ವಿಶ್ವ ಆನೆ ದಿನ | ಮಾನವ-ಆನೆ ಸಂಘರ್ಷ ನಿರ್ವಹಣೆ ಕುರಿತ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸಮ್ಮೇಳನ | ಅರಣ್ಯ ಸಚಿವರ ಭಾಷಣದ ಟಿಪ್ಪಣಿ

August 12, 2024
2:47 PM

ಮಾನವ-ಆನೆ ಸಂಘರ್ಷ(HUMAN ELEPHANT CONFLIC) ನಿರ್ವಹಣೆ ಕುರಿತು ಅಂತರಾಷ್ಟ್ರೀಯ ಸಮ್ಮೇಳನ(INTERNATIONAL CONFERENCE)- 2024ರ ಸಮ್ಮೇಳನವನ್ನು(Ceremony) ಕರ್ನಾಟಕ(Karnataka) ಅರಣ್ಯ ಇಲಾಖೆ(Forest department) ಯಲಹಂಕ ಸಮೀಪದ ಜಿಕೆವಿಕೆಯಲ್ಲಿ(GKVK)  ಆಯೋಜಿಸಿತ್ನತು. ಈ ಅಂತರಾಷ್ಟ್ರೀಯ ಸಮ್ಮೇಳನವನ್ನು ಸಿಎಂ ಸಿದ್ದರಾಮಯ್ಯ(CM Siddaramayya) ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆಶಿ, ಅರಣ್ಯ ಸಚಿವ ಈಶ್ವರ್ ಖಂಡ್ರೆ, ಶಾಸಕ ಪೊನ್ನಣ್ಣ, ಕೇರಳ ಅರಣ್ಯ ಇಲಾಖೆ ಸಚಿವ AK ಶಶೀಂದ್ರನ್, ತೆಲಂಗಾಣ ಕೊಂಡ ಸುರೇಶ್, ತಮಿಳುನಾಡು ಮತಿವೆಂಥನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement
Advertisement

ಮಾನವ-ಆನೆ ಸಂಘರ್ಷ ನಿರ್ವಹಣೆ ಕುರಿತ ಈ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಅರಣ್ಯ ಸಚಿವರಾದ ಈಶ್ವರ್‌ ಖಂಡ್ರೆ(Eshwar Khandre) ಅವರು ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಅರಣ್ಯ ಇಲಾಖೆಯನ್ನು ಪ್ರತಿನಿಧಿಸಿರುವ ಬಗ್ಲುಗೆ ಹೆಮ್ಮೆ ವ್ಯಕ್ತಪಡಿಸಿದರು. ಈ ಸಮ್ಮೇಳನದ ವಿಷಯವೇ ಒಂದು ಮಹತ್ವದ ಸವಾಲನ್ನು ಪ್ರಚುರಪಡಿಸುತ್ತದೆ ಎಂದು ಹೇಳಿದ ಅವರು ಅನೆ ಹಾಗೂ ಮಾನವ ಸಂಘರ್ಷ, ಅದರಕ್ಕೆ ಸರ್ಕಾರ ತೆಗೆದುಕೊಂಡ ಕ್ರಮಗಳು, ಮುಂದೆ ಏನು ಮಾಡಬೇಕು.. ? ಎನ್ನುವ ಬಗ್ಗೆ ಸುದೀರ್ಘ ಮಾತುಗಳನ್ನಾಡಿದರು. ಅದರ ಟಿಪ್ಪಣಿ ಹೀಗಿದೆ.

Advertisement

ಜಾಗತಿಕ ಸಮಸ್ಯೆ: ಇದು ಕೇವಲ ಕರ್ನಾಟಕ ಅಥವಾ ಭಾರತದ ಯಾವುದೋ ಒಂದು ರಾಜ್ಯದ ಸಮಸ್ಯೆಯಲ್ಲ ಬದಲಾಗಿ ಜಾಗತಿಕ ಸಮಸ್ಯೆಯಾಗಿದೆ. ಮಾನವ-ಆನೆ ಸಂಘರ್ಷವು ಪರಿಸರ, ಸಾಮಾಜಿಕ ಮತ್ತು ಆರ್ಥಿಕ ಅಂಶಗಳನ್ನು ಒಳಗೊಂಡ ಒಂದು ಸಂಕೀರ್ಣ ಸಮಸ್ಯೆಯಾಗಿದೆ. ಅಮೂಲ್ಯವಾದ ಜೀವ ಹಾನಿ, ಬೆಳೆ ಹಾನಿಗೆ ಕಾರಣವಾಗುತ್ತಿರುವ ಈ ಸಮಸ್ಯೆಗೆ ಸುಸ್ಥಿರ ಪರಿಹಾರಗಳನ್ನು ಕಂಡುಕೊಳ್ಳಲು ನಮ್ಮ ಸಂಘಟಿತ ಮತ್ತು ಸಹಯೋಗದ ಪ್ರಯತ್ನಗಳು ಅಗತ್ಯ ಮತ್ತು ಅನಿವಾರ್ಯ ಎಂದು ನಾನು ಭಾವಿಸುತ್ತೇನೆ. ಕರ್ನಾಟಕ ರಾಜ್ಯ ವೈವಿಧ್ಯಮಯ ಜೀವವೈವಿಧ್ಯ, ಸಸ್ಯ ಸಂಪತ್ತು, ಪ್ರಾಣಿ ಸಂಪತ್ತಿನಿಂದ ಕೂಡಿದೆ. ವಿಶಾಲವಾದ ದಟ್ಟ ಅಡವಿಗಳು ಪ್ರಾಣಿ ಸಂಕುಲ, ಸಸ್ಯ ಸಂಕುಲ, ಕೀಟ ಸಂಕುಲ ಮತ್ತು ಪಕ್ಷಿ ಸಂಕುಲಕ್ಕೆ ನೆಲೆಯಾಗಿದೆ. ಕರ್ನಾಟಕದಲ್ಲಿ ಸುಮಾರು 43,382 ಚದರ ಕಿಲೋ ಮೀಟರ್ ಅರಣ್ಯ ಪ್ರದೇಶವಿದೆ. ಅಂದರೆ ನಮ್ಮ ಭೌಗೋಳಿಕ ಭೂಭಾಗದ ಶೇ.22ರಷ್ಟು ಹಸಿರು ಹೊದಿಕೆ ಇದೆ.

