ರಾಜ್ಯದಲ್ಲಿ ನಡೆಯುತ್ತಿರುವ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮೀಕ್ಷೆ ಇನ್ನು ಹಲವು ಜಿಲ್ಲೆಗಳಲ್ಲಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಅ.18 ರವರೆಗೆ ರಜೆ ವಿಸ್ತರಿಸಲಾಗಿದ್ದು, ಅಷ್ಟರೊಳಗೆ ಸಮೀಕ್ಷೆ ಕಾರ್ಯ ಮುಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್ 22ರಿಂದ ಸಮೀಕ್ಷಾ ಕಾರ್ಯ ಆರಂಭವಾಗಿದ್ದು, ಇಂದಿಗೆ ಪೂರ್ಣಗೊಳ್ಳಬೇಕಾಗಿತ್ತು. ಹಲವು ಜಿಲ್ಲೆಗಳಲ್ಲಿ ಸಮೀಕ್ಷಾ ಕಾರ್ಯ ಅಪೂರ್ಣವಾಗಿರುವ ಹಿನ್ನೆಲೆಯಲ್ಲಿ ಶಿಕ್ಷಕರ ಸಂಘದ ಮನವಿಯ ಮೇರೆಗೆ ರಜೆ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಹೇಳಿದರು. ಕೊಪ್ಪಳ ಜಿಲ್ಲೆಯಲ್ಲಿ ಶೇಕಡ 97ರಷ್ಟು ಸಮೀಕ್ಷಾ ಕಾರ್ಯ ಪೂರ್ಣಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 67, ಉಡುಪಿಯಲ್ಲಿ ಶೇಕಡ 63 ರಷ್ಟು ಸಮೀಕ್ಷೆ ನಡೆದಿದೆ. ಒಂದು 1.20 ಲಕ್ಷದ ಶಿಕ್ಷಕರು ಹಾಗೂ ಇತರೆ ಇಲಾಖೆಗಳ 40 ಸಾವಿರ ಸಿಬ್ಬಂದಿ ಗಣತಿ ಕಾರ್ಯದಲ್ಲಿ ತೊಡಗಿದ್ದಾರೆ. ಹೆಚ್ಚುವರಿಯಾಗಿ 10 ದಿನಗಳ ಕಾಲ ಕಾಲಾವಕಾಶ ನೀಡಿರುವುದರಿಂದ 8 ಕೆಲಸದ ದಿನ ಸಿಗಲಿದೆ. ದ್ವಿತೀಯ ಪಿಯುಸಿ ಮಧ್ಯಂತರ ಪರೀಕ್ಷಾ ಕಾರ್ಯದಲ್ಲಿ ತೊಡಗಿಕೊಂಡಿರುವ ಉಪನ್ಯಾಸಕರಿಗೆ ಗಣತಿ ಕಾರ್ಯದಿಂದ ವಿನಾಯತಿ ನೀಡಲಾಗಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ 6 700 ಶಿಕ್ಷಕರು ಗಣತಿ ಕಾರ್ಯದಲ್ಲಿ ತೊಡಗಿಕೊಂಡಿದ್ದು, 46 ಲಕ್ಷ ಮನೆಗಳನ್ನು ಸಮೀಕ್ಷೆ ಮಾಡಬೇಕಾಗಿದೆ. ದಿನವೊಂದಕ್ಕೆ ಪ್ರತಿ ಶಿಕ್ಷಕರಿಗೆ 10ರಿಂದ 15 ಮನೆಗಳ ಸಮೀಕ್ಷೆ ನಡೆಸುವ ಗುರಿ ನೀಡಲಾಗಿದೆ ಎಂದರು. ಸಮೀಕ್ಷಾ ಕಾರ್ಯ ನಡೆಯುವ ಸಂದರ್ಭದಲ್ಲಿ ಮೂರು ಮಂದಿ ಶಿಕ್ಷಕರು ಮೃತಪಟ್ಟಿದ್ದು ಅವರಿಗೆ ತಲಾ 20 ಲಕ್ಷ ಪರಿಹಾರ ನೀಡಲಾಗುವುದು. ಸಮೀಕ್ಷಾ ಕಾರ್ಯದಲ್ಲಿ ತೊಡಗಿಕೊಳ್ಳಲು ಹಿಂದೇಟು ಹಾಕುವ ಗಣತಿದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.




