ಇನ್ನು ಕೆಲವೇ ದಿನಗಳಲ್ಲಿ ಶಾಲೆ ಆರಂಭವಾಗುತ್ತದೆ. ಮಳೆ ಸುರಿಯುವ ಹೊತ್ತಲ್ಲಿ ಶಾಲೆ ಆರಂಭವಾಗುವುದರ ಜೊತೆಗೇ ಪ್ರತೀ ವರ್ಷದಂತೆಯೇ ಕೊರತೆಗಳ ಪಟ್ಟಿಯನ್ನೇ ಮಾಡುವುದು ಹಾಗೂ ಅದ ಹಿಂದೆ ಬೀಳುವುದಷ್ಟೇ ಆಗಿಬಿಡುತ್ತದೆ. ಅದರಿಂದ ಹೊರ ಬಂದು ಚರ್ಚೆ ಮಾಡುವುದು ಯಾವಾಗ ? ಗ್ರಾಮೀಣ ಭಾಗದ ಶಿಕ್ಷಣ ವ್ಯವಸ್ಥೆ ಸುಧಾರಣೆ ಹೇಗೆ..? ಗ್ರಾಮೀಣ ಭಾಗದ ಶಿಕ್ಷಣ ಸೇತು ನಿರ್ಮಾಣಕ್ಕೆ ಏನು ಮಾಡಬಹುದು..? ಇದೆಲ್ಲಾ ಮುಂದಿರುವ ಪ್ರಶ್ನೆಗಳು. ಇದೆಲ್ಲದರ ನಡುವೆ ಕಳೆದ ವರ್ಷ ಸುಳ್ಯದ ಸ್ನೇಹ ಶಾಲೆ ಗ್ರಾಮೀಣ ಶಾಲೆಗೆ ವರ್ಚುವಲ್ ತರಗತಿ ಮಾಡುವ ಮೂಲಕ ಮಕ್ಕಳಿಗೆ ಪಾಠ ಹೇಳುವ ವ್ಯವಸ್ಥೆ ಮಾಡಿದೆ.
ರಾಜ್ಯದಲ್ಲಿ ಮುಂದಿನ ವಾರ ಶಾಲೆ ಆರಂಭವಾಗುತ್ತದೆ. ಮಕ್ಕಳು ಶಾಲೆಗೆ ಹೋಗಲು ತಯಾರಿ ನಡೆಸುತ್ತಿದ್ದಾರೆ. ಈ ಬಾರಿ ನಿಶ್ಚಿತವಾಗಿಯೂ ಶಾಲಾರಂಭದ ನಂತರ ಕೆಲವು ದಿನ ಕೊರತೆಗಳ ಪಟ್ಟಿ ಮಾಡಲು ಇದೆ. ಚುನಾವಣೆಯ ಕಾರಣದಿಂದ ಶೈಕ್ಷಣಿಕ ವ್ಯವಸ್ಥೆ ಸುಧಾರಣೆಗೆ ಬೇಕಾದ ಎಲ್ಲಾ ಮೂಲಭೂತ ಜೋಡಣೆಗಳಲ್ಲೂ ಏರುಪೇರಾಗಿರುತ್ತದೆ. ಶಿಕ್ಷಣವು ರಾಜಕೀಯ ಮಾಡುವ ಕ್ಷೇತ್ರವಾದ್ದರಿಂದ ಎಲ್ಲರೂ ಸಮಾಜ ಜವಾಬ್ದಾರರಾಗಿ ಶಿಕ್ಷಣ ವ್ಯವಸ್ಥೆಯ ಕೊರತೆಗಳನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ನಿವಾರಣೆ ಮಾಡಬೇಕಾದ್ದು ಅಗತ್ಯ. ದುರಂತ ಎಂದರೆ ಅದೊಂದು ಕೆಲಸ ಬಿಟ್ಟು ಎಲ್ಲವೂ ನಡೆಯುತ್ತದೆ. ಇರಲಿ… ಶಾಲೆ ಆರಂಭದ ನಂತರ ಏನು..?
