ಭಾರತಕ್ಕೆ ಅಡಿಕೆಯ ಆಮದು ಯಾವಾಗಿನಿಂದ ಆಗುತ್ತಿದೆ…? ಹೇಗೆ ಆಗುತ್ತಿವೆ..?

June 30, 2025
6:36 AM
ಭಾರತಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅಡಿಕೆಯ ಆಮದು ಅನಾದಿ ಕಾಲದಿಂದಲೂ ಆಗುತ್ತಿದ್ದು,ಇದು ಆಗಿಂದಾಗ್ಗೆ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಗೆ ದಾರಿ ಮಾಡಿಕೊಡುತ್ತದೆ.ಆದರೆ ಈ ಇಳಿಕೆ ದೀರ್ಘ ಕಾಲದ ತನಕ ಈ ವರೆಗೆ ಕಂಡುಬಂದಿಲ್ಲ.ಬದಲಾಗಿ ಧಾರಣೆಯ ಏರಿಕೆ ಸಂದರ್ಭದಲ್ಲಿ ಇದು ಸರ್ವೇ ಸಾಮಾನ್ಯ ಆಗಿದೆ.

ಸ್ವಾತಂತ್ರ್ಯ ಪೂರ್ವದಿಂದ ಹಿಡಿದು ಈ ತನಕ ಆಂತರಿಕ ಅಡಿಕೆ ಮಾರುಕಟ್ಟೆ ಅತಂತ್ರ ಆಗಲು ಹೆಸರಿಸುವ ಒಂದು ಮುಖ್ಯ ಕಾರಣ ದೇಶಕ್ಕೆ ನಾನಾ ರಾಷ್ಟ್ರಗಳಿಂದ ಆಮದಾಗುವ ಅಡಿಕೆ ಎಂಬುದು.ಈ ನಿಟ್ಟಿನಲ್ಲಿ ನಮ್ಮಲ್ಲಿಗೆ ಅಡಿಕೆ ಎಲ್ಲೆಲ್ಲಿಂದ , ಯಾವ ರೀತಿಯಲ್ಲಿ, ಎಷ್ಟು ಪ್ರಮಾಣದಲ್ಲಿ,ಯಾವ ರೂಪದಲ್ಲಿ ಆಮದು ಆಗುತ್ತಿದೆ ಎಂಬುದನ್ನು ತಿಳಿಯಲೇಬೇಕು.…… ಮುಂದೆ ಓದಿ……

Advertisement

ಆಂತರಿಕ ಬೇಡಿಕೆಯನ್ನು ಸರಿದೂಗಿಸಲು ಭಾರತವು ಅನಾದಿಕಾಲದಿಂದಲೂ ಅಡಿಕೆಯನ್ನು ಆಮದು ಮಾಡಿಕೊಳ್ಳುತ್ತಿದ್ದು,ಈ ಆಮದು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆಗುತ್ತಿದೆ. 1949-1950 ರ ಅವಧಿಯಲ್ಲಿ ಅದು 39,912 ಟನ್ ಆಗಿದ್ದುದು, 1951-52 ರ ಅವಧಿಯಲ್ಲಿ 50,600 ಟನ್ ಆಗಿತ್ತು.ಬಳಿಕ ಅದು ಕಡಿಮೆ ಆಗುತ್ತಾ ಹೋಯಿತು.ಇದಕ್ಕೆ ಮುಖ್ಯ ಕಾರಣ ಸರಕಾರ ಆಮದಿನ ಮೇಲೆ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳು.ಆದರೆ 1994-95 ರ ನಂತರ ಸರಕಾರ ಆಮದಿಗೆ ಅವಕಾಶ ಮಾಡಿಕೊಟ್ಟು ಕ್ರಮೇಣ ಈ ಪ್ರಮಾಣ ಏರುತ್ತಾ ಹೋಯಿತು.ಇದು 1997-98 ರ ಸಾಲಿನಲ್ಲಿ 10,823 ಟನ್ ಆಗಿತ್ತು.ಇವೆಲ್ಲಾ ಅಧಿಕೃತವಾಗಿ ಆಮದು ಆದ ಪ್ರಮಾಣಗಳು ಆಗಿವೆ. 1970 ಮತ್ತು 2000 ರ ಸಮಯದಲ್ಲಿ ನಮ್ಮ ಮಾರುಕಟ್ಟೆಯಲ್ಲಿ ಅಧಿಕ ಪ್ರಮಾಣದ ಅಡಿಕೆ ಆಮದು ಆಗಿದೆ ಎಂಬ ವದಂತಿಯೂ ಹಬ್ಬಿತ್ತು.ಆದರೆ ಅಧಿಕೃತವಾಗಿ 1968-1971 ರ ತನಕ ಯಾವುದೇ ಆಮದು ಆಗಿರಲಿಲ್ಲ.ಇನ್ನು 2000 ದ ಸಮಯದಲ್ಲಿ ಆಮದು ಆದ ಪ್ರಮಾಣ ಕೇವಲ 3,022 ಟನ್ ಆಗಿತ್ತು.ಕಳೆದ ಶತಮಾನದಲ್ಲಿ ಅತ್ಯಧಿಕ ಪ್ರಮಾಣದ ಆಮದು 95,300 ಟನ್ 1938-39 ರ ಸಾಲಿನಲ್ಲಿ ಆಗಿತ್ತು.

