ಕೃಷಿ ಬೆಳೆಗೆ ತಕ್ಕಂತೆ ಸಾಲ ಪ್ರಮಾಣವನ್ನು ನೀಡಲು ಶೂನ್ಯ ಬಡ್ಡಿಯಲ್ಲಿ 5 ಲಕ್ಷದವರೆಗೆ ರೈತರಿಗೆ ಸಿಗುವ ಸಾಲದ ಪ್ರಮಾಣ ಹೆಚ್ಚಳ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ರೈತ ಉಳಿದರೆ ಮಾತ್ರ ಕೃಷಿ ಉಳಿಯುತ್ತದೆ. ರೈತ ಕೇಂದ್ರಿತ ಕಾರ್ಯಕ್ರಮಗಳನ್ನು ರೂಪಿಸಿದಾಗ ಹಾಗೂ ರೈತರಿಗೆ ಶಕ್ತಿ ತುಂಬುವ ಕಾಲ ಬಂದಿದೆ.
ಕಿಸಾನ್ ಸಮ್ಮಾನ್ , ರೈತ ವಿದ್ಯಾ ನಿಧಿ ಕಾರ್ಯಕ್ರಮಗಳು ರೈತನನ್ನು ಶಕ್ತಿಶಾಲಿಯಾಗಿ ಮಾಡುವ ಕಾರ್ಯಕ್ರಮಗಳನ್ನು ರೂಪಿಸಿ ಮೂಲಭೂತ ಬದಲಾವಣೆಗಳನ್ನು ತರಲಾಗಿದೆ. ಕೃಷಿ ಬೆಳೆಗೆ ತಕ್ಕಂತೆ ಸಾಲ ಪ್ರಮಾಣವನ್ನು ನೀಡಲು ಶೂನ್ಯ ಬಡ್ಡಿಯಲ್ಲಿ 5 ಲಕ್ಷದವರೆಗೆ ರೈತರಿಗೆ ಸಿಗುವ ಸಾಲದ ಪ್ರಮಾಣ ಹೆಚ್ಚಳ ಮಾಡಲಾಗಿದೆ ಎಂದರು.
ರೈತ ವಿದ್ಯಾನಿಧಿ ರೂಪಿಸುವ ಮೂಲಕ ರೈತರ ಮಕ್ಕಳು ಉನ್ನತ ವ್ಯಾಸಂಗ ಮಾಡಿ ಬೇರೆ ವೃತ್ತಿ ಮಾಡುವ ಮೂಲಕ ಆದಾಯ ಹೆಚ್ಚಳ ಪಡೆಯುವಂತಾಗಬೇಕು. ಗ್ರಾಮೀಣ ಭಾಗದ ಮಕ್ಕಳು ಹೆಚ್ಚು ಬುದ್ದಿವಂತರಿರುತ್ತಾರೆ. ಅವರನ್ನು ಕಡೆಗಣಿಸಬಾರದು. 180 ಕೋಟಿ ರೂ.ಗಳ ವೆಚ್ಚದಲ್ಲಿ ರೈತರಿಗೆ ವಿಮಾ ಯೋಜನೆ ಜಾರಿಯಾಗಿದೆ. ರೈತನ ಸಹಜ ಸಾವಾದರೂ ಅವನ ಕುಟುಂಬಕ್ಕೆ 2 ಲಕ್ಷ ರೂ. ವಿಮಾ ಹಣ ಬರುವಂತೆ ಮಾಡಲಾಗಿದೆ ಎಂದರು.
ರೈತನ ಬದುಕು ಉತ್ತಮವಾಗಲು ಗ್ರಾಮೀಣ ಆರ್ಥಿಕ ಸ್ಥಿತಿ ಬದಲಾಗಬೇಕು. ಕೃಷಿಯಲ್ಲಿ ಅತಿ ಹೆಚ್ಚು ಬಂಡವಾಳ ಹೂಡಿಕೆಯಾಗಬೇಕು. ಇದರಲ್ಲಿ ಬ್ಯಾಂಕ್ ಗಳ ಪಾತ್ರ ಬಹಳ ದೊಡ್ಡದಿದೆ. ಈ ಬಗ್ಗೆ ಎಲ್ಲಾ ಬ್ಯಾಂಕರ್ ಗಳೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ರೈತರ ಆದಾಯ ಹೆಚ್ಚಳ ಮಾಡಲು 300 ಕೋಟಿ ರೂ.ಗಳ ವಿಶೇಷ ಆವರ್ತ ನಿಧಿ ಮೀಸಲಿಡಲಾಗಿದೆ.
ಯಾವುದೇ ಬೆಳೆ ಬೆಲೆ ಕುಸಿದರೆ ತಕ್ಷಣ ಸ್ಪಂದಿಸಿ ಬೆಂಬಲ ಬೆಲೆ ಅಡಿ ಭತ್ತ, ರಾಗಿ, ತೊಗರಿ ಅಡಕೆ ಬೆಳೆಗಳಿಗೆ ಬೆಂಬಲ ಬೆಲೆ ನೀಡಲಾಗಿದೆ. ರೈತರಿಗೆ ಯಶಸ್ವಿನಿ ಯೋಜನೆಯನ್ನು ಪುನ: ಪ್ರಾರಂಭಿಸಲಾಗಿದೆ. 3600 ಕೋಟಿ ಆವರ್ತ ನಿಧಿ ಇಡಲಾಗಿದೆ. ರಾಗಿ ಮತ್ತು ಜೋಳ ರಾಜ್ಯದ ಆಹಾರವಾಗಿದ್ದು, ಇದನ್ನು ಮೊದಲ ಬಾರಿಗೆ ಪಡಿತರದಲ್ಲಿ ವಿತರಿಸಲಾಗುತ್ತಿದೆ ಎಂದರು.
ಮೀನುಗಾರರು, ಗುಡ್ಡಗಾಡು ಜನ ಕಠಿಣ ಪರಿಶ್ರಮದಿಂದ ಕಾರ್ಯನಿರ್ವಹಿಸುತ್ತಾರೆ. ಆದರೆ ಅಲ್ಲಿ ಆತಂಕವಿರುತ್ತದೆ. ರೈತ ಅಂದರೆ ಭರವಸೆ, ಅವನು ಮಣ್ಣಿನ ಜೊತೆ ಬದುಕುತ್ತಾನೆ. ರೈತರು ಕಠಿಣ ಪರಿಶ್ರಮಿಗಳೂ ಹೌದು, ಪ್ರಾಮಾಣಿಕರೂ ಹೌದು. ಭರವಸೆ ರೈತನ ಕಾಯಕ ಗುಣ ಧರ್ಮ, ಅದರಿಂದ ನಮಗೆ ನಿರಂತರ ಆಹಾರ ದೊರೆಯುತ್ತಿದೆ.
ನಮಗೆ ಸ್ವಾತಂತ್ರ್ಯ ಬಂದಾಗ ಹೊರ ದೇಶದಿಂದ ಆಹಾರ ಪದಾರ್ಥ ತರಲಾಗುತ್ತಿತ್ತು. ಈಗ 130 ಕೋಟಿ ಜನರಿಗೆ ಆಹಾರ ಉತ್ಪಾದನೆ ಮಾಡಲಾಗುತ್ತಿದೆ. ಕೃಷಿ ಬೆಳೆದಂತೆ ರೈತ ಬೆಳೆದಿಲ್ಲ. ರೈತ ಉತ್ಪಾದನೆ ಮಾಡುತ್ತಾನೆ. ಆದರೆ ಲಾಭ ಸಿಗುತ್ತಿಲ್ಲ ಎಂದರು.