ಬಹುತೇಕ ಗ್ರಾಮೀಣ ಶಾಲೆಗಳು ಸಂಕಷ್ಟವನ್ನು ಎದುರಿಸುತ್ತವೆ. ಮೂಲಭೂತ ಸೌಲಭ್ಯದ ಕೊರತೆ ಇರುತ್ತದೆ. ಯಾರೇ ಆಗಲಿ ಮೂಲಭೂತ ಸೌಲಭ್ಯದ ಕೊರತೆ ಇರುವ ಕಡೆ ಮಕ್ಕಳನ್ನು ಕಳುಹಿಸುವ ಸಾಹಸ ಮಾಡುತ್ತಾರೆಯೇ..? ಗ್ರಾಮೀಣ ಭಾಗದ ಬಹುಪಾಲು ಕಡೆ ಇದೇ ಸಮಸ್ಯೆ. ಕೊರತೆ ಇದೆ ಎಂದು ಮಕ್ಕಳನ್ನು ದೂರ ಶಾಲೆಗೆ ಸೇರಿಸಿ ಬಿಡುತ್ತಾರೆ, ಮಕ್ಕಳ ಸಂಖ್ಯೆ ಕೊರತೆಯಾದಂತೆಯೇ ಶಿಕ್ಷಕರು ಕೂಡಾ ಕೊರತೆಯಾಗುತ್ತದೆ. ಮಕ್ಕಳ ಸಂಖ್ಯೆ ಹೆಚ್ಚಾದರೂ ಶಿಕ್ಷಕರಿಲ್ಲ, ಅತಿಥಿ ಶಿಕ್ಷಕರು… ಹಾಗೆ .. ಹೀಗೆ ಎಂದೆಲ್ಲಾ ಸರ್ಕಾರಗಳು ಹೇಳಿ ಇಡೀ ವರ್ಷ ಮುಗಿಸಿ ಬಿಡುತ್ತದೆ. ಹೀಗಾಗಿ ಶಿಕ್ಷಣದ ಗುಣಮಟ್ಟ ಕುಸಿತವಾಗುತ್ತಲೇ ಹೋಗುತ್ತದೆ ಗ್ರಾಮೀಣ ಭಾಗದಲ್ಲಿ.
ಗ್ರಾಮೀಣ ಭಾಗದ ಸುಧಾರಣೆ, ದೇಶದ ಆತ್ಮವೇ ಗ್ರಾಮೀಣ ಭಾಗ ಹೀಗೆಲ್ಲಾ ಹೇಳುತ್ತಲಿರುವಾಗ ಗ್ರಾಮೀಣ ಭಾರತವನ್ನು ಅಭಿವೃದ್ಧಿ ಮಾಡುವುದು, ಗಟ್ಟಿ ಮಾಡುವುದು ಹೇಗೆ..?. ಅಂದರೆ ಗ್ರಾಮೀಣ ಭಾಗದಲ್ಲಿ ಈಗ ಶಿಕ್ಷಣ, ಆರೋಗ್ಯ, ವಿದ್ಯುತ್, ರಸ್ತೆ, ನೆಟ್ವರ್ಕ್ ಇದಿಷ್ಟು ಅತೀ ಅಗತ್ಯವಾದ ವ್ಯವಸ್ಥೆಗಳು. ಬಹುತೇಕ ಗ್ರಾಮೀಣ ಭಾಗದಲ್ಲಿ ಇದರ ಕೊರತೆ ಇದೆ. ಹಾಗಿದ್ದರೆ ಒಂದೋದೇ ಸುಧಾರಣೆ ಮಾಡಲು ಸಾಧ್ಯವಿದೆ. ಕಳೆದ ಗ್ರಾಮೀಣ ಭಾಗದ ಶಾಲೆಗಳಲ್ಲಿ ವರ್ಷ ಶಿಕ್ಷಕರ ಕೊರತೆ ನೀಗಿಸಲು ಒಂದು ಪುಟ್ಟ ಪ್ರಯತ್ನವನ್ನು ಸುಳ್ಯದ ಸ್ನೇಹ ಶಾಲೆ ಮಾಡಿತ್ತು.
