ಅಯೋಧ್ಯೆ(Ayodhya) ರಾಮಮಂದಿರ(Ram Mandir) ವೀಕ್ಷಣೆಗೆ ತೆರಳುವ ಪ್ರವಾಸಿಗರ(Tourist) ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕರ್ನಾಟಕದಿಂದ(Karnataka) ಅನೇಕರು ತೆರಳುತ್ತಿದ್ದಾರೆ. ಹಾಗಾಗಿ ಬಸ್, ರೈಲು ವ್ಯವಸ್ಥೆಯನ್ನು ಈಗಾಗಲೆ ಸರ್ಕಾರ ಮಾಡಿದೆ. ಇದೀಗ ಬೆಂಗಳೂರಿನಿಂದ ಅಯೋಧ್ಯೆಗೆ ತೆರಳಲು ವಿಮಾನದ ಬೇಡಿಕೆ ಹೆಚ್ಚಾಗಿದೆ. ರಾಮ ಮಂದಿರ ಲೋಕಾರ್ಪಣೆಯಾದ ಬಳಿಕ ಬೆಂಗಳೂರು (Bengaluru) ಮತ್ತು ಅಯೋಧ್ಯೆ ನಡುವಿನ ವಿಮಾನ ಪ್ರಯಾಣದ (Flight Travel) ಬೇಡಿಕೆ ಹೆಚ್ಚಾಗುತ್ತಿದೆ.
ಕಳೆದ ನಾಲ್ಕು ವಾರಗಳಿಂದ ಎರಡು ನಗರಗಳ ನಡುವೆ ಸಂಚರಿಸುವ ವಿಮಾನದಲ್ಲಿ ಆಸನಗಳು ಬಹುತೇಕ ಭರ್ತಿಯಾಗುತ್ತಿದ್ದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ದೇವಾಲಯ ಪ್ರವಾಸೋದ್ಯಮ(Temple Tourism) ಭರ್ಜರಿ ಸ್ಪಂದನೆ ಸಿಕ್ಕಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಸ್ಪೈಸ್‌ಜೆಟ್ ಈ ಮಾರ್ಗದಲ್ಲಿ ಪ್ರತಿದಿನ ವಿಮಾನ ಸೇವೆ ನೀಡುತ್ತಿವೆ. ಕಡಿಮೆ ಸೀಟ್ ಬುಕ್ ಆಗಿದೆ ಎಂಬ ಕಾರಣ ನೀಡಿ ಇಲ್ಲಿಯವರೆಗೆ ಒಂದು ದಿನವೂ ವಿಮಾನದ ಸೇವೆಯನ್ನು ರದ್ದು ಮಾಡಿಲ್ಲ ಎಂದು ಈ ಕಂಪನಿಗಳು ಮಾಧ್ಯಮಕ್ಕೆ ತಿಳಿಸಿವೆ.
ಜನವರಿ 22ರ ಹಿಂದಿನ ಬೇಡಿಕೆಗೆ ಹೋಲಿಸಿದರೆ ಅಯೋಧ್ಯೆಗೆ ಬುಕ್ಕಿಂಗ್ ಮಾಡುವವರ ಪ್ರಮಾಣ 100% ಏರಿಕೆಯಾಗಿದೆ. ಏಕಮುಖ ಸಂಚಾರಕ್ಕೆ 7,000 ರಿಂದ 11,000 ರೂಪಾಯಿಗಳ ನಡುವೆ ದರವಿದ್ದರೂ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ. ತೀರ್ಥಯಾತ್ರೆಗಳು ಮತ್ತು ಧಾರ್ಮಿಕ ಪ್ರವಾಸಗಳಲ್ಲಿ ಆಸಕ್ತಿ ಹೊಂದಿರುವ ಪ್ರಯಾಣಿಕರಿಂದ ಉತ್ತಮ ಬೇಡಿಕೆ ವ್ಯಕ್ತವಾಗುತ್ತಿದೆ. ಇದು ಸ್ಥಿರವಾದ ಬೆಳವಣಿಗೆಯನ್ನು ಸೂಚಿಸುತ್ತದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು ತಿಳಿಸಿದ್ದಾರೆ. ಜನವರಿ 17 ರಿಂದ ಏರ್ ಇಂಡಿಯಾ ಸೇವೆ ಆರಂಭವಾಗಿದ್ದು ಇಲ್ಲಿಯವರೆಗೆ ಕಡಿಮೆ ಪ್ರಯಾಣಿಕರ ಕೊರತೆಯನ್ನು ಅನುಭವಿಸಿಲ್ಲ.
ನೇರ ವಿಮಾನಗಳ ಜೊತೆಗೆ ಗ್ರಾಹಕರು ಲಕ್ನೋದವರೆಗೆ ವಿಮಾನದಲ್ಲಿ ತೆರಳಿ ನಂತರ ಅಯೋಧ್ಯೆಗೆ ರಸ್ತೆಯ ಮೂಲಕ ತೆರಳುತ್ತಿದ್ದಾರೆ. ಗಮನಿಸಲೇಬೇಕಾದ ಸಂಗತಿಯೆನೆಂದರೆ ಈ ಬೇಡಿಕೆ ಹಿರಿಯರ ವಿಭಾಗಕ್ಕೆ ಮಾತ್ರ ಸೀಮಿತವಾಗಿಲ್ಲ. ಯುವ ಜನತೆಯೂ ಅಯೋಧ್ಯೆ ವಿಮಾನ ಹತ್ತುತ್ತಿದ್ದಾರೆಂದು ಥಾಮಸ್ ಕುಕ್ ಭಾರತದ ಮುಖ್ಯಸ್ಥ ರಾಜೀವ್ ಕಾಳೆ ಹೇಳಿದ್ದಾರೆ.
ಬೆಂಗಳೂರು ಮಾತ್ರವಲ್ಲದೇ ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ ಮತ್ತು ಬೆಳಗಾವಿಯಂತಹ ಇತರ ನಗರಗಳಲ್ಲಿ ಸಹ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಮನ ಜೀವನಕ್ಕೆ ಸಂಬಂಧಿಸಿದ ಸ್ಥಳಗಳಾದ ಹಂಪಿ, ರಾಮೇಶ್ವರಂ ಮತ್ತು ಮಧುರೈ ಸೇರಿದಂತೆ ಹಲವು ಧಾರ್ಮಿಕ ಕ್ಷೇತ್ರಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಈಗ ಹೆಚ್ಚಾಗುತ್ತಿದೆ.
– ಅಂತರ್ಜಾಲ ಮಾಹಿತಿ