ಕರ್ನಾಟಕದ ಲಕ್ಷಾಂತರ ರೈತರ ಜೀವನಾಧಾರವಾಗಿರುವ ಅಡಿಕೆ ಬೆಳೆ ಇದೀಗ ಮತ್ತೊಮ್ಮೆ ಸಂಕಷ್ಟದ ಸುಳಿಯಲ್ಲಿ ಸಿಲುಕುವ ಹಾದಿಯಲ್ಲಿದೆ. ಹೀಗಾಗಿ ಈಗಲೇ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ. ಮಹಾರಾಷ್ಟ್ರದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ (FDA) ಇಲಾಖೆ ಅಡಿಕೆ ಸಾಗಿಸುತ್ತಿದ್ದ 50ಕ್ಕೂ ಹೆಚ್ಚು ಲಾರಿಗಳನ್ನು ತಡೆಹಿಡಿದಿರುವ ಘಟನೆ, ಇದು ಕೇವಲ ಒಂದು ಆಡಳಿತಾತ್ಮಕ ಕ್ರಮವಲ್ಲ, ದೇಶದ ಅಡಿಕೆ ವ್ಯಾಪಾರ ಮತ್ತು ಅಕ್ರಮ ಆಮದು ಜಾಲದ ಕುರಿತ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಅಡಿಕೆ ವ್ಯಾಪಾರ ವಲಯದಲ್ಲಿ ಹಲವು ವರ್ಷಗಳಿಂದ ಕೇಳಿಬರುತ್ತಿರುವ ಅಕ್ರಮ ಆಮದಿನ ಆರೋಪಗಳು ಈಗ ಮತ್ತಷ್ಟು ಬಲ ಪಡೆದಿವೆ. ವಿಶೇಷವಾಗಿ ಮ್ಯಾನ್ಮಾರ್ ಸೇರಿದಂತೆ ನೆರೆಯ ರಾಷ್ಟ್ರಗಳಿಂದ ಅಕ್ರಮ ಮಾರ್ಗದಲ್ಲಿ ಭಾರತಕ್ಕೆ ಪ್ರವೇಶಿಸುತ್ತಿರುವ ವಿದೇಶಿ ಅಡಿಕೆ, ಸ್ಥಳೀಯ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದೂ ಕೂಡಾ ಅದರ ಪರಿಣಾಮ.
₹970 ಕೋಟಿ ಅಕ್ರಮ ವಹಿವಾಟಿನ ಜಾಲ : ಜಾರಿ ನಿರ್ದೇಶನಾಲಯ (ED) ನಡೆಸಿದ ತನಿಖೆಗಳಲ್ಲಿ ಮ್ಯಾನ್ಮಾರ್ ಮೂಲದ ಅಡಿಕೆಯನ್ನು ಅಕ್ರಮವಾಗಿ ಭಾರತಕ್ಕೆ ಸಾಗಿಸುವ ಜಾಲ ಬೆಳಕಿಗೆ ಬಂದಿರುವುದಾಗಿ ವರದಿಯಾಗಿದೆ. 2013ರಿಂದ 2025ರ ಅವಧಿಯಲ್ಲಿ ಸುಮಾರು ₹970 ಕೋಟಿ ಮೌಲ್ಯದ ವಹಿವಾಟು ನಡೆದಿರುವ ಕುರಿತು ತನಿಖಾ ಸಂಸ್ಥೆಗಳು ಮಾಹಿತಿ ಬಹಿರಂಗಪಡಿಸಿವೆ.