ಸುಳ್ಯದಲ್ಲಿ ಸ್ನೇಹ ಶಾಲೆಯು ವಿಶೇಷವಾದ ಸ್ಥಾನ ಪಡೆದಿದೆ. ಸುಳ್ಯ ಗಡಿಭಾಗದ ಕರಿಕೆ ಶಾಲೆಯಲ್ಲಿ ಶಿಕ್ಷಕರ ಕೊರತೆ ಇತ್ತು. ಮಕ್ಕಳು ಇದ್ದರೂ ಪಾಠದ ವ್ಯವಸ್ಥೆಗೆ ಸರಿಯಾದ ವ್ಯವಸ್ಥೆ ಇರಲಿಲ್ಲ. ಇದಕ್ಕಾಗಿ ಸ್ನೇಹ ಶಾಲೆಯ ಮುಖ್ಯಸ್ಥ ಚಂದ್ರಶೇಖರ ದಾಮ್ಲೆ ಅವರು ದಾನಿಗಳ ನೆರವು ಪಡೆದು ವರ್ಚುವಲ್ ತರಗತಿ ಮಾಡುವ ಮೂಲಕ ಮಕ್ಕಳಿಗೆ ಪಾಠ ಹೇಳುವ ವ್ಯವಸ್ಥೆ ಮಾಡಿದರು. ಗ್ರಾಮೀಣ ಭಾಗದಲ್ಲಿ ಇಂತಹ ಅನೇಕ ಶಾಲೆಗಳು ಇವೆ. ಅವುಗಳಿಗೆ ಒಂದೊಂದು ಶಾಲೆಯಿಂದ ಈ ಮಾದರಿಯ ಪಾಠದ ವ್ಯವಸ್ಥೆ ಮಾಡಲು ಸಾಧ್ಯ ಇಲ್ಲವೇ ಎಂಬುದು ನಂತರ ಬಂದಿರುವ ಪ್ರಶ್ನೆ.
ಗ್ರಾಮೀಣ ಭಾಗ ಅಭಿವೃದ್ಧಿಯಾಗಬೇಕಾದ್ದೇ ಈ ಕಾರಣಗಳಿಗೆ. ಇಂದಿಗೂ ಅನೇಕ ಗ್ರಾಮೀಣ ಶಾಲೆಗಳಲ್ಲಿ ಸರಿಯಾದ ನೆಟ್ವರ್ಕ್, ವಿದ್ಯುತ್ ವ್ಯವಸ್ಥೆ ಇಲ್ಲ. ಹೀಗಾಗಿ ನೆರ್ಟ್ವರ್ಕ್ ವ್ಯವಸ್ಥೆ ಬಲಗೊಳಿಸುವ ಕೆಲಸ ನಡೆಯುತ್ತಾ ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್ ಮೂಲಕ ಪಾಠ ಮಾಡಬಹುದು. ಹಳ್ಳಿ ಶಾಲೆಗಳಿಗೆ ಪಾಠ ಮಾಡಲು ಅನೇಕರು ಉತ್ಸಾಹಿಗಳು ಇದ್ದಾರೆ, ಆದರೆ ವ್ಯವಸ್ಥೆಯ ಕೊರತೆ ಕಾಡುತ್ತದೆ. ಸ್ನೇಹ ಶಾಲೆಯು ಸ್ಮಾರ್ಟ್ ಕ್ಲಾಸ್ ಸಿದ್ಧತೆ ಮಾಡಿತ್ತು, ಕರಿಕೆಯ ಶಾಲೆಯಲ್ಲೂ ಇಂಟರ್ನೆಟ್ ಹಾಕಿಸಿ ಅಲ್ಲಿನ ಮಕ್ಕಳು ತರಗತಿಯಲ್ಲಿ ಕುಳಿತ ತಕ್ಷಣವೇ ಸುಳ್ಯದ ಶಾಲೆಯಲ್ಲಿರುವ ಶಿಕ್ಷಕಿಗೆ ತಿಳಿಯುತ್ತದೆ, ಮಕ್ಕಳು ಏನು ಮಾಡುತ್ತಿದ್ದಾರೆ ಎಂದೂ ನೇರವಾಗಿ ಕಾಣಲು ಸಾಧ್ಯ ಇರುವುದರಿಂದ ಪಾಠವನ್ನೂ ಸುಲಲಿತವಾಗಿ ಮಾಡಲು ಸಾಧ್ಯವಾಗಿತ್ತು.
ಇದೇ ವ್ಯವಸ್ಥೆಯನ್ನು ಮಾದರಿಯಾಗಿರಿಸಿ, ಇನ್ನೂ ಕೆಲವು ಮಾರ್ಪಾಡು ಮಾಡಿಕೊಂಡು ರಾಜ್ಯದ ಗ್ರಾಮೀಣ ಶಾಲೆಗಳಿಗೆ ಇಂಟರ್ನೆಟ್ ವ್ಯವಸ್ಥೆಯನ್ನು ಮಾಡಿಕೊಂಡು ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಬೇರೆ ಶಾಲೆಗಳ ಶಿಕ್ಷಕರ ಮೂಲಕ ಏಕೆ ಪಾಠ ಮಾಡಿಸುವ ಕೆಲಸವನ್ನು ಸರ್ಕಾರ ಮಾಡಬಾರದು..?. ಇನ್ನಷ್ಟು ಸುಧಾರಣೆಯನ್ನು ಮಾಡಿಕೊಂಡು ಗ್ರಾಮೀಣ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲೂ ಬದಲಾವಣೆ ತರಲು ಸಾಧ್ಯವಿದೆ. ಯಾವುದಕ್ಕೂ ಮನಸ್ಸು ಬೇಕು ಅಷ್ಟೇ..!.