ಆದಿವಾಸಿಗಳ ಕೊಡುಗೆ ಅಪಾರ:ರಾಜ್ಯದ ಅರಣ್ಯವನ್ನು ಜೀವನ ಮತ್ತು ಜೀವನೋಪಾಯಕ್ಕಾಗಿ ಅವಲಂಬಿಸಿರುವ ಅಸಂಖ್ಯಾತ ಸಮುದಾಯಗಳೂ ಇವೆ. ಕಾಡು ಎಂದರೆ ಕೇವಲ ಮರ, ಗಿಡ, ಪ್ರಾಣಿ, ಪಕ್ಷ ಅಷ್ಟೇ ಅಲ್ಲ. ಕಾಡು ಈ ಭೂ ಗ್ರಹದ ಜೀವನಾಡಿ, ಎಲ್ಲ ಜೀವಜಂತುಗಳ ಉಸಿರು. ನಮಗೆ ಶುದ್ಧ ಗಾಳಿ, ಶುದ್ಧ ನೀರು, ಫಲವತ್ತಾದ ಮಣ್ಣು ಲಭಿಸುವುದೇ ಅರಣ್ಯದಿಂದ. ಅರಣ್ಯಗಳು ನಾನಾ ರೂಪದಲ್ಲಿ ನಮಗೆ ಪ್ರತ್ಯಕ್ಷ ಮತ್ತು ಪರೋಕ್ಷ ಅನುಕೂಲತೆ ಕಲ್ಪಿಸಿವೆ. ಕರ್ನಾಟಕದಲ್ಲಿ, ಈ ನೈಸರ್ಗಿಕ ಸಂಪನ್ಮೂಲಗಳ ನಿರ್ಣಾಯಕ ಮಹತ್ವವನ್ನು ನಾವು ಗುರುತಿಸಿದ್ದೇವೆ ಮತ್ತು ಅವುಗಳ ರಕ್ಷಣೆ ಮತ್ತು ಸಂರಕ್ಷಣೆಗೆ ನಾವು ಬದ್ಧರಾಗಿದ್ದೇವೆ.

Advertisement

ಕರ್ನಾಟಕ ಸರ್ಕಾರ ಅರಣ್ಯದಲ್ಲಿ ಕಳ್ಳಬೇಟೆ ನಿಗ್ರಹಕ್ಕೆ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ವನ್ಯಮೃಗಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 2023ರ ಆನೆ ಗಣತಿಯ ಪ್ರಕಾರ ರಾಜ್ಯದಲ್ಲಿ 6395 ಆನೆಗಳಿದ್ದು, ಗಜ ಸಂಖ್ಯೆಯಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದೆ. ಅದೇ ರೀತಿ 563 ಹುಲಿ ಹೊಂದಿರುವ ಕರ್ನಾಟಕ ವ್ಯಾಘ್ರಗಳ ಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿದೆ. ಆದರೆ ಇದಕ್ಕೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳ ಆಗದ ಹಿನ್ನೆಲೆಯಲ್ಲಿ ಆನೆಗಳು ನಾಡಿಗೆ ಬರುತ್ತಿದ್ದು, ಬೆಳೆ ಹಾನಿ, ಜೀವಹಾನಿ ಸಂಭವಿಸುತ್ತಿದೆ. ಈ ನಿಟ್ಟಿನಲ್ಲಿ ಆನೆ ಮತ್ತು ಮಾನವ ಸಂಘರ್ಷ ತಗ್ಗಿಸಲು ಈ ಸಮ್ಮೇಳನ ಬೆಳಕು ಚೆಲ್ಲಲಿದೆ ಎಂಬ ವಿಶ್ವಾಸ ನನಗಿದೆ.

