ಅಂತೂ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟ ಹಾಗೆ ಕಾಣುತ್ತಿದೆ. ಇದರಿಂದ ಮುಂಗಾರು ಬೆಳೆಗಳು ಯಾವುದೂ ಬೆಳೆಯೋಕಾಗ್ಲಿಲ್ಲ. ಇದರಿಂದ ರೈತರಿಗೆ ಊಹೆಗೂ ಮೀರಿದ ನಷ್ಟ ಅನ್ನಬಹುದು…. ಹಾಗಾದರೆ ಮಳೆ ಬಾರದ್ದು, ರೈತರಿಗಷ್ಟೇ ನಷ್ಟವಾ..?. ಯಾರಿಗೆಲ್ಲಾ ಸಮಸ್ಯೆಯಾಗುತ್ತದೆ…?
ಒಂದು ಕಾಲದಲ್ಲಿ ಅಡಿಕೆಯ ಬೆಲೆ ವಿಪರೀತವಾಗಿ ಏರಿಕೆ ಕಂಡಿತು. ಕರಾವಳಿ ಭಾಗದ ಅದರಲ್ಲೂ ಸುಳ್ಯದ ಕಡೆಗಳಲ್ಲಿ ಜೀಪುಗಳು ಸಾಕಷ್ಟು ಸಂಖ್ಯೆಯಲ್ಲಿ ಬಂದವು. ಇದು ಮಲೆನಾಡು ಅದರಲ್ಲೂ ಗುಡ್ಡಗಾಡು ಇರುವ ಕಾರಣದಿಂದ ಈ ಪ್ರದೇಶದಲ್ಲಿ ಜೀಪುಗಳೇ ಹೆಚ್ಚು ಅಗತ್ಯವಾಗಿತ್ತು. ಅಡಿಕೆ ಅಂದರೆ ಕೃಷಿ ಧಾರಣೆಯೂ ಏರಿಕೆಯಾಯ್ತು. ಸಾಕಷ್ಟು ಸಂಖ್ಯೆಯಲ್ಲಿ ಜೀಪುಗಳು ಬಂದಾಗ ಆ ಕಂಪನಿಯೇ ಸುಳ್ಯದ ಕಡೆಗೆ ನೋಡಿತ್ತು…!.
ಕೆಲವು ಸಮಯಗಳ ಹಿಂದೆ ಅಡಿಕೆಗೆ ಕೊಳೆರೋಗ ಬಂದು ವಿಪರೀತವಾಗಿ ಬೆಳೆ ನಷ್ಟವಾಯ್ತು. ಆಗ ಕೃಷಿಕರು ಸಂಕಷ್ಟಕ್ಕೆ ಒಳಗಾದರು. ಇದರ ಪರಿಣಾಮ ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟು ಮೇಲೆ ಪರಿಣಾಮವಾಯ್ತು.
ಈಗ ಮಳೆಯ ಕೊರತೆ ಇದೆ .ಇಡೀ ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಬೆಳೆ ಬಾರದ ಕಾರಣ, ಕೃಷಿ ಮಾರುಕಟ್ಟೆಯ ವ್ಯಾಪಾರಸ್ಥರು ನಷ್ಟದಲ್ಲಿ, ಅಲ್ಲಿ ಕೆಲಸ ಮಾಡುವ ನೌಕರರು ನಷ್ಟದಲ್ಲಿ… ಹಮಾಲಿಗಳು ನಷ್ಟದಲ್ಲಿ ದಾಸ್ತಾನುಗಳನ್ನು ಸರಬರಾಜು ಮಾಡುವ ಲಾರಿ ಟ್ರಕ್ ಟೆಂಪೋ ಮಾಲೀಕರು ನಷ್ಟದಲ್ಲಿ… ಅವರ ಡ್ರೈವರುಗಳು ನಷ್ಟದಲ್ಲಿ ವಾಹನಗಳು ನಿಂತರೆ ಅದರ ಬಿಡಿಭಾಗ ಮಾರುವವ, ಪೆಟ್ರೋಲ್ ಬಂಕಿನವ, ರಿಪೇರಿ ಮಾಡುವ ಮೇಸ್ತ್ರಿ, ಪಂಚರ್ ತೆಗೆಯುವವನ ಸಮೇತ ಎಲ್ಲರಿಗೂ ನಷ್ಟ….!
ಬೆಳೆನೇ ಬೆಳಿದಿದ್ರೆ ಅದಕ್ಕೆ ಗೊಬ್ಬರ ಬೇಡ, ಗೊಬ್ಬರದಂಗಡಿಯ ಮಾಲೀಕ ನಷ್ಟದಲ್ಲಿ. ಬಿತ್ತನೆನೇ ಮಾಡ್ಲಿಲ್ಲ ಅಂದ್ರೆ ನಾಟಿ ಬರಲ್ಲ, ನಾಟಿನೆ ಬರ್ಲಿಲ್ಲ ಅಂದ್ರೆ ಅದಕ್ಕೆ ರೋಗ ಎಲ್ಲಿಂದ ಬರ್ಬೇಕು, ಕೀಟನಾಶಕದ ಅಂಗಡಿಯವನಿಗೂ ನಷ್ಟ. ಅದನ್ನೂ ಸರಬರಾಜು ಮಾಡುವ ಟ್ರಾವೆಲ್ಸ್ ದವರಿಗೂ ನಷ್ಟ. ಬಿತ್ತನೆನೇ ಮಾಡದಿದ್ರೆ ಆಳುಗಳಿಗೂ ಕೆಲಸವಿಲ್ಲ.. ಅವರಿಗೂ ನಷ್ಟ…ಮಳೆ ಕಡಿಮೆಯಾದ್ರೆ ಜಾನುವಾರುಗಳಿಗೆ ಮೇವಿಲ್ಲ.ಹಾಗಾಗಿ ಹಾಲು ಉತ್ಪಾದನೆಯಲ್ಲೂ ಕುಂಠಿತ.
ಸರಕಾರಿ ನೌಕರರಿಗೆ ಹೇಗೂ ಸಂಬಳ ಬರುತ್ತೆ ನಡೆಯುತ್ತೆಯಾದ್ರೂ ಅವರಿಗೂ ಕೂಡ ನಷ್ಟ ಹೇಗೆ ಅಂದ್ರೆ ಬೆಳೆ ಅಭಾವದಿಂದ 50 ರುಪಾಯಿಗೆ ಸಿಗುವ ದವಸಧಾನ್ಯಗಳನ್ನು 100 ರುಪಾಯಿಗೆ ಕೊಂಡುಕೊಳ್ಳಬೇಕು. ಅವರಿಗೂ ನಷ್ಟ.
ಮೇಲ್ಕಾಣಿಸಿದ ಎಲ್ಲರ ಹತ್ತಿರ ದುಡ್ಡಿದ್ದರೆ ಮಾತ್ರ ಅವರು ಹಣ ಖರ್ಚು ಮಾಡ್ತಾರೆ ಇಲ್ಲಾಂದ್ರೆ ಇಲ್ಲ. ಅಲ್ಲಿಗೆ ನಗರ ಪ್ರದೇಶದವರಿಗೂ ವ್ಯಾಪಾರ ವಹಿವಾಟಿನಲ್ಲಿ ನಷ್ಟ. ಬಿತ್ತನೆ ಮಾಡಿದಾಗಿಂದ ಬೆಳೆ ಬರುವವರೆಗೂ ರೈತ ಎಲ್ಲರ ಮೇಲೆ ಅವಲಂಬನೆಯಾಗಿರಲ್ಲ. ಆದರೆ ಎಲ್ಲರೂ ರೈತನ ಮೇಲೆ ಅವಲಂಬನೆಯಾಗಿರುತ್ತಾರೆ…!.
ಇಡೀ ಜಗತ್ತು ನಿಂತಿರುವುದು ರೈತನ ಮೇಲೆ. ರೈತ ಮುನಿದರೆ ಜಗತ್ತಿಗೆ ಸಂಕಷ್ಟ… ರೈತನಿಗೆ ಪ್ರಕೃತಿ ಮುನಿದರೆ ಸಂಕಷ್ಟ…!