ನೈಸರ್ಗಿಕ ರಬ್ಬರ್ ಬಳಕೆ ಹೆಚ್ಚಾಗುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ರಬ್ಬರ್ ಬಳಕೆ ವೃದ್ಧಿಸಿಕೊಂಡಿದೆ. ಇದೇ ಪ್ರಮಾಣದಲ್ಲಿ ಈಗ ರಬ್ಬರ್ ಉತ್ಪಾದನೆಯೂ ಏರಿಕೆಯಾಗಲು ಆರಂಭವಾಗಿದೆ. ಜಾಗತಿಕವಾಗಿ ರಬ್ಬರ್ ಬಳಕೆಯನ್ನು 16.575 ಮಿಲಿಯನ್ ಟನ್‌ಗಳು ಎಂದು ನಿರೀಕ್ಷಿಸಲಾಗಿದೆ, ಇದು 2022 ಕ್ಕೆ ಹೋಲಿಸಿದರೆ 0.2 ಶೇಕಡಾ ಬೆಳವಣಿಗೆ ಸಾಧಿಸಿದೆ. ಇದೇ ವೇಳೆ ಬಳಕೆಯು ಶೇ.2.3 ಯಷ್ಟು ಹೆಚ್ಚಿದೆ.
ಸುಮಾರು 10 ವರ್ಷಗಳ ಬಳಿಕ ರಬ್ಬರ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿದೆ. ಭಾರತದಲ್ಲಿ ಸದ್ಯ 175-182 ರೂಪಾಯಿವರೆಗೆ ರಬ್ಬರ್ ಧಾರಣೆ ಇದೆ. ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ರಬ್ಬರ್ ಧಾರಣೆಯೂ ಏರಿಕೆ ಕಂಡಿದೆ. ಪ್ರಪಂಚದಾದ್ಯಂತ ರಬ್ಬರ್ ಬೇಡಿಕೆ ಹೆಚ್ಚುತ್ತಿದೆ. ರಬ್ಬರ್ ಉತ್ಪಾದನೆ ಮಾಡುವ ಥಾಯ್ಲೆಂಡ್, ಇಂಡೋನೇಷಿಯಾ, ವಿಯೆಟ್ನಾಂ, ಭಾರತ, ಚೀನಾ, ಮಲೇಷ್ಯಾ, ಶ್ರೀಲಂಕಾ, ಫಿಲಿಪೈನ್ಸ್ ಸೇರಿದಂತೆ ರಬ್ಬರ್ ಉತ್ಪಾದನೆ ಮಾಡುವ ಎಲ್ಲಾ ದೇಶಗಳಲ್ಲೂ ರಬ್ಬರ್ ಬೆಳೆಗಾರರ ನಿರೀಕ್ಷೆ ಹೆಚ್ಚಿಸಿದೆ.
ವಿಯೆಟ್ನಾಂ ಕಳೆದ ವರ್ಷ 110,000 ಟನ್ ರಬ್ಬರ್ ಅನ್ನು ರಫ್ತು ಮಾಡಿತು, ಈ ವರ್ಷ ಫೆಬ್ರವರಿಯಲ್ಲಿ US$160 ಮಿಲಿಯನ್‌ಗಿಂತಲೂ ಹೆಚ್ಚು ಗಳಿಸಿತು, 2024 ರ ಮೊದಲ ಎರಡು ತಿಂಗಳಲ್ಲಿ ಒಟ್ಟು ರಬ್ಬರ್ ರಫ್ತು 320,000 ಟನ್‌ಗಳಿಗೆ ತಲಪಿದೆ ಎಂದು ಅಲ್ಲಿನ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವಾಲಯ ತಿಳಿಸಿದೆ. ಚೀನಾ ವಿಯೆಟ್ನಾಮ್‌ನ ಅತಿದೊಡ್ಡ ರಬ್ಬರ್ ಖರೀದಿದಾರ. 227,000 ಟನ್‌ಗಳನ್ನು ಆಮದು ಮಾಡಿಕೊಳ್ಳುತ್ತದೆ, ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ 10.1 ಶೇಕಡಾ ಹೆಚ್ಚಳವಾಗಿದೆ. ಈ ನಡುವೆ ದಕ್ಷಿಣ ಕೊರಿಯಾ, ಯುನೈಟೆಡ್ ಸ್ಟೇಟ್ಸ್, ಜರ್ಮನಿ, ರಷ್ಯಾ, ಇಟಲಿ, ಬ್ರೆಜಿಲ್, ಸ್ಪೇನ್ ಮತ್ತು ಟರ್ಕಿ ಸೇರಿದಂತೆ ಪ್ರಮುಖ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಆಗ್ನೇಯ ಏಷ್ಯಾದ ದೇಶದ ರಬ್ಬರ್ ರಫ್ತು ಹೆಚ್ಚಿದೆ, ಇನ್ನಷ್ಟು ಬೇಡಿಕೆ ಹೆಚ್ಚಳವಾಗಿದೆ.