ಭಾರತವು ಅಡಿಕೆಯನ್ನು ಇಂದು ಶ್ರೀಲಂಕಾ, ಇಂಡೋನೇಷಿಯಾ, ಮ್ಯಾನ್ಮಾರ್,ಭೂತಾನ್,ಸಿಂಗಾಪೂರ್,ಮಲೇಶಿಯ,ಥಾಯ್ಲೆಂಡ್ ಮುಂತಾದ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿದೆ.ಈ ಆಮದಿನಲ್ಲಿ ಹಸಿ ಅಡಿಕೆ,ಚಾಲಿ ರೂಪದ ಅಡಿಕೆ,ಕರಿಗೊಟ್,ಹಣ್ಣು ಅಡಿಕೆ,ಹುರಿದ ಅಡಿಕೆ ಇತ್ಯಾದಿಗಳು ಇವೆ. ಈ ಎಲ್ಲಾ ರೂಪದ ಅಡಿಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆಮದು ಆಗುತ್ತಿವೆ.ಈ ರೀತಿಯ ಆಮದು ಹೆಚ್ಚಾಗಿ ಆಂತರಿಕ ಉತ್ಪಾದನೆಯಲ್ಲಿ ಕೊರತೆ ಕಂಡುಬಂದಾಗ, ಅಥವಾ ಕೊರತೆ ಎಂಬ ಭೀತಿ ಆದಾಗ,ಇಲ್ಲವೇ ವದಂತಿ ಹಬ್ಬಿದಾಗ, ಅಥವಾ ಆಂತರಿಕ ಆಗಿ ಧಾರಣೆ ಹೆಚ್ಚಿದಾಗ ಮಾತ್ರ ಹೆಚ್ಚಾಗಿ ಆಗುತ್ತದೆ.ಸಾಮಾನ್ಯವಾಗಿ ಈ ಆಮದು ಒಕ್ಟೋಬರ್‌ ನಿಂದ ಜನವರಿ ತಿಂಗಳ ತನಕ ಆಗುವುದು ವಾಡಿಕೆ.ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಆಮದಾಗುವ ಅಡಿಕೆ ಕಳಪೆ ಗುಣಮಟ್ಟದ್ದಾಗಿದೆ ಎಂಬುದು. ಸರಕಾರ ಒದಗಿಸುವ ಅಂಕಿ ಅಂಶಗಳ ಪ್ರಕಾರ 2015 ರ ಸಮಯದಲ್ಲಿ ಆಮದಿನ ಪ್ರಮಾಣ ಕೇವಲ 1,550 ಟನ್,ಇದು 22-23 ರ ಸಾಲಿನಲ್ಲಿ 25,979 ಟನ್ ಆಗಿತ್ತು.ಇದು ಹೆಚ್ಚು ಕಡಿಮೆ ಅದೇ ಪ್ರಮಾಣದಲ್ಲಿ ಮುಂದುವರಿಯುತ್ತಿದೆ.

