ಇತ್ತೀಚಿನ ದಿನಗಳಲ್ಲಿ ಸಂಬಂಧಗಳ ಬೆಲೆ(Relationship), ಆತ್ಮೀಯತೆ, ಪ್ರೀತಿ(Love), ಕಾಳಜಿ(Care) ದಿನೇ ದಿನೇ ಕುಸಿಯುತ್ತಿದೆ. ಯಾರಿಗೂ ಪುರುಸೋತ್ತಿಲ್ಲ(No time). ಅಪ್ಪ ಅಮ್ಮನ(Parents) ಕ್ಷೇಮ ಸಮಾಚಾರ ವಿಚಾರಿಸಲು ಪುರುಸೋತ್ತಿಲ್ಲ.. ಇನ್ನು ಜೊತೆಗೆ ಕಳೆಯುದು, ಒಂದುಹೊತ್ತು ಒಟ್ಟಿಗೆ ಕುಳಿತು ಊಟ ತಿಂಡಿ ಮಾಡುವುದು ದೂರದ ಮಾತು. ಇನ್ನು ಕೆಲವರು ದುಡ್ಡು ಕೊಟ್ಟರೆ ಕರ್ತವ್ಯ ಮುಗಿಯಿತು ಅನ್ನುವ ಭ್ರಮೆಯಲ್ಲಿ ಇದ್ದಾರೆ. ಆದರೆ ಅವರ ಆಸೆ ಆಕಾಂಕ್ಷೆ, ತುಡಿತ-ಮಿಡಿತಗಳಿಗೆ ಸಂಧಿಸುವ ಮಕ್ಕಳು(Children) ಭಾರಿ ಕಡಿಮೆ. ಕೇವಲ ಸಂಪರ್ಕಕ್ಕೂ.. ಭಾವನಾತ್ಮಕ ಸಂಪರ್ಕಕ್ಕೂ ಇರುವ ವ್ಯತ್ಯಾಸವನ್ನು ಇಲ್ಲೊಬ್ಬ ದೇಶದ ಅಸಾಮಾನ್ಯ ವ್ಯಕ್ತಿ ಹೇಗೆ ಅರ್ಥಮಾಡಿಸಿದ್ದಾರೆ ಅನ್ನೋದನ್ನ ನೀವೆ ಓದಿ..
ರಾಮಕೃಷ್ಣ ಮಿಷನ್‌ನ(Ramakrishna Mission) ಒಬ್ಬ ಸ್ವಾಮೀಜಿಯನ್ನು ನ್ಯೂಯಾರ್ಕ್ ಟೈಮ್ಸ್ ಪತ್ರಕರ್ತನೊಬ್ಬ ಮೊದಲೇ ನಿಗದಿ ಪಡಿಸಿದ ಸಮಯಕ್ಕೆ ಭೇಟಿ ಮಾಡಿದ.
ಪತ್ರಕರ್ತ: ಸರ್, ನೀವು ನಿಮ್ಮ ಹಿಂದಿನ ಉಪನ್ಯಾಸದಲ್ಲಿ ಕಾಂಟ್ಯಾಕ್ಟ್ ಮತ್ತು ಕನೆಕ್ಷನ್ ಬಗ್ಗೆ ಹೇಳಿದ್ದಿರಿ. ನನಗೆ ಸ್ವಲ್ಪ ಗಲಿಬಿಲಿ ಉಂಟಾಗಿದೆ. ದಯವಿಟ್ಟು ವಿವರಣೆ ಕೊಡಲು ಸಾಧ್ಯವೇ..?? ಸ್ವಾಮೀಜಿ ಮುಗುಳ್ನಕ್ಕು ಸಂಬಂಧವಿಲ್ಲವೇನೋ ಎಂಬಂತಹ ಪ್ರಶ್ನೆ ಕೇಳಿದರು. “ನೀವು ನ್ಯೂಯಾರ್ಕ್ ನಗರದವರಾ..?”
ಪತ್ರಕರ್ತ: ಹೌದು ಸ್ವಾಮೀಜಿ: ಮನೆಯಲ್ಲಿ ಯಾರು ಯಾರು ಇದ್ದಾರೆ..? ಈ ಸ್ವಾಮೀಜಿ ತನ್ನ ಪ್ರಶ್ನೆಗೆ ಉತ್ತರಿಸುವುದನ್ನು ತಪ್ಪಿಸಿಕೊಳ್ಳಲು ನೋಡುತ್ತಿದ್ದಾರೆ. ಅವರಿಗೆ ಇದು ವೈಯಕ್ತಿಕ ಮತ್ತು ಕೇಳಬಾರದ ಪ್ರಶ್ನೆ ಎನಿಸಿರಬೇಕು ಎಂದುಕೊಂಡ. ಆದರೂ “ಅಮ್ಮ ತೀರಿಕೊಂಡಿದ್ದಾರೆ. ಅಪ್ಪ ಇದ್ದಾರೆ. ಮೂವರು ಸಹೋದರರು. ಒಬ್ಬ ಸಹೋದರಿ. ಎಲ್ಲರೂ ವಿವಾಹಿತರು…” ವದನದ ಮೇಲೆ ನಗೆಯಿಟ್ಟುಕೊಂಡು “ನೀವು ನಿಮ್ಮ ತಂದೆಯೊಂದಿಗೆ ಮಾತನಾಡುವಿರಾ..?” ಎಂದರು.
