ಗೋ ಸೇವೆಯಿಂದ ಸಂತತಿ ಪಡೆದ ರಾಜಾ ದಿಲೀಪ |

July 18, 2024
10:55 AM

ಸಂಸ್ಕೃತ ಸಾಹಿತ್ಯದಲ್ಲಿ ಮಹಾಕವಿ ಕಾಳಿದಾಸನ ರಘುವಂಶಮಹಾಕಾವ್ಯದ ಪ್ರಾರಂಭದ ಸರ್ಗಗಳಲ್ಲಿ ಬರುವ ಕಥೆ ರಾಜಾ ದಿಲೀಪನು ಪುತ್ರಸಂತಾನಾಪೇಕ್ಷೆಯಿಂದ ಗೋಸೇವೆ ಮಾಡಿದ ವಿಚಾರ ಬಹಳ ಆಸಕ್ತಿದಾಯಕ. ಹಾಗೂ ಗೋವಿನ ಮಹತ್ವ ಸಾರುವ ಒಂದು ಪ್ರಸಂಗ.

Advertisement
Advertisement
Advertisement

ದಿಲೀಪ ಮಹಾರಾಜನು  ಸುದಕ್ಷಿಣಾ ಎಂಬ ಹೆಸರಿನ ತನ್ನ ಪಟ್ಟದ ರಾಣಿಯಿಂದ ತನಗೆ ಬಹಳ ಕಾಲವಾದರೂ ಸಂತಾನವಾಗದಿರುವುದನ್ನು ಕಂಡು ತನ್ನ ರಾಜ್ಯಭಾರದ ಜವಾಬ್ದಾರಿಯನ್ನು ಸಚಿವರಿಗೆ ವಹಿಸಿ ಕುಲಗುರುಗಳಾದ ವಸಿಷ್ಠರ ಆಶ್ರಮಕ್ಕೆ ರಾಜದಂಪತಿಗಳು ತೆರಳುತ್ತಾರೆ.  ವಸಿಷ್ಠರು ಸೂರ್ಯವಂಶದ ರಾಜಗುರುಗಳಾಗಿದ್ದರೂ ಅವರ ವಾಸ ರಾಜಧಾನಿಯಿಂದ ಹೊರಗೆ ವನಪ್ರದೇಶದ ಆಶ್ರಮದಲ್ಲಿ. ಸಾಮಾನ್ಯವಾಗಿ ರಾಜನು ಹೊರಪ್ರವಾಸ ಮಾಡುವಾಗ ಬೆಂಗಾವಲಿನ ಸೈನ್ಯವೂ ಜೊತೆಗೆ ಹೋಗುವುದು ಪದ್ಧತಿ. ಆದರೆ ಆಶ್ರಮ ಪರಿಸರಕ್ಕೆ ಬೆಂಗಾವಲಿನ ಸೈನ್ಯದೊಂದಿಗೆ ಹೋಗಿ ಅಲ್ಲಿನ ಶಾಂತವಾತಾವರಣವನ್ನು ಸೈನ್ಯದ ಗದ್ಧಲಗಳಿಂದ ಪೀಡಿಸುವುದು ಬೇಡವೆಂದು ದಿಲೀಪ-ಸುದಕ್ಷಿಣೆಯರು ಇಬ್ಬರೇ ಒಂದು ರಥದಲ್ಲಿ ಕುಳಿತು ಸಾರಥಿಯನ್ನು ಮಾತ್ರ ಸೇರಿಸಿಕೊಂಡು ಪ್ರಯಾಣಿಸುತ್ತಾರೆ.