ಉದ್ಯಮದ ತಜ್ಞರು ರಬ್ಬರ್ ಬೆಲೆಗಳ ಏರಿಕೆಗೆ ಹಲವಾರು ಅಂಶಗಳನ್ನು ಹೇಳಿದ್ದಾರೆ, ಚೀನಾದಲ್ಲಿ ಕಾರು ಮಾರಾಟವು ಹೆಚ್ಚುತ್ತಿರುವ ಪ್ರಮುಖ ಅಂಶವಾಗಿದೆ. ಇದರ ಪರಿಣಾಮವಾಗಿ, ಚೀನಾದಲ್ಲಿ ಹೊಸ ಕಾರುಗಳಿಗೆ ಟೈರ್‌ಗಳ ಬೇಡಿಕೆಯು ಶೇಕಡಾ 30 ರಷ್ಟು ಹೆಚ್ಚಾಗಿದೆ. ಇದರ ಜೊತೆಗೆ ಜೊತೆಗೆ ಕಟ್ಟಡ , ಕೈಗಾರಿಕೆಗಳಲ್ಲಿ ನೈಸರ್ಗಿಕ ರಬ್ಬರ್ ಬಳಕೆಯ ತ್ವರಿತ ಬೆಳವಣಿಗೆಯಿಂದಾಗಿ ನೈಸರ್ಗಿಕ ರಬ್ಬರ್‌ಗೆ ಬೇಡಿಕೆಯನ್ನು ಹೆಚ್ಚಿಸುತ್ತದೆ ಮತ್ತು ಮುಂಬರುವ ತಿಂಗಳುಗಳಲ್ಲಿ ಇದು ಏರಿಕೆಯಾಗಬಹುದು ಎಂದು ವಿಯೆಟ್ನಾಂ ಸರ್ಕಾರ ಬೆಳೆಗಾರರಿಗೆ ಮಾಹಿತಿ ನೀಡಿದೆ.
ಭಾರತದಲ್ಲೂ ರಬ್ಬರ್ ಬೇಡಿಕೆ ಇದೆ. ರಬ್ಬರ್ ಆಮದು ಆಗದಂತೆ ಎಚ್ಚರ ವಹಿಸಬೇಕಾದ್ದು ಮೊದಲ ಅಂಶವಾದರೆ, ಈಗಿನ ಟ್ರೆಂಡ್ ಪ್ರಕಾರ ರಬ್ಬರ್ ಉತ್ಪಾದನೆಗಿಂತಲೂ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ರಬ್ಬರ್ ಧಾರಣೆ ಏರಿಕೆ ನಿರೀಕ್ಷೆ ಇದೆ. ಭಾರತದಲ್ಲಿ ಟ್ಯಾಪಿಂಗ್ ಸಮಸ್ಯೆ ಹಾಗೂ ಇತರ ಕಾರಣಗಳಿಂದ ರಬ್ಬರ್ ಉತ್ಪಾದನೆಯಲ್ಲಿ ಗಣನೀಯವಾಗಿ ಇಳಿಕೆ ಕಂಡಿದೆ. ಹಲವು ಕಡೆ ರಬ್ಬರ್ ಮರುನಾಟಿ ಮಾಡಿಲ್ಲ. ಭಾರತದ ರಬ್ಬರ್ ಮಾರುಕಟ್ಟೆಯಲ್ಲೂ ಆಶಾದಾಯಕ ಬೆಳವಣಿಗೆ ಇದೆ. ರಬ್ಬರ್ ಬೆಳೆಗಾರರು ಈಗ ರಬ್ಬರ್ ಇಳುವರಿಯ ಕಡೆಗೆ ಗಮನ ನೀಡಬೇಕಿದೆ.