು ಆಹ್ವಾನ ನೀಡುತ್ತಿದ್ದೇನೆ ಎಂದು ಹೇಳಿದರು.
ಯೋಗಿ ಆದಿತ್ಯನಾಥ್ ಎಲ್ಲೆಲ್ಲಿ ಪ್ರಚಾರ
ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕಿಳಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮಧ್ಯಾಹ್ನ ಬಸವನ ಬಾಗೇವಾಡಿಯ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಬಳಿಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್ಕೆ ಬೆಳ್ಳುಬ್ಬಿ ಪರ ಪ್ರಚಾರ ಮಾಡಿದರು. ಬಳಿಕ ಇಂಡಿ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಸಾರ್ವಜನಿಕ ಸಮಾವೇಶ ಮತ್ತು ಅಭ್ಯರ್ಥಿ ಕಸಗೌಡ ಬಿರಾದಾರ್ ಪರ ಪ್ರಚಾರ ನಡೆಸಿದರು.
ಬಳಿಕ TP ಪ್ರಕಾರ ರಸ್ತೆ ಮೂಲಕ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ತೆರಳಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಹೆಲಿಕಾಪ್ಟರ್ ಮೂಲಕ ಹುಬ್ಬಳ್ಳಿಗೆ ತೆರಳಿದ್ದು, ಹುಬ್ಬಳ್ಳಿಯಿಂದ ವಿಶೇಷ ವಿಮಾನದಲ್ಲಿ ಲಖನೌಗೆ ಪ್ರಯಾಣ ಬೆಳೆಸಿದರು.