Advertisement

ಹೀಗೆ ಪ್ರಯಾಣಿಸುವಾಗ ಮಾರ್ಗದಲ್ಲಿ ಸುಖಕರವಾದ ಗಾಳಿಯನ್ನು ಅನುಭವಿಸುತ್ತಾ,ಮೃಗಪಕ್ಷಿಗಳ ನಯನ ಮನೋಹರದೃಶ್ಯಗಳನ್ನು  ಕಣ್ತುಂಬಿಕೊಳ್ತಾ,ಪುಷ್ಪಗಂಧಗಳ ಸುವಾಸನೆಯನ್ನು ಆಸ್ವಾದಿಸುತ್ತಾ, ದಾರಿಯಲ್ಲಿ ಸಿಗುವ ಯಜ್ಞಾದಿಕರ್ಮ ನಿರತ ಬ್ರಾಹ್ಮಣರ ಆಶೀರ್ವಾದ ಪಡೆಯುತ್ತಾ ಪ್ರಜಾವರ್ಗದ ಜೊತೆ ಸಂವಾದ ಮಾಡಿ,ವನ್ಯವೃಕ್ಷಗಳ ಪರಿಚಯಗಳನ್ನು ಪಡೆದುಕೊಳ್ತಾ ಸಾಯಂಕಾಲದ ಹೊತ್ತಿಗೆ ವಸಿಷ್ಠಾಶ್ರಮವನ್ನು ತಲುಪುತ್ತಾರೆ ಎಂಬುದಾಗಿ ಕಾಳಿದಾಸನು ವರ್ಣಿಸುತ್ತಾನೆ. ಆಶ್ರಮ ಪ್ರದೇಶ ತಲುಪುತ್ತಿದ್ದಂತೆ ಕಾಡಿನಿಂದ ಸಮಿತ್ ,ದರ್ಭೆ ಕಟ್ಟಿಗೆ ಫಲಾದಿಗಳನ್ನು ತರುತ್ತಿದ್ದ ತಪಸ್ವಿಗಳು  ಗೋಚರವಾಗ್ತಾರೆ. ಕುಟೀರಗಳ ದ್ವಾರಗಳಲ್ಲಿ ಋಷಿಪತ್ನಿಯರು ಕೊಡಬಹುದಾದ ನೀವಾರಧಾನ್ಯದಂತಹ ಆಹಾರಕ್ಕಾಗಿ ಹಾತೊರೆಯುವ ಸಾಕಿದ ಜಿಂಕೆ ಮರಿಗಳು ಋಷಿಪತ್ನಿಯರ ಮಕ್ಕಳೋ ಎಂಬಂತೆ ವರ್ತಿಸುತ್ತಿದ್ದವಂತೆ.

ಇನ್ನೊಂದೆಡೆ ಸಾಯಂಕಾಲವಾಗುತ್ತಿದ್ದಂತೆ ಒಣಗಿದ ಧಾನ್ಯಗಳನ್ನು ರಾಶಿಮಾಡಿದ ದೃಶ್ಯ, ಮೃಗಗಳ ಗುಂಪು ಪರ್ಣಶಾಲೆಗಳ ವಠಾರದ ಮರಗಳ ಕೆಳಗೆ ಮಲಗಿ ಮೆಲುಕು ಹಾಕುವ ದೃಶ್ಯಗಳ ಜೊತೆ  ಹೋಮಗಳಿಗೆ ಸಮರ್ಪಿಸಿದ ಆಹುತಿಗಳು ಉರಿದು ಬರತಕ್ಕ ಹೋಮಧೂಮದ ಸುವಾಸನೆಗಳಿಂದ ಸಮ್ಮಿಳಿತವಾದ ಆಶ್ರಮ ಪರಿಸರಕ್ಕೆ ತಲುಪುತ್ತಿದ್ದಂತೆ ದಿಲೀಪಮಹಾರಾಜನು ಸಾರಥಿಗೆ ರಥವನ್ನು ನಿಲ್ಲಿಸಲು ಸೂಚಿಸಿ, ಸುದಕ್ಷಿಣೆಯ ಜೊತೆ ರಥದಿಂದ ಇಳಿದು ಕುದುರೆಗಳಿದೆ ಆಹಾರ ಭಾಯಾರಿಕೆ ವಿಶ್ರಾಂತಿಗಳ ಕಡೆಗೆ ಗಮನ ಕೊಡುವಂತೆಯೂ ಸಾರಥಿಗೆ ಆದೇಶಿಸುತ್ತಾನೆ. ಅಲ್ಲಿಗೆ ಆಶ್ರಮವಾಸಿ ಮುನಿಗಳು ರಾಜನಿಗೆ ಸ್ವಾಗತಾದಿ ಉಪಚಾರಗಳನ್ನು ಮಾಡುತ್ತಾರೆ. ಗುರುಗಳಾದ ವಸಿಷ್ಠರು ಸಾಯಂಕಾಲದ ಅನುಷ್ಠಾನಗಳ ನಂತರ ಭೇಟಿಗೆ ಸಿಗುತ್ತಾರೆ ಎಂಬುದಾಗಿ ತಿಳಿಸುತ್ತಾರೆ.