ಆನೆ ಸಂಖ್ಯೆಯಲ್ಲಿ ರಾಜ್ಯ ನಂ.1: ರಾಜ್ಯ ಆನೆಗಳ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದ್ದರೂ, ಇಲಾಖೆ ಕೈಗೊಂಡಿರುವ ಮುನ್ನೆಚ್ಚರಿಕೆಯ ಕ್ರಮಗಳಿಂದ ಆನೆ ದಾಳಿಯಿಂದ ಹೆಚ್ಚಿನ ಜೀವಹಾನಿ ಮತ್ತು ಬೆಳೆ ಹಾನಿ ಆಗದಂತೆ ನಿಯಂತ್ರಿಸಲಾಗುತ್ತಿದೆ. ಆದಾಗ್ಯೂ ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ 30 ಜನರು ಆನೆಗಳ ದಾಳಿಯಿಂದ ಸಾವಿಗೀಡಾಗುತ್ತಿದ್ದಾರೆ. ಈ ವರ್ಷ ಜನವರಿಯಂದ ಇಲ್ಲಿಯವರೆಗೆ 25 ಜನರು ಆನೆಯ ದಾಳಿಯಿಂದ ಮೃತಪಟ್ಟಿದ್ದಾರೆ ಇದು ಅತ್ಯಂತ ನೋವಿನ ಸಂಗತಿ. ಪ್ರತಿಯೊಂದು ಜೀವವೂ ಅಮೂಲ್ಯ ಈ ನಿಟ್ಟಿನಲ್ಲಿ ಈ ಸಮ್ಮೇಳನದಲ್ಲಿ ಚಿಂತನ ಮಂಥನ ನಡೆಯಲಿದ್ದು, ಅತ್ಯುತ್ತಮ ರೂಢಿಗಳನ್ನು ಅಳವಡಿಸಿಕೊಳ್ಳಲು ಅನುಕೂಲವಾಗಲಿ ಎಂದು ನಾನು ಆಶಿಸುತ್ತೇನೆ.

Advertisement

ಮಾನವ-ವನ್ಯಜೀವಿ ಸಂಘರ್ಷದಲ್ಲಿ, ಮಾನವ-ಆನೆ ಸಂಘರ್ಷವೇ ದೊಡ್ಡ ಸವಾಲು. ಹೆಚ್ಚುತ್ತಿರುವ ಮಾನವ ಜನಸಂಖ್ಯೆ, ಕಾಡಿನಂಚಿನವರೆಗೆ ವಿಸ್ತರಿಸುತ್ತಿರುವ ಕೃಷಿ ಚಟುವಟಿಕೆಗಳು ಮತ್ತು ವಸತಿ ಬಡಾವಣೆ ನಿರ್ಮಾಣ ಮಾನವ-ಆನೆ ಸಂಘರ್ಷ ಹೆಚ್ಚಳಕ್ಕೆ ಕಾರಣವಾಗಿದೆ.

ನಮ್ಮ ಪೂರ್ವಿಕರು ಕಾಡಿನೊಂದಿಗೆ ಮತ್ತು ವನ್ಯಜೀವಿಗಳೊಂದಿಗೆ ಸಹಬಾಳ್ವೆ ಮಾಡುವುದನ್ನು ಕಲಿತಿದ್ದರು. ಇಂದಿಗೂ ಕಾಡಿನಲ್ಲೇ ವಾಸಿಸುವ ಆದಿವಾಸಿಗಳು ವನ್ಯಜೀವಿ ದಾಳಿಯಿಂದ ಮೃತಪಡುವುದು ಅಪರೂಪದಲ್ಲೇ ಅಪರೂಪ. ಆದರೆ ನಗರ ವಾಸಿಗಳಾದ ನಾವು ಈಗ ಆಧುನಿಕ ಯುಗದಲ್ಲಿ ಆ ಸಹಬಾಳ್ವೆಯ ಸಂವೇದನೆ ಕಳೆದುಕೊಳ್ಳುತ್ತಿದ್ದೇವೆ.

Advertisement

 

ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸುವುದು ನಮ್ಮ ಆದ್ಯತೆ: ಆದಾಗ್ಯೂ ಮಾನವ-ವನ್ಯಜೀವಿ ಸಂಘರ್ಷದ ಸಮಸ್ಯೆಯನ್ನು ಪರಿಹರಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ, ಜನರ ಮತ್ತು ವನ್ಯಜೀವಿಗಳ ಸುರಕ್ಷತೆ ಹಾಗೂ ಯೋಗಕ್ಷೇಮವನ್ನು ಖಾತ್ರಿಪಡಿಸಲು ಹಲವಾರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದೇವೆ. ತಂತ್ರಜ್ಞಾನದ ಅಳವಡಿಕೆ ಮತ್ತು ಸಮುದಾಯ-ಚಾಲಿತ ಉಪಕ್ರಮಗಳೊಂದಿಗೆ ಕರ್ನಾಟಕ ರಾಜ್ಯವು ಈ ಸವಾಲನ್ನು ಎದುರಿಸುವಲ್ಲಿ ಮುಂಚೂಣಿಯಲ್ಲಿದೆ ಎಂದು ತಿಳಿಸಲು ನಾನು ಹೆಮ್ಮೆಪಡುತ್ತೇನೆ.ವನ್ಯಜೀವಿ ಮತ್ತು ಮಾನವ ಸಂಘರ್ಷ ತಡೆಗೆ ನಮ್ಮ ಮಾನ್ಯ ಮುಖ್ಯಮಂತ್ರಿಯವರು ಹೆಚ್ಚಿನ ಆಸಕ್ತಿ ತಳೆದಿದ್ದಾರೆ. 2023-24 ಸಾಲಿನಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕಾಗಿ 100 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಿದ್ದರು.

Advertisement

ಇಂದು ಇಡೀ ಜಗತ್ತು ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಸವಾಲು ಎದುರಿಸುತ್ತಿದೆ. ನಾವು ಹಸಿರು ಹೊದಿಕೆ ಹೆಚ್ಚಳ ಮಾಡುವ ಮೂಲಕ ಮಾತ್ರ ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಹೀಗಾಗಿ ನಮ್ಮ ಸರ್ಕಾರ 2023-24ರ ಸಾಲಿನಲ್ಲಿ 5 ಕೋಟಿ ಸಸಿ ನೆಟ್ಟು ಬೆಳೆಸುವ ಸಂಕಲ್ಪ ಮಾಡಿತು. ನಿಮಗೆಲ್ಲ ಆಶ್ಚರ್ಯ ಆಗಬಹುದು ನಾವು 5 ಕೋಟಿ 48 ಲಕ್ಷ ಸಸಿ ನೆಟ್ಟು ಗುರಿ ಮೀರಿದ ಸಾಧನೆ ಮಾಡಿದ್ದೇವೆ. ಜೊತೆಗೆ ಈ ರೀತಿ ನೆಡಲಾದ ಸಸಿಗಳ ಪೈಕಿ ಎಷ್ಟು ಬದುಕುಳಿದಿದೆ ಎಂದು ತಿಳಿಯಲು ಜಿಯೋ ಟ್ಯಾಗ್ ಮಾಡಿಸಿ ಆಡಿಟ್ ಕೂಡ ಮಾಡುತ್ತಿದ್ದೇವೆ. ಪ್ರಾಣಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಆದರೆ ಅದಕ್ಕೆ ಅನುಗುಣವಾಗಿ ಅರಣ್ಯ ಪ್ರದೇಶ ಬೆಳೆಯುತ್ತಿಲ್ಲ. ಹೀಗಾಗಿ ಕರ್ನಾಟಕ ಸರ್ಕಾರ ಕಳೆದ ವರ್ಷ 3395.73 ಹೆಕ್ಟೇರ್ ಪ್ರದೇಶವನ್ನು ಅರಣ್ಯ ಎಂದು ಘೋಷಿಸಿದೆ. ಜೊತೆಗೆ 2500 ಎಕರೆಗೂ ಹೆಚ್ಚು ಅರಣ್ಯ ಒತ್ತುವರಿಯನ್ನು ತೆರವು ಮಾಡಿಸಿದೆ.

