2014ರಿಂದ 2024 ರ ಅವಧಿಯಲ್ಲಿ ದೇಶದ ಕೃಷಿ ಉತ್ಪಾದನೆ ಶೇಕಡ 44 ರಷ್ಟು ಭಾರಿ ಏರಿಕೆ ಕಂಡಿದೆ ಎಂದು ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ರಾಜ್ಯಸಭೆಯಲ್ಲಿ ಹೇಳಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಅವರು, ಕೃಷಿ ಮತ್ತು ರೈತರ ಸಮಗ್ರ ವಿಕಾಸಕ್ಕಾಗಿ 6 ಅಂಶಗಳ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದರ್ಶಿ ಪರಿಕಲ್ಪನೆಗಳ ಅನುಸಾರ ಭಾರತ, ಎಲ್ಲ ವಲಯಗಳಲ್ಲಿ ಅತ್ಯಂತ ಸಮೃದ್ಧ, ವಿಕಸಿತ, ಶಕ್ತಿಶಾಲಿ ಮತ್ತು ಗೌರವಶಾಲಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂದರು. ಪಿಎಂ-ಕಿಸಾನ್ ಸಮ್ಮಾನ್ ಯೋಜನೆ ಸಣ್ಣ ರೈತರಿಗೆ ವರದಾನವಾಗಿದ್ದು, ಇದರಡಿ ಒಟ್ಟು 4 ಲಕ್ಷ 9 ಸಾವಿರ ಕೋಟಿ ರೂಪಾಯಿ ಮೊತ್ತವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ. 2 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು ಹಣವನ್ನು ರಸಗೊಬ್ಬರ ಸಹಾಯಧನವಾಗಿ ನೀಡಲಾಗಿದೆ. ಫಸಲ್ ಬಿಮಾ ಯೋಜನೆಯಡಿ 1 ಲಕ್ಷ 90 ಸಾವಿರ ಕೋಟಿ ರೂಪಾಯಿ ನೀಡಲಾಗಿದೆ ಎಂದು ತಿಳಿಸಿದರು. ಪೌಷ್ಟಿಕ ಆಹಾರಧಾನ್ಯವಾದ ಬೇಳೆಕಾಳು ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ತೊಗರಿ, ಉದ್ದಿನಬೇಳೆ, ಮಸೂರ್ ದಾಲ್ ಸೇರಿದಂತೆ ವಿವಿಧ ಬೇಳೆಕಾಳುಗಳ ಉತ್ಪಾದನೆಯನ್ನು ಬೆಂಬಲ ಬೆಲೆ ಮೂಲಕ ಶೇಕಡ 100ರಷ್ಟು ಖರೀದಿಸಲಾಗುತ್ತಿದೆ. ಬೇಳೆಕಾಳು ಮಿಷನ್ ಸ್ಥಾಪಿಸಲಾಗಿದ್ದು, ದೇಶೀಯ ಬೇಳೆಕಾಳು ಬೆಳೆಗಾರರ ಹಿತರಕ್ಷಣೆಗಾಗಿ ಆಮದು ಬೇಳೆಕಾಳುಗಳ ಮೇಲೆ ಸುಂಕ ವಿಧಿಸಲಾಗುತ್ತಿದೆ ಎಂದು ತಿಳಿಸಿದರು. ಇತ್ತೀಚೆಗೆ ಕರ್ನಾಟಕದ ಸಂಸದರ ನಿಯೋಗ ತಮ್ಮನ್ನು ಭೇಟಿಯಾಗಿ ತೊಗರಿಬೇಳೆ ಖರೀದಿಗೆ ಬೇಡಿಕೆ ಸಲ್ಲಿಸಿದೆ. ಅಲ್ಲಿನ ಸರ್ಕಾರ ಮಂಡಿಸಿದ ಖರೀದಿ ಬೇಡಿಕೆಯನ್ನು ಅನುಮೋದಿಸಲಾಗಿದೆ ಎಂದು ತಿಳಿಸಿದರು.