Advertisement

ನಂತರ ವಸಿಷ್ಠರ ಬಳಿಗೆ  ಹೋಗಿ ಅಭಿವಾದನ ಮಾಡಿದ ರಾಜ ರಾಣಿಯರ ಕುಶಲಪ್ರಶ್ನಾದಿಗಳನ್ನು ನಡೆಸಿದ ವಸಿಷ್ಠರು.ರಾಜ್ಯಭಾರದ ಕುರಿತು ಹೇಗೆ ನಡೆಯುತ್ತಿದೆ ಇತ್ಯಾದಿ ಕೇಳುತ್ತಾರೆ. ತಮ್ಮ ಗುರು ಕೃಪೆ ಯಾರ ಮೇಲಿದೆಯೋ ಆತನ ರಾಜ್ಯದಲ್ಲಿ ಎಲ್ಲ ಕಡೆಯೂ ಕ್ಷೇಮವೇ ಎಂದು ದಿಲೀಪ ಉತ್ತರಿಸ್ತಾನೆ. ಆದರೆ ಎಲ್ಲ ಇದ್ದೂ ಸಂತತಿಯಾಗದ ದುಃಖ ನನ್ನನ್ನು ಬಾಧಿಸುತ್ತಾ ಇದೆ ಆದ್ದರಿಂದ ನನ್ನ ಪಿತೃಗಳೂ ಕೂಡ ಈತನಿಂದ ಮುಂದಕ್ಕೆ ಪಿಂಡಪ್ರದಾನ ಮಾಡಲು ಪುತ್ರರಿಲ್ಲ ಎಂಬ ದುಃಖದಿಂದಲೇ ನಾನು ಮಾಡುವ ಶ್ರಾದ್ಧದಲ್ಲಿ ಪಿಂಡಗ್ರಹಣ ಮಾಡ್ತಾರೆ. ತಪಸ್ಸು ದಾನಗಳಿಂದ ಪ್ರಾಪ್ತವಾಗುವ ಪುಣ್ಯವೂ ಕೂಡ ಸುಖವಾಗಿ ಲಭಿಸಲು ಪುತ್ರಪ್ರಾಪ್ತಿಯಾಗುವುದು ಮುಖ್ಯವಾಗ್ತದೆ.ಆದ್ದರಿಂದ ಸಂತತಿಯಾಗದ ದುಃಖವನ್ನು ಹೋಗಲಾಡಿಸು ಗುರುವೇ ಎಂದು ನಿವೇದಿಸಿಕೊಳ್ತಾನೆ.

ಆಗ ವಸಿಷ್ಠರು ಧ್ಯಾನಮಗ್ನರಾಗಿ ಇದಕ್ಕೆ ಕಾರಣವನ್ನು ಕಂಡುಕೊಂಡು ಹೇಳ್ತಾರೆ,ರಾಜನ್ ನೀನು ಹಿಂದೆ ಸ್ವರ್ಗಲೋಕದ ಅಧಿಪತಿಯಾದ ದೇವೇಂದ್ರನ ಭೇಟಿ ಮಾಡಿ ಬರಬೇಕಾದರೆ ಕಾಮಧೇನುವನ್ನು ನೋಡಿಯೂ ನಮಿಸದೆ
ನಿನ್ನ ಹೆಂಡತಿಯ ಋತುಸ್ನಾನವಾದ ಸಮಯದ ಅವಳ ಸಾಂಗತ್ಯವನ್ನು ಹಂಬಲಿಸಿ ಗಡಿಬಿಡಿಯಿಂದ ಬಂದೆ. ಆಗ ಕಾಮಧೇನುವು ನಿನಗೆ ಸಂತತಿಯಾಗದಿರಲಿ ಎಂದೂ, ನನ್ನ ಸಂತಾನದ ಗೋವನ್ನು ಆರಾಧಿಸದೆ ನಿನಗೆ ಪುತ್ರಪ್ರಾಪ್ತಿಯಾಗದು ಎಂದು ಶಪಿಸಿರುತ್ತಾಳೆ.