ಅರಣ್ಯ ಅಪರಾಧಗಳನ್ನು ತಡೆಯಲು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡಲು ಆನ್ ಲೈನ್ ಎಫ್.ಐ.ಆರ್. ವ್ಯವಸ್ಥೆಯನ್ನು ತರಲು ನಾವು ಕಾರ್ಯೋನ್ಮುಖರಾಗಿದ್ದೇವೆ. ಆಧುನಿಕ ತಂತ್ರಜ್ಞಾನದ ನೆರವಿನಿಂದ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಮುಂದಾಗಿದ್ದೇವೆ. ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಾಗ ದೂರ ಸಂವೇದಿ ತಂತ್ರಜ್ಞಾನ ಉಪಗ್ರಹಗಳ ನೆರವಿನಿಂದ ಮಾಹಿತಿ ಲಭಿಸುತ್ತದೆ. ಈ ಹಿಂದೆ ನಾಸಾದಿಂದ ಕಾಡ್ಗಿಚ್ಚಿನ ಮಾಹಿತಿ ಮೊದಲು ಇಸ್ರೋದ ರಾಷ್ಟ್ರೀಯ ದೂರಸಂವೇದಿ ಕೇಂದ್ರ (ಎನ್‍ಆರ್ ಎಸ್‍ಸಿ)ಕ್ಕೆ ಬಂದು, ಅಲ್ಲಿಂದ ಭಾರತೀಯ ಅರಣ್ಯ ಸರ್ವೇಕ್ಷಣಾ ಇಲಾಖೆ (ಎಫ್‍ಎಸ್‍ಐ)ಗೆ ಬರುತ್ತಿತ್ತು. ನಂತರ ಅವರು ಆಯಾ ರಾಜ್ಯಗಳಿಗೆ ಮಾಹಿತಿ ತಲುಪಿಸುತ್ತಿದ್ದರು. ಈಗ ನೇರವಾಗಿ ನಾಸಾದಿಂದ ಇಸ್ರೋದ ರಾಷ್ಟ್ರೀಯ ದೂರಸಂವೇದಿ ಕೇಂದ್ರ (ಎನ್‍ಆರ್ ಎಸ್‍ಸಿ)ಕ್ಕೆ ಬಂದು ಅಲ್ಲಿಂದ ಕರ್ನಾಟಕ ದೂರ ಸಂವೇದಿ ಸಂಸ್ಥೆಗೆ (ಕೆಎಸ್‍ಆರ್ ಎಸ್‍ಸಿ) ಬರುತ್ತದೆ. ಆ ಮಾಹಿತಿ ಅರಣ್ಯ ಇಲಾಖೆಯ ಸಂಬಂಧಿತ ವಲಯಕ್ಕೆ ರವಾನೆ ಆಗುತ್ತದೆ. ಇದರಿಂದ ತಕ್ಷಣವೇ ಸ್ಪಂದಿಸಲು, ಬೆಂಕಿ ನಂದಿಸಲು ಸಾಧ್ಯವಾಗಲಿದ್ದು, ಇದು ಹೆಚ್ಚಿನ ಅರಣ್ಯ ನಾಶ ತಡೆಯುತ್ತದೆ.

Advertisement

ತಂತ್ರಜ್ಞಾನದ ಅಳವಡಿಕೆ:ಇದೇ ತಂತ್ರಜ್ಞಾನವನ್ನು ಅರಣ್ಯ ಒತ್ತುವರಿ ತಡೆಗೂ ಅಳವಡಿಸಲು ಈಗ ನಾವು ಮುಂದಾಗಿದ್ದೇವೆ. ಯಾವುದೇ ಅರಣ್ಯ ಪ್ರದೇಶದಲ್ಲಿ ಮರ ಕಡಿದು ಒತ್ತುವರಿ ಮಾಡಿದರೆ, ಸಕಾಲಿಕವಾಗಿ ಎಚ್ಚರಿಕೆ ನೀಡುವ ಉಪಗ್ರಹ ಆಧಾರಿತ ವ್ಯವಸ್ಥೆಯನ್ನೂ ಅಭಿವೃದ್ಧಿ ಪಡಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ನೆರೆಯ ರಾಜ್ಯಗಳಾದ ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡಿನೊಂದಿಗೆ ಬಲವಾದ ಸಹಕಾರವನ್ನು ಬೆಳೆಸುವುದು ನಮ್ಮ ಪ್ರಮುಖ ಕಾರ್ಯತಂತ್ರಗಳಲ್ಲಿ ಒಂದಾಗಿದೆ. ರಾಜ್ಯ ಗಡಿಗಳಲ್ಲಿ ಮಾನವ-ಆನೆ ಸಂಘರ್ಷವನ್ನು ಪರಿಹರಿಸಲು ಮತ್ತು ನೀಲಗಿರಿ ತಪ್ಪಲಿನಲ್ಲಿ ಸಂರಕ್ಷಿತ ಕಾನನದೊಳಗೆ ಆನೆಗಳ ಸುರಕ್ಷಿತ ಸಂಚಾರ ಉತ್ತೇಜಿಸಲು ನಾವು ಒಟ್ಟಾಗಿ ಅಂತಾರಾಜ್ಯ ಸಮನ್ವಯ ಸಮಿತಿಯನ್ನು (ಐಸಿಸಿ) ರಚಿಸಿದ್ದೇವೆ ಮತ್ತು ಆ ಸಂಬಂಧ ಚಾರ್ಟರ್ ಗೆ ಸಹಿ ಹಾಕಿದ್ದೇವೆ. ಬಂಡೀಪುರದಲ್ಲಿ ನಡೆದ ಸಮನ್ವಯ ಸಭೆಯಲ್ಲಿ ಸಿದ್ಧಪಡಿಸಿದ “ಬಂಡೀಪುರ ಚಾರ್ಟರ್” ಒಡಂಬಡಿಕೆ ಈ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಇದು ಸಂರಕ್ಷಣೆ ಮತ್ತು ಸಂಘರ್ಷ ಪರಿಹಾರಕ್ಕೆ ನಮ್ಮ ಸಾಮೂಹಿಕ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಮಾನವ-ಆನೆ ಸಂಘರ್ಷದಿಂದ ಮೃತಪಟ್ಟವರ ಕುಟುಂಬಕ್ಕೆ ಮತ್ತು ಗಾಯಗೊಂಡವರಿಗೆ ತಕ್ಷಣವೇ ಆರ್ಥಿಕ ಪರಿಹಾರ ಮತ್ತು ನೆರವು ನೀಡುತ್ತಿದ್ದೇವೆ, ಬೆಳೆ ಪರಿಹಾರವನ್ನು ತ್ವರಿತವಾಗಿ ವಿತರಿಸುತ್ತಿದ್ದೇವೆ. ಜೊತೆಗೆ ಕರ್ನಾಟಕ ಸರ್ಕಾರವು ರೈತರು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ರಕ್ಷಿಸಲು ಮತ್ತು ಜನರ ಜೀವ ಉಳಿಸಲು ಸೌರ ವಿದ್ಯುತ್ ಬೇಲಿ ಅಳವಡಿಸಿಕೊಳ್ಳಲು ಸಬ್ಸಿಡಿ ನೀಡುತ್ತಿದೆ. ಮಾನವ-ವನ್ಯಜೀವಿ ಸಂಘರ್ಷವನ್ನು ನಿಭಾಯಿಸಲು ನಾವು ಪ್ರತ್ಯೇಕ ಬಜೆಟ್ ಅನ್ನು ನಿಗದಿಪಡಿಸಿದ್ದೇವೆ, ರೈಲ್ವೆ ಬ್ಯಾರಿಕೇಡ್ ಗಳು, ಸೌರ ತಂತಿ ಬೇಲಿ ಅಳವಡಿಕೆ, ಆನೆ-ನಿಗ್ರಹ ಕಂದಕಗಳ ನಿರ್ಮಾಣಕ್ಕಾಗಿ ವಾರ್ಷಿಕವಾಗಿ 150 ಕೋಟಿ ರೂ.ಗಳನ್ನು ವೆಚ್ಚ ಮಾಡಿದ್ದೇವೆ.