ಅಡಿಕೆ ಆಮದಿಗೆ ಸಂಬಂಧ ಪಟ್ಟಂತೆ ಇರುವ ಸರಕಾರದ ವ್ಯಾಪಾರ ನೀತಿ:  ಆಮದನ್ನು ಹತೋಟಿಯಲ್ಲಿಡಲು ಮತ್ತು ಆಂತರಿಕವಾಗಿ ಬೆಳೆಗಾರರ ರಕ್ಷಣೆಗಾಗಿ ಸರಕಾರ ಪ್ರತ್ಯಕ್ಷ ಒಳಹರಿವಿನ ಮೇಲೆ ಹಲವು ರೀತಿಯ ಪರಿಹಾರಗಳನ್ನು ಸೂಚಿಸಿದೆ.ಅವುಗಳೆಂದರೆ,

  1. ಶೇಕಡಾ ನೂರರಷ್ಟು ಆಮದು ಸುಂಕ
  2. ರಫ್ತು ಆಧಾರಿತ ಮತ್ತು ವಿಶೇಷ ಆರ್ಥಿಕ ವಲಯದ ವ್ಯಾಪ್ತಿ ಹೊರತು ಪಡಿಸುವುದು
  3. ಆಹಾರ ಸಂರಕ್ಷಣೆ ಮತ್ತು ಗುಣಮಟ್ಟದ ಪ್ರಾಧಿಕಾರದ ಮೂಲಕ ಆಮದಾಗುವ ಅಡಿಕೆಯ ಗುಣಮಟ್ಟದ ಪರಿಶೀಲನೆ
  4. ಆಮದಾಗುವ ಅಡಿಕೆಯ ಬೆಲೆ ಕನಿಷ್ಟ ಕಿಲೋ ಒಂದರ ರೂಪಾಯಿ 351 ಎಂದು ನಿಗದಿಪಡಿಸಿದೆ.
  5. ಯಾವ ಮೂಲದಿಂದ ಆಮದು ಆಗಿದೆ ಎಂಬ ಬಗ್ಗೆ ಪರಿಶೀಲನೆ.
  6. ಭೂತಾನಿಗೆ ವಿಶೇಷ ರಿಯಾಯಿತಿ.

ವ್ಯಾಪಾರ ಒಪ್ಪಂದಗಳು : ಭಾರತ ಆಸಿಯಾನ್, ಸಾಫ್ರ ಮತ್ತು ಶ್ರೀಲಂಕಾದ ಒಂದಿಗೆ ಮಾಡಿಕೊಂಡ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಅನುಗುಣವಾಗಿ ಅಡಿಕೆಯನ್ನು ಈ ರಾಷ್ಟ್ರಗಳಿಂದ ಕೆಲವೊಂದು ಸ್ಥಿತಿಗೆ ಅನುಗುಣವಾಗಿ ಆಮದು ಮಾಡಿಕೊಳ್ಳಬಹುದಾಗಿದೆ.ಇದರ ಪ್ರಕಾರ…..