ಇದರ ಜೊತೆಗೆ, 2026ರ ಮೇ ತಿಂಗಳಲ್ಲಿ ಈಶಾನ್ಯ ಗಡಿಭಾಗಗಳಲ್ಲಿ ಡಿಆರ್‌ಐ (DRI) ಸುಮಾರು 60 ಟನ್ ವಿದೇಶಿ ಮೂಲದ ಅಡಿಕೆಯನ್ನು ವಶಪಡಿಸಿಕೊಂಡಿರುವ ಪ್ರಕರಣವೂ ಅಕ್ರಮ ಸಾಗಾಟದ ವ್ಯಾಪ್ತಿಯನ್ನು ತೋರಿಸಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಜಿಎಸ್‌ಟಿ ವಂಚನೆಯ ಆರೋಪ : ಅಡಿಕೆ ವ್ಯಾಪಾರದ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಬಳಸಿ ತೆರಿಗೆ ವಂಚನೆ ನಡೆಸಿದ ಜಾಲವೂ ತನಿಖೆಯಲ್ಲಿ ಪತ್ತೆಯಾಗಿದೆ. 2021ರಿಂದ 2024ರ ಅವಧಿಯಲ್ಲಿ ಸುಮಾರು ₹337 ಕೋಟಿ ಮೌಲ್ಯದ ಜಿಎಸ್‌ಟಿ ವಂಚನೆ ನಡೆದಿರುವುದಾಗಿ ತನಿಖಾ ವರದಿಗಳು ಸೂಚಿಸಿವೆ.
ಮಹಾರಾಷ್ಟ್ರ FDA ಕ್ರಮದ ಹಿಂದೆ ಏನು? : ಮಹಾರಾಷ್ಟ್ರ FDA ಇಲಾಖೆ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪರೀಕ್ಷೆಯ ಉದ್ದೇಶದಿಂದ ಲಾರಿಗಳನ್ನು ತಡೆಹಿಡಿದಿರುವುದಾಗಿ ಹೇಳಿದೆ. ಆದರೆ ಅಡಿಕೆ ಬೆಳೆಗಾರರು ಮತ್ತು ವ್ಯಾಪಾರಿಗಳ ವಲಯದಲ್ಲಿ ಇದಕ್ಕೆ ಸಂಬಂಧಿಸಿದಂತೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ.
ಮಹಾರಾಷ್ಟ್ರದ ವಿವಿದೆಡೆ ಕೋಲ್ಡ್ ಸ್ಟೋರೇಜ್‌ನಲ್ಲಿ ದಾಸ್ತಾನು ಆಗಿರುವ ಅಡಿಕೆಯನ್ನು ಮಹಾರಾಷ್ಟ್ರ FDA ವಶಪಡಿಸಿಕೊಳ್ಳುತ್ತಿರುವಾಗ ಮಹಾರಾಷ್ಟ್ರ ಮೂಲಕ ಸಾಗಾಟವಾಗುವ ಕರ್ನಾಟಕದ ಅಡಿಕೆಯೂ ಈಗ ಸಂಕಷ್ಟವಾಗಿದೆ.
ಅಗ್ಗದ ವಿದೇಶಿ ಅಡಿಕೆಯ ಪೈಪೋಟಿ : ಮ್ಯಾನ್ಮಾರ್ ಸೇರಿದಂತೆ ವಿದೇಶಗಳಿಂದ ಅಕ್ರಮವಾಗಿ ಬರುವ ಅಗ್ಗದ ಅಡಿಕೆ, ಸ್ಥಳೀಯ ಅಡಿಕೆಯೊಂದಿಗೆ ಬೆರೆತು ಮಾರುಕಟ್ಟೆಗೆ ಬರುತ್ತಿದೆ ಎಂಬ ಆರೋಪ ಬಹುಕಾಲದಿಂದ ಕೇಳಿಬರುತ್ತಿದೆ. ಇದರಿಂದ ದೇಶೀಯ ಉತ್ಪಾದಕರಿಗೆ ತೀವ್ರ ಸ್ಪರ್ಧೆ ಎದುರಾಗುತ್ತಿದೆ. ಸ್ಥಳೀಯ ಉತ್ತಮ ಗುಣಮಟ್ಟದ ಅಡಿಕೆಯನ್ನು ಕಳಪೆ ಎಂದು ಬಿಂಬಿಸಿ, ಮಾರುಕಟ್ಟೆಯಿಂದ ಹೊರದೂಡಿ ಅಕ್ರಮ ಅಡಿಕೆಗೆ ದಾರಿ ಮಾಡಿಕೊಡುವ ಲಾಬಿ ಕೆಲಸ ಮಾಡುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ಕನಿಷ್ಠ ಆಮದು ಬೆಲೆ ನಿಯಮದ ಉಲ್ಲಂಘನೆ : ಕೇಂದ್ರ ಸರ್ಕಾರ ಅಡಿಕೆ ಆಮದಿಗೆ ಪ್ರತಿ ಕೆಜಿಗೆ ₹351 ಕನಿಷ್ಠ ಆಮದು ಬೆಲೆ (MIP) ನಿಗದಿಪಡಿಸಿದೆ. ಆದರೆ ಅಕ್ರಮ ಮಾರ್ಗಗಳಲ್ಲಿ ಬರುವ ಅಡಿಕೆ ಈ ನಿಯಮವನ್ನು ಮೀರಿ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಪ್ರವೇಶಿಸುತ್ತಿರುವುದರಿಂದ ಸ್ಥಳೀಯ ರೈತರ ಆದಾಯದ ಮೇಲೆ ಒತ್ತಡ ಹೆಚ್ಚುತ್ತಿದೆ.