Advertisement

ಮಾನವ -ವನ್ಯಜೀವಿ ಸಂಘರ್ಷದಿಂದ ಹೆಚ್ಚಿನ ಸಾವುಗಳು ಸಂಭವಿಸುವ ಕಡೆಗಳಲ್ಲಿ, ವನ್ಯಜೀವಿ ಪ್ರದೇಶಗಳಲ್ಲಿ ದಣಿವರಿಯದೆ ಕೆಲಸ ಮಾಡುವ ನಮ್ಮ ಮುಂಚೂಣಿ ಸಿಬ್ಬಂದಿಯ ಕಲ್ಯಾಣವು ನಮಗೆ ಅತ್ಯಂತ ಮಹತ್ವದ್ದಾಗಿದೆ. ಗುತ್ತಿಗೆ ನೌಕರರು ಸೇರಿದಂತೆ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೆ ನಾವು “ಕಷ್ಟಕರ ಸನ್ನಿವೇಶದ ಕಾರ್ಯ ನಿರ್ವಹಣಾ ಭತ್ಯೆ” ಯನ್ನು ನೀಡುತ್ತಿದ್ದೇವೆ.

ರೇಡಿಯೋ ಕಾಲರ್ ಅಳವಡಿಕೆ: ನಾವು ಇಂದು ಇಲ್ಲಿ ಮಾನವ-ಆನೆ ಸಂಘರ್ಷ ನಿರ್ವಹಣೆ ಕುರಿತಂತೆ ಚಿಂತನ ಮಂಥನ ನಡೆಸಲು ಸೇರುತ್ತಿರುವ ಸಂದರ್ಭದಲ್ಲಿ, ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುವ ಹಲವಾರು ಸುಧಾರಿತ ತಾಂತ್ರಿಕ ಅನುಷ್ಠಾನ ಕುರಿತಂತೆ ಘೋಷಿಸಲು ನಾನು ಹೆಮ್ಮೆಪಡುತ್ತೇನೆ. ಆನೆಗಳ ಸಂಚಾರದ ಬಗ್ಗೆ ಮಾಹಿತಿ ತಿಳಿಯಲು ರೇಡಿಯೋ ಕಾಲರ್ ಅಳವಡಿಸುವ ಕಾರ್ಯವನ್ನೂ ರಾಜ್ಯ ಸರ್ಕಾರ ಮಾಡುತ್ತಿದೆ. ಜಿಎಸ್ಎಂ ಆಧಾರಿತ ಕ್ಯಾಮೆರಾ ಟ್ರ್ಯಾಪ್ ಗಳು ಮತ್ತು ಗರುಡ ಇ- ನಿಗಾ ವ್ಯವಸ್ಥೆಯನ್ನು ಬಳಸಲಾಗುತ್ತಿದೆ. ವನ್ಯಜೀವಿಗಳು ಮತ್ತು ಜನರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ನಾವು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದೇವೆ. ಮೇ 2023 ರಲ್ಲಿ ದಕ್ಷಿಣ ಭಾರತದಾದ್ಯಂತ ನಡೆಸಿದ ಸಂಯೋಜಿತ ಆನೆಗಳ ಜನಸಂಖ್ಯೆಯ ಅಂದಾಜು ವಿಜ್ಞಾನ ಆಧಾರಿತ ನಿರ್ವಹಣೆಗೆ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ಈ ರೂಢಿಗಳಿಂದ ಸಂಗ್ರಹಿಸಿದ ದತ್ತಾಂಶವು ಅಮೂಲ್ಯವಾಗಿದೆ, ಭವಿಷ್ಯದ ಸಂರಕ್ಷಣಾ ತಂತ್ರಗಳನ್ನು ಯೋಜಿಸಲು ನಿರ್ಣಾಯಕ ಒಳನೋಟಗಳನ್ನು ಒದಗಿಸುತ್ತದೆ. ಇದು ಪ್ರಾದೇಶಿಕ ಸಹಕಾರಕ್ಕೆ ಜ್ವಲಂತ ಉದಾಹರಣೆಯಾಗಿದೆ. ಮಾನವ- ವನ್ಯಜೀವಿ ಸಂಘರ್ಷ ತಗ್ಗಿಸಲು ಮತ್ತು ಜನರ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ರಾಜ್ಯಗಳು ಹೇಗೆ ಸಂಘಟಿತ ಪ್ರಯತ್ನ ಮಾಡಬಹುದು ಎಂಬ ವರದಿಯನ್ನು ಇಂದು ಸಮ್ಮೇಳನದಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