Advertisement
  1. ಭೂತಾನಿಂದ ಆಮದು : ಜುಲೈ, ಮೂರು,2023 ರ ಒಪ್ಪಂದದಂತೆ ಭಾರತಕ್ಕೆ ಅಲ್ಲಿಂದ 17,000 ಟನ್ ಹಸಿರು ಅಡಿಕೆ ಆಮದು ಆಗಬಹುದು. ಈ ಆಮದಾಗುವ ಅಡಿಕೆಗೆ ಕನಿಷ್ಟ ಬೆಲೆ ಇಲ್ಲ.ಈ ಆಮದು ನಿಗದಿಪಡಿಸಿದ ಬಂದರುಗಳಾದ ಜಾಲ್ಗಮ್,ಹಟಿಸರ್ ಮತ್ತು ಡಾರಂಗ ಮೂಲಕವೇ ಬರಬೇಕು. ಆಮದುದಾರರು ಇಲಾಖೆಯಿಂದ ನೋಂದಣಿ ಪರವಾನಗಿ ಹೊಂದಿರಬೇಕು.ಈ ಪರವಾನಗಿಯ ಅವಧಿ ಆರು ತಿಂಗಳುಗಳು ಮಾತ್ರ.ಇದರಲ್ಲಿ ಒಮ್ಮೆಗೆ 500 ಟನ್ ಮಾತ್ರ ಆಮದು ಮಾಡಲು ಸಾಧ್ಯ.ಈ ಆಮದು ಮಾಡಿಕೊಂಡ ಬಳಿಕ ಮತ್ತೆ ಅಷ್ಟೇ  ಪ್ರಮಾಣದ ಆಮದು ಮಾಡಿಕೊಳ್ಳುವ ಅವಕಾಶ ಇದೆ.
  2. ಮ್ಯಾನ್ಮಾರ್‌ನಿಂದ ಆಮದು : 1994 ಒಪ್ಪಂದದಂತೆ ಇಲ್ಲಿಂದ ಆಮದು ಆಗುವ ಅಡಿಕೆ ಮೇಲೆ ಶೇಕಡಾ 40 ರ ಸುಂಕ ವಿಡಿಸಿದ್ದರೂ ಬಳಿಕ ಅದನ್ನು ತೆಗೆದಾಗ ಇಂಡೋನೇಷಿಯಾದ ಅಡಿಕೆ ಅಲ್ಲಿಗೆ ಬಂದು ಅಲ್ಲಿಂದ ಭಾರತಕ್ಕೆ ರಫ್ತು ಆದ ಕಾರಣ 2018 ರ ಸಮಯದಲ್ಲಿ ಪುನಃ ಶೇಕಡಾ 40 ರ ಸುಂಕ ವಿಧಿಸಲಾಯಿತು.ಇನ್ನುಳಿದಂತೆ ಮೇಲೆ ಹೆಸರಿಸಿದ ಸಾಮಾನ್ಯ ಹತೋಟಿ ಕ್ರಮಗಳು ಇಲ್ಲೂ ಇದೆ.
  3.  ಇಂಡೋನೇಷಿಯಾದ ಆಮದು :  ಭಾರತಕ್ಕೆ ಯಾವತ್ತೂ ಸಮಸ್ಯೆ ಒಡ್ಡುವುದು ಈ ರಾಷ್ಟ್ರದ ಅಡಿಕೆ.ಈ ನಿಟ್ಟಿನಲ್ಲಿ ಇದರ ಆಮದಿನ ಮೇಲೆ ಶೇಕಡಾ ನೂರರಷ್ಟು ಸುಂಕ. ಕನಿಷ್ಟ ಆಮದು ಬೆಲೆ. ಇದಕ್ಕಿಂತ ಕಡಿಮೆ ಬೆಲೆಯ ಅಡಿಕೆ ಆಮದು ಮಾಡಿಕೊಳ್ಳುವಂತಿಲ್ಲ. ಒಂದೊಮ್ಮೆ ವಿಶೇಷ ಆರ್ಥಿಕ ವಲಯಗಳ ಪ್ರವೇಶ ಆಗುವುದಿದ್ದಲ್ಲಿ ಆಂತರಿಕ ಆಗಿ ಮಾರಾಟ ಮಾಡುವಂತಿಲ್ಲ.  ಈ ಆಮದಿನ ಮೇಲೆ ಸಾಮಾಜಿಕ ಕಲ್ಯಾಣ , ಸಂಯೋಜಿತ ವಸ್ತು ಮತ್ತು ಸೇವಾ ತೆರಿಗೆಗೆ ಇಲ್ಲಿ ಅವಕಾಶ ಇದೆ . ಹುರಿದ ಅಡಿಕೆ ಆಮದು ಕನಿಷ್ಟ ಬೆಲೆಗಿಂತ ಕಡಿಮೆ ಇದ್ದಲ್ಲಿ ಆಮದಿಗೆ ಅವಕಾಶ ಇಲ್ಲ.
  4.  ಶ್ರೀಲಂಕಾದಿಂದ ಆಮದು : ಈ ದೇಶದೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಅನುಗುಣವಾಗಿ ಇಲ್ಲಿ ಸುಂಕ ಮುಕ್ತ ಆಮದಿಗೆ ಅವಕಾಶ ಇದೆ.ಇಲ್ಲಿ ಈ ಆಮದು.. ಕನಿಷ್ಟ ಬೆಲೆಗಿಂತ ಕಡಿಮೆಯದ್ದಾಗಿರಬಾರದು. ಹುರಿದ ಅಡಿಕೆ ಆಮದು ನಿಷೇಧಿತ ಉತ್ಪನ್ನ ಆಗಿದೆ. ಆದರೆ ಕನಿಷ್ಟ ಬೆಲೆಗಿಂತ ಹೆಚ್ಚಿದ್ದಲ್ಲಿ ಆಮದು ಸಾಧ್ಯ. ಶೇಕಡಾ 100 ರಫ್ತು ಆಧಾರಿತ ಉದ್ದಿಮೆ ಅಥವಾ ವಿಶೇಷ ಆರ್ಥಿಕ ವಲಯದ ಘಟಕಗಳಿಗೆ ಮುಕ್ತ ಆಮದಿಗೆ ಅವಕಾಶ,  ಆದರೆ ಆಂತರಿಕ ಮಾರುಕಟ್ಟೆಯಲ್ಲಿ ಇದನ್ನು ಮಾರಾಟ ಮಾಡುವಂತಿಲ್ಲ. ಶೇಕಡಾ ನೂರರಷ್ಟು ಕಸ್ಟಮ್ಸ್ ಸುಂಕ ಮತ್ತು ಶೇಕಡಾ ನಾಲ್ಕು ವಿಶೇಷ ಸುಂಕ ಹೇರಲು ಅವಕಾಶ. ಅಡಿಕೆಯ ಮೂಲದ ಬಗ್ಗೆ ಪರಿಶೀಲನೆಗೆ ಅವಕಾಶ.

