ಸರ್ಕಾರಿ ಸೌಲಭ್ಯ ಕೊಡಿಸುತ್ತೇವೆ, ಕೆಲಸ ಮಾಡಿಕೊಡುತ್ತೇವೆ ಎಂದು ಅಧಿಕಾರಿಗಳು ಮತ್ತು ಮುಖಂಡರು ಜನರ ಬಳಿ ಲಂಚ ಕೇಳಬಾರದು. ಕೇಳಿದರೆ ಬೆಂಗಳೂರಿನ ನನ್ನ ವಿಳಾಸಕ್ಕೆ ಅವರ ಹೆಸರು ಸಹಿತ ಪತ್ರ ಬರೆಯಿರಿ ಎಂದು ಉಪಮುಖ್ಯಮಂತ್ರಿ ಡಿ .ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸಾತನೂರಿನ ಗ್ರಾಮಾಂತರ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ತಾಲೂಕಿನಲ್ಲಿ ಪಾರದರ್ಶಕವಾಗಿ ಆಡಳಿತ ನಡೆಯಬೇಕು. ನನ್ನನ್ನು ಗೆಲ್ಲಿಸಿದ ನಿಮ್ಮ ಋಣ ತೀರಿಸಬೇಕು ಎಂದರು. ಈ ಹಿಂದೆ 8 ಸಾವಿರಕ್ಕೂ ಹೆಚ್ಚು ಜನರಿಗೆ ಬಗರ್ ಹುಕುಂ ಜಮೀನು ನೀಡಿದ್ದೇವೆ. ನಿವೇಶನ, ಮನೆ ಹಂಚಿದ್ದೇವೆ. ಕನಕಪುರ ಭಾಗದಲ್ಲಿ 2-3 ಲಕ್ಷಕ್ಕೆ ಜಮೀನು ಕೇಳುವವರು ಇರಲಿಲ್ಲ.ಈ ಭಾಗವನ್ನು ಅಭಿವೃದ್ಧಿ ಮಾಡಿದ ಪರಿಣಾಮವಾಗಿ ಜಮೀನುಗಳ ಬೆಲೆಯೂ ಹೆಚ್ಚಾಗಿದೆ. ಎರಡು, ಮೂರು ಲಕ್ಷ ಬಾಳುತ್ತಿದ್ದ ಜಮೀನುಗಳ ಬೆಲೆ ದುಪ್ಪಟ್ಟಾಗಿದೆ. ನಾನು ಹಿಂದೆ ಜಮೀನುಗಳನ್ನು ಮಾರಬೇಡಿ ಎಂದು ಸಲಹೆ ನೀಡಿದ್ದೆ. ಆದರೂ ಒಂದಷ್ಟು ಜನ ಜಮೀನುಗಳನ್ನು ಮಾರಿಕೊಂಡಿದ್ದಾರೆ ಎಂದರು.