Advertisement

ಸಹಯೋಗದ ವೇದಿಕೆ: ಈ ಸಮ್ಮೇಳನವು ವೈಜ್ಞಾನಿಕ ಸಮುದಾಯ, ಸರ್ಕಾರಿ ಅಧಿಕಾರಿಗಳು ಮತ್ತು ನಾಗರಿಕ ಸಮಾಜ ಸಂಸ್ಥೆಗಳ ನಡುವಿನ ಸಹಯೋಗಕ್ಕೆ ವೇದಿಕೆಯಾಗಿದೆ. ಜ್ಞಾನವನ್ನು ಹಂಚಿಕೊಳ್ಳಲು, ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಮಾನವ-ಆನೆ ಸಂಘರ್ಷವನ್ನು ನಿರ್ವಹಿಸಲು ಮತ್ತು ತಗ್ಗಿಸಲು ನವೀನ ವಿಧಾನಗಳನ್ನು ಅಭಿವೃದ್ಧಿಪಡಿಸಲು ನಾವು ಈ ಸಮಾವೇಶದಲ್ಲಿ ಪ್ರಯತ್ನಿಸಲಿದ್ದೇವೆ. ಸಂಘರ್ಷದ ಸವಾಲು ಅರ್ಥಮಾಡಿಕೊಳ್ಳುವುದು, ಅಂತರ-ವಲಯ ಸಹಯೋಗವನ್ನು ಉತ್ತೇಜಿಸುವುದು, ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಮತ್ತು ಪರಿಣಾಮಕಾರಿ ಸಂವಹನವನ್ನು ಉತ್ತೇಜಿಸುವುದೇ ಮೊದಲಾದ ಪ್ರಮುಖ ವಿಷಯಗಳ ಮೇಲೆ ಈ ಸಮಾವೇಶದ ಗೋಷ್ಠಿಗಳಲ್ಲಿ ಚರ್ಚೆಗಳು ನಡೆಯಲಿವೆ.  ಸಾರ್ವಜನಿಕ ಗ್ರಹಿಕೆಯನ್ನು ರೂಪಿಸುವಲ್ಲಿ ಮತ್ತು ಮಾನವ-ವನ್ಯಜೀವಿ ಸಂಘರ್ಷದ ಬಗ್ಗೆ ನಿಖರವಾದ ಮಾಹಿತಿಯನ್ನು ಪ್ರಸಾರ ಮಾಡುವಲ್ಲಿ ಮಾಧ್ಯಮಗಳ ಪಾತ್ರವೂ ಪ್ರಮುಖವಾಗಿದೆ ಎಂಬುದನ್ನು ನಾವು ಗುರುತಿಸಿದ್ದೇವೆ. ಈ ಸಮ್ಮೇಳನ ಈ ಎಲ್ಲ ಅಂಶಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸಕಾರಾತ್ಮಕ ಬದಲಾವಣೆಗೆ ಚಾಲನೆ ನೀಡಲು ನಿರ್ಣಾಯಕವಾಗಿದೆ.