ಪರೋಕ್ಷ ದಾರಿಯ ಮೂಲಕ ಆಮದು : ಮಾರುಕಟ್ಟೆ ವಲಯದ ಪ್ರಕಾರ ಹಾಗೂ ಆಗಿಂದಾಗ್ಗೆ ಗಡಿ ಪ್ರದೇಶಗಳಲ್ಲಿ ಸರಕಾರದ ಅಧಿಕಾರಿಗಳು ಹಿಡಿಯುವ ವಿದೇಶಿ ಅಡಿಕೆಯ ಪ್ರಮಾಣ ಇವೆಲ್ಲಾ ಇದರ ಕಳ್ಳಸಾಗಾಣಿಕೆ ನಡೆಯುತ್ತಿದೆ ಎಂಬುದಕ್ಕೆ ಸಾಕ್ಷಿ.ಭಾರತಕ್ಕೆ ಶ್ರೀಲಂಕಾ,ಇಂಡೋನೇಷಿಯಾ, ಮ್ಯಾನ್ಮಾರ್‌  ಇತ್ಯಾದಿ ರಾಷ್ಟ್ರಗಳಿಂದ ಪರೋಕ್ಷ ಆಗಿ ಆಮದು ಆಗುತ್ತಿದೆ. ಸಾಮಾನ್ಯವಾಗಿ ಇಂಡೋನೇಷಿಯಾದ ಅಡಿಕೆ ಈಶಾನ್ಯ ರಾಜ್ಯಗಳ ಮೂಲಕ ಭಾರತವನ್ನು ಪ್ರವೇಶಿಸುತ್ತವೆ.ಈ ರಾಜ್ಯಗಳ ಗಡಿ ಬಾಗಗಳು ಮೈನಮಾರೂ ದೇಶಕ್ಕೆ ಹೊಂದಿಕೊಂಡು ಇರುವುದರಿಂದ ಕಳ್ಳಸಾಗಾಣಿಕೆ ಸುಲಭವಾಗಿ ನಡೆಯುತ್ತಿದೆ.ಇಲ್ಲಿನ ರಾಜ್ಯಗಳಾದ ಮಿಜೋರಾಂ ಮತ್ತು ಮಣಿಪುರಗಳ ಮೂಲಕ ಪರೋಕ್ಷವಾಗಿ ಆಮದು ಆಗುತ್ತಿವೆ.ಮಿಜೋರಂನ ಚಂಫೈ, ಚಂಡೆಲ್ ಮತ್ತು ತೆಂಗ್ನೋಉಪಲ್ ಜಿಲ್ಲೆಗಳ ಮೂಲಕ ಇದು ನಡೆಯುತ್ತದೆ.ಇಲ್ಲಿಂದ ಅಸ್ಸಾಂನ ಸಿಲ್ಚಾರ್ ಪ್ರದೇಶದಲ್ಲಿ ನೆಲೆಸಿರುವ ವ್ಯಾಪಾರಿಗಳ ಮೂಲಕ ಅದರ ವಿತರಣೆ ಆಗುತ್ತದೆ.ಸಾಮಾನ್ಯವಾಗಿ ಇಲ್ಲಿಂದ ಇದು ಮುಂದೆ ದೇಶದ ಅಡಿಕೆ ಮಾರುಕಟ್ಟೆಯ ಕಳ್ಳಸಾಗಾಣಿಕೆ ರಾಜದಾನಿ ಎಂದೇ ಪ್ರಸಿದ್ಧಿ ಪಡೆದ ನಾಗ್ಪುರಕ್ಕೆ ಹೋಗಿ ಅಲ್ಲಿಂದ ಬೇರೆ ಬೇರೆ ಪ್ರದೇಶಗಳಿಗೆ ವಿತರಣೆ ಆಗುತ್ತದೆ.

