ಅಂತರಾಷ್ಟ್ರೀಯ ರಬ್ಬರ್ ಬೆಲೆಯಲ್ಲಿ ಹೆಚ್ಚಳ ಕಂಡುಬಂದಿದೆ. ಸ್ಥಳೀಯ ಧಾರಣೆಗಿಂತಲೂ ಸುಮಾರು 20 ರೂಪಾಯಿ ಹೆಚ್ಚಳ ಇದೆ. ಸದ್ಯ ರಬ್ಬರ್ ಬೇಡಿಕೆ ಮುಂದುವರಿದಿದ್ದು, ರಬ್ಬರ್ ಬೆಳೆಗಾರರಿಗೆ ಆಶಾದಾಯಕ ವಾತಾವರಣ ಸದ್ಯದ ಮಟ್ಟಿಗೆ ಕಂಡುಬಂದಿದೆ.
ಅಂತರಾಷ್ಟ್ರೀಯ ರಬ್ಬರ್ ಮಾರುಕಟ್ಟೆಯಲ್ಲಿ ನೈಸರ್ಗಿಕ ರಬ್ಬರ್ ಬೆಲೆ ತನ್ನ ದಾಖಲೆಯನ್ನು ಮುಂದುವರೆಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 211 ರೂಪಾಯಿ ಇದ್ದರೆ ಕೊಟ್ಟಾಯಂನಲ್ಲಿ ಆರ್‌ಎಸ್‌ಎಸ್ 4 ಗ್ರೇಡ್ ರಬ್ಬರ್‌ಗೆ ಕೆಜಿಗೆ 184 ರೂಪಾಯಿ ಇತ್ತು. ಅಂತರಾಷ್ಟ್ರೀಯ ರಬ್ಬರ್ ಧಾರಣೆಯು ಜನವರಿ ಮಧ್ಯದಿಂದ ಭಾರತೀಯ ಬೆಲೆಯನ್ನು ಮೀರಿಸಿದೆ. ಬೆಲೆ ವ್ಯತ್ಯಾಸವಿದ್ದರೂ, ವಿಯೆಟ್ನಾಂನಂತಹ ವಿವಿಧ ರಬ್ಬರ್ ಉತ್ಪಾದಕ ರಾಷ್ಟ್ರಗಳಿಗೆ ಕೂಡಾ ಆಮದು-ರಫ್ತು ಲಾಭವನ್ನು ಪಡೆಯಲು ಸಾಧ್ಯವಾಗಲಿಲ್ಲ. ಜಾಗತಿಕವಾಗಿ, ಶೀಟ್ ರಬ್ಬರ್ ಬಳಕೆಯು ಸುಮಾರು 10% ರಷ್ಟು ಹೆಚ್ಚಾಗಿದೆ. ಚೀನಾ, ಮಲೇಷ್ಯಾ ಮತ್ತು ಶ್ರೀಲಂಕಾ ರಬ್ಬರ್ ಬಳಕೆಯಲ್ಲಿ ಮುಂಚೂಣಿಯಲ್ಲಿದೆ, ವಿವಿಧ ಕಂಪನಿಗಳು ರಬ್ಬರ್ ಬೇಡಿಕೆ ವ್ಯಕ್ತಪಡಿಸಿವೆ.
ಸದ್ಯ ಭಾರತದಲ್ಲೂ ಕೈಗಾರಿಕೆಗಳಿಗೆ ಅನುಕೂಲಕರ ದರದಲ್ಲಿ ರಬ್ಬರ್ ಬೇಕಾಗಿದೆ. ಅಂತರಾಷ್ಟ್ರೀಯ ರಬ್ಬರ್ ಬೆಲೆ ಏರಿಕೆಯಾದಂತೆಯೇ ದೇಶೀಯ ವಲಯದಲ್ಲಿ ರಬ್ಬರ್ ಧಾರಣೆ ಆಶಾದಾಯಕವಾಗಿ ಏರಿಕೆ ಸಾಧ್ಯತೆ ಇದೆ. ಹೀಗಾಗಿ ಧಾರಣೆ ಏರಿಕೆ ಇನ್ನಷ್ಟು ಸಾಧ್ಯತೆ ಇದೆ.
ಸದ್ಯ ಬೇಸಗೆಯ ಕಾರಣದಿಂದ ರಬ್ಬರ್ ಟ್ಯಾಪಿಂಗ್ ಭಾರತದ ಹಲವು ಕಡೆ ಸ್ಥಗಿತಗೊಂಡಿದೆ. ಮಳೆಗಾಲ ಆರಂಭದಿಂದ ರಬ್ಬರ್ ಟ್ಯಾಪಿಂಗ್ ಮತ್ತೆ ಆರಂಭಗೊಳ್ಳಲಿದೆ. ಅದುವರೆಗೂ ರಬ್ಬರ್ ಧಾರಣೆಯಲ್ಲಿ ಏರಿಕೆ ಕಾಣಲಿದೆ. ಆ ಬಳಿಕದ ವಾತಾವರಣವೂ ಈಗಿನ ಲೆಕ್ಕಾಚಾರದಲ್ಲಿ ಆಶಾದಾಯಕ ವಾತಾವರಣ ಇದೆ.
Source : NRR News