ಈ ಅಂತಾರಾಷ್ಟ್ರೀಯ ಸಮ್ಮೇಳನವು ವಿಚಾರಗಳು, ಅನುಭವಗಳು ಮತ್ತು ಜ್ಞಾನವನ್ನು ವಿನಿಮಯ ಮಾಡಿಕೊಳ್ಳಲು ಒಂದು ವೇದಿಕೆಯನ್ನು ಒದಗಿಸುತ್ತದೆ. ಈ ಚರ್ಚೆಗಳಲ್ಲಿ ಮುಕ್ತತೆ ಮತ್ತು ನಾವೀನ್ಯತೆಯ ಮನೋಭಾವದಿಂದ ತೊಡಗಿಸಿಕೊಳ್ಳುವಂತೆ ಮನವಿ ಮಾಡುತ್ತೇನೆ. ಈ ಸಮಾವೇಶದಲ್ಲಿ ಹೊಸ ಮಾರ್ಗಗಳನ್ನು ಅನ್ವೇಷಿಸೋಣ, ಪರಸ್ಪರರ ಯಶಸ್ಸು ಮತ್ತು ವೈಫಲ್ಯಗಳಿಂದ ಕಲಿಯೋಣ ಮತ್ತು ಸುಸ್ಥಿರ, ಮಾನವೀಯ ಮತ್ತು ಅಂತರ್ಗತ ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸುವತ್ತ ಶ್ರಮಿಸೋಣ. ಈ ಸಮಾವೇಶದಲ್ಲಿ ಹೊರಹೊಮ್ಮುವ ಅಭಿಪ್ರಾಯಗಳು, ಚಿಂತನೆಗಳು, ನಮಗೆ ಮಾರ್ಗದರ್ಶನ ನೀಡಲಿ, ಈ ಸಮಾವೇಶದ ಫಲಶ್ರುತಿ ಫಲಪ್ರದವಾಗಿರಲಿ.

Advertisement

ಮಾನವ-ಆನೆ ಸಂಘರ್ಷದ ಸವಾಲನ್ನು ನಿಭಾಯಿಸಲು ಸಾಮೂಹಿಕ ಇಚ್ಛಾಶಕ್ತಿ, ನವೀನ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಹಾಗೂ ಸುಸ್ಥಿರ ಅಭಿವೃದ್ಧಿಯ ಬದ್ಧತೆ ಅತಿ ಮುಖ್ಯವಾಗಿದೆ. ಈ ಸಮಾವೇಶದ ಬಳಿಕವೂ ಎಲ್ಲ ಬಾಧ್ಯಸ್ಥರ ನಡುವೆ ನಿರಂತರವಾಗಿ ಈ ನಿಟ್ಟಿನಲ್ಲಿ ಚರ್ಚೆಗಳು, ಸಮಾಲೋಚನೆಗಳು ನಡೆದು ಜಾಗತಿಕ ಒಳಿತಿಗೆ ನಾಂದಿ ಹಾಡಲಿ ಎಂದು ಬಯಸುತ್ತೇನೆ ಮತ್ತು ಆ ಫಲಶ್ರುತಿಯನ್ನು ನಾನು ಎದುರು ನೋಡುತ್ತಿದ್ದೇನೆ. ಅಂತಿಮವಾಗಿ ಈ ಸಮಾವೇಶದಲ್ಲಿ ಹೊರಹೊಮ್ಮುವ ಅಭಿಪ್ರಾಯಗಳು, ಚಿಂತನೆಗಳು, ನಮಗೆ ಮಾರ್ಗದರ್ಶನ ನೀಡಲಿ, ಈ ಸಮಾವೇಶದ ಫಲಶ್ರುತಿ ಫಲಪ್ರದವಾಗಿರಲಿ ಎಂದು ಆಶಿಸುತ್ತಾ ನನ್ನ ಮಾತಿಗೆ ಪೂರ್ಣ ವಿರಾಮ ಸೂಚಿಸುತ್ತೇನೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ರಾಜ್ಯದ  ಚಾರಣ ಪಥಗಳಲ್ಲಿ ದಿನಕ್ಕೆ ಗರಿಷ್ಠ 300 ಚಾರಣಿಗರಿಗೆ ಮಾತ್ರ ಅವಕಾಶ | ಸಚಿವ ಈಶ್ವರ್ ಖಂಡ್ರೆ
October 4, 2024
3:14 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 04-10-2024 | ಗುಡುಗು ಸಹಿತ ಮಳೆ ಮುಂದುವರಿಕೆ | ಹಿಂಗಾರು ಮತ್ತಷ್ಟು ವಿಳಂಬ |
October 4, 2024
1:02 PM
by: ಸಾಯಿಶೇಖರ್ ಕರಿಕಳ
ಅಡಿಕೆ ಧಾರಣೆ ಇಳಿಕೆ | ಅನಾವಶ್ಯಕ ಗೊಂದಲ ಬೇಡ | ಅಡಿಕೆಗೆ ಬೇಡಿಕೆ ಇದ್ದು ಧಾರಣೆ ಕುಸಿಯುವ ಲಕ್ಷಣವಿಲ್ಲ – ಕಿಶೋರ್‌ ಕುಮಾರ್‌ ಕೊಡ್ಗಿ |
October 3, 2024
2:13 PM
by: ದ ರೂರಲ್ ಮಿರರ್.ಕಾಂ
ಡಾಕ್ಟರೇಟ್ ಪದವಿ ಪಡೆದ ಪುತ್ತೂರಿನ ವಿವೇಕಾನಂದ ಪ್ರಾಧ್ಯಾಪಕಿ ವಿದ್ಯಾ ಎಸ್
October 3, 2024
12:58 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror