ಕೃಷಿಕರ ಮುಂದೆ ಇಂದು ಕಾಡುವ ಪ್ರಶ್ನೆ ಒಂದೊಮ್ಮೆ ಯುದ್ಧ ಆದರೆ ಇಲ್ಲವೇ ಯದ್ಧ ಆತಂಕದ ವಾತಾವರಣ ನಿರ್ಮಾಣ ಆದರೆ ಕೃಷಿ ಉತ್ಪನ್ನಗಳ ಬೆಲೆ ಸ್ಥಿತಿ ಏನಾಗಬಹುದು ಎಂಬುದು. ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಕೃಷಿ ಉತ್ಪನ್ನ ಇರಬಹುದು ಕೈಗಾರಿಕಾ ಉತ್ಪನ್ನ ಇರಬಹುದು ಇಲ್ಲವೇ ಶೇರ್ ಮಾರ್ಕೆಟ್ ಇತ್ಯಾದಿಗಳಲ್ಲಿ ತಾತ್ಕಾಲಿಕವಾಗಿ ಏರು ಪೇರು ಆಗುವುದು ಸಹಜ.ಯುದ್ಧ ಇಲ್ಲವೇ ಬಿಗುವಿನ ವಾತಾವರಣ ಇದ್ದಾಗ ಪರಿಸ್ಥಿತಿಯ ಬಗ್ಗೆ ವಿಭಿನ್ನ ಮಾಹಿತಿಗಳು ಬಂದು ಒಮ್ಮೆಗೆ ವ್ಯಾಪಾರ ವಹಿವಾಟುಗಳು ಏರು ಪೇರು ಆಗುತ್ತದೆ.ಇದೇನಿದ್ದರು ಟೆಂಪರರಿ ಫಿನಾಮಿನ. ನಮ್ಮಲ್ಲಿ ಬೆಳೆಯುವ ಅಡಿಕೆ ,ತೆಂಗು, ಕಾಳು ಮೆಣಸು,ಕೋಕೋ ಹಾಗೂ ಸಂಬಾರ ಪದಾರ್ಥಗಳ ಸ್ಥಿತಿ ಗತಿ ಏನು ಎಂಬುದನ್ನು ನೋಡುವುದಾದರೆ….…..ಮುಂದೆ ಓದಿ….
ಅಡಿಕೆ : ಅಡಿಕೆಗೆ ನಮ್ಮಲ್ಲಿರುವ ಬೇಡಿಕೆ ಆಂತರಿಕವಾಗಿ ಇರುವುದು.ಆದ್ದರಿಂದ ಇಲ್ಲಿ ತಾತ್ಕಾಲಿಕ ಆಗಿ ಧಾರಣೆ ಏರು ಪೇರು ಆಗಬಹುದು.ಇದಕ್ಕೆ ಮುಖ್ಯ ಕಾರಣ ಗೊಂದಲಗಳು ಮತ್ತು ಅರೆ ಬೆಂದ ಮಾಹಿತಿಗಳು. ಇದರೊಂದಿಗೆ ಅಡಿಕೆಗೆ ಇರುವ ಅಧಿಕ ಬೇಡಿಕೆ ಇರುವುದು ಉತ್ತರ ಭಾರತದಲ್ಲಿ ಅಲ್ಲದೆ ಇದರ ಮೌಲ್ಯವರ್ಧನೆ ಆಗುವುದು ಅಲ್ಲಿಯೇ.ಒಂದೊಮ್ಮೆ ಯುದ್ಧ ಇಲ್ಲವೇ ಯುದ್ಧದ ವಾತಾವರಣ ನಿರ್ಮಾಣ ಆದಲ್ಲಿ ಹೆಚ್ಚಿನ ಭಯ ಇರುವುದು ಅಲ್ಲಿಯೇ. ಹೀಗಿರುವಾಗ ಇವನ್ನೇ ನೆಪವೊಡ್ಡಿ ಮಾರುಕಟ್ಟೆಯಲ್ಲಿ ಏರು ಪೇರು ಆಗಲು ಸಾಧ್ಯ. ಈ ನಿಟ್ಟಿನಲ್ಲಿ ಬೆಳೆಗಾರರು ಪ್ರತಿರೋಧ ತೋರಿಸಿದಲ್ಲಿ ಅಲ್ಪ ಸಮಯದಲ್ಲಿ ಮಾರುಕಟ್ಟೆ ಯಥಾಸ್ಥಿತಿಗೆ ಬಂದು ಬಳಿಕ ಬೇಡಿಕೆ ಹೆಚ್ಚಾಗಿ ಧಾರಣೆ ಏರಿಕೆಗೆ ಅವಕಾಶ ಮಾಡಿಕೊಡಬಹುದು.