ರೈತರು ಮತ್ತು ವರ್ತಕರಿಗೆ ಆಗುತ್ತಿರುವ ಪರಿಣಾಮ : ಬೆಲೆ ಕುಸಿತದ ಆತಂಕ ಇದೆ. ಅಕ್ರಮ ಅಡಿಕೆಯ ಒಳಹರಿವು ಹೆಚ್ಚಾದರೆ ಸ್ಥಳೀಯ ಅಡಿಕೆಯ ಬೇಡಿಕೆ ಕುಸಿಯಬಹುದು. ಇದು ನೇರವಾಗಿ ಮಾರುಕಟ್ಟೆ ಬೆಲೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಪ್ರತಿ ಸಾಗಾಟವೂ ಅನುಮಾನಾಸ್ಪದ ಎಂಬ ದೃಷ್ಟಿಕೋನದಿಂದ ತಪಾಸಣೆಗಳು ಹೆಚ್ಚಾದರೆ ಕಾನೂನುಬದ್ಧ ವ್ಯಾಪಾರಕ್ಕೂ ಅಡ್ಡಿಯಾಗಬಹುದು. ಎಲ್ಲಾ ಲಾರಿಗಳನ್ನು ತಡೆಹಿಡಿಯುತ್ತಿರುವುದರಿಂದ, ವರ್ತಕರು ಸಾಗಾಟಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಸರಬರಾಜು ಸರಪಳಿ ಸಮಸ್ಯೆ, ಸಾಗಾಟ ವಿಳಂಬ, ಹೆಚ್ಚುವರಿ ವೆಚ್ಚ, ದಾಸ್ತಾನು ನಿರ್ವಹಣೆಯ ಸಮಸ್ಯೆಗಳು ವ್ಯಾಪಾರಿಗಳಿಗೆ ಆರ್ಥಿಕ ಹೊರೆ ತಂದೊಡ್ಡುತ್ತಿವೆ.
ಪರಿಹಾರ ಏನು? : ಗುಣಮಟ್ಟ ಪ್ರಮಾಣೀಕರಣ ಮೊದಲು ಬಲಪಡಿಸಬೇಕು. CAMPCO ಹಾಗೂ MAMCOS ಮೊದಲಾದ ಸಹಕಾರಿ ಸಂಸ್ಥೆಗಳು ಸ್ಥಳೀಯ ಅಡಿಕೆಗೆ ಗುಣಮಟ್ಟದ ಪ್ರಮಾಣೀಕರಣ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ.ಇದರ ಜೊತೆಗೆ ದೇಶದ ಗಡಿಭಾಗಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ, ಕಳ್ಳಸಾಗಣೆ ಜಾಲದ ವಿರುದ್ಧ ನಿರಂತರ ಕಾರ್ಯಾಚರಣೆ ಮತ್ತು ರಾಜ್ಯ-ಕೇಂದ್ರ ಸರ್ಕಾರಗಳ ಸಮನ್ವಯ ಅತ್ಯಗತ್ಯವಾಗಿದೆ. ಕಳಪೆ ಗುಣಮಟ್ಟದ ಅಡಿಕೆ ಆಮದು ತಕ್ಷಣ ತಡೆಯಾಗಬೇಕು. ಇದರ ಕಾರಣದಿಂದಲೇ ಇಂದು ಕಳಪೆ ಸಮಸ್ಯೆ ಎದುರಾಗಿದೆ.