ಈ ಬಾರಿಯೂ ಸ್ನೇಹ ಶಾಲೆ ಇನ್ನೊಂದು ಹೆಜ್ಜೆ ಇರಿಸಿದೆ. ಸ್ಮಾರ್ಟ್ ಕ್ಲಾಸ್ ಬಗ್ಗೆಯೂ ಚಿಂತನೆ ನಡೆಸಿದೆ. ಮಕ್ಕಳಿಗೆ ತರಗತಿಯಲ್ಲಿ ನಡೆಯುವ ಪಾಠಗಳನ್ನು ಆಸಕ್ತಿದಾಯಕವಾಗಿಸಲು ಸ್ಮಾರ್ಟ್ ಕ್ಲಾಸ್ ಗಳು ಉಪಯುಕ್ತ ಆಗುತ್ತವೆ. ಏಕೆಂದರೆ ಅವುಗಳಲ್ಲಿ ಚಟುವಟಿಕೆಗಳ ಹಾಗೂ ಪ್ರಯೋಗಗಳ ಚಿತ್ರೀಕರಣವೂ ಇರುತ್ತದೆ. ಅಲ್ಲದೆ ಕನ್ನಡದಲ್ಲಿ ಪಾಠ ಮಾಡಿದಾಗ ಅರ್ಥವಾದ್ದನ್ನು ಇಂಗ್ಲಿಷ್ ನಲ್ಲಿಯೂ ಕಲಿಸಿದಾಗ ಮಕ್ಕಳಿಗೆ ಎರಡೂ ಭಾಷೆಗಳಲ್ಲಿ ಅರ್ಥವಾಗುತ್ತದೆ. ಇದು ಇಂಗ್ಲಿಷ್ ಕಲಿಕೆಗೂ ಅನುಕೂಲವಾಗಿದೆ.
Vistas ನವರ ಸ್ಮಾರ್ಟ್ ಕ್ಲಾಸ್ ಗಳು ರಾಜ್ಯ ಸಿಲೆಬಸ್ ಹಾಗೂ ಸಿಬಿಎಸ್.ಸಿ. ಸಿಲೆಬಸ್ ಅಳವಡಿಸಿಕೊಂಡಿವೆ. ಇವುಗಳಿಂದಾಗಿ ಗ್ರಾಮೀಣ ವಿದ್ಯಾರ್ಥಿಗಳಿಗೂ ತಾಂತ್ರಿಕ ಜ್ಞಾನವನ್ನು ಒದಗಿಸಿದಂತಾಗುತ್ತದೆ.ಹೆಚ್ಚಿನ ಶೈಕ್ಷಣಿಕ ಸೌಲಭ್ಯಗಳನ್ನು ಪೂರೈಸಿದರೆ ಇನ್ನೂ ಹೆಚ್ಚಿನ ಸಾಮರ್ಥ್ಯ ವೃದ್ಧಿಗೆ ಯತ್ನಿಸುತ್ತೇವೆ, ಗ್ರಾಮೀಣ ಭಾಗದ ಶಿಕ್ಷಣ ವ್ಯವಸ್ಥೆಗೆ ಶ್ರಮ ವಹಿಸಬಹುದು ಎಂದು ಚಂದ್ರಶೇಖರ ದಾಮ್ಲೆ ಅವರು ಹೇಳುತ್ತಾರೆ. ಅಂದರೆ ಸರ್ಕಾರಗಳಿಗೆ ಇಂತಹ ಯೋಜನೆಗಳು, ವ್ಯವಸ್ಥೆಗಳು ಏಕೆ ಇದೆಲ್ಲಾ ತಿಳಿಯುವುದಿಲ್ಲ..!?.
ಗ್ರಾಮೀಣ ಭಾಗದ ಶಿಕ್ಷಣದ ಸೇತು ಹೇಗೆ ಮಾಡಬಹುದು ..? | ಸುಳ್ಯದ ಸ್ನೇಹ ಶಾಲೆಯದ್ದೇ ಮಾದರಿ ಯಾಕಾಗಬಾರದು..? https://t.co/aPWQJIieiP #theruralmirror #education #rurallife #RuralEducation #ಸ್ನೇಹ #ಸುಳ್ಯ #sullia @Madhu_Bangarapp
— theruralmirror (@ruralmirror) May 27, 2024
Advertisement