ಇದರೊಂದಿಗೆ ಇಂಡೋನೇಷಿಯಾದ ಅಡಿಕೆ ಶ್ರೀಲಂಕಾದ ಮೂಲಕವೂ ಭಾರತಕ್ಕೆ ಬರುತ್ತಿವೆ ಎಂಬ ಸುದ್ದಿ ಮಾರುಕಟ್ಟೆ ವಲಯದಲ್ಲಿ ಕೇಳಿ ಬರುತ್ತಿದೆ. ಇದೇ ಕಾರಣದಿಂದ ಸರಕಾರ ಆಮದಾಗುವ ಅಡಿಕೆಯ ಮೂಲದ ಬಗ್ಗೆ ಪರಿಶೀಲನೆಗೆ ಒಳಪಡಿಸುತ್ತದೆ. ಇನ್ನು ಅಡಿಕೆಯ ಆಮದು ಹುರಿದ ರೂಪದಲ್ಲಿ ಬಂದು ಆಂತರಿಕ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಗೆ ಕಾರಣ ಆದ್ದರಿಂದ ಸರಕಾರ ಏಪ್ರಿಲ್ ಎರಡು 2025 ರಿಂದ ಅದರ ಆಮದಿನ ಬೆಲೆ ಕಿಲೋ ಒಂದರ ರೂಪಾಯಿ 351 ನಿಗದಿ ಪಡಿಸಿ ಇದರ ಮೇಲೆ ಕಡಿವಾಣ ಹಾಕಿದೆ.

ಒಟ್ಟಾರೆಯಾಗಿ ಅಡಿಕೆಯ ಆಮದು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಮ್ಮಲ್ಲಿಗೆ ಆಗುತ್ತಿದೆ.ಈ ಆಮದು ಸಾಮಾನ್ಯವಾಗಿ ಅಕ್ಟೋಬರ್‌ ನಿಂದ ಜನವರಿ ತಿಂಗಳ ತನಕ ಆಗುತ್ತಿದ್ದರೂ ,ಆಮದಾದ ಈ ಪ್ರಮಾಣವನ್ನು ಆಗಿಂದಾಗ್ಗೆ ಶೇಖರಣಾ ಕೇಂದ್ರಗಳಿಂದ ಮಾರುಕಟ್ಟೆಗೆ ಬಿಡುಗಡೆ ಮಾಡಿ ಬೆಲೆಯಲ್ಲಿ ಅಸ್ಥಿರತೆ ಕಂಡು ಬರುತ್ತದೆ. ಹೀಗಿದ್ದರೂ ಪ್ರತಿಷ್ಠಿತ ಕ್ಯಾಂಪ್ಕೊ ಸಂಸ್ಥೆ ಮತ್ತು ಇತರ ಸಹಕಾರಿ ಸಂಸ್ಥೆಗಳು ಇದರ ವಿರುದ್ಧ ಸರಕಾರಕ್ಕೆ ಆಗಿಂದಾಗ್ಗೆ ಮನವರಿಕೆ ಮಾಡುತ್ತಿವೆ.ಪರಿಣಾಮವಾಗಿ ಕಸ್ಟಮ್ಸ್ ಅಧಿಕಾರಿಗಳು ಮತ್ತು ಸೈನಿಕರು ಅಲ್ಲದೆ ಗಡಿ ಭದ್ರತಾ ಪಡೆ ಈ ಪರೋಕ್ಷ ಆಮದಿನ ಮೇಲೆ ನಿಗಾ ವಹಿಸಿ ಬೆಳೆಗಾರರನ್ನು ರಕ್ಷಿಸುತ್ತಿದ್ದಾರೆ.

ಪರೋಕ್ಷವಾಗಿ ಆಮದು ಆಗುವ ಅಡಿಕೆ ಮೇಲೆ ಸರಕಾರ ನಿಗಾ ವಹಿಸಿ ಹಲವು ಪ್ರಕರಣಗಳನ್ನು ದಾಖಲಿಸುತ್ತಾ ಇದೆ. 2021- 2022 ರ ಸಮಯದಲ್ಲಿ 260 ಪ್ರಕರಣ ದಾಖಲಿಸಿ 3,388.40 ಟನ್, 2022 – 2023 ರ ಸಮಯದಲ್ಲಿ 454 ಪ್ರಕರಣದಿಂದ 3,400.30,  2023 – 2024 ರ ಸಮಯದಲ್ಲಿ 643 ಪ್ರಕರಣದಿಂದ 12,881.82 ಟನ್ ಹಾಗೂ 2024-25 ರ ಜೂನ್ ತನಕ 84 ಪ್ರಕರಣ ದಾಖಲಿಸಿ 3,009.04 ಟನ್ ಅಡಿಕೆ ವಶಪಡಿಸಲಾಗಿದೆ.

ಭಾರತಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅಡಿಕೆಯ ಆಮದು ಅನಾದಿ ಕಾಲದಿಂದಲೂ ಆಗುತ್ತಿದ್ದು,ಇದು ಆಗಿಂದಾಗ್ಗೆ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಗೆ ದಾರಿ ಮಾಡಿಕೊಡುತ್ತದೆ.ಆದರೆ ಈ ಇಳಿಕೆ ದೀರ್ಘ ಕಾಲದ ತನಕ ಈ ವರೆಗೆ ಕಂಡುಬಂದಿಲ್ಲ.ಬದಲಾಗಿ ಧಾರಣೆಯ ಏರಿಕೆ ಸಂದರ್ಭದಲ್ಲಿ ಇದು ಸರ್ವೇ ಸಾಮಾನ್ಯ ಆಗಿದೆ.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

ಡಾ|ವಿಘ್ನಶ್ವರ ಭಟ್ ವರ್ಮುಡಿ ಅವರು ಕೃಷಿಕರು. ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದವರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನ ಸಂಸ್ಥೆಯದ ಪೆರ್ಲದ ನಲಂದಾ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಅರ್ಥಶಾಸ್ತ್ರಜ್ಞರಾಗಿ ಗುರುತಿಸಿಕೊಂಡಿದ್ದಾರೆ. ಹಲವು ಸಂಶೋಧನಾ ಬರಹಗಳು ಪ್ರಕಟವಾಗಿದೆ. ಅಡಿಕೆ ಮಾರುಕಟ್ಟೆ ಬಗ್ಗೆ ಅಧಿಕೃತವಾಗಿ ಮಾತನಾಡುವ ವ್ಯಕ್ತಿಯಾಗಿದ್ದಾರೆ. ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಅಡಿಕೆಯ ಬಗ್ಗೆ ವಿವಿಧ ಬರಹಗಳನ್ನು ಪ್ರಕಟಿಸಿದ್ದಾರೆ.

ಇದನ್ನೂ ಓದಿ

ನೀವೀಗ ಕಾಳುಮೆಣಸು ಕೃಷಿ ಆಸಕ್ತರೇ….?, ಹಾಗಿದ್ದರೆ ಗಮನಿಸಿ….| ಕಾಳುಮೆಣಸು ಕೃಷಿಯ ಕಾರ್ಯ ಚಟುವಟಿಕೆಗಳು
July 9, 2025
2:25 PM
by: ಅರುಣ್‌ ಕುಮಾರ್ ಕಾಂಚೋಡು
ವ್ಯಾಪಕ ಮಳೆಯಾಗುವ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ | ದೆಹಲಿಗೆ ಎಲ್ಲೋ ಅಲರ್ಟ್‌ – ಮಳೆ ಎಲ್ಲೆಲ್ಲಿ…?
July 9, 2025
7:06 AM
by: ದ ರೂರಲ್ ಮಿರರ್.ಕಾಂ
ಭಾರತದಿಂದ ಅಡಿಕೆಯ ರಫ್ತು ಎಷ್ಟಾಗುತ್ತದೆ…? ಹೇಗಾಗುತ್ತದೆ…?
July 8, 2025
7:27 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಕೋವಿಡ್ ಲಸಿಕೆಯಿಂದ ಹೃದಯಾಘಾತ ಸಂಭವಿಸುತ್ತಿಲ್ಲ | ಸಚಿವ ದಿನೇಶ್ ಗುಂಡೂರಾವ್
July 7, 2025
9:25 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group