ಪತ್ರಕರ್ತನ ಮುಖದ ಕಿರಿಕಿರಿ ಕಾಣಿಸಿತು.
ಸ್ವಾಮೀಜಿ: ಹಿಂದಿನ ಸಲ ಆತನೊಂದಿಗೆ ಯಾವಾಗ ಮಾತಾಡಿದಿರಿ..? ತನ್ನ ಕಿರಿಕಿರಿಯನ್ನು ಅದುಮಿಟ್ಟುಕೊಂಡು “ಬಹುಶಃ ಒಂದು ತಿಂಗಳ ಹಿಂದೆ” ಎಂದ.
ಸ್ವಾಮೀಜಿ: ನೀವು ಸೋದರ ಸೋದರಿಯರು ಸಾಕಷ್ಟು ಸಲ ಪರಸ್ಪರ ಭೇಟಿ ಆಗುವಿರಾ? ಕುಟುಂಬದ ಎಲ್ಲ ಸದಸ್ಯರೂ ಹಿಂದೆ ಭೇಟಿ ಮಾಡಿದ್ದು ಯಾವಾಗ..? ಈಗ ಪತ್ರಕರ್ತನ ಹಣೆಯ ಮೇಲೆ ಬೆವರಿನ ಹನಿಗಳು ಮೂಡಿದವು. ಇದೇನು..? ಈ ಸ್ವಾಮೀಜಿಯವರೇ ನನ್ನ ಮುಖಾಮುಖಿ ನಡೆಸಿದ್ದಾರೆ ಎಂದುಕೊಂಡ ಪತ್ರಕರ್ತ.
ನಿಟ್ಟುಸಿರಿಟ್ಟು “ಎರಡು ವರ್ಷಗಳ ಹಿಂದೆ ಕ್ರಿಸ್‌ಮಸ್‌ನಲ್ಲಿ ಒಟ್ಟಿಗೆ ಸೇರಿದ್ದೆವು” ಎಂದ.
ಸ್ವಾಮೀಜಿ: ಆಗ ಎಲ್ಲರೂ ಒಟ್ಟಿಗೇ ಎಷ್ಟು ದಿನಗಳಿದ್ದಿರಿ? ಪತ್ರಕರ್ತ (ಹುಬ್ಬಿನ ಮೇಲಣ ಬೆವರೊರೆಸಿಕೊಳ್ಳುತ್ತಾ): ಮೂರು ದಿನಗಳು.
ಸ್ವಾಮೀಜಿ: ನಿಮ್ಮ ತಂದೆಯೊಂದಿಗೆ ಅವರ ಪಕ್ಕದಲ್ಲೇ ಕುಳಿತು ಎಷ್ಟು ಸಮಯ ಕಳೆದಿರಿ..? ಪತ್ರಕರ್ತ ಆಯಾಸಗೊಂಡವನಂತೆ ಮುಜುಗರಗೊಂಡವನಂತೆ ಒಂದು ಕಾಗದದ ಮೇಲೆ ಏನನ್ನೋ ಗೀಚತೊಡಗಿದ…
ಸ್ವಾಮೀಜಿ: ಒಟ್ಟಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಭೋಜನ ಒಟ್ಟಿಗೆ ಮಾಡಿದಿರಾ..? ನಿಮ್ಮ ತಂದೆ ಹೇಗಿರುವರೆಂದು ವಿಚಾರಿಸಿದಿರಾ..? ನಿಮ್ಮ ಅಮ್ಮ ತೀರಿಕೊಂಡ ಮೇಲೆ ಆತನ ದಿನಗಳು ಹೇಗೆ ಕಳೆಯುತ್ತಿವೆ ಎಂದು ಕೇಳಿದಿರಾ..? ಪತ್ರಕರ್ತನ ಕಂಗಳಿಂದ ನೀರು ದಳದಳನೆ ಸುರಿಯಲಾರಂಭಿಸಿತು.
