ಬೆಳೆ ಬೆಳೆದು ಫಲ ನೀಡುವ ಹೊತ್ತಿಗೆ ನೀರುಣಿಸಲಾಗದೆ ಇಡೀ ಫಸಲು ಒಣಗುತ್ತಿರುವ ಸನ್ನಿವೇಶವನ್ನು ಕೋಲಾರದ ಕೆಲವು ಕಡೆ ರೈತರು ಅನುಭವಿಸುತ್ತಿದ್ದರು. ನೀರಿದ್ದರೂ ವಿದ್ಯುತ್ ಪೂರೈಕೆಯಲ್ಲಿನ ವ್ಯತ್ಯಯವೇ ಬೆಳೆ ನಾಶಕ್ಕೆ ಕಾರಣವಾಗಿತ್ತು. ಈಗ ರಾಷ್ಟ್ರೀಯ ವಿಕಾಸ ಕಾರ್ಯಕ್ರಮದಡಿ ಸೌರ ವಿದ್ಯುತ್ ಪಂಪ್ ಸೆಟ್ ಅಳವಡಿಸಿ ಬಳಿಕ ನಿರಂತರವಾಗಿ ನೀರು ಹಾಯಿಸುವ ಮೂಲಕ ಕೃಷಿಯನ್ನು ಉಳಿಸಿಕೊಂಡು ಉತ್ತಮ ಫಸಲು ತೆಗೆಯುತ್ತಿದ್ದಾರೆ ರೈತರು.
ರಾಜ್ಯದಲ್ಲಿ ಕೋಲಾರ ಅತಿ ಹೆಚ್ಚು ಕೊಳವೆ ಬಾವಿಗಳನ್ನು ಹೊಂದಿರುವ ಜಿಲ್ಲೆ. ಆದರೆ ಸಮರ್ಪಕವಾದ ವಿದ್ಯುತ್ ಪೂರೈಕೆ ಆಗದೆ ರೈತರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರೈತರ ಸಮಸ್ಯೆಗಳಿಗೆ ಪರಿಹಾರವಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ವಿಕಾಸ ಕಾರ್ಯಕ್ರಮದಡಿ ಸೌರ ವಿದ್ಯುತ್ ಯೋಜನೆಯನ್ನು ಜಾರಿಗೆ ತಂದಿದ್ದು, ಕೋಲಾರದಲ್ಲಿ ಈಗ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ.
ಕೋಲಾರ ಜಿಲ್ಲೆಯಲ್ಲಿ ರೈತರು ಕೊಳವಿ ಬಾವಿಗಳಿಗೆ ಅವಲಂಬಿತರಾಗಿದ್ದಾರೆ. ಆದರೆ ಸಮರ್ಪಕ ವಿದ್ಯುತ್ ಪೂರೈಕೆಯಾಗದೆ ಕೃಷಿಕರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಗಲು ರಾತ್ರಿ ತೋಟಗಳಿಗೆ ನೀರು ಹರಿಸಲು ರೈತರು ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಸಮಸ್ಯೆಗೆ ಪರಿಹಾರವಾಗಿ ರಾಷ್ಟ್ರೀಯ ಕೃಷಿ ವಿಕಾಸ ಕಾರ್ಯಕ್ರಮದಡಿ ಸೌರ ವಿದ್ಯುತ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಸೌರ ವಿದ್ಯುತ್ ನಿರಂತರವಾಗಿ ನವೀಕರಿಸಬಹುದಾದ ಇಂಧನವಾಗಿದೆ. ಈ ಯೋಜನೆಯನ್ನು ಕೋಲಾರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ.