ಸ್ಥಳೀಯ ರೈತರು ಮತ್ತು ವರ್ತಕರ ಹಿತದೃಷ್ಟಿಯಿಂದ ಕಾನೂನುಬದ್ಧ ಸಾಗಾಟಕ್ಕೆ ಅನಗತ್ಯ ಅಡ್ಡಿಯಾಗದಂತೆ ವಿಶೇಷ ವ್ಯವಸ್ಥೆ ರೂಪಿಸುವ ಕುರಿತು ಚಿಂತನೆ ತಕ್ಷಣ ನಡೆಯಬೇಕಿದೆ. ಅಡಿಕೆಯನ್ನು ಆಹಾರ ಪದಾರ್ಥ ಎಂದು ಪರಿಗಣಿಸುವಾಗ, ದೇಶೀಯ ಬೆಳೆಗಾರರ ಹಿತದೃಷ್ಟಿಯಿಂದ ವ್ಯಾಪಾರಕ್ಕೆ ಅಡ್ಡಿಯಾಗದಂತೆ ‘ಗ್ರೀನ್ ಚಾನೆಲ್’ ವ್ಯವಸ್ಥೆ ಜಾರಿಗೆ ಬರಬೇಕು.
ಅಡಿಕೆ ಉದ್ಯಮದ ಅಸ್ತಿತ್ವದ ಪ್ರಶ್ನೆ : ಮಹಾರಾಷ್ಟ್ರದಲ್ಲಿ ನಡೆದಿರುವ ಈ ಬೆಳವಣಿಗೆ ಕೇವಲ ಲಾರಿಗಳ ತಡೆ ಪ್ರಕರಣವಲ್ಲ. ಇದು ದೇಶೀಯ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಅಕ್ರಮ ಆಮದು, ಮಾರುಕಟ್ಟೆ ಅಸ್ಥಿರತೆ ಮತ್ತು ನೀತಿ ಜಾರಿಯ ಸವಾಲುಗಳನ್ನು ಮತ್ತೆ ಮುನ್ನೆಲೆಗೆ ತಂದಿದೆ. ಆಹಾರ ಸುರಕ್ಷತೆ ಮತ್ತು ರೈತರ ಹಿತಾಸಕ್ತಿಯ ನಡುವೆ ಸಮತೋಲನ ಸಾಧಿಸುವುದು ಈಗ ಸರ್ಕಾರಗಳ ಮುಂದಿರುವ ಪ್ರಮುಖ ಸವಾಲಾಗಿದೆ.
ಅಡಿಕೆ ಮಾರುಕಟ್ಟೆಯನ್ನು ಕಾಡುತ್ತಿರುವ ಈ ಬಿಕ್ಕಟ್ಟು ಕೇವಲ ಒಂದು ಲಾರಿಯ ತಡೆಗೆ ಸೀಮಿತವಾದುದಲ್ಲ; ಇದು ಭಾರತದ ಅಡಿಕೆ ಉದ್ಯಮದ ಅಸ್ತಿತ್ವದ ಪ್ರಶ್ನೆ. ಸರ್ಕಾರವು ಆಹಾರ ಸುರಕ್ಷತೆಯ ಹೆಸರಿನಲ್ಲಿ ನಡೆಯುವ ಇಂತಹ ದಾಳಿಗಳನ್ನು ಪಾರದರ್ಶಕಗೊಳಿಸಿ, ಅದೇ ಸಮಯದಲ್ಲಿ ದೇಶದ ಒಳಗೆ ಅಕ್ರಮವಾಗಿ ನುಸುಳುತ್ತಿರುವ ವಿದೇಶಿ ಅಡಿಕೆಗೆ ಬ್ರೇಕ್ ಹಾಕದಿದ್ದರೆ, ಲಕ್ಷಾಂತರ ರೈತರ ಬದುಕು ಬೀದಿಗೆ ಬರಲಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
The detention of over 50 arecanut trucks in Maharashtra has reignited concerns over illegal arecanut imports and their impact on India’s domestic market. Investigations have exposed large-scale smuggling networks, money laundering, and GST fraud linked to imported arecanut. Farmers fear that unchecked inflow of low-cost foreign arecanut could depress prices and threaten livelihoods. Stakeholders are demanding stronger border enforcement, quality certification systems, and policy measures to protect legitimate trade and domestic growers.