ತೆಂಗು : ತೆಂಗಿಗೆ ಇರುವ ಮಾರುಕಟ್ಟೆ ಅಂತರಿಕವಾದ್ದು.ಕೇವಲ ಅಲ್ಪ ಪ್ರಮಾಣದ ಮೌಲ್ಯವರ್ಧಿತ ತೆಂಗಿನ ಉತ್ಪನ್ನಗಳ ರಫ್ತು ಆಗುತ್ತಿದ್ದು ಇದರಿಂದಾಗಿ ತೆಂಗಿನ ಬೆಲೆಯಲ್ಲಿ ಅಂತಹ ಬದಲಾವಣೆ ಅಸಾಧ್ಯ.ನಮ್ಮಲ್ಲಿ ತೆಂಗಿನ ಬಳಕೆ ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಮಾತ್ರ ಆಗುತ್ತಿದೆ.ಇನ್ನು ಸೀಯಾಳ, ಕೊಬ್ಬರಿ ಇವಕ್ಕೆ ದೇಶಾದ್ಯಂತ ಬೇಡಿಕೆ ಇದ್ದು ಪರಿಣಾಮವಾಗಿ ಇದರ ಬೆಲೆಯಲ್ಲಿ ಬದಲಾವಣೆ ಆಗುವುದು ಕಷ್ಟ ಸಾಧ್ಯ.
ಕಾಳುಮೆಣಸು: ಇದಕ್ಕೆ ಆಂತರಿಕ ಹಾಗೂ ಬಾಹ್ಯ ಬೇಡಿಕೆ ಇದ್ದು ಈಗಿನ ಸ್ಥಿತಿಯಲ್ಲಿ ಇದರ ಬೆಲೆ ಏರು ಪೇರು ಆಗುವ ಸಾಧ್ಯತೆಗಳು ದಟ್ಟವಾಗಿವೆ.ಇದಕ್ಕೆ ಕಾರಣ ಯುದ್ಧದ ವಾತರಣ ಕಂಡು ಬಂದಲ್ಲಿ ಆಮದು ಮತ್ತು ರಫ್ತು ಅಲ್ಲೋಲ ಕಲ್ಲೋಲ ಆಗಬಹುದು. ಭಾರತ ಕರಿಮೆಣಸನ್ನು ಆಮದು ಮತ್ತು ರಫ್ತು ಮಾಡಿಕೊಳ್ಳುತ್ತಿದೆ. ಇದು ಹೆಚ್ಚಾಗಿ ಜಲ ಮಾರ್ಗದ ಮೂಲಕ ಸಾಗಣೆ ಆಗುವಂತದ್ದು.ಜಲಮಾರ್ಗದಲ್ಲಿ ಕಂಡುಬರಬಹುದಾದ ಸಮಸ್ಯೆಗಳು ಇಲ್ಲಿಗೂ ಸಮಸ್ಯೆಗಳನ್ನು ಒಡ್ಡಬಹುದು.
ಕೋಕೋ:ಇದರ ಉತ್ಪಾದನೆ ನಮ್ಮಲ್ಲಿ ಆಂತರಿಕ ಬೇಡಿಕೆಗೆ ಅನುಗುಣವಾಗಿ ಇಲ್ಲದ ಕಾರಣ ನಾವು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ.ಆದ ಕಾರಣ ಇದರ ಬೆಲೆಯಲ್ಲಿ ಇಳಿಕೆಗೆ ಅವಕಾಶ ಕಡಿಮೆ. ಒಂದೊಮ್ಮೆ ಇದರ ಆಮದು ಯುದ್ಧದ ವಾತಾವರಣದಿಂದ ಕುಂಠಿತ ಆದರೆ ಇದರ ಬೆಲೆ ಏರಿಕೆಗೆ ಅವಕಾಶ ಕಲ್ಪಿಸುತ್ತಿದೆ.
ಇತರ ಸಂಬಾರ ಪದಾರ್ಥಗಳ ದೃಷ್ಟಿಯಿಂದ ನೋಡುವುದಾದರೆ ಕರಾವಳಿಯ ಬೆಳೆಗಾರರಿಗೆ ಯಾವುದೇ ತೊಂದರೆಯಾಗದು.ಇದಕ್ಕೆ ಕಾರಣ ಇಲ್ಲಿ ಹೇಳಿಕೊಳ್ಳುವ ಪ್ರಮಾಣದಲ್ಲಿ ಇವನ್ನು ಬೆಳೆಯಲಾಗುತ್ತಿಲ್ಲ.
ಒಟ್ಟಾರೆಯಾಗಿ ಯುದ್ಧ ಆದರೆ ಅಥವಾ ಬಿಗುವಿನ ವಾತಾವರಣ ನಿರ್ಮಾಣವಾದರೆ ತಾತ್ಕಾಲಿಕವಾಗಿ ಎಲ್ಲಾ ಉತ್ಪನ್ನಗಳ ಮಾರುಕಟ್ಟೆಗಳು ಅಲ್ಲೋಲ ಕಲ್ಲೋಲ ಆಗಲು ಅವಕಾಶಗಳಿವೆ.ಇದಕ್ಕೆ ಮುಖ್ಯ ಕಾರಣ ಮಾಹಿತಿಯ ಕೊರತೆ, ಗೊಂದಲಗಳು,ಹಣಕಾಸಿನ ಚಲಾವಣೆಯಲ್ಲಾಗುವ ಏರಿಳಿತಗಳು.ಆದ್ದರಿಂದ ಇಲ್ಲಿ ಬೆಳೆಗಾರರ ತಾಳ್ಮೆ,ಸಹನೆ ಮತ್ತು ಸಹಿಸುವಿಕೆ ಧಾರಣೆಯ ಭವಿಷ್ಯವನ್ನು ನಿರ್ಧರಿಸಬಹುದು.