ರೈತರ ತೋಟದಲ್ಲಿ ಸೌರ ವಿದ್ಯುತ್ ಫಲಕಗಳನ್ನು ಅಳವಡಿಸಿ ವಿದ್ಯುತ್ ಉತ್ಪಾದನೆ ಮಾಡಿ ಕೃಷಿ ಹೊಂಡ ಅಥವಾ ಕೊಳವೆ ಬಾವಿಯಿಂದ ತೋಟಗಳಿಗೆ ನೀರು ಹರಿಸಲಾಗುತ್ತಿದೆ. ತಾಲೂಕಿನ ಚದುಮನಹಳ್ಳಿ ಗ್ರಾಮದ ರೈತ ನಾರಾಯಣಸ್ವಾಮಿ ತಮ್ಮ ಸೀಬೆ ತೋಟದಲ್ಲಿ ಸೌರ ವಿದ್ಯುತ್ ಫಲಕ ಅಳವಡಿಸಿ ತೋಟಕ್ಕೆ ನೀರು ಹಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. 7 ಎಕರೆ ಸೀಬೆ ಬೆಳೆದಿದ್ದು, ವಿದ್ಯುತ್ ಸಮರ್ಪಕ ಪೂರೈಕೆಯಾಗದೇ ಸರಿಯಾದ ಸಮಯಕ್ಕೆ ಬೆಳೆಗೆ ನೀರು ಪೂರೈಕೆ ಮಾಡಲು ಆಗುತ್ತಿರಲಿಲ್ಲ. ತೋಟಗಾರಿಕೆ ಇಲಾಖೆಯವರು 5 ಕಿಲೋ ವ್ಯಾಟ್ ಸೋಲಾರ್ ವಿದ್ಯುತ್ ಹಾಕಿಕೊಳ್ಳುವಂತೆ ನೀಡಿದ ಸಲಹೆ ಮೇರೆಗೆ ಅನುಷ್ಟಾನ ಮಾಡಿದರು. ಸೌರ ವಿದ್ಯುತ್ ಪಂಪ್ ಸೆಟ್ ಅಳವಡಿಸಿ ಬಳಿಕ ನಿರಂತರವಾಗಿ ನೀರು ಹರಿಸಲಾಗುತ್ತಿದೆ ಎನ್ನುತ್ತಾರೆ ಯೋಜನೆಯ ಫಲಾನುಭವಿ ಗಗನ್.
ಸೌರ ವಿದ್ಯುತ್ ಯೋಜನೆ ಅವಳವಡಿಸಿಕೊಂಡ ಮೇಲೆ ಎರಡು ಎಕರೆ ಬೀನ್ಸ್ ಬೆಳೆದು, ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ಅದೇ ಗ್ರಾಮದ ಮೃತ್ಯುಂಜಯ.
ಸಹಾಯಕ ತೋಟಗಾರಿಕೆ ಅಧಿಕಾರಿ ನವೀನ್ ಕುಮಾರ್ ಯೋಜನೆಯ ಬಗ್ಗೆ ಮಾತನಾಡುತ್ತಾ, ಸೌರ್ ವಿದ್ಯುತ್ ಪಂಪ್ ಸೆಟ್ ಮೂಲಕ ಬೆಳಗ್ಗೆಯಿಂದ ಸಂಜೆಯ ತನಕ ನೀರು ಹರಿಸಬಹುದು ಎನ್ನುತ್ತಾರೆ.
ಕೋಲಾರ ಜಿಲ್ಲೆಯ 9 ಮಂದಿ ರೈತರು ಕೇಂದ್ರ ಸರ್ಕಾರದಿಂದ ಸಹಾಯಧನದೊಂದಿಗೆ ಸೌರ ವಿದ್ಯುತ್ ಪಂಪ್ ಸೆಟ್ ಅಳವಡಿಸಿದ್ದಾರೆ. ರೈತರು ಸೌರ ವಿದ್ಯುತ್ ಪಂಪ್ ಸೆಟ್ ಗಳನ್ನು ಅಳವಡಿಸಿ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ ಎನ್ನುತ್ತಾರೆ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ರವಿಕುಮಾರ್.