Advertisement

ಆದರೆ ಆ ಶಾಪವಚನವು ನಿನಗೂ ನಿನ್ನ ಸಾರಥಿಗೂ ಕೇಳಿಸಲಿಲ್ಲ. ಎನ್ನುತ್ತಾರೆ. ಆಗ ರಾಜನು ಕೂಡಲೇ ನಾನು ಹೋಗಿ ಕಾಮಧೇನುವನ್ನು ಪೂಜಿಸಿ ಮೆಚ್ಚಿಸುತ್ತೇನೆ ಎನ್ನುತ್ತಾನೆ. ಆದರೆ ಅವಳೀಗ ಪಾತಾಳಲೋಕದಲ್ಲಿ ಪ್ರಚೇತಸರು ಮಾಡುವ ಯಜ್ಞದ ಹವಿಸ್ಸುಗಳನ್ನು ಒದಗಿಸಲು ಹೋಗಿದ್ದಾಳೆ ಆದ್ದರಿಂದ ಅವಳ ಪುತ್ರಿ ಇಲ್ಲಿ ನಮ್ಮ ಆಶ್ರಮದಲ್ಲಿರುವ ನಂದಿನಿಯನ್ನು ನೀನು ಪತ್ನಿಯ ಜೊತೆಗೂಡಿ ಸೇವೆ ಮಾಡು. ಅವಳೂ ಕೂಡ ಕಾಮಧೇನುವಿನ ಹಾಗೆ ನಿನ್ನ ಇಷ್ಟಾರ್ಥ ಪೂರೈಸ್ತಾಳೆ ಎಂದು ವಸಿಷ್ಠರು ಹೇಳ್ತಾರೆ. ಹಾಗೆ ಹೇಳುವಾಗಲೇ ಮೇಯಲು ಕಾಡಿಗೆ ತೆರಳಿದ್ದ ನಂದಿನಿಯು ಬರುತ್ತಾಳೆ.

ನಂದಿನಿ ಧೇನುವು ಹೇಗೆ ಕಾಣಿಸ್ತಾ ಇದ್ದಳೆಂದರೆ , ಲಲಾಟದಲ್ಲಿ ಬಿಳಿ ರೋಮಾಳಿಗಳಿಂದ ಕೂಡಿದ  ಗುರುತನ್ನು ಧರಿಸಿ, ದ್ವಿತೀಯಾ ತಿಥಿಯಂದು  ಅರ್ಧಚಂದ್ರಾಕೃತಿಯನ್ನು ಧರಿಸಿದ ಸಂಧ್ಯಾದೇವಿಯಂತೆ ಕಾಣ್ತಿದ್ದಳು. ತನ್ನ ಕರುವನ್ನು ನೋಡಿದಾಕ್ಷಣ  ಸ್ವಲ್ಪ ಸ್ವಲ್ಪವೇ ಬೆಚ್ಚಗಿನ ಹಾಲನ್ನು ಭೂಮಿಗೆ  ಸುರಿಸಿ ಪವಿತ್ರಗೊಳಿಸುತ್ತಾ ಹಾಗೂ ಹಾಲಿನಿಂದ ತುಂಬಿರುವ ಕೆಚ್ಚಲು ಉಳ್ಳವಳಾಗಿ ಬರುತ್ತಿದ್ದಾಳೆ. ಅವಳ ಗೊರಸುಗಳ ಪದವಿನ್ಯಾಸದಿಂದ ಎದ್ದ ಧೂಳು ಮಹಾರಾಜನನ್ನು  ಗೋಧೂಳಿ ಯಿಂದ ಪವಿತ್ರಗೊಳಿಸಿತು. ವಸಿಷ್ಠರೂ ಹೇಳಿದರು ಹೇ ರಾಜನ್ ಅವಳ ನಾಮ ಉಲ್ಲೇಖಿಸುವಾಗಲೇ ಕಲ್ಯಾಣಿಯಾದ ನಂದಿನಿಯು ಆಗಮಿಸಿರುವುದು ನಿನ್ನ ಇಷ್ಟಾರ್ಥ ಈಡೇರುವ ದ್ಯೋತಕವಾಗಿದೆ ಎಂದು.ಆದ್ದರಿಂದ ನೀನು ಆಶ್ರಮವಾಸಿಯಾಗಿದ್ದುಕೊಂಡು ಕಂದಮೂಲ ಫಲಾಹಾರಗಳನ್ನು  ಸೇವಿಸುತ್ತಾ ನಂದಿನಿಧೇನುವಿನ ಸೇವೆ ಮಾಡು. ಅದು ಹೇಗೆಂದರೆ ಅವಳು ಮೇಯಲು ಹೊರಟಾಗ ನೀನು ಹಿಂಬಾಲಿಸು.ನಿಂತರೆ ನೀನು ನಿಲ್ಲು. ಅವಳು ಮಲಗಿ ವಿಶ್ರಾಂತಿ ಪಡೆದಾಗಲಷ್ಟೇ ನಿನಗೆ ವಿಶ್ರಾಂತಿ. ಅವಳು ನೀರು ಕುಡಿದ ನಂತರವೇ ನೀನು ನೀರು ಕುಡಿಯಬೇಕು.ನಿನ್ನ ಪತ್ನಿ ಸುದಕ್ಷಿಣೆಯೂ ಕೂಡ ಬೆಳಗ್ಗೆ ನಂದಿನಿಯನ್ನು ಅರ್ಚಿಸಿ ಅವಳ ಹೆಜ್ಜೆಗಳನ್ನು ಅನುಸರಿಸಿ ಹಿಂಬಾಲಿಸಬೇಕು. ಹೀಗೆ ಅವಳು ಪ್ರಸನ್ನಳಾಗುವ ತನಕ ಸೇವೆ ಮಾಡಿದರೆ ನೀನು ನಿನ್ನ ಸಮಾನ ಗುಣಗಳಿರುವ ಪುತ್ರನನ್ನು ಹೊಂದುವೆ ಎಂದು ಗುರು ವಸಿಷ್ಠರು ಆದೇಶಿಸುತ್ತಾರೆ….(ಸಶೇಷ) ( ಮುಂದಿನ ಬರಹದಲ್ಲಿ ನಿರೀಕ್ಷಿಸಿ….. )