ಸ್ವಾಮೀಜಿ ಪತ್ರಕರ್ತನ ಕೈ ಹಿಡಿದು “ಮುಜುಗರ ಪಡಬೇಡಿ. ದುಃಖ, ಬೇಸರ ಪಡಬೇಡಿ. ನಿಮ್ಮನ್ನು ನನಗೇ ತಿಳಿಯದೇ ನೋಯಿಸಿದ್ದರೆ ನನ್ನನ್ನು ಕ್ಷಮಿಸಿ. ಆದರೆ ಇದೇ ನಿಮ್ಮ ಕಾಂಟ್ಯಾಕ್ಟ್ ಮತ್ತು ಕನೆಕ್ಷನ್ ಪ್ರಶ್ನೆಗೆ ಉತ್ತರ. ನಿಮಗೆ ನಿಮ್ಮ ತಂದೆಯ ಕಾಂಟ್ಯಾಕ್ಟ್ ಇದೆ. ಆದರೆ ಆತನೊಂದಿಗೆ ನಿಮಗೆ ಕನೆಕ್ಷನ್ ಇಲ್ಲ. ನೀವು ಆತನೊಂದಿಗೆ ಕನೆಕ್ಟ್ ಆಗಿಲ್ಲ. ಕನೆಕ್ಷನ್ ಎನ್ನುವುದು ಎರಡು ಹೃದಯಗಳ ನಡುವೆ ಇರುವಂತಹದ್ದು. ಒಟ್ಟಿಗೆ ಕುಳಿತು ಊಟ ಮಾಡುವುದು, ಒಬ್ಬರಿಗೊಬ್ಬರು ಕೇರ್ ಮಾಡುವುದು. ಸ್ಪರ್ಶ, ಕೈ ಕುಲುಕುವುದು, ಕಣ್ಣುಗಳ ಮಿಲನ, ಒಟ್ಟಿಗೇ ಸ್ವಲ್ಪ ಸಮಯ ಕಳೆಯುವುದು.. ನಿಮ್ಮ ಸಹೋದರರು ಸಹೋದರಿಯರು ಕೂಡ ಕಾಂಟ್ಯಾಕ್ಟ್‌ನಲ್ಲಿದ್ದಾರೆಯೇ ಹೊರತು ಪರಸ್ಪರರ ನಡುವೆ ಕನೆಕ್ಷನ್ ಇಲ್ಲ”ಎಂದರು.
ಪತ್ರಕರ್ತ ಹರಿಯುತ್ತಿದ್ದ ಕಣ್ಣೀರನ್ನು ಒರೆಸಿಕೊಂಡು “ನನಗೆ ಇಂತಹ ಸುಂದರ ಮತ್ತು ಮರೆಯಲಾಗದ ಪಾಠ ಕಲಿಸಿದ್ದಕ್ಕೆ ಕೃತಜ್ಞತೆಗಳು” ಎಂದ. ಇದು ಇಂದಿನ ಕಟುವಾಸ್ತವ. ಮನೆಯಲ್ಲಿ ಸಮಾಜದಲ್ಲಿ ಬಹಳ ಕಾಂಟ್ಯಾಕ್ಟ್‌ಗಳು ಇವೆ. ಆದರೆ ಕನೆಕ್ಷನ್ ಇಲ್ಲ. ಎಲ್ಲರೂ ಅವರವರ ಪ್ರಪಂಚದಲ್ಲಿ ಬಿಝಿ… ಬರೀ ಕಾಂಟ್ಯಾಕ್ಟ್ ನಿಭಾಯಿಸೋದಲ್ಲ. ನಾವು ಕನೆಕ್ಟ್ ಆಗಿರೋಣ. ಕೇರ್ ಮಾಡುವುದು, ಸುಖವನ್ನು ಹಂಚಿಕೊಳ್ಳುವುದು ಮತ್ತು ನಮ್ಮ ಪ್ರೀತಿಪಾತ್ರರೊಂದಿಗೆ ಸಮಯ ಕಳೆಯುವುದನ್ನು ಮಾಡುತ್ತಿರೋಣ..
ಅಂದ ಹಾಗೆ ಆ ಸ್ವಾಮೀಜಿ ಯಾರು ಅಂತೀರಾ..? ನಮ್ಮ ನಿಮ್ಮೆಲ್ಲರ ಪ್ರೀತಿ ಗಳಿಸಿದ ಸ್ವಾಮಿ ವಿವೇಕಾನಂದ..
( ಮೂಲ ಬರಹದ ಮಾಹಿತಿ ಇಲ್ಲ, ಇಂದಿನ ಜಗತ್ತಿಗೆ ಈ ಸಂಗತಿ ಅರಿವಿಗೆ ಪುನರ್ ಪ್ರಕಟಿಸಲಾಗಿದೆ- ಮೂಲ ಬರಹಗಾರರಿಗೆ ರೂರಲ್ ಮಿರರ್ ಕೃತಜ್ಞತೆ)