Advertisement
ಬರಹ :
ಮುರಲೀಕೃಷ್ಣ.ಕೆ.ಜಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮುರಲೀಕೃಷ್ಣ ಕೆ ಜಿ

ಕಡಬ ತಾಲೂಕಿನ ಆಲಂತಾಯ ಗ್ರಾಮದ ಮುರಲೀಕೃಷ್ಣ ಕೆ ಜಿ ಅವರು ಕೃಷಿ ಮತ್ತು ಪೌರೋಹಿತ್ಯದ ವೃತ್ತಿಯನ್ನು ಮಾಡುತ್ತಾರೆ. ಹವ್ಯಾಸವಾಗಿ ಉಪನ್ಯಾಸ ಮತ್ತು ಲೇಖನ ಬರೆಯುತ್ತಾರೆ. ವೇದ ಮತ್ತು ಸಂಸ್ಕೃತ ಅಧ್ಯಯನ ಮಾಡಿ ಸಂಸ್ಕೃತದಲ್ಲಿ ಎಂ ಎ ಮಾಡಿದ್ದಾರೆ. ಭಾರತೀಯ ಗೋವಿನ ಬಗ್ಗೆ ಆಸಕ್ತಿಯಿಂದ ಕೆಲಸ ಮಾಡುತ್ತಾರೆ.

ಇದನ್ನೂ ಓದಿ

e- ರೂಪದಲ್ಲಿ ಗ್ರಂಥಾಲಯಗಳು
October 16, 2024
8:37 PM
by: ಡಾ.ಚಂದ್ರಶೇಖರ ದಾಮ್ಲೆ
 ಮನುಷ್ಯನಿಗೆ ಮನುಷ್ಯ ಏನಾಗಿರಬೇಕು?
October 8, 2024
7:27 PM
by: ಡಾ.ಚಂದ್ರಶೇಖರ ದಾಮ್ಲೆ
ಭಾರತದ ಕೃಷಿ ಮುಂಗಾರು ಜೊತೆಗೆ ಹೋರಾಟ..!| ಲಾಭ-ನಷ್ಟ ಸಮಾನವಾಗಿ ಸ್ವೀಕರಿಸಲು ಸಾಧ್ಯವೇ..?
October 8, 2024
11:23 AM
by: ಎ ಪಿ ಸದಾಶಿವ ಮರಿಕೆ
ಮಕ್ಕಳಿಗೆ ಬೇಕು ಪರಿಸರದ ಸ್ಪರ್ಶ
October 2, 2024